ಕನ್ನಡ ಸುದ್ದಿ  /  ಕರ್ನಾಟಕ  /  Political Analysis: ಮುಂದಿನ ಲೋಕಸಭಾ ಚುನಾವಣೆಗೆ ಕರ್ನಾಟಕವೇ ಮಾದರಿ; ಬಿಜೆಪಿ, ಕಾಂಗ್ರೆಸ್ ಕಂಡುಕೊಂಡ ದೆಹಲಿ ಗದ್ದುಗೆಯ ಹಾದಿಯಿದು

Political Analysis: ಮುಂದಿನ ಲೋಕಸಭಾ ಚುನಾವಣೆಗೆ ಕರ್ನಾಟಕವೇ ಮಾದರಿ; ಬಿಜೆಪಿ, ಕಾಂಗ್ರೆಸ್ ಕಂಡುಕೊಂಡ ದೆಹಲಿ ಗದ್ದುಗೆಯ ಹಾದಿಯಿದು

Karnataka Politics: ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಅನುಸರಿಸುವ ಕಾರ್ಯತಂತ್ರಗಳ ಯಶಸ್ಸು ಮತ್ತು ವೈಫಲ್ಯ ನಿಚ್ಚಳವಾಗಿ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ತನ್ನದೇ ಆದ ರೀತಿಯಲ್ಲಿ ಪ್ರಭಾವ, ಪರಿಣಾಮಗಳನ್ನು ಬೀರಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ವಿಶ್ಲೇಷಣೆ ಇಲ್ಲಿದೆ.

ಬಿಜೆಪಿ ಪ್ರಣಾಳಿಕೆಯೊಂದಿಗೆ ಜೆಪಿ ನಡ್ಡಾ ಮತ್ತು ಯಡಿಯೂರಪ್ಪ (ಎಡಚಿತ್ರ). ಕಾಂಗ್ರೆಸ್ ಪ್ರಣಾಳಿಕೆಯೊಂದಿಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆ ಶಿವಕುಮಾರ್
ಬಿಜೆಪಿ ಪ್ರಣಾಳಿಕೆಯೊಂದಿಗೆ ಜೆಪಿ ನಡ್ಡಾ ಮತ್ತು ಯಡಿಯೂರಪ್ಪ (ಎಡಚಿತ್ರ). ಕಾಂಗ್ರೆಸ್ ಪ್ರಣಾಳಿಕೆಯೊಂದಿಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆ ಶಿವಕುಮಾರ್

ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಇಡೀ ದೇಶ ಕುತೂಹಲದಿಂದ ಗಮನಿಸುತ್ತಿದೆ. ಏಕೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಮುಂದಿನ ವರ್ಷ ಅಂದರೆ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಸೆಣೆಸಲಿರುವ ಎರಡು ಪ್ರಮುಖ ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿಯೂ ಜಿದ್ದಾಜಿದ್ದಿ ಹೋರಾಟಕ್ಕೆ ಇಳಿದಿವೆ. ಈಗ ಇಲ್ಲಿ ಅನುಸರಿಸಿರುವ ಕಾರ್ಯತಂತ್ರಗಳ ಯಶಸ್ಸು ಮತ್ತು ವೈಫಲ್ಯ ನಿಚ್ಚಳವಾಗಿ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ತನ್ನದೇ ಆದ ರೀತಿಯಲ್ಲಿ ಪ್ರಭಾವ, ಪರಿಣಾಮಗಳನ್ನು ಬೀರಲಿದೆ.

ಟ್ರೆಂಡಿಂಗ್​ ಸುದ್ದಿ

ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಈ ಪ್ರಣಾಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೂ ಮುಂದಿನ ಲೋಕಸಭಾ ಚುನಾವಣೆಯ ಸಂಭಾವ್ಯ ಕಾರ್ಯತಂತ್ರಗಳ ಇಣುಕುನೋಟಗಳು ಸಿಗುತ್ತವೆ. ಈ ಪೈಕಿ ಎದ್ದು ಕಾಣಿಸುವ ಎರಡು ಮುಖ್ಯ ಅಂಶಗಳು ಇವು.

ಕೊಡುಗೆಗಳ ಮೇಲಾಟ

ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಹಿಂದುತ್ವದೊಂದಿಗೆ ಜನಪರ ಕಾರ್ಯಕ್ರಮಗಳನ್ನು ಮುಂಚೂಣಿಗೆ ತಂದು ಮತಯಾಚಿಸಿತ್ತು. ಕರ್ನಾಟಕದಲ್ಲಿಯೂ ಆಹಾರ ಭದ್ರತೆಯ ವಿಚಾರದಲ್ಲಿ ಆಗಿರುವ ಸಾಧನೆಯನ್ನು ಬಿಂಬಿಸಿ ಹೊಸ ಫಲಾನುಭವಿಗಳ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿತ್ತು. ಇಂಥ ಫಲಾನುಭವಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ, ಅವರನ್ನು ಪಕ್ಷದ ಬೆಂಬಲಿಗರಾಗಿ ಪರಿವರ್ತಿಸುವ ಕೆಲಸವನ್ನೂ ಬಿಜೆಪಿ ಕಾರ್ಯಕರ್ತರು ಹಲವು ವರ್ಷಗಳಿಂದ ಯೋಜಿತ ರೀತಿಯಲ್ಲಿ ಮಾಡಿದರು. ಕರ್ನಾಟಕದಲ್ಲಿಯೂ ಇದೇ ತಂತ್ರ ಅನುಸರಣೆಯಾಗಿದೆ. ವಿಧಾನಸಭಾ ಕ್ಷೇತ್ರವಾರು ರೂಪಿಸಿರುವ "ಫಲಾನುಭವಿ ಪ್ರಕೋಷ್ಠ"ಗಳು ಬಿಜೆಪಿಯ ಪರವಾಗಿ ಗುಪ್ತಗಾಮಿನಿಯಂತೆ ಇಂದಿಗೂ ಕೆಲಸ ಮಾಡುತ್ತಿವೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಡುಬಡವರಿಗೆ ಪ್ರತಿದಿನ ಅರ್ಧ ಲೀಟರ್ ಹಾಲು, ವರ್ಷಕ್ಕೆ ಮೂರು ಗ್ಯಾಸ್ ಸಿಲಿಂಡರ್ ಮತ್ತು ತಿಂಗಳಿಗೆ ಐದು ಕೆಜಿ ಸಿರಿಧಾನ್ಯ ಕೊಡುವ ಭರವಸೆ ಕೊಟ್ಟಿದೆ.

ಕಾಂಗ್ರೆಸ್‌ ಕೂಡ ಈ ವಿಚಾರದಲ್ಲಿ ಹಿಂದುಳಿದಿಲ್ಲ. ಎಲ್ಲರಿಗೂ ತಿಂಗಳಿಗೆ 200 ಯೂನಿಟ್ ವಿದ್ಯುತ್, ಯುಜನವರು ಮತ್ತು ಮಹಿಳೆಯರಿಗೆ ಸಹಾಯಧನ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ, ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವ ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಎರಡೂ ಪಕ್ಷಗಳ ಈ ಪ್ರಣಾಳಿಕೆ ಘೋಷಣೆಗಳು ಉಚಿತ ಕೊಡುಗೆಗಳ ಭರವಸೆ ಮತ್ತು ಅನುಷ್ಠಾನದ ಕಾರ್ಯಸಾಧ್ಯತೆಯ ಬಗ್ಗೆ ಮತ್ತೊಮ್ಮೆ ಚರ್ಚೆಗಳನ್ನು ಹುಟ್ಟುಹಾಕಿದೆ. ಕೊರೊನಾ ನಂತರ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಇನ್ನೂ ಮೊದಲಿನ ಸುಸ್ಥಿತಿಗೆ ಬಂದಿಲ್ಲ. ಹೀಗಿರುವಾಗಿ ರಾಜಕೀಯ ಲಾಭಕ್ಕಾಗಿ ಘೋಷಿಸುವ ಈ ಉಚಿತ ಕೊಡುಗೆಗಳ ಹೊರೆಯನ್ನು ಸಹಿಸುವ ಪರಿಸ್ಥಿತಿಯಲ್ಲಿ ಕರ್ನಾಟಕದ ಬೊಕ್ಕಸ ಇದೆಯೇ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ.

ಸಿದ್ಧಾಂತ ಮತ್ತು ಮೀಸಲಾತಿ

ಎರಡೂ ಪಕ್ಷಗಳ ಪ್ರಣಾಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡುಬರುವ ಮತ್ತೊಂದು ಮುಖ್ಯ ಅಂಶ ಸಿದ್ಧಾಂತಗಳ ಬಗೆಗಿನ ಬದ್ಧತೆ. ಇದರ ಜೊತೆಗೆ ಮೀಸಲಾತಿಯ ಬಗ್ಗೆಯೂ ಎರಡೂ ಪಕ್ಷಗಳು ಪ್ರಸ್ತಾಪಿಸಿವೆ. ಬಿಜೆಪಿಯು ತನ್ನ ನೆಚ್ಚಿನ ಸೈದ್ಧಾಂತಿಕ ವಿಚಾರಗಳಾದ ಏಕರೂಪ ನಾಗರಿಕ ಸಂಹಿತೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯ ಬಗ್ಗೆ ಈ ಬಾರಿ ಗಟ್ಟಿಯಾಗಿ ಮಾತನಾಡಿದೆ. ಆದರೆ ಈ ಎರಡೂ ವಿಚಾರಗಳು ಕರ್ನಾಟಕ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಪರಿಣಾಮ ಬೀರಬಹುದು ಎಂಬ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಆದರೆ ಹಿಂದುತ್ವದ ವಿಚಾರಧಾರೆಯ ಪರವಾಗಿ ಇರುವ ತನ್ನ ಪಾರಂಪರಿಕ ಬೆಂಬಲಿಗರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಈ ಅಂಶಗಳು ನೆರವಾಗಬಹುದು ಎಂದು ಹೇಳಲಾಗಿದೆ. ಈ ಹಿಂದೆ ಉತ್ತರಾಖಂಡ, ಗುಜರಾತ್ ಮತ್ತು ಉತ್ತರ ಪ್ರದೇಶ ವಿದಾನಸಭಾ ಚುನಾವಣೆಗಳಲ್ಲಿಯೂ ಬಿಜೆಪಿ ಈ ಎರಡೂ ಅಂಶಗಳನ್ನು ಪ್ರಸ್ತಾಪಿಸಿತ್ತು.

ಚುನಾವಣೆಗೆ ಕೆಲ ದಿನಗಳ ಮೊದಲಷ್ಟೇ ಬಿಜೆಪಿ ಮೀಸಲಾತಿ ಅಂಕಿಅಂಶಗಳಲ್ಲಿಯೂ ಒಂದಿಷ್ಟು ಏರುಪೇರು ಮಾಡಿತ್ತು. ಮುಸ್ಲಿಮರ ಮೀಸಲಾತಿ ರದ್ದುಪಡಿಸಿ, ಅದನ್ನು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹಂಚಿಕೊಟ್ಟಿತ್ತು. ಪರಿಶಿಷ್ಟ ಜಾತಿಯ ಮೀಸಲಾತಿ ಕೋಟಾದಲ್ಲಿಯೂ ಆಂತರಿಕ ಬದಲಾವಣೆ ಮಾಡಿತ್ತು. ಮೀಸಲಾತಿಯ ವಿಚಾರವನ್ನು ಚುನಾವಣೆಗೆ ತರುವುದು ಎಂದರೆ ಜೇನುಗೂಡಿಗೆ ಕಲ್ಲು ಹೊಡೆದಂತೆ. ಈಗ ಮೀಸಲಾತಿಯ ಬಗ್ಗೆ ಕಾಂಗ್ರೆಸ್ ದೊಡ್ಡದನಿಯಲ್ಲಿ ಮಾತನಾಡುತ್ತಿದೆ. ಬಿಜೆಪಿ ಮಾತ್ರ ಈ ವಿಷಯವನ್ನು ಚುನಾವಣಾ ಪ್ರಚಾರ ಮತ್ತು ಪ್ರಣಾಳಿಕೆಯಲ್ಲಿ ಎದ್ದುಕಾಣುವಂತೆ ಪ್ರಸ್ತಾಪಿಸುತ್ತಿಲ್ಲ.

ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 75ಕ್ಕೆ ಹೆಚ್ಚಿಸುವುದಾಗಿ ಕಾಂಗ್ರೆಸ್ ಸ್ಪಷ್ಟ ಭರವಸೆ ಕೊಟ್ಟಿದೆ. ತನ್ನ ರಾಜಕೀಯ ಬೆಂಬಲಿಗ ವರ್ಗ ಯಾವುದು ಎಂಬುದನ್ನು ಸ್ಪಷ್ಟವಾಗಿ ಕಂಡುಕೊಂಡಂತಿರುವ ಕಾಂಗ್ರೆಸ್ ಅದನ್ನು ಭದ್ರಪಡಿಸಿಕೊಳ್ಳುವ ಕಾರ್ಯತಂತ್ರಗಳನ್ನೇ ಅನುಸರಿಸುತ್ತಿದೆ. ಚುನಾವಣೆ ದೃಷ್ಟಿಯಿಂದ ಪ್ರಸ್ತುತ ಎನಿಸುವ ಜಾತಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಮೀಸಲಾತಿ ಪ್ರಮಾಣ ಹೆಚ್ಚಳದ ಘೋಷಣೆ ಮಹತ್ವದ್ದಾಗಿದೆ. ಪ್ರಣಾಳಿಕೆ ಬಿಡುಗಡೆಯ ನಂತರ ಮಾತನಾಡಿದ್ದ ಸಿದ್ದರಾಮಯ್ಯ ಸಂವಿಧಾನದ 9ನೇ ವಿಧಿಯ ರಕ್ಷಣೆಯನ್ನು ಮೀಸಲಾತಿ ಹೆಚ್ಚಳಕ್ಕೆ ಒದಗಿಸುವುದಾಗಿಯೂ ಹೇಳಿದ್ದು ಗಮನಾರ್ಹ ಎನಿಸಿದೆ.

ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಬರುವ ಮೊದಲಿನಿಂದಲೂ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ (ಅಹಿಂದ) ವರ್ಗಗಳ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ವೈವಿಧ್ಯಮಯ ಹಿನ್ನೆಲೆಯಿರುವ ಆದರೆ ಈ ಜಾತಿಗಳನ್ನು ಹಿಡಿದಿಟ್ಟು, ಮತಬ್ಯಾಂಕ್ ರೂಪಿಸುವುದು ಹಲವು ಸವಾಲುಗಳಿರುವ ಕಷ್ಟದ ರಾಜಕಾರಣ. ಆದರೆ ಈ ಚುನಾವಣೆಯ ಮೂಲಕ ಕಾಂಗ್ರೆಸ್ ಮತ್ತೊಮ್ಮೆ 'ಅಹಿಂದ' ನೆಲಗಟ್ಟು ಗಟ್ಟಿಯಾಗಿಸಲು ಪ್ರಯತ್ನ ಆರಂಭಿಸಿದೆ. ಬಿಜೆಪಿ ಮುಂದಿಡುವ ಹಿಂದುತ್ವದ ಭಾವುಕ ಅಂಶಗಳ ಎದುರು ಜಾತಿಗಳ ಅಸ್ಮಿತೆಯನ್ನು ಚುನಾವಣೆಯ ವಿಚಾರವಾಗಿಸುವ ಜಾಣತನ ಇದು.

ರಾಷ್ಟ್ರಮಟ್ಟದಲ್ಲಿ ಜಾತಿವಾರು ಗಣತಿ ನಡೆಯಬೇಕು ಎನ್ನುವ ಒತ್ತಾಯ, ಜಾತಿವಾರು ಪ್ರಾತಿನಿಧ್ಯ ಹೆಚ್ಚಳದ ಭರವಸೆಗಳು ತನ್ನ ಪರವಾಗಿ ಮತ ಗೆದ್ದುಕೊಡಬಹುದು ಎಂದು ಕಾಂಗ್ರೆಸ್‌ ಲೆಕ್ಕ ಹಾಕಿದೆ. ಈ ಮೂಲಕ 2014ರ ನಂತರ ಬಿಜೆಪಿ ದೇಶಾದ್ಯಂತ ಜನಪ್ರಿಯಗೊಳಿಸಿರುವ ರಾಜಕೀಯ ಹಿಂದುತ್ವದ ಕಥನಕ್ಕೆ ಜಾತಿ ಗಣತಿ ಮತ್ತು ಮೀಸಲಾತಿಯ ಮೂಲಕ ಉತ್ತರ ನೀಡಲು ಕಾಂಗ್ರೆಸ್ ಮುಂದಾಗಿದೆ. ಒಂದು ವೇಳೆ ಈ ಅಂಶ ಇಲ್ಲಿ ಯಶಸ್ವಿಯಾದರೆ, ದೇಶಾದ್ಯಂತ ಇದೇ ಮಾದರಿಯಲ್ಲಿ ಹಲವು ಜಾತಿಗಳ ಮೀಸಲಾತಿ ಪ್ರಮಾಣ ಏರುಪೇರಾಗಿಸುವ, ಜನಸಂಖ್ಯೆಯ ಪ್ರಾತಿನಿಧ್ಯಕ್ಕೆ ತಕ್ಕಂತೆ ಮೀಸಲಾತಿ ಕೊಡುವ ವಿಚಾರದ ಚರ್ಚೆ ಜೋರಾಗಲಿದೆ. ಒಂದು ವೇಳೆ ಕರ್ನಾಟಕದ ಜನರು ಕಾಂಗ್ರೆಸ್‌ನ ಭರವಸೆಗೆ ಸೊಪ್ಪು ಹಾಕದಿದ್ದರೆ ಸಹಜವಾಗಿಯೇ ಮತ್ತೊಂದು ವಿಚಾರವನ್ನು ಕಾಂಗ್ರೆಸ್‌ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಹುಡುಕಬೇಕಾಗುತ್ತದೆ.

IPL_Entry_Point