Channapatna Assembly Elections: ಬೊಂಬೆಯೂರು ಚನ್ನಪಟ್ಟಣದಲ್ಲಿ ಮತದಾನದ ರಂಗು, ಹೇಗಿದೆ ಚುನಾವಣೆಗೆ ಸಿದ್ದತೆ
ಕನ್ನಡ ಸುದ್ದಿ  /  ಕರ್ನಾಟಕ  /  Channapatna Assembly Elections: ಬೊಂಬೆಯೂರು ಚನ್ನಪಟ್ಟಣದಲ್ಲಿ ಮತದಾನದ ರಂಗು, ಹೇಗಿದೆ ಚುನಾವಣೆಗೆ ಸಿದ್ದತೆ

Channapatna Assembly Elections: ಬೊಂಬೆಯೂರು ಚನ್ನಪಟ್ಟಣದಲ್ಲಿ ಮತದಾನದ ರಂಗು, ಹೇಗಿದೆ ಚುನಾವಣೆಗೆ ಸಿದ್ದತೆ

ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವೂ ಈ ಬಾರಿಯೂ ಹೈವೋಲ್ಟೇಜ್‌ ಮಹತ್ವವನ್ನೇ ಪಡೆದಿದೆ. ಇಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಹಣಾಹಣಿಯೇ ಏರ್ಪಟ್ಟಿದೆ. ಇಂತಹ ಸನ್ನಿವೇಶದ ನಡುವೆ ಮತದಾನ ಬುಧವಾರ ನಡೆಯಲಿದೆ.

ಬೊಂಬೆಗಳ ಊರು ಚನ್ನಪಟ್ಟಣದಲ್ಲಿ ವಿಧಾನಸಭೆ ಉಪಚುನಾವಣೆಯ ಮತದಾನದ ಉಮೇದು ಜೋರಾಗಿದೆ.
ಬೊಂಬೆಗಳ ಊರು ಚನ್ನಪಟ್ಟಣದಲ್ಲಿ ವಿಧಾನಸಭೆ ಉಪಚುನಾವಣೆಯ ಮತದಾನದ ಉಮೇದು ಜೋರಾಗಿದೆ.

ಚನ್ನಪಟ್ಟಣ: ಚನ್ನಪಟ್ಟಣ ಬೊಂಬೆಗಳ ತವರು. ಶತಮಾನದಿಂದಲೂ ಇಲ್ಲಿನ ಬೊಂಬೆಗಳಿಗೆ ಎಲ್ಲಿಲ್ಲದ ಬೇಡಿಕೆ. ಚನ್ನಪಟ್ಟಣ ರಾಜಕೀಯದ ಊರು. ರಾಜಕೀಯವನ್ನೇ ಹೊದ್ದು ಮಲಗುವವರೂ ಇದ್ದಾರೆ. ಅಷ್ಟರ ಮಟ್ಟಿಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಮಹತ್ವವನ್ನು ಪಡೆದುಕೊಂಡಿದೆ. ಈಗಲೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ,ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯದ ಅಬ್ಬರ ಜೋರಿದೆ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಇದಕ್ಕಾಗಿ ಇಲ್ಲಿ ಉಪಚುನಾವಣೆ ನಡೆದಿದ್ದು, ಇದರ ನಡುವೆಯೇ ಮತದಾರ ತನ್ನ ಹಕ್ಕನ್ನು ಚಲಾಯಿಸಲು ಸಿದ್ದನಾಗಿದ್ಧಾನೆ. ಈ ಹಿಂದೆಯೂ ಎರಡು ಬಾರಿ ಉಪಚುನಾವಣೆ ಕಂಡಿರುವ ಚನ್ನಪಟ್ಟಣದಲ್ಲಿ ಮತ್ತೊಂದು ಉಪ ಚುನಾವಣೆ ಸಮಯ ಬಂದಿದೆ.

ಯೋಗೇಶ್ವರ್‌ ಹಿಡಿತ

ಚನ್ನಪಟ್ಟಣ ಕಾಂಗ್ರೆಸ್‌, ಬಿಜೆಪಿ, ಜನತಾದಳವಲ್ಲದೇ ಸಮಾಜವಾದಿ ಪಕ್ಷಕ್ಕೂ ಒಲಿದಿದೆ. ಈ ಕ್ಷೇತ್ರದಿಂದ ಹಲವರು ಗೆದ್ದಿದ್ದರೂ ಅತ್ಯಧಿಕ ಬಾರಿ ಗೆದ್ದಿರುವುದು ಯೋಗೇಶ್ವರ್‌. ಪಕ್ಷೇತರ,ಕಾಂಗ್ರೆಸ್‌, ಬಿಜೆಪಿ,ಸಮಾಜವಾದಿ ಪಕ್ಷದಿಂದ ಚುನಾಯಿತರಾಗಿದ್ದಾರೆ, ದೇವೇಗೌಡರ ಕುಟುಂಬದವರಲ್ಲಿ ಅನಿತಾ ಕುಮಾರಸ್ವಾಮಿ ಸೋತಿದ್ದರೆ, ಕುಮಾರಸ್ವಾಮಿ ಗೆದ್ದಿದ್ದಾರೆ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರನ್ನು ಈ ಹಿಂದೆ ಎದುರಿಸಿರುವ ಯೋಗೇಶ್ವರ್‌ ಈಗ ಅವರ ಮಗನನ್ನೂ ಎದುರಿಸುತ್ತಿದ್ದಾರೆ.

ಅಭ್ಯರ್ಥಿಗಳ ಅಬ್ಬರ

ಚನ್ನಪಟ್ಟಣದಲ್ಲಿ ಅಭ್ಯರ್ಥಿಗಳ ಗೋಜಲು ಆರಂಭದಿಂದಲೂ ಇತ್ತು. ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗಬಹುದು ಎನ್ನುವ ಚರ್ಚೆಗಳು ನಡೆದಿದ್ದವು. ಕಾಂಗ್ರೆಸ್‌ ನಿಂದ ಡಿ.ಕೆ.ಶಿವಕುಮಾರ್‌ ಕುಟುಂಬ, ಜೆಡಿಎಸ್‌ ನಿಂದ ದೇವೇಗೌಡರ ಕುಟುಂದವರಿಗೆ ಟಿಕೆಟ್‌ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಕೊನೆ ಕ್ಷಣದಲ್ಲಿ ಟಿಕೆಟ್‌ ಕೈತಪ್ಪಿದ್ದರಿಂದ ಬಿಜೆಪಿ ತೊರೆದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌ ಪಕ್ಷಕ್ಕೆ ಮರಳಿ ಅಭ್ಯರ್ಥಿಯಾದರು.

ಜೆಡಿಎಸ್‌ ನಿಖಿಲ್‌ ಕುಮಾರಸ್ವಾಮಿ ಅವರ ಹೆಸರಿನ ನಡುವೆ ಹಲವರ ಹೆಸರನ್ನು ಪ್ರಸ್ತಾಪಿಸಿತು. ಕೊನೆಗೆ ಇಲ್ಲಿ ನಿಖಿಲ್‌ ಕಣಕ್ಕಿಳಿದರು. ಇಬ್ಬರು ಅಭ್ಯರ್ಥಿಗಳು ಸತತ ಎರಡು ಚುನಾವಣೆಯಲ್ಲಿ ಸೋತಿದ್ದಾರೆ. ಈಗ ಮತದಾರ ಯಾರಿಗೆ ಒಲಿಯಬಹುದು ಎನ್ನುವ ಕುತೂಹಲವಂತೂ ಇದೆ.

ದೇವೇಗೌಡರ ಪ್ರಚಾರ

ಚನ್ನಪಟ್ಟಣದಿಂದ ನಿಖಿಲ್‌ ಕುಮಾರಸ್ವಾಮಿ ಅವರು ಅಭ್ಯರ್ಥಿಯಾಗುತ್ತಿದ್ದಂತೆ ಖುದ್ದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರೇ ಅಖಾಡಕ್ಕೆ ಇಳಿದು ಪ್ರಚಾರ ಕೈಗೊಂಡಿದ್ದಾರೆ.

ಇಳಿ ವಯಸ್ಸಿನಲ್ಲೂ ಎಲ್ಲವನ್ನೂ ಮರೆತು ಹಳ್ಳಿ ಹಳ್ಳಿಗಳನ್ನು ಸುತ್ತಿ ಇಡೀ ಚುನಾವಣೆ ಕಣಕ್ಕೆ ರಂಗನ್ನು ದೇವೇಗೌಡರು ತಂದದ್ದು ವಿಶೇಷ. ತಮ್ಮ ಮೊಮ್ಮಗನ ಗೆಲುವಿಗೆ ಬಂದಿಲ್ಲ ಎನ್ನುತ್ತಲೇ ಯುವ ನಾಯಕನನ್ನು ಗೆಲ್ಲಿಸಿ ಎಂದು ಹಿರಿಯರು ಹಾಗೂ ಯುವ ಸಮುದಾಯದವರಲ್ಲಿ ಗೌಡರು ಮನವಿ ಮಾಡಿದರು.

ಡಿಕೆ ಸಹೋದರರ ಸವಾಲ್‌

ಈ ಕ್ಷೇತ್ರ ಡಿಕೆ ಶಿವಕುಮಾರ್‌ ಹಾಗೂ ಡಿಕೆ ಸುರೇಶ್‌ ಅವರ ಪ್ರತಿಷ್ಠೆಯ ಕ್ಷೇತ್ರ. ಖುದ್ದು ಅವರೇ ಇಲ್ಲಿ ಉಸ್ತುವಾರಿ ಹೊತ್ತು ಪ್ರಚಾರ ನಡೆಸಿದರು. ಅದರಲ್ಕೂ ಡಿ.ಕೆ.ಶಿವಕುಮಾರ್‌ ಹಾಗೂ ಸುರೇಶ್‌ ಸಹೋದರರು ಹಾಗೂ ದೇವೇಗೌಡರರು, ಎಚ್‌ಡಿ ಕುಮಾರಸ್ವಾಮಿ, ನಿಖಿಲ್‌ ಅವರ ಸವಾಲು ಜವಾಬಿನ ಕಣವಾಗಿಯೂ ಮಾರ್ಪಟ್ಟಿತ್ತು.

ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್‌,ಯಡಿಯೂರಪ್ಪ, ಕೇಂದ್ರ ಸಚಿವರೂ ಪ್ರಚಾರದಲ್ಲಿ ಭಾಗಿಯಾದರು. ಇಲ್ಲಿಯೂ ಕಾಂಗ್ರೆಸ್‌ ಸಚಿವರು, ಬಿಜೆಪಿ ಹಾಗು ಜೆಡಿಎಸ್‌ ನಾಯಕರ ದಂಡೇ ಮೂರು ವಾರ ನೆರೆದಿತ್ತು.

ಮತದಾರರ ಎಷ್ಟು

ಚನ್ನಪಟ್ಟಣ ಕ್ಷೇತ್ರದಲ್ಲೂ ಪುರುಷರಿಗಿಂತ ಮಹಿಳೆಯರೇ ಅಧಿಕ. ಚನ್ನಪಟ್ಟಣ ಕ್ಷೇತ್ರದಲ್ಲಿ ಒಟ್ಟು 2,32,836 ಮತದಾರಿದ್ದಾರೆ. ಇವರಲ್ಲಿ 1,12,271 ಪುರುಷ ಮತದಾರರು. 1,20,557 ಮಹಿಳಾ ಮತದಾರರು. ಇತರೆ 8 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

ಕಣದಲ್ಲಿ ಕಾಂಗ್ರೆಸ್‌ನಿಂದ ಸಿ.ಪಿ. ಯೋಗೇಶ್ವರ್‌, ಎನ್‌ಡಿಎದಿಂದ ನಿಖಿಲ್‌ ಕುಮಾರಸ್ವಾಮಿ ಕಣದಲ್ಲಿದ್ದರೆ,ಇನ್ನೂ ವಿವಿಧ ಪಕ್ಷಗಳ 9 ಅಭ್ಯರ್ಥಿಗಳು, 21 ಪಕ್ಷೇತರರು ಸ್ಪರ್ಧೆ ಮಾಡಿದ್ದಾರೆ. ಇಟ್ಟು31 ಅಭ್ಯರ್ಥಿ ಸ್ಪರ್ಧೆಯೊಡ್ಡಿದ್ದಾರೆ.

Whats_app_banner