Bangalore News: ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ, 48 ಗಂಟೆ ಮುನ್ನ ನಿಷೇಧಾಜ್ಞೆ ಜಾರಿ, ಮತದಾನಕ್ಕೆ ಸಕಲ ಸಿದ್ದತೆ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ, 48 ಗಂಟೆ ಮುನ್ನ ನಿಷೇಧಾಜ್ಞೆ ಜಾರಿ, ಮತದಾನಕ್ಕೆ ಸಕಲ ಸಿದ್ದತೆ

Bangalore News: ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ, 48 ಗಂಟೆ ಮುನ್ನ ನಿಷೇಧಾಜ್ಞೆ ಜಾರಿ, ಮತದಾನಕ್ಕೆ ಸಕಲ ಸಿದ್ದತೆ

ಲೋಕಸಭೆ ಚುನಾವಣೆಗೆ ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಐದು ಕ್ಷೇತ್ರಗಳಲ್ಲಿ ಸಿದ್ದತೆ ನಡೆದಿದ್ದು. ಮದ್ಯ ಮಾರಾಟ ಎರಡು ದಿನದ ಮಟ್ಟಿಗೆ ಬಂದ್‌ ಆಗಲಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಲೋಕಸಭೆ ಚುನಾವಣೆ ಕುರಿತು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಮಾಹಿತಿ ನೀಡಿದರು
ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಲೋಕಸಭೆ ಚುನಾವಣೆ ಕುರಿತು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಮಾಹಿತಿ ನೀಡಿದರು

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ವಿಭಾಗಗಳ ವ್ಯಾಪ್ತಿಯ 5 ಲೋಕಸಭಾ ಕ್ಷೇತ್ರಗಳ (ಒಟ್ಟು 28 ವಿಧಾನಸಭಾ ಕ್ಷೇತ್ರಗಳು) ವ್ಯಾಪ್ತಿಯಲ್ಲಿ ಸುಗಮವಾಗಿ ಸಾರ್ವಜನಿಕರು ತಮ್ಮ ಮತ ಚಲಾವಣೆ ಮಾಡಲು ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 5 ಲೋಕಸಭಾ ಕ್ಷೇತ್ರಗಳಲ್ಲಿ 1737 ಸೂಕ್ಷ್ಮ ಮತಗಟ್ಟೆಗಳು ಮತ್ತು 6351 ಸಾಮಾನ್ಯ ಮತಗಟ್ಟೆಗಳು ಸೇರಿ 8088 ಒಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಘಟಕದಿಂದ ಚುನಾವಣಾ ಕರ್ತವ್ಯಗಳಿಗೆ 9397 ಅಧಿಕಾರಿ ಮತ್ತು ಸಿಬ್ಬಂದಿಗಳು, 3919 ಗೃಹ ರಕ್ಷಕ ಸಿಬ್ಬಂದಿ, 54 ಸಶಸ್ತ್ರ ತುಕಡಿಗಳು ಹಾಗೂ 11 ಕೇಂದ್ರಿಯ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಬೆಂಗಳೂರು ನಗರದ ಎಲ್ಲಾ ವಿಭಾಗಗಳ ವ್ಯಾಪ್ತಿಯಲ್ಲಿ ಕೇಂದ್ರಿಯ ಭದ್ರತಾ ಪಡೆಗಳೊಂದಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ಲಾಗ್ ಮಾರ್ಚ್ ನಡೆಸಲಾಗಿದೆ. 8 ವಿಭಾಗಗಳ ವ್ಯಾಪ್ತಿಯಲ್ಲಿ 103 ಚೆಕ್‌ ಪೋಸ್ಟ್‌ಗಳನ್ನು ಅಳವಡಿಸಲಾಗಿದೆ. 91 ಫೈಯಿಂಗ್ ಸ್ಕ್ವಾಡ್ ಗಳು ಕರ್ತವ್ಯದಲ್ಲಿವೆ. ದಿ. 24.04.2024 ರಿಂದ 26.04.2024 ರ ಮಧ್ಯರಾತ್ರಿಯವರೆಗೆ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇದಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಇರುವ ರೌಡಿಪಟ್ಟಿ, ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಗುರುತಿಸಿ 5117 ಮಂದಿಯಿಂದ ಭದ್ರತಾ ಕಾಯಿದೆ ಅಡಿಯಲ್ಲಿ ಶಾಂತಿಭಂಗ ಉಂಟುಮಾಡದಂತೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ 38 ವ್ಯಕ್ತಿಗಳ ಗಡಿಪಾರು

ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಸುಗಮ, ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ನಡೆಸಲು ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ವಿಭಾಗಗಳಲ್ಲಿ 38 ವ್ಯಕ್ತಿಗಳನ್ನು ಗಡಿಪಾರು ಮಾಡಲಾಗಿದೆ.
ಪೂರ್ವ ವಿಭಾಗದಲ್ಲಿ 11 ಮಂದಿ, ಪಶ್ಚಿಮ ವಿಭಾಗದಲ್ಲಿ 15, ಉತ್ತರ, ಕೇಂದ್ರ ಮತ್ತು ದಕ್ಷಿಣ ವಿಭಾಗದಲ್ಲಿ ಶೂನ್ಯ, ಆಗ್ನೇಯ ವಿಭಾಗದಲ್ಲಿ 8, ಈಶಾನ್ಯ ವಿಭಾಗ ಹಾಗೂ ವೈಟ್ ಫೀಲ್ಡ್ ವಿಭಾಗದಲ್ಲಿ ತಲಾ ಇಬ್ಬರು ಸೇರಿದಂತೆ ಒಟ್ಟು 38 ಮಂದಿಯನ್ನು ಗಡಿಪಾರು ಮಾಡಲಾಗಿದೆ.

48 ಗಂಟೆ ಮುನ್ನ ನಿಷೇಧಾಜ್ಞೆ ಜಾರಿ

ಮತದಾನ ಕೊನೆಗೊಳ್ಳುವ 48 ಗಂಟೆ ಮುಂಚಿತವಾಗಿ ಅಂದರೆ 2024ರ ಏ.24 ಸಂಜೆ 6 ಗಂಟೆಯಿಂದ 2024ರ ಏ. 26 ರಾತ್ರಿ 12 ಗಂಟೆಯವರೆಗೆ ಸೆ. 144 ರ ಅಡಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮುಂಜಾಗ್ರತ ಕ್ರಮವಾಗಿ ನಿಷೇದಾಜ್ಞೆಯನ್ನು ಜಾರಿ ಮಾಡಲಾಗಿದೆ.

ಈ ಅವಧಿಯಲ್ಲಿ ಯಾವುದೇ ರೀತಿಯ ಸಗಟು ಅಥವಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮದ್ಯ, ಇತರೆ ಯಾವುದೇ ಮಾದಕ ವಸ್ತುಗಳ ಬಳಕೆ, ಮಾರಾಟ ಮತ್ತು ಸಂಗ್ರಹಣೆಯ ನಿಷೇಧದ ಜೊತೆಗೆ ಲಿಕ್ಕರ್ ಶಾಪ್ಸ್, ವೈನ್ ಶಾಪ್ಸ್, ಬಾರ್, ಹೊಟೇಲ್ಸ್, ರೆಸ್ಟೋರೆಂಟ್ಸ್ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಮಾಡದಿರಲು ನಿಷೇದಾಜ್ಞೆಯನ್ನು ವಿಧಿಸಲಾಗಿದೆ.

ಮತದಾನ ನಡೆಯುವ 48 ಗಂಟೆ ಮುಂಚಿತವಾಗಿ, ಮತದಾರರಲ್ಲದೆ ಇರುವವರು ಕ್ಷೇತ್ರವನ್ನು ಬಿಟ್ಟು ಅವರ ಮಾತೃ ಮತಕ್ಷೇತ್ರಕ್ಕೆ ತೆರಳುವುದು ಕಡ್ಡಾಯವಾಗಿದೆ. ಯಾವುದೇ ತರಹದ ಗುಂಪುಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಪೊಲೀಸ್ ಸಹಾಯಕ್ಕಾಗಿ ಚುನಾವಣಾ ಅಕ್ರಮಗಳ ಮಾಹಿತಿ ನೀಡಲು ಪೊಲೀಸ್‌ ದೂರವಾಣಿ 112 ಕ್ಕೆ ಸಂಪರ್ಕಿಸಲು ಕೋರಲಾಗಿದೆ ಎನ್ನುವುದು ಬೆಂಗಳೂರು ನಗರ ಚುನಾವಣಾಧಿಕಾರಿ. ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ನೀಡುವ ವಿವರಣೆ.

(ವರದಿ: ಎಚ್. ಮಾರುತಿ, ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner