Karnataka assembly session: ಹೊಸ ತಾಲೂಕುಗಳಿಗೆ ಆಡಳಿತ ಸೌಧ ನಿರ್ಮಾಣ; ತಲಾ 10 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ- ವಿವರ ನೀಡಿದ ಸಚಿವ ಅಶೋಕ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Assembly Session: ಹೊಸ ತಾಲೂಕುಗಳಿಗೆ ಆಡಳಿತ ಸೌಧ ನಿರ್ಮಾಣ; ತಲಾ 10 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ- ವಿವರ ನೀಡಿದ ಸಚಿವ ಅಶೋಕ

Karnataka assembly session: ಹೊಸ ತಾಲೂಕುಗಳಿಗೆ ಆಡಳಿತ ಸೌಧ ನಿರ್ಮಾಣ; ತಲಾ 10 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ- ವಿವರ ನೀಡಿದ ಸಚಿವ ಅಶೋಕ

Karnataka assembly session: ಹೊಸದಾಗಿ ರಚನೆಯಾದ ಕೆಜಿಎಫ್, ಮೂಡಬಿದರೆ,ಕಡಬ,ಮೂಲ್ಕಿ, ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿ, ಕುರುಗೋಡು, ಕಂಪ್ಲಿ, ಬಬಲೇಶ್ವರ, ತಿಕೋಟಾ ತಾಲೂಕುಗಳಲ್ಲಿ ತಲಾ 10 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲೂಕು ಆಡಳಿತ ಸೌಧಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸಚಿವ ಆರ್. ಅಶೋಕ ತಿಳಿಸಿದರು.

ವಿಧಾನ ಸಭೆ ಕಲಾಪದಲ್ಲಿ ಸಚಿವ ಆರ್.‌ ಅಶೋಕ
ವಿಧಾನ ಸಭೆ ಕಲಾಪದಲ್ಲಿ ಸಚಿವ ಆರ್.‌ ಅಶೋಕ

ಬೆಂಗಳೂರು: ಹೊಸ ತಾಲೂಕುಗಳಲ್ಲಿ ಆಡಳಿತ ಸೌಧ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ತಲಾ 10 ಕೋಟಿ ರೂಪಾಯಿ ವೆಚ್ಚದಲ್ಲಿ ಆಡಳಿತ ಸೌಧ ನಿರ್ಮಾಣವಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಸದನಕ್ಕೆ ತಿಳಿಸಿದರು.

ಅವರು ಸೋಮವಾರ ವಿಧಾನಸಭೆಯಲ್ಲಿ ಸದಸ್ಯ ಶಿವಾನಂದ ಪಾಟೀಲ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ್ದು, ಹೊಸದಾಗಿ ರಚನೆಯಾದ ಕೆಜಿಎಫ್, ಮೂಡಬಿದರೆ, ಕಡಬ, ಮೂಲ್ಕಿ, ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿ, ಕುರುಗೋಡು, ಕಂಪ್ಲಿ, ಬಬಲೇಶ್ವರ, ತಿಕೋಟಾ ತಾಲೂಕುಗಳಲ್ಲಿ ತಲಾ 10 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲೂಕು ಆಡಳಿತ ಸೌಧಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಹೊಸದಾಗಿ ರಚನೆಯಾದ ತಾಲೂಕುಗಳಲ್ಲಿ ತಾಲೂಕು ಆಡಳಿತ ಸೌಧ ನಿರ್ಮಿಸಲು ಕಟ್ಟಡಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಪೀಠೋಪಕರಣ, ಒಳಾಂಗಣ ವಿನ್ಯಾಸ, ವಿದ್ಯುತ್‍ಚ್ಛಕ್ತಿ ಸೌಲಭ್ಯ, ಶೌಚಾಲಯ, ಲಿಫ್ಟ್ ಅಳವಡಿಕೆ ಮತ್ತು ಇನ್ನಿತರ ಎಲ್ಲ ಪೂರಕ ಸೌಲಭ್ಯಗಳಮ್ಮಿ ಒಳಗೊಂಡಂತೆ ಕಡ್ಡಾಯವಾಗಿ 10 ಕೋಟಿ ರೂಪಾಯಿ ಅಂದಾಜು ವೆಚ್ಚದ ಮಿತಿಯಲ್ಲಿ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ವಿವರ ನೀಡಿದರು.

ಅದರಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ತಾಲೂಕು ಆಡಳಿತ ಸೌಧ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಸ್ಥಳ ಗುರುತಿಸಿ, ಕಟ್ಟಡ ನಿರ್ಮಾಣ ಮಾಡಲು ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆಯೊಂದಿಗೆ ಪ್ರಸ್ತಾವನೆಯು ಸ್ವೀಕೃತವಾದ ನಂತರ ಆರ್ಥಿಕ ಇಲಾಖೆಯ ಸಮ್ಮತಿಯೊಂದಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆರ್.‌ ಅಶೋಕ ಹೇಳಿದರು.

ದೇವಾಲಯಗಳ ಸುಪರ್ದಿಯ ಜಮೀನು ಮಂಜೂರಿಗೆ ಅರ್ಜಿ ಸಲ್ಲಿಸಿದರೆ ಕ್ರಮ

ರಾಜ್ಯದ ದೇವಸ್ಥಾನಗಳ ಸುಪರ್ದಿಯಲ್ಲಿರುವ ಜಮೀನುಗಳನ್ನು ಮಂಜೂರು ಮಾಡುವುದಕ್ಕಾಗಿ ಅರ್ಜಿ ಸಲ್ಲಿಸಿದರೆ, ಸರ್ಕಾರವು ಕಾನೂನು ಪ್ರಕಾರ ಜಮೀನು ಮಂಜೂರಾತಿಗೆ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿ ಇಂದು ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ರಾಜೇಗೌಡ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದು, ರಾಜ್ಯದಲ್ಲಿ ಕೆಲವು ಖಾಸಗಿ ದೇವಾಲಯಗಳು ಗೋಮಾಳ, ಅರಣ್ಯ ಭೂಮಿಯಲ್ಲಿವೆ. ಈ ಜಮೀನು ಮಂಜೂರು ಮಾಡಲು ಆ ದೇವಾಲಯಗಳು ಅರ್ಜಿ ಸಲ್ಲಿಸಿದ್ದರೆ, ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ಯಾವುದೇ ಜಮೀನು ಮಂಜೂರಾತಿ ಬಗ್ಗೆ ಸಚಿವ ಸಂಪುಟವೇ ತೀರ್ಮಾನ ಕೈಗೊಳ್ಳುತ್ತದೆ. ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ಮಾಡಬೇಕಾಗುತ್ತದೆ ಎಂದು ಸಚಿವ ಆರ್.‌ ಅಶೋಕ ಹೇಳಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ 5 ದೇವಸ್ಥಾನಗಳಿಗೆ ಜಮೀನುಗಳನ್ನು ಮಂಜೂರು ಮಾಡಲಾಗಿದೆ. ಶೃಂಗೇರಿ ತಾಲ್ಲೂಕಿನಲ್ಲಿ ಜಮೀನು ಮಂಜೂರಾತಿಯ ಪ್ರಕರಣಗಳು ಬಾಕಿ ಇಲ್ಲ. ದೇವಾಲಯಗಳ ಜಮೀನು ಮಂಜೂರಾತಿ ಬಗ್ಗೆ ಅರ್ಜಿ ಸಲ್ಲಿಸಿದರೆ ಆ ಅರ್ಜಿಗಳನ್ನು ಕಾನೂನು ಪ್ರಕಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರ ನೀಡಿದರು.

Whats_app_banner