ಕನ್ನಡ ಸುದ್ದಿ  /  Karnataka  /  Pm Narendra Modi Should Not Have Said This About Kharge, Dk Shivakumar

Mallikarjun Kharge: ಪ್ರಧಾನಿ ಮೋದಿಯವರು ಖರ್ಗೆಯವರ ಬಗ್ಗೆ ಹೀಗೆ ಹೇಳಬಾರದಿತ್ತು, ಡಿಕೆ ಶಿವಕುಮಾರ್‌ ಹೇಳಿದ್ದೇನು?

ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಬಾಬು ಜಗಜೀವನ್ ರಾಮ್, ರಾಜೀವ್ ಗಾಂಧಿ ಅವರು ಕೂತ ಜಾಗದಲ್ಲಿ ಖರ್ಗೆ ಅವರು ಕೂತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

ಡಿಕೆ ಶಿವಕುಮಾರ್‌ (ಸಂಗ್ರಹ ಚಿತ್ರ)
ಡಿಕೆ ಶಿವಕುಮಾರ್‌ (ಸಂಗ್ರಹ ಚಿತ್ರ) (PTI)

ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ರಬ್ಬರ್ ಸ್ಟಾಂಪ್ ಅಧ್ಯಕ್ಷರು ಎನ್ನುವ ರೀತಿಯಲ್ಲಿ ಬಿಂಬಿಸಿ, ಅವಹೇಳನ ಮಾಡಿದ್ದಾರೆ. ಪ್ರಧಾನಮಂತ್ರಿ ಸ್ಥಾನಕ್ಕೆ ನಾವು ಗೌರವ ನೀಡುತ್ತೇವೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಬಾಬು ಜಗಜೀವನ್ ರಾಮ್, ರಾಜೀವ್ ಗಾಂಧಿ ಅವರು ಕೂತ ಜಾಗದಲ್ಲಿ ಖರ್ಗೆ ಅವರು ಕೂತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿಕೆ. ಶಿವಕುಮಾರ್‌ ಹೇಳಿದ್ದಾರೆ. ಹಾಸನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮಗಳಿಗೆ ಈ ಹೇಳಿಕೆ ನೀಡಿದ್ದಾರೆ.

"ಖರ್ಗೆ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೆಳೆದು ನಿಂತಿದ್ದಾರೆ. ಒಬ್ಬ ದಲಿತ ನಾಯಕ ಗುಲ್ಬರ್ಗ ಪಟ್ಟಣ ಪಾಲಿಕೆ ಸದಸ್ಯ ಸ್ಥಾನದಿಂದ ಹಿಡಿದು 50 ವರ್ಷಗಳ ಕಾಲ ನಿರಂತರವಾಗಿ ಸಂಸದೀಯ ಜವಾಬ್ದಾರಿಯನ್ನು ನಿಭಾಯಿಸಿ ಸ್ವಂತ ಸಾಮರ್ಥ್ಯದ ಮೇಲೆ ಬೆಳೆದಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿರುವವರ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ. ಬಿಜೆಪಿಯ ಅಧ್ಯಕ್ಷರ ಬಗ್ಗೆ ನಾವು ಮಾತನಾಡುವುದಿಲ್ಲ. ಅವರು ಹೇಗೆ ಅಧ್ಯಕ್ಷರಾದರೂ, ಅವರ ಕಾರ್ಯವೈಖರಿ ಹೇಗಿದೆ ಎಂದು ನಾನು ಚರ್ಚೆ ಮಾಡುವುದಿಲ್ಲ. ಆದರೆ ನಮ್ಮ ಪಕ್ಷದಲ್ಲಿ ಸ್ವತಂತ್ರ್ಯವಾಗಿ ಕೆಲಸ ಮಾಡುತ್ತಿರುವ ಖರ್ಗೆ ಅವರ ಬಗ್ಗೆ ಪ್ರಧಾನಮಂತ್ರಿಗಳ ಮಾತು ಖಂಡನೀಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುವ ನಡೆ" ಎಂದು ಅವರು ಹೇಳಿದ್ದಾರೆ.

"ಗಾಂಧಿ ಕುಟುಂಬ ಕಷ್ಟ ಕಾಲದಲ್ಲಿ ಪಕ್ಷವನ್ನು ಒಗ್ಗಟ್ಟಾಗಿ ಕಾಪಾಡಿಕೊಂಡು ಬಂದಿದೆ. ಕೇಸರಿ ಅವರು ಅಧ್ಯಕ್ಷ ಸ್ಥಾನದಿಂದ ಇಳಿದ ನಂತರ ಸೋನಿಯಾ ಗಾಂಧಿ ಅವರು ಪಕ್ಷದ ಜವಾಬ್ದಾರಿ ಹೊತ್ತುಕೊಂಡರು. ಯಪಿಎ 1 ಮತ್ತು 2ನೇ ಸರ್ಕಾರದ ಅವಧಿಯಲ್ಲಿ ಅವರಿಗೆ ಪ್ರಧಾನಮಂತ್ರಿಯಾಗುವ ಅವಕಾಶ ಸಿಕ್ಕಿತ್ತಾದರೂ ಅದನ್ನು ದೇಶದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ತ್ಯಾಗ ಮಾಡಿದರು. ಆ ಸಮಯದಲ್ಲಿ ಅವರಾಗಲಿ ಹಾಗೂ ರಾಹುಲ್ ಗಾಂಧಿ ಅವರಾಗಲಿ ಯಾವುದೇ ಹುದ್ದೆ ಪಡೆಯಬಹುದಾಗಿತ್ತು. ಆದರೆ ಪಡೆಯಲಿಲ್ಲ. ವಯಸ್ಸಾದ ಮಹಿಳೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಸಿಲಲ್ಲಿ ಛತ್ರಿ ಹಿಡಿದ ವಿಚಾರವನ್ನು ಇಟ್ಟುಕೊಂಡು ಪ್ರಧಾನಮಂತ್ರಿಗಳು ಹೀಗೆ ಟೀಕೆ ಮಾಡಿರುವುದು ಖಂಡನೀಯ" ಎಂದರು.

ಹಿಂದೆ ನಮ್ಮ ಸರ್ಕಾರ 6ನೇ ವೇತನ ಆಯೋಗದ ವರದಿಯನ್ನು ಜಾರಿ ಮಾಡಿತ್ತು. ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂದು ಕೂಡ ಅಡುಗೆ ಅನಿಲ ಸಿಲಿಂಡರ್ ಬೆಲೆ 50 ರೂ. ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿಗೆ ಅರ್ಹರಾಗಿದ್ದಾರೆ. ಈ ಹಿಂದೆ ಈ ವಿಚಾರವಾಗಿ ಮಾತು ನೀಡಿದ್ದರು. ಆದರೆ ಅವರು ನುಡಿದಂತೆ ನಡೆಯಲಿಲ್ಲ. ಈ ಹಿಂದೆ ಅವರು ತಮ್ಮ ಪ್ರಣಾಳಿಕೆಯಲ್ಲಿ 600 ಭರವೆಸೆ ನೀಡಿದ್ದು 550 ಅನ್ನು ಈಡೇರಿಸಲು ವಿಫಲರಾಗಿದ್ದಾರೆ. ಈ ವಿಚಾರವಾಗಿ ನಾವು ಪ್ರಶ್ನೆ ಕೇಳುತ್ತಿದ್ದರೂ ಉತ್ತರ ನೀಡಲಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

"ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವುದು ಖಚಿತ. ಅದರಲ್ಲಿ ಯಾವುದೇ ಅನುಮಾನ ಬೇಡ. ನಾವು ಅಧಿಕಾರಕ್ಕೆ ಬಂದ ನಂತರ ಈ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುತ್ತೇವೆ. ನಾವು ಸರ್ಕಾರಿ ನೌಕರರ ನೋವು, ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಅವರು ತಮ್ಮ ಹಕ್ಕನ್ನು ಕೇಳುತ್ತಿದ್ದು, ಅದನ್ನು ನೀಡಲು ಕಾಂಗ್ರೆಸ್ ಬದ್ಧವಾಗಿದೆ. ಅವರ ಹೋರಾಟ ಅವರ ಮೂಲಭೂತ ಹಕ್ಕು. ಈ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ಮುಳುಗಿಸಿದೆ" ಎಂದರು.

ಪ್ರಧಾನಿಗಳು ಯಡಿಯೂರಪ್ಪನವರಿಗೆ ತಲೆಬಾಗಿ ನಮಿಸಿದರೆ ಸಾಲದು. ಯಡಿಯೂರಪ್ಪ ಅವರ ಕಣ್ಣಲ್ಲಿ ನೀಕು ಹಾಕಿಸಿದ್ದು ಯಾಕೆ? ಎಂಬ ವಿಚಾರವಾಗಿ ಸ್ಪಷ್ಟತೆ ನೀಡಬೇಕು. ಅವರ ಕುಟುಂಬಕ್ಕೆ ತನಿಖೆ ಸಂಸ್ಥೆಗಳ ವಿಚಾರಣೆ ಹೆಸರಲ್ಲಿ ನೀಡಿದ ಕಿರುಕುಳದ ಬಗ್ಗೆ ಮಾತನಾಡಲಿ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಸುವುದೇ ಆದರೆ, ಅವರನ್ನು ಇವತ್ತೇ ಮುಖ್ಯಮಂತ್ರಿಯನ್ನಾಗಿ ಮಾಡಲಿ.

ಆರಂಭದಲ್ಲಿ ಬೊಮ್ಮಾಯಿ ನಾಯಕತ್ವದಲ್ಲಿ ಚುನಾವಣೆ ಎಂದರು. ನಂತರ ಪ್ರಧಾನಿ ಮುಖ ನೋಡಿ ಮತ ಹಾಕಿ ಎಂದರು. ಈಗ ಯಡಿಯೂರಪ್ಪ ಅವರ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಬಿಜೆಪಿ ತನ್ನ ನಾಯಕರನ್ನು ಬಳಸಿ ಬಿಸಾಡುವ ಸಿದ್ಧಾಂತ ಹೊಂದಿದೆ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲದ ಪಕ್ಷವಾಗಿದೆ. ಬೊಮ್ಮಾಯಿ ಅವರನ್ನು ಬಿಜೆಪಿಯವರೇ ನಾಯಕ ಎಂದು ಒಪ್ಪಿಕೊಳ್ಳುತ್ತಿಲ್ಲ. ಕೇಂದ್ರ ನಾಯಕರು ಇಲ್ಲಿ ಬಂದು ಚುನಾವಣೆ ಮಾಡಲು ಸಾಧ್ಯವಿಲ್ಲ. ಈ ಸರ್ಕಾರದ ಅವಧಿ ಇನ್ನು 30 ದಿನ ಮಾತ್ರ. ನಂತರ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಕಳಂಕ ತೊಡೆದು ಹಾಕಿ ನಾವು ಕೊಟ್ಟ ಮಾತು ಉಳಿಸಿಕೊಂಡು ದಕ್ಷ ಆಡಳಿತ ನೀಡಲಿದೆ ಎಂದರು.

IPL_Entry_Point