ಕನ್ನಡ ಸುದ್ದಿ  /  ಜೀವನಶೈಲಿ  /  Mylary Hotel: ಪ್ರಿಯಾಂಕ ಗಾಂಧಿ ಭೇಟಿ ನೀಡಿದ್ದ ಮೈಲಾರಿ ಹೋಟೆಲ್‌ ವೈಶಿಷ್ಟ್ಯ ಏನು; ಹೋಟೆಲ್‌ಗೆ ಈ ಹೆಸರು ಬಂದಿದ್ದು ಹೇಗೆ, ಇಲ್ಲಿದೆ ಮಾಹಿತಿ

Mylary Hotel: ಪ್ರಿಯಾಂಕ ಗಾಂಧಿ ಭೇಟಿ ನೀಡಿದ್ದ ಮೈಲಾರಿ ಹೋಟೆಲ್‌ ವೈಶಿಷ್ಟ್ಯ ಏನು; ಹೋಟೆಲ್‌ಗೆ ಈ ಹೆಸರು ಬಂದಿದ್ದು ಹೇಗೆ, ಇಲ್ಲಿದೆ ಮಾಹಿತಿ

ಅಜ್ಜಿ ಕಾಲದಿಂದಲೂ ಹೋಟೆಲ್‌ ಇತ್ತಾದರೂ ಅದು ಜನರಿಗೆ ಹೆಚ್ಚು ಪರಿಚಯವಾಗಿದ್ದು ಮೈಲಾರ ಸ್ವಾಮಿ ಅವರ ಸಮಯದಲ್ಲಿ. ಆಗ ಈ ಹೋಟೆಲ್‌ಗೆ ಬೇರೆ ಹೆಸರಿತ್ತಾದರೂ, ಈ ಹೋಟೆಲ್‌ನ ತಿಂಡಿ ರುಚಿಗೆ ಮಾರುಹೋದ ಜನರು ಮಾಲೀಕರ ಹೆಸರಾದ ಮೈಲಾರಿ ಎಂದೇ ಕರೆಯುತ್ತಿದ್ದರು.

ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿದ್ದ ಪ್ರಿಯಾಂಕ ಗಾಂಧಿ
ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿದ್ದ ಪ್ರಿಯಾಂಕ ಗಾಂಧಿ (PC: Lokeşh, Mylary Hotel owner)

ಸಾಂಸ್ಕೃತಿಕ ನಗರಿ ಮೈಸೂರು ಎಂದರೆ ನೆನಪಾಗುವುದು ಅಲ್ಲಿನ ತಿಂಡಿಗಳು. ಅದರಲ್ಲೂ ಮಸಾಲೆ ದೋಸೆ ಎಂದರೆ ಎಲ್ಲೆಡೆ ಬಹಳ ಫೇಮಸ್.‌ ಮೈಸೂರಿಗೆ ಬಂದವರು ಮಸಾಲೆ ದೋಸೆ ಟೇಸ್ಟ್‌ ಮಾಡದೆ ಹೋಗುವುದಿಲ್ಲ. ದೋಸೆ ತಿನ್ನಲು ಕೆಲವೇ ಕೆಲವು ಹೋಟೆಲ್‌ಗಳನ್ನು ಹುಡುಕಿ ಹೋಗಿ ಸವಿದು ಬರುತ್ತಾರೆ. ಅದರಲ್ಲಿ ಮೈಲಾರಿ ಅಗ್ರಹಾರ ಹೋಟೆಲ್‌ ಕೂಡಾ ಒಂದು. ಇತ್ತೀಚೆಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಕೂಡಾ ಇಲ್ಲಿ ದೋಸೆ ಹಾಗೂ ಇಡ್ಲಿ ಸವಿದಿದ್ದರು.

ಟ್ರೆಂಡಿಂಗ್​ ಸುದ್ದಿ

ಮೈಲಾರಿ ಹೋಟೆಲ್‌ ದೋಸೆ ರುಚಿ ಮೆಚ್ಚಿದ ಪ್ರಿಯಾಂಕ ಗಾಂಧಿ
ಮೈಲಾರಿ ಹೋಟೆಲ್‌ ದೋಸೆ ರುಚಿ ಮೆಚ್ಚಿದ ಪ್ರಿಯಾಂಕ ಗಾಂಧಿ

ಪ್ರಿಯಾಂಕ ಗಾಂಧಿ, ಮೈಲಾರಿ ಹೋಟೆಲ್‌ನ ದೋಸೆ, ಇಡ್ಲಿ ಸವಿದು ರುಚಿಯನ್ನು ಇಷ್ಟಪಟ್ಟಿದ್ದು ಅಲ್ಲದೆ, ತಾವೇ ದೋಸೆ ಕೂಡಾ ಹೊಯ್ದಿದ್ದರು. ಜೊತೆಗೆ ಮಾಲೀಕರ ಬಳಿ ರೆಸಿಪಿಯನ್ನು ಕೂಡಾ ಕೇಳಿ ತಿಳಿದುಕೊಂಡರು. ನಗುನಗುತ್ತಲೇ ಹೋಟೆಲ್‌ ಮಾಲೀಕರೊಂದಿಗೆ ಫೋಟೋ ತೆಗೆಸಿಕೊಂಡರು. ಮೈಸೂರಿನ ಕೆಲವೇ ಕೆಲವು ಪ್ರಸಿದ್ಧ ಹೋಟೆಲ್‌ಗಳಲ್ಲಿ ಈ ಮೈಲಾರಿ ಹೋಟೆಲ್‌ ಕೂಡಾ ಒಂದು. ಈ ಹೋಟೆಲ್‌ ಇರುವುದು ಅಗ್ರಹಾರ ಸರ್ಕಲ್‌ ಬಳಿ. ಲೋಕೇಶ್‌, ಈ ಹೋಟೆಲ್‌ ಮಾಲೀಕರು. ಈ ಹೋಟೆಲ್‌ಗೆ ಮೈಲಾರಿ ಎಂಬ ಹೆಸರು ಬಂದಿದ್ದೇ ಲೋಕೇಶ್‌ ಅವರ ತಂದೆಯಿಂದ.

ಶ್ರೀ ಎನ್‌. ಮೈಲಾರ ಸ್ವಾಮಿ, ಪುತ್ರ ಲೋಕೇಶ್‌
ಶ್ರೀ ಎನ್‌. ಮೈಲಾರ ಸ್ವಾಮಿ, ಪುತ್ರ ಲೋಕೇಶ್‌

60 ವರ್ಷಗಳ ಹಿಂದೆ ಆರಂಭವಾದ ಹೋಟೆಲ್‌

ಲೋಕೇಶ್‌ ತಂದೆ ಹೆಸರು ಎನ್‌. ಮೈಲಾರ ಸ್ವಾಮಿ. ಸುಮಾರು 60 ವರ್ಷಗಳ ಹಿಂದೆ ಮೈಲಾರ ಸ್ವಾಮಿ ಈ ಹೋಟೆಲ್‌ ಆರಂಭಿಸಿದರು. ಅಜ್ಜಿ ಕಾಲದಿಂದಲೂ ಹೋಟೆಲ್‌ ಇತ್ತಾದರೂ ಅದು ಜನರಿಗೆ ಹೆಚ್ಚು ಪರಿಚಯವಾಗಿದ್ದು ಮೈಲಾರ ಸ್ವಾಮಿ ಅವರ ಸಮಯದಲ್ಲಿ. ಆಗ ಈ ಹೋಟೆಲ್‌ಗೆ ಬೇರೆ ಹೆಸರಿತ್ತಾದರೂ, ಈ ಹೋಟೆಲ್‌ನ ತಿಂಡಿ ರುಚಿಗೆ ಮಾರುಹೋದ ಜನರು ಮಾಲೀಕರ ಹೆಸರಾದ ಮೈಲಾರಿ ಎಂದೇ ಕರೆಯುತ್ತಿದ್ದರು. ಮುಂದೇ ಇದೇ ಹೆಸರು ಫೇಮಸ್‌ ಆಯ್ತು. ಈ ಹೋಟೆಲ್‌ನಲ್ಲಿ ತಯಾರಿಸುವ ಪ್ಲೇನ್‌ ದೋಸೆ, ಮಸಾಲೆ ದೋಸೆ, ಇಡ್ಲಿ, ಕಾಫಿ-ಟೀ ಬಹಳ ಫೇಮಸ್.‌ 60 ವರ್ಷಗಳಿಂದ ಈ ಹೋಟೆಲ್‌ ಅದೇ ರುಚಿ, ಅದೇ ಖ್ಯಾತಿ ಉಳಿಸಿಕೊಂಡು ಬಂದಿದೆ.

ಪ್ರಿಯಾಂಕ ಗಾಂಧಿ, ಡಿ.ಕೆ. ಶಿವಕುಮಾರ್‌ ಜೊತೆಗೆ ಹೋಟೆಲ್‌ ಮಾಲೀಕರಾದ ಶೃತಿ ಹಾಗೂ ಲೋಕೇಶ್‌
ಪ್ರಿಯಾಂಕ ಗಾಂಧಿ, ಡಿ.ಕೆ. ಶಿವಕುಮಾರ್‌ ಜೊತೆಗೆ ಹೋಟೆಲ್‌ ಮಾಲೀಕರಾದ ಶೃತಿ ಹಾಗೂ ಲೋಕೇಶ್‌

ಈಗ ಮೈಲಾರ ಸ್ವಾಮಿ ಪುತ್ರ ಲೋಕೇಶ್‌, ಈ ಹೋಟೆಲ್‌ ನಡೆಸುತ್ತಿದ್ಧಾರೆ. ತಂದೆ ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತಿದ್ದಾರೆ. ಈಗ ಎಲ್ಲಿ ನೋಡಿದರೂ ಅಡುಗೆಗೆ ಗ್ಯಾಸ್‌, ಎಲೆಕ್ಟಿಕ್‌ ಸ್ಟೋವ್‌ ಬಳಸುತ್ತಾರೆ. ಆದರೆ ಈ ದಿನಗಳಲ್ಲೂ ಮೈಲಾರಿ ಹೋಟೆಲ್‌ನಲ್ಲಿ ಗ್ಯಾಸ್‌ ಬಳಸದೆ ಸೌದೆ ಒಲೆ ಬಳಸುತ್ತಾರೆ. ದೋಸೆ ಹಾಗೂ ಇಡ್ಲಿ ರುಚಿ ಹೆಚ್ಛಾಗಲು ಇದು ಪ್ರಮುಖ ಕಾರಣ ಎನ್ನಬಹುದು. ದೋಸೆ ಮೇಲೆ ಹಾಕುವ ಬೆಣ್ಣೆ- ಕಾಯಿ ಚಟ್ನಿ ಇಡ್ಲಿ ಜೊತೆಗೆ ಕೊಡುವ ಸಾಗು, ತಿನ್ನುವವರ ನಾಲಿಗೆ ತಣಿಸುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ಗ್ರಾಹಕರಿಗೆ ತಟ್ಟೆ ಬದಲಿಗೆ ಬಾಳೆ ಎಲೆಯಲ್ಲಿ ದೋಸೆ, ಇಡ್ಲಿ ಸರ್ವ್‌ ಮಾಡಲಾಗುತ್ತದೆ. ಹೋಟೆಲ್‌ನಲ್ಲಿ ಒಟ್ಟು 6 ಜನರು ಕೆಲಸ ಮಾಡುತ್ತಾರೆ. ಲೋಕೇಶ್‌ ಎಸ್‌ಎಸ್‌ಎಲ್‌ಸಿ ಮುಗಿಯುತ್ತಿದ್ದಂತೆ ಹೋಟೆಲ್‌ ಜವಾಬ್ದಾರಿ ವಹಿಸಿಕೊಂಡರು. ಸುಮಾರು 40 ವರ್ಷಗಳಿಂದ ಅವರು ಈ ಹೋಟೆಲ್‌ ನಡೆಸುತ್ತಾ ಬಂದಿದ್ದಾರೆ. ಪತ್ನಿ ಶೃತಿ ಕೂಡಾ ಸಾಥ್‌ ನೀಡುತ್ತಾರೆ. ಲೋಕೇಶ್‌ ಹಾಗೂ ಶೃತಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಲೋಕೇಶ್‌ ಹಾಗೂ ಕುಟುಂಬ
ಲೋಕೇಶ್‌ ಹಾಗೂ ಕುಟುಂಬ

ಸಿನಿಮಾ, ರಾಜಕೀಯ ಗಣ್ಯರಿಗೂ ಈ ಹೋಟೆಲ್‌ ದೋಸೆ, ಇಡ್ಲಿ ಬಹಳ ಇಷ್ಟ

60 ವರ್ಷಗಳಿಂದಲೂ ನಾವು ಅದೇ ಶುಚಿ-ರುಚಿ ಕಾಪಾಡಿಕೊಂಡು ಬಂದಿದ್ದೇವೆ. ನಮ್ಮ ಹೋಟಲ್‌ಗೆ ಜನ ಸಾಮಾನ್ಯರು ಮಾತ್ರವಲ್ಲ ಡಾ. ರಾಜ್‌ಕುಮಾರ್‌, ಡಾ ವಿಷ್ಣುವರ್ಧನ್‌, ಅಂಬರೀಶ್‌ ಬಾಲಿವುಡ್‌ ನಟ ಜಾಕಿಶ್ರಾಫ್‌ ಸೇರಿದಂತೆ ಅನೇಕ ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಬಂದು ಹೋಗಿದ್ದಾರೆ. ಅಣ್ಣಾವ್ರಿಗೆ ಮೈಸೂರಿನಲ್ಲಿ ಶೂಟಿಂಗ್‌ ಇದ್ದಾಗ ನಮ್ಮ ಹೋಟೆಲ್‌ನಿಂದಲೇ ಪಾರ್ಸೆಲ್‌ ಕಳಿಸುತ್ತಿದ್ದೆವು. ನಮ್ಮ ಹೋಟೆಲ್‌ನಲ್ಲಿ ದೋಸೆ, ಇಡ್ಲಿ ತಿನ್ನಲು ಜನರು ಇಷ್ಟಪಡುತ್ತಾರೆ. ಆದ್ದರಿಂದ ಅದನ್ನು ಹೊರತುಪಡಿಸಿ ನಾವು ಬೇರೆ ಫುಡ್‌ ಮಾಡುತ್ತಿಲ್ಲ. ಮೊನ್ನೆ ಪ್ರಿಯಾಂಕ ಗಾಂಧಿ ಅವರು ನಮ್ಮ ಹೋಟೆಲ್‌ಗೆ ಬಂದು ದೋಸೆ ತಿಂದು ಖುಷಿ ಪಟ್ಟರು. ಅವರು ಬರುತ್ತಾರೆ ಎಂದು ಡಿ.ಕೆ. ಶಿವಕುಮಾರ್‌ ಕರೆ ಮಾಡಿದ್ದರು. ಅವರೆಲ್ಲಾ ಬಂದಿದ್ದು ನನಗೆ ಬಹಳ ಖುಷಿ ಆಯ್ತು. ಸುಮಾರು 45 ನಿಮಿಷಗಳ ಕಾಲ ನಮ್ಮ ಹೋಟೆಲ್‌ನಲ್ಲಿದ್ದು ನಮ್ಮೊಂದಿಗೆ ಮಾತನಾಡಿ, ಫೋಟೋ ತೆಗೆಸಿಕೊಂಡಿದ್ದನ್ನು ಎಂದಿಗೂ ಮರೆಯುವುದಿಲ್ಲ.

ದೋಸೆ, ಇಡ್ಲಿಗೆ ಬಹಳ ಫೇಮಸ್‌ ಮೈಲಾರಿ ಅಗ್ರಹಾರ ಹೋಟೆಲ್‌
ದೋಸೆ, ಇಡ್ಲಿಗೆ ಬಹಳ ಫೇಮಸ್‌ ಮೈಲಾರಿ ಅಗ್ರಹಾರ ಹೋಟೆಲ್‌

ಬೆಳಗ್ಗೆ 7 ರಿಂದ ಮಧ್ಯಾಹ್ನ 12.30 ಸಂಜೆ 3 ರಿಂದ 8 ಗಂಟೆವರೆಗೆ ಹೋಟೆಲ್‌ ತೆರೆದಿರುತ್ತದೆ. ಸಂಜೆ ಇಡ್ಲಿ ಮಾಡುವುದಿಲ್ಲ ದೋಸೆ ಮಾತ್ರ, ಭಾನುವಾರ ಬೆಳಗ್ಗೆ 7 ರಿಂದ 1ವರೆಗೆ ಮಾತ್ರ ಇರುತ್ತದೆ. 60 ವರ್ಷಗಳಿಂದ ಈ ಹೋಟೆಲ್‌ ಇದೇ ಜಾಗದಲ್ಲಿದೆ. ಮೊದಲಿದ್ದ ರೀತಿಯಲ್ಲೇ ಇದೆ. ಒಂದು ಬಾರಿಗೆ 45 ಜನರು ಕುಳಿತು ತಿಂಡಿ ತಿನ್ನಬಹುದು. ನಮಗೆ ಇದನ್ನು ನವೀಕರಿಸಬೇಕು , ದೊಡ್ಡ ಕಟ್ಟಡ ಕಟ್ಟಬೇಕು ಎಂಬ ಆಸೆ ಇಲ್ಲ. ಜನರು ನಮ್ಮ ಹೋಟೆಲ್‌ಗೆ ಬಂದು ರುಚಿ ಇಷ್ಟಪಟ್ಟು ಹೊಗಳಿದರೆ ನಮಗೆ ಅದೇ ದೊಡ್ಡ ಖುಷಿ. ಈಗ ಇರುವ ಖ್ಯಾತಿಯನ್ನು ಇನ್ಮುಂದೆ ಕೂಡಾ ಹೀಗೆ ಉಳಿಸಿಕೊಂಡು ಹೋಗುವುದು ನನಗಿರುವ ದೊಡ್ಡ ಜವಾಬ್ದಾರಿ ಎನ್ನುತ್ತಾರೆ ಹೋಟೆಲ್‌ ಮಾಲೀಕರಾದ ಲೋಕೇಶ್.‌