ಕನ್ನಡ ಸುದ್ದಿ  /  ಕರ್ನಾಟಕ  /  ಮಾತೃಭಾಷೆ ಕಣ್ಮರೆಯಾದರೆ ನಮ್ಮ ಗುರುತೂ ಅಳಿಸಿ ಹೋಗುತ್ತೆ: ಕನ್ನಡಕ್ಕೆ ಪಣತೊಡಲು ರಾಜ್ಯೋತ್ಸವ ನೆಪವಾಗಲಿ

ಮಾತೃಭಾಷೆ ಕಣ್ಮರೆಯಾದರೆ ನಮ್ಮ ಗುರುತೂ ಅಳಿಸಿ ಹೋಗುತ್ತೆ: ಕನ್ನಡಕ್ಕೆ ಪಣತೊಡಲು ರಾಜ್ಯೋತ್ಸವ ನೆಪವಾಗಲಿ

ಕನ್ನಡ ಕೇವಲ ಸಂವಹನಕ್ಕೆ ಬಳಸುವ ಭಾಷೆ ಮಾತ್ರವಲ್ಲ. ವಿಶಾಲ ಅರ್ಥದಲ್ಲಿ ಭಾಷೆ, ನೆಲ, ಜಲ, ಗಡಿ, ಸಾಹಿತ್ಯ, ಉದ್ಯೋಗ ಎಲ್ಲವೂ ಹೌದು. ಆದರೂ ಭಾಷೆಯ ವಿಷಯದಲ್ಲಿ ಒಂದಿಷ್ಟು ಆತಂಕ ಸಹಜವಾಗಿದೆ. (ಬರಹ: ಎಚ್.ಮಾರುತಿ)

ಬಳಸಿದರೆ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ
ಬಳಸಿದರೆ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ (ಸಂಗ್ರಹ ಚಿತ್ರ)

ಸ್ಥಳೀಯ ಸಂಸ್ಕೃತಿಯನ್ನು ಜೀವಂತವಾಗಿಡುವಲ್ಲಿ ಯಾವುದೇ ಮಾತೃಭಾಷೆ ಪ್ರಧಾನ ಪಾತ್ರ ವಹಿಸುತ್ತದೆ. ನಮ್ಮ ಭಾವನೆಗಳನ್ನು ಮಾತೃಭಾಷೆಯಲ್ಲಿ ಅಭಿವ್ಯಕ್ತಗೊಳಿಸಿದಷ್ಟು ಸಲೀಸಾಗಿ ಪರಕೀಯ ಭಾಷೆಯಲ್ಲಿ ವ್ಯಕ್ತಪಡಿಸುವುದು ಅಸಾಧ್ಯ. ಒಂದು ನೆಲೆದ ಸಸ್ಯ ಭೂಮಿಯೊಳಗಿನ ಬೇರುಗಳ ಜತೆ ಸಾಧಿಸಿದಷ್ಟು ಸಂಬಂಧವನ್ನು ಭೂಮಿಯ ಮೇಲಿನಿಂದ ಸಾಧಿಸಲು ಸಾಧ್ಯವಿಲ್ಲ. ಹಾಗೆಯೇ ಭಾಷೆಯೂ ಕೂಡ! ಹಬ್ಬ, ಹುಣ್ಣಿಮೆ, ಧಾರ್ಮಿಕ ನಂಬಿಕೆಗಳು, ಆಚರಣೆಗಳು, ಕಲೆ, ಪೌರಾಣಿಕ, ಐತಿಹಾಸಿಕ ಮತ್ತು ಚಾರಿತ್ರಿಕ ಸಂಗತಿಗಳು ದಾಖಲಾಗುವುದು ಮತ್ತು ಈ ಮಾಹಿತಿಗಳು ಬಾಯಿಂದ ಬಾಯಿಗೆ ಹರಿದಾಡುವದೂ ಸಹ ಮಾತೃಭಾಷೆಯಲ್ಲಿಯೇ. ಉದಾಹರಣೆಗೆ ನಮ್ಮ ಜನಪದ ಇಂದಿಗೂ ಗಟ್ಟಿಯಾಗಿ ನೆಲೆಯೂರಿರುವುದಕ್ಕೆ ಮಾತೃಭಾಷೆಯೇ ಕಾರಣ.

ಟ್ರೆಂಡಿಂಗ್​ ಸುದ್ದಿ

ಸ್ಥಳಿಯ ವಿಜ್ಞಾನ, ನೈಸರ್ಗಿಕ ಚಿಕಿತ್ಸೆ ಔಷಧಿ ರಹಸ್ಯಗಳು, ಪರಿಸರ ಜ್ಞಾನ, ಪ್ರಾಣಿ ಸಂಕುಲ, ಹವಾಮಾನ ಮಾದರಿ ಇವುಗಳೆಲ್ಲವೂ ದಾಖಲಾಗಿರುವುದು ಮಾತೃಭಾಷೆಯಲ್ಲಿ. ಮಾತೃಭಾಷೆಯನ್ನು ಮರೆತರೆ ಮನುಕುಲದ ಒಳಿತಿಗೆ ಇರುವ ಅದೆಷ್ಟೋ ಅಂಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಸ್ಥಳೀಯ ಆಯುರ್ವೇದದ ಮಾಹಿತಿಯೊಂದು ಸುಲಭವಾಗಿ ಸಿಗುವುದು ಸ್ಥಳಿಯ ಭಾಷೆಯಲ್ಲಿ ಮಾತ್ರ.

ಇದೇ ಕಾರಣಕ್ಕೆ ಸ್ಥಳೀಯ ಭಾಷೆಗಳನ್ನು ಉಳಿಸಿಲೆಂದೇ ವಿಶ್ವಸಂಸ್ಥೆಯು ಫೆಬ್ರುವರಿ 21 ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲು ಕರೆ ನೀಡಿದೆ. ಮಾತೃಭಾಷೆ ಕುರಿತು ಅಸಡ್ಡೆ ಮುಂದುವರಿದರೆ ಇಂದಿನ ವರ್ತಮಾನವನ್ನು ಭವಿಷ್ಯದ ಪೀಳಿಗೆಗಳು ನೆನಪು ಮಾಡಿಕೊಳ್ಳುವುದಾದರೂ ಹೇಗೆ? ಭಾಷೆ ಕಣ್ಮರೆಯಾದರೆ ನಮ್ಮ ಗುರುತೂ ಸಹ ಅಳಿಸಿಹೋಗುವ ಆತಂಕದ ಭಯ ನಮಗಿರಬೇಕು.

ಜಗತ್ತಿನಲ್ಲಿ 1900 ನೇ ಇಸವಿಯಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6700 ಭಾಷೆಗಳು ಮಾತ್ರ ಉಳಿದುಕೊಂಡಿವೆ. ಈ ಭಾಷೆಗಳಲ್ಲಿ 3500 ಭಾಷೆಗಳನ್ನು ಮಾತ್ರ ಕಲಿಸಲಾಗುತ್ತಿದ್ದು ಉಳಿದ ಭಾಷೆಗಳು ನಶಿಸಿ ಹೋಗುವ ಅಂಚಿನಲ್ಲಿವೆ. ಭಾರತದಲ್ಲಿ 2001 ರ ಜನಗಣತಿ ಪ್ರಕಾರ 122 ಪ್ರಮುಖ ಭಾಷೆಗಳು ಸೇರಿದಂತೆ 1955 ಭಾಷೆಗಳು ಇವೆ ಎಂದು ಹೇಳಲಾಗುತ್ತದೆ. ಆದರೆ ಜಾಗತೀಕರಣ ಮತ್ತು ಇತರ ಕಾರಣಗಳಿಗಾಗಿ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳು ಅಪಾಯಕ್ಕೆ ಸಿಲುಕಿವೆ. ಭಾಷೆಯೊಂದು ಸತ್ತರೆ ಒಂದು ಸಂಸ್ಕೃತಿಯ ಅವಸಾನ ಎನ್ನುವುದನ್ನು ನೆನಪಿನಲ್ಲಿಡಬೇಕು.

ಕನ್ನಡದ ಉಳಿವು ಹೇಗೆ?

ಭಾರತದ ಕೆಲವೇ ಶ್ರೀಮಂತ ಭಾಷೆಗಳಲ್ಲಿ ಕನ್ನಡವೂ ಒಂದು. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವುದರ ಜೊತೆಗೆ ಸಾಹಿತ್ಯಕವಾಗಿಯೂ ಶ್ರೀಮಂತ.ಭಾಷೆಯಾಗಿದೆ. ಆದರೆ ಬಳಕೆಯಲ್ಲಿ ಹಿಂದುಳಿದಿದೆ ಎಂದು ವಿಷಾದದಿಂದಲೇ ಹೇಳಬೇಕಾಗಿದೆ.

ಉನ್ನತ ಶಿಕ್ಷಣ, ವಿದೇಶಿ ಅಧ್ಯಯನ, ಉದ್ಯೋಗ, ವಿಜ್ಞಾನ ತಂತ್ರಜ್ಞಾನ ಮಾಹಿತಿ ಸೇರಿದಂತೆ ಅನೇಕ ಕಾರಣಗಳಿಗಾಗಿ ಇಂಗ್ಲೀಷ್ ಅನಿವಾರ್ಯವಾಗಿಬಿಟ್ಟಿದೆ. ಕನ್ನಡವೂ ಅನಿವಾರ್ಯವಾಗಬೇಕಾದರೆ ಕನ್ನಡದಲ್ಲಿ ಕಲಿತವರೆಲ್ಲರಿಗೂ ಉದ್ಯೋಗ ಸಿಗುವಂತಾಗಬೇಕು. ಇಂಗ್ಲೀಷ್ ಕಲಿತ ಮಾತ್ರಕ್ಕೆ ಕನ್ನಡವನ್ನು ಮರೆತುಬಿಡಬೇಕು ಎಂದು ಎಲ್ಲಿಯೂ ಯಾರೂ ಹೇಳಿಲ್ಲ. ಕನ್ನಡ, ಕನ್ನಡಿಗ ಕರ್ನಾಟಕದ ಸೊಗಡಿನ ಮೂಲಕ ಇಂಗ್ಲೀಷ್ ಭಾಷೆಯನ್ನು ಕಲಿಯಲು ಯಾರ ಅಭ್ಯಂತರವೂ ಇಲ್ಲ. ಆದರೆ ಇಂಗ್ಲೀಷ್ ಸೇರಿದಂತೆ ಕನ್ನಡಕ್ಕೆ ಪರ್ಯಾಯವಾಗಿ ಮತ್ತೊಂದು ಭಾಷೆ ಇರಬಾರದು ಅಷ್ಟೇ.

ಐಟಿ ಬಿಟಿ, ಡಾಕ್ಟರ್, ಇಂಜಿನಿಯರ್ ಆರ್ಕಿಟೆಕ್ಟ್ ಸೇರಿದಂತೆ ಯಾವುದೇ ಉದ್ಯೋಗವನ್ನಾದರೂ ಬದುಕು ಮತ್ತು ಸಾಧನೆಗೆ ಆರಿಸಿಕೊಳ್ಳಿ. ಅದು ಅನ್ನದ ಭಾಷೆಯಾಗಲಿ. ಆದರೆ ಉಸಿರಿನ ಭಾಷೆಯಾಗಿ ಕನ್ನಡವೇ ಇರಲಿ. ಪೆಟ್ಟು ಬಿದ್ದಾಗ ನೋವಾದಾಗ ಅಬಾಲವೃದ್ಧರಾದಿಯಾಗಿ ಎಲ್ಲರೂ ಅಮ್ಮ ಎನ್ನುತ್ತಾರೆಯೇ ಹೊರತು ಮಮ್ಮಿ ಎನ್ನುವುದಿಲ್ಲ. ಇದೇ ಕಾರಣಕ್ಕೆ ಮಾತೃಭಾಷೆಯನ್ನು ಉಸಿರಿನ ಭಾಷೆ ಎನ್ನುತ್ತಾರೆ. ಮನೆಯಲ್ಲಿ ಮಾತನಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ, ಕಚೇರಿಗಳಲ್ಲಿ ಅಂಗಡಿ.ಮುಂಗಟ್ಟುಗಳಲ್ಲಿ ಕನ್ನಡವನ್ನು ಬಳಸಲು ಹಿಂಜರಿಕೆ ಏಕೆ?

ಕನ್ನಡದ ವೃತ್ತಪತ್ರಿಕೆ, ಪುಸ್ತಕ, ಸುದ್ದಿ ವಾಹಿನಿ ಮನರಂಜನಾ ಚಾನೆಲ್ ಗಳನ್ನು ವೀಕ್ಷಣೆ ಮಾಡಬಹುದು. ಅನ್ಯ ಭಾಷಿಕ ಸಹೋದ್ಯೋಗಿ ಮತ್ತು ನೆರೆಹೊರೆಯವರಿಗೆ ಕನ್ನಡವನ್ನು ಕಲಿಸೋಣ. ಕನ್ನಡದಲ್ಲಿ ಮಾತಾಡೋಣ, ಕನ್ನಡದಲ್ಲಿ ಉಸಿರಾಡೋಣ ಮತ್ತು ಕನ್ನಡದಲ್ಲಿ ಜೀವಿಸೋಣ.

ಬರಹ: ಎಚ್.ಮಾರುತಿ

IPL_Entry_Point