Beauty Tips: ಅಂದ ಕೆಡಿಸಿದ್ಯಾ ಕಪ್ಪಾದ ಕತ್ತು; ಕುತ್ತಿಗೆಯ ಚರ್ಮವನ್ನು ಬಿಳಿಯಾಗಿಸಲು ಇಲ್ಲಿದೆ ಸರಳ ಮನೆಮದ್ದು
ಕುತ್ತಿಗೆ ಅಥವಾ ಕತ್ತಿನ ಸುತ್ತಲೂ ಕಪ್ಪಾಗಿ ಅಂದ ಕೆಡುವುದು ಸಾಮಾನ್ಯ. ಟ್ಯಾನ್, ವಿಟಮಿನ್ ಕೊರತೆ ಹೀಗೆ ಹಲವು ಕಾರಣಗಳಿಂದ ಕತ್ತಿನ ಸುತ್ತಲೂ ಕಪ್ಪಾಗಬಹುದು. ಇದರ ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದು.
ಸೌಂದರ್ಯ ಕಾಪಾಡಿಕೊಳ್ಳಲು ನಾವು ಎಷ್ಟೇ ಪ್ರಯತ್ನ ಮಾಡಿದರೂ ಕೆಲವೊಮ್ಮೆ ಅಂದ ಕೆಡುವುದು ಸಹಜ. ಮುಖ ಮಾತ್ರ ಅಂದವಾಗಿದ್ದು ಮುಖದ ಸುತ್ತಲಿನ ಭಾಗಗಳು ಅಂದಗೆಟ್ಟರೆ ಸೌಂದರ್ಯ ಬಾಡಿದಂತೆ ಕಾಣಬಹುದು. ಅಂದ ಕೆಡಿಸುವಲ್ಲಿ ಕತ್ತಿನ ಪಾತ್ರವೂ ಇದೆ. ಕೆಲವರಿಗೆ ಮುಖ, ಮೈ ಬಣ್ಣ ಎಲ್ಲವೂ ಬೆಳಗಿದ್ದರೂ ಕತ್ತು ಮಾತ್ರ ಕಪ್ಪಾಗಿದ್ದು ಅಸಹ್ಯ ಕಾಣುವಂತೆ ಮಾಡುತ್ತದೆ. ಎಷ್ಟೇ ಸ್ವಚ್ಛ ಮಾಡಿದರೂ, ಯಾವುದೇ ಕ್ರೀಮ್ ಬಳಸಿದರೂ ಕತ್ತಿನ ಬಣ್ಣ ಕಪ್ಪಾಗಿಯೇ ಇರುತ್ತದೆ. ಹೈಪರ್‌ಪಿಗ್ಮಂಟೇಷನ್‌ನಿಂದಾಗಿ ಕತ್ತು ಕಪ್ಪಾಗಬಹುದು. ಅದಕ್ಕೆ ಕಾರಣಗಳು ಹಲವು. ಇದರ ನಿವಾರಣೆಗೆ ಮನೆಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಬಹುದು.
ಕತ್ತಿನ ಸುತ್ತಲೂ ಕಪ್ಪಾಗಲು ಕಾರಣವೇನು?
ಕತ್ತಿನ ಸುತ್ತಲೂ ಕಪ್ಪಾಗಲು ಮುಖ್ಯ ಕಾರಣ ಸ್ವಚ್ಛವಾಗಿಲ್ಲದೇ ಇರುವುದು. ನೀವು ಪ್ರತಿದಿನ ಸ್ನಾನ ಮಾಡಿಯೂ ಕತ್ತಿನ ಭಾಗವನ್ನು ಸ್ವಚ್ಛ ಮಾಡಿ ಇರಿಸಿಕೊಳ್ಳದೇ ಇದ್ದರೆ ಕತ್ತಿನ ಸುತ್ತಲೂ ಕೊಳೆ ಸೇರಿ ಕಪ್ಪಾಗುತ್ತದೆ. ಇದಲ್ಲದೆ ಪಿಸಿಓಎಸ್, ಸ್ಥೂಲಕಾಯ ಹಾಗೂ ಮಧುಮೇಹದಿಂದ ಬಳಲುವವರಿಗೂ ಕೂಡ ಕುತ್ತಿಗೆ ಕಪ್ಪಾಗಬಹುದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ.
ಅಷ್ಟೇ ಅಲ್ಲದೆ ಕುತ್ತಿಗೆ ಸುತ್ತಲೂ ಇರುವ ಚರ್ಮ ಸೂಕ್ಷ್ಮವಾಗಿರುತ್ತದೆ. ಹಾರ್ಮೋನುಗಳ ವ್ಯತ್ಯಾಸದ ಹೊರತಾಗಿಯೂ ಕತ್ತಿನ ಸುತ್ತಲೂ ಇರುವ ಚರ್ಮಕ್ಕೆ ಸೂರ್ಯನ ಕಿರಣ ನೇರವಾಗಿ ತಾಕುವ ಕಾರಣ ಕತ್ತು ಕಪ್ಪಾಗಬಹುದು. ಆ ಕಾರಣಕ್ಕೆ ಹೊರಗಡೆ ಹೋಗುವಾಗ ತಪ್ಪದೇ ಕುತ್ತಿಗೆಯ ಭಾಗಕ್ಕೂ ಸನ್‌ಸ್ಕ್ರೀನ್ ಕ್ರೀಮ್ ಬಳಸಬೇಕು.
ನಿಮ್ಮ ಕಪ್ಪಾದ ಕತ್ತನ್ನು ಬಿಳಿಯಾಗಿಸಿ, ಚರ್ಮ ತಿಳಿಯಾಗಿಸುವಂತೆ ಮಾಡಲು ಇಲ್ಲಿದೆ 3 ಸರಳ ಮನೆಮದ್ದು.
ಎಕ್ಸ್‌ಫೋಲಿಯೇಟ್
ಪ್ರತಿಬಾರಿ ಸ್ನಾನ ಮಾಡುವಾಗಲೂ ನಿಮ್ಮ ಕುತ್ತಿಗೆಯ ಹಿಂಭಾಗವನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳವುದು ಬಹಳ ಮುಖ್ಯ. ಸಾಮಾನ್ಯವಾಗಿ ಹಲವರು ಸ್ನಾನ ಮಾಡುವಾಗ ಕುತ್ತಿಗೆಯ ಭಾಗವನ್ನು ಸ್ವಚ್ಛ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಆ ಭಾಗದಲ್ಲಿ ಕೊಳೆ ಸಂಗ್ರಹವಾಗುತ್ತದೆ. ಜೊತೆಗೆ ಕುತ್ತಿಗೆಯ ಭಾಗ ಕಪ್ಪಾಗುತ್ತದೆ. ಮರೆಯದೇ ಕುತ್ತಿಗೆಯ ಭಾಗವನ್ನು ಸ್ಕ್ರಬ್ ಮಾಡುವುದು ಮುಖ್ಯವಾಗುತ್ತದೆ. ಎಕ್ಸ್‌ಫೋಲಿಯೇಟ್ ಮಾಡಿಕೊಳ್ಳುವ ಮೂಲಕ ಕತ್ತಿನ ಸುತ್ತಲೂ ಇರುವ ಕಪ್ಪನ್ನು ನಿವಾರಿಸಬಹುದು.
ಆಲೂಗೆಡ್ಡೆ ತಿರುಳು
ಆಲೂಗೆಡ್ಡೆ ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸ ಮಾಡುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತು ಪಡಿಸಿವೆ. ಇದರಲ್ಲಿರುವ ಬ್ಲೀಚಿಂಗ್ ಅಂಶ ಚರ್ಮವನ್ನು ತಿಳಿಯಾಗಿಸಲು ಸಹಾಯ ಮಾಡುತ್ತದೆ. ಆಲೂಗೆಡ್ಡೆ ಐರನ್, ವಿಟಮಿನ್ ಸಿ ಹಾಗೂ ರೈಬೊಫ್ಲಾವಿನ್ ಅಂಶಗಳನ್ನು ಹೊಂದಿದ್ದು, ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಆಲೂಗೆಡ್ಡೆಯನ್ನು ಹೋಳುಗಳಾಗಿ ಮಾಡಿ ಅದರಿಂದ ಕುತ್ತಿಗೆಯ ಭಾಗಕ್ಕೆ ಉಜ್ಜಬೇಕು. ವೃತ್ತಾಕಾರವಾಗಿ ಸುಮಾರು 5 ನಿಮಿಷಗಳ ಕಾಲ ಕುತ್ತಿಗೆಯ ಭಾಗಕ್ಕೆ ಉಜ್ಜಬೇಕು. ಇದನ್ನು ಪ್ರತಿದಿನ ಮಾಡುವುದರಿಂದ ಕತ್ತಿನ ಸುತ್ತಲಿನ ಕಪ್ಪುಕಲೆ ನಿವಾರಣೆಯಾಗುತ್ತದೆ.
ಆಲೊವೆರಾ ಸ್ಕ್ರಬ್
ಆಲೊವೆರಾದಲ್ಲಿರುವ ಸಕ್ರಿಯ ಅಂಶ ಆಲೋಯಿನ್ ಚರ್ಮದ ಹೊಳಪು ಹೆಚ್ಚಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಹಗುರಗೊಳಿಸುತ್ತದೆ. ತಂಪಾದ ಆಲೊವೆರಾ ತಿರುಳು ಚರ್ಮವನ್ನು ತೇವಗೊಳಿಸುತ್ತದೆ. ಅಲ್ಲದೆ ಇದು ಚರ್ಮದ ತುರಿಕೆಯನ್ನು ನಿವಾರಿಸುತ್ತದೆ. ಚರ್ಮವು ಕಪ್ಪಾಗುವುದರಿಂದ ಉಂಟಾಗುವ ಶುಷ್ಕತೆಯನ್ನು ನಿವಾರಿಸುತ್ತದೆ. ಲೋಳೆಸರ ಜೆಲ್ ಅನ್ನು ನೇರವಾಗಿ ಕತ್ತಿಗೆ ಹಚ್ಚಬಹುದು ಅಥವಾ ಇದರೊಂದಿಗೆ ಮೊಸರು ಸೇರಿಸಿ ಸ್ಕ್ರಬ್ ಮಾಡಬಹುದು.
ನಿಮಗೂ ಕುತ್ತಿಗೆ ಕಪ್ಪಾಗಿದ್ದರೆ ಈ ಸರಳ ಮನೆಮದ್ದುಗಳನ್ನು ಬಳಸುವ ಮೂಲಕ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಮಾತ್ರವಲ್ಲ ಇದು ಅಂದ ಹೆಚ್ಚಲು ಸಹಕಾರಿ.
ವಿಭಾಗ