ಕನ್ನಡ ಸುದ್ದಿ  /  ಕರ್ನಾಟಕ  /  Independence Day: ಇಂದು ಅಮೃತ ಸರೋವರಗಳ ಲೋಕಾರ್ಪಣೆ: ಕಲಬುರಗಿ ಜಿಲ್ಲೆಯ 94 ಕೆರೆಗಳ ಅಂಗಳದಲ್ಲಿ ಹಾರಲಿವೆ ರಾಷ್ಟ್ರ ಧ್ವಜಗಳು

Independence day: ಇಂದು ಅಮೃತ ಸರೋವರಗಳ ಲೋಕಾರ್ಪಣೆ: ಕಲಬುರಗಿ ಜಿಲ್ಲೆಯ 94 ಕೆರೆಗಳ ಅಂಗಳದಲ್ಲಿ ಹಾರಲಿವೆ ರಾಷ್ಟ್ರ ಧ್ವಜಗಳು

Independence day ಕಲಬುರಗಿ ಜಿಲ್ಲೆಯ 94 ಕೆರೆಗಳ( Lakes) ಅಂಗಳದಲ್ಲಿ ಈ ಬಾರಿಯ ಸ್ವಾತಂತ್ರೋತ್ಸವದ ಧ್ವಜಾರೋಹಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಅಮೃತ ಸರೋವರ ಅಭಿಯಾನದಡಿ 150 ಕೆರೆಗಳ ಪುನಶ್ಚೇತನ ಕೈಗೆತ್ತಿಕೊಳ್ಳಲಾಗಿದೆ. ಮುಕ್ತಾಯವಾಗಿರುವ ಕೆರೆಗಳಲ್ಲಿ ಸ್ವಾತಂತ್ರೋತ್ಸವದ ಕಲರವ ಇರಲಿದೆ.

ಕಲಬುರಗಿಯ 94 ಕೆರೆಗಳ ಅಂಗಳದಲ್ಲಿ ಸ್ವಾತಂತ್ರೋತ್ಸವ ಧ್ವಜಾರೋಹಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಕಲಬುರಗಿಯ 94 ಕೆರೆಗಳ ಅಂಗಳದಲ್ಲಿ ಸ್ವಾತಂತ್ರೋತ್ಸವ ಧ್ವಜಾರೋಹಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಕಲಬುರಗಿ: ಕೇಂದ್ರ ಸರಕಾರದ ಅಮೃತ ಸರೋವರ ಅಭಿಯಾನದಡಿ ಸಿದ್ಧಗೊಂಡಿರುವ ಕಲಬುರಗಿ ಜಿಲ್ಲೆಯ 94 ಅಮೃತ ಸರೋವರ (ಕೆರೆಗಳಲ್ಲಿ) ಗಳಲ್ಲಿ ಆಗಸ್ಟ್‌ 15 ರಂದು ಸ್ವಾತಂತ್ರ್ಯೋತ್ಸವ ದಿನದಂದು ರಾಷ್ಟ್ರ ಧ್ವಜಗಳು ಹಾರಾಡಲಿವೆ. ಈ ಕೆರೆಗಳಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಕೆರೆಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಯಾವ ಕೆರೆಯಲ್ಲಿ ಧ್ವಜಾರೋಹಣ

ಕಲಬುರಗಿ ಜಿಲ್ಲಾ ಪಂಚಾಯಿತಿಯು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ 8 ಕೆರೆಗಳು ಪೂರ್ಣಗೊಳಿಸಿದೆ. ಆಳಂದ ತಾಲೂಕಿನಲ್ಲಿ 10 ಕೆರೆಗಳು, ಚಿಂಚೋಳಿ ತಾಲೂಕಿನಲ್ಲಿ 5 ಕೆರೆಗಳು, ಚಿತ್ತಾಪುರ ತಾಲೂಕಿನಲ್ಲಿ 9, ಜೇವರ್ಗಿ ತಾಲೂಕಿನಲ್ಲಿ 6, ಕಲಬುರಗಿ ತಾಲೂಕಿನಲ್ಲಿ 9, ಕಾಳಗಿ ತಾಲೂಕಿನಲ್ಲಿ 4, ಕಮಲಾಪುರ ತಾಲೂಕಿನಲ್ಲಿ 6, ಸೇಡಂ ತಾಲೂಕಿನಲ್ಲಿ 6, ಶಹಾಬಾದ್‌ ತಾಲೂಕಿನಲ್ಲಿ 2, ಯಡ್ರಾಮಿ ತಾಲೂಕಿನಲ್ಲಿ 6 ಕೆರೆಗಳು ನಿರ್ಮಿಸಿದರೆ 23 ಕೆರೆಗಳನ್ನು ಜಿಲ್ಲಾ ಕೃಷಿ ಇಲಾಖೆ ವಿವಿಧೆಡೆ ಒಟ್ಟು 23 ಕೆರೆಗಳನ್ನು ನಿರ್ಮಿಸಿದೆ.

ಸೇನಾನಿಗೆ ಉದ್ಘಾಟನೆ ಗೌರವ

ಅಮೃತ ಸರೋವರ ಅಭಿಯಾನದಲ್ಲಿ ಪೂರ್ಣಗೊಂಡ ಅಮೃತ ಸರೋವರಗಳಲ್ಲಿ (ಕೆರೆಗಳಲ್ಲಿ) ಆಗಸ್ಟ್‌ 15 ರಂದು ಸ್ವಾತಂತ್ರ್ಯೋತ್ಸವ ದಿನದಂದು ರಾಷ್ಟ್ರ ಧ್ವಜರೋಹಣ ನೆರವೇರಿಸಿ ಆ ಮೂಲಕ ಅವುಗಳನ್ನು ಲೋಕಾರ್ಪಣೆ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತಾಲಯವು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಉಲ್ಲೇಖ ಪ್ರಸ್ತಾಪಿಸಿ ಆದೇಶ ಹೊರಡಿಸಿದೆ.

ಆಯುಕ್ತಾಲಯದ ನಿರ್ದೇಶನದ ಮೇರೆಗೆ ಇಲ್ಲಿನ ಜಿಲ್ಲಾ ಪಂಚಾಯಿತಿ ಆಗಸ್ಟ್‌ 15 ರಂದು ಜಿಲ್ಲೆಯ ಎಲ್ಲ ಅಮೃತ ಸರೋವರಗಳಲ್ಲಿ ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳನ್ನೊಳಗೊಂಡು ಸ್ಥಳೀಯವಾಗಿ ಸ್ವಾತಂತ್ರ್ಯ ಹೋರಾಟಗಾರರು ಅಥವಾ ನಿವೃತ್ತ ಸೇನಾನಿ ಅಥವಾ ಹಿರಿಯ ನಾಗರಿಕರಿಂದ ಧ್ವಜಾರೋಹಣ ನೆರವೇರಿಸುವಂತೆ ಸೂಚಿಸಿದೆ.

ಅಪೂರ್ಣಗೊಂಡ 56 ಕೆರೆಗಳು

ಅಮೃತ ಸರೋವರ ಅಭಿಯಾನದಡಿ ನಮ್ಮ ಜಿಲ್ಲೆಗೆ 150 ಕೆರೆಗಳ ಗುರಿ ನೀಡಲಾಗಿತ್ತು. ಅವುಗಳನ್ನು ಇದೇ ಆಗಸ್ಟ್‌ರೊಳಗೆ ಪೂರ್ಣಗೊಳಿಸಿ ಅವುಗಳ ಮೇಲೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವುಗಳನ್ನು ಜನಾಪರ್ಣೆ ಮಾಡಲು ಸೂಚನೆ ಇದೆ. ಆದರೆ, ಇಲ್ಲಿನ ಜಿಲ್ಲಾ ಪಂಚಾಯಿತಿಯ ನಿರ್ಲಕ್ಷ್ಯದಿಂದ 150 ಕೆರೆಗಳ ಪೈಕಿ ಕೇವಲ 94 ಕೆರೆಗಳನ್ನು ನಿರ್ಮಿಸಿದ್ದು, ಉಳಿದ ಕೆರೆಗಳು ಅಪೂರ್ಣಗೊಂಡಿದೆ. ಮಳೆಯಿಂದಾಗಿ ಕೆರೆ ನಿರ್ಮಾಣ ಕಾಮಗಾರಿಗೆ ಸ್ಥಗಿತಗೊಂಡಿವೆ ಎಂಬ ನೆಪ ಹೇಳಲಾಗುತ್ತಿದೆ. ಮಳೆಗಾಲ ಬರುತ್ತದೆ, ಅದರಲ್ಲೂ ಆಗಸ್ಟ್‌ 15 ಮಳೆಗಾಲದಲ್ಲಿಯೇ ಬರಲಿದೆ ಎಂಬ ವಾಸ್ತಾಂಶ ಜಿಪಂ ಅಧಿಕಾರಿಗಳಿಗೆ ಗೊತ್ತಿಲ್ಲವೇ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಎಲ್ಲ ಕೆರೆಗಳನ್ನು ನಿರ್ಮಾಣ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬುದು ರೈತರ ಒತ್ತಾಸೆಯಾಗಿದೆ.

ನೀರಿನ ಸಮಸ್ಯೆಯಿಂದ ಮುಕ್ತಿ

ಕಲಬುರಗಿ ಜಿಲ್ಲೆಯು ಬಿಸಿಲು ನಗರಿ ಎಂದೆ ಖ್ಯಾತಿಯಾಗಿದ್ದು ಬೇಸಿಗೆ ಕಾಲದಲ್ಲಿ ಜಿಲ್ಲೆಯಲ್ಲಿ ನೀರಿನ ಆಹಾಕಾರ ಉಂಟಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 300 ರಿಂದ 400 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಜಿಲ್ಲೆಯಲ್ಲಿ 500 ರಿಂದ 700 ಅಡಿ ಅಂತರ್ಜಲ ಮಟ್ಟ ಇದ್ದು ನೀರಿನ ಸಮಸ್ಯೆಯಿಂದ ದನ ಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ, ಸಾರ್ವಾಜನಿಕರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿದೆ. ಅಮೃತ ಸರೋವರ ಅಭಿಯಾನದಡಿ ಕೆರೆಗಳ ನಿರ್ಮಾಣ ಮಾಡುತ್ತಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸುವುದರಿಂದ ಕೊಳವೆ ಬಾವಿಗಳಿಗೆ, ತೆರೆದ ಬಾವಿಗಳಿಗೆ ಹಾಗೂ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಜನರು ಖುಷಿ ವ್ಯಕ್ತ ಪಡಿಸುತ್ತಿದ್ದಾರೆ.

ರೈತರಿಗೆ ಲಾಭ

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 905244 ಹೇಕ್ಟರ್ ಸಾಗುವಳಿ ಪ್ರದೇಶದಲ್ಲಿ ಕೇವಲ 25320 ಹೇಕ್ಟರ್ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೊಂದಿದೆ. ಅಮೃತ ಸರೋವರ ಅಭಿಯಾನದಡಿ ಗ್ರಾಮೀಣ ಭಾಗದಲ್ಲಿ ಕೆರೆಗಳ ನಿರ್ಮಾಣ ಮಾಡುತ್ತಿರುವುದರಿಂದ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚು ಮಾಡಬಹುದಾಗಿದೆ. ಇದರಿಂದ ಗ್ರಾಮೀಣ ಭಾಗದ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಹೆಚ್ಚು ಲಾಭ ಪಡೆಯಬಹುದಾಗಿದೆ. ‌ಜಿಪಂ ಸಿಇಒ ಹೇಳೋದೇನು

ಅಮೃತ ಸರೋವರ ಅಭಿಯಾನದಡಿ ನಮ್ಮ ಜಿಲ್ಲೆಗೆ 150 ಕೆರೆಗಳ ಗುರಿ ನೀಡಲಾಗಿತ್ತು. ಇದರಲ್ಲಿ 94 ಕೆರೆಗಳು ಪೂರ್ಣಗೊಂಡಿದ್ದು, ಪೂರ್ಣಗೊಂಡ ಕೆರೆಗಳಲ್ಲಿ ಆಗಸ್ಟ್‌ 15 ರಂದು ಧ್ವಜಾರೋಹಣ ನೆರವೇರಿಸುವ ಮೂಲಕ ಕೆರೆಗಳನ್ನು ಲೋಕಾರ್ಪಣೆ ಮಾಡಲಾಗುವುದು. ಕೆರೆಗಳು ನಿರ್ಮಾಣ ಮಾಡಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸುತ್ತದೆ. ಇದರಿಂದ ಕೊಳವೆ ಬಾವಿಗಳಿಗೆ, ತೆರೆದ ಬಾವಿಗಳಿಗೆ ಹಾಗೂ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಇದರಿಂದ ಜನ, ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ತುಂಬಾ ಅನುಕೂಲವಾಗಲಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವಾರ ಸಿಂಗ್‌ ಮೀನಾ.

ರೈತರ ಆಗ್ರಹ

ಕೇಂದ್ರ ಸರಕಾರ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ದೇಶದೆಲ್ಲೆಡೆ ಅಮೃತ ಸರೋವರ ಅಭಿಯಾನದಡಿಯಲ್ಲಿ ಕೆರೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ. ಆದರೆ, ಜಿಲ್ಲೆಯಲ್ಲಿ 150 ಕೆರೆಗಳನ್ನು ನಿರ್ಮಿಸಲು ಗುರಿ ನೀಡಲಾಗಿತ್ತು. ಆದರೆ, ಕೇವಲ 94 ಕೆರೆಗಳನ್ನು ಪೂರ್ಣಗೊಳಿಸಿ ಉಳಿದ 56 ಕೆರೆಗಳ ನಿರ್ಮಾಣಕ್ಕೆ ನಿರ್ಲಕ್ಷ್ಯ ವಹಿಸಲಾಗಿದೆ. ಎಲ್ಲ ಕೆರೆಗಳ ನಿರ್ಮಾಣ ಪೂರ್ಣಗೊಂಡರೆ ರೈತರಿಗೆ ಮತ್ತು ಜಾನುವಾರುಗಳಿಗೆ ಅನುಕೂಲವಾಗುತ್ತಿತ್ತು. ಕೂಡಲೇ ಜಿಪಂ ಮುತುವರ್ಜಿ ವಹಿಸಿ ಬಾಕಿ ಉಳಿದ ಕೆರೆಗಳನ್ನು ಪೂರ್ಣಗೊಳಿಸಬೇಕು ಎಂಬುದು ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಒತ್ತಾಯ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

IPL_Entry_Point