Home Remedies for Lice: ಹೇನು ಸೀರುಗಳ ಸಮಸ್ಯೆಗಳಿಗೆ ಈ ಮನೆ ಮದ್ದು ಬಳಸಿ ನೋಡಿ; ಇವಿಷ್ಟೂ ವಸ್ತುಗಳು ನಿಮ್ಮಲ್ಲಿದ್ದರೆ ಸಾಕು
Hair Care Tips: ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನುಭವಿಸುವ ಕೂದಲಿನ ಸಮಸ್ಯೆಗಳಲ್ಲಿ ಹೇನುಗಳ ಸಮಸ್ಯೆ ಬಹಳ ಕಿರಿಕಿರಿ ಉಂಟು ಮಾಡುತ್ತದೆ. ಹೇನು ಸೀರುಗಳ ಸಮಸ್ಯೆಗೆ ನೀವು ಮನೆ ಮದ್ದು ಬಳಸಿದರೆ ಕೆಲವೇ ದಿನಗಳಲ್ಲಿ ಪರಿಹಾರ ದೊರೆಯುತ್ತದೆ. ಇವಿಷ್ಟೂ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಸಾಕು.
ಬಹುತೇಕ ಜನರು ಎದುರಿಸುವ ಕೂದಲಿನ ಸಮಸ್ಯೆಗಳಲ್ಲಿ ಹೇನುಗಳ ಸಮಸ್ಯೆ ಕೂಡಾ ಒಂದು. ತಲೆಯಲ್ಲಿ ಹೇನುಗಳು, ಅವರಗಳ ಮೊಟ್ಟೆಗಳು ಇದ್ದರೆ ಬಹಳ ಕಿರಿಕಿರಿಯಾಗುತ್ತದೆ. ಅದರಲ್ಲೂ ಎಲ್ಲರೂ ಇದ್ದಾಗ ತಲೆ ಮೇಲೆಲ್ಲಾ ಹೇನುಗಳು ಹರಿದಾಡುತ್ತಿದ್ದು ಅವರು ಅದನ್ನು ನಮಗೆ ತಿಳಿಸಿದರೆ ಬಹಳ ಮುಜುಗರವಾಗುವುದು ಸಹಜ.
ಅದೇ ರೀತಿ ಎಲ್ಲರೆದುರು ತಲೆ ಕೆರೆದುಕೊಳ್ಳಲು ಕೂಡಾ ಬಹಳ ಮುಜುಗರವಾಗುತ್ತದೆ. ಹೇನುಗಳು ಮಕ್ಕಳಿಂದ ಹಿಡಿದು ವೃದ್ಧರವರೆಗೂ ತಲೆಗೆ ನುಗ್ಗಿ ತೊಂದರೆ ಕೊಡುತ್ತವೆ. ವಿಶೇಷವಾಗಿ ಮಕ್ಕಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಶಾಲೆಗೆ ಹೋಗಿ ಬೇರೆ ಮಕ್ಕಳ ಪಕ್ಕ ಕುಳಿತಾಗ ಒಬ್ಬರಿಂದ ಒಬ್ಬರಿಗೆ ಬರುತ್ತದೆ. ಅವುಗಳು ತಲೆಯಲ್ಲಿ ರಕ್ತವನ್ನು ಹೀರುತ್ತವೆ. ಇದರಿಂದ ತುರಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಹೇನುಗಳನ್ನು ತೊಡೆದು ಹಾಕಲು ಕೆಲವೊಂದು ನೈಸರ್ಗಿಕ ಮನೆ ಮದ್ದುಗಳಿವೆ.
ಬೆಳ್ಳುಳ್ಳಿ: ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬೆಳ್ಳುಳ್ಳಿಗೆ ತಲೆ ನೋವಿನಿಂದಲೂ ಮುಕ್ತಿ ನೀಡುವ ಶಕ್ತಿ ಇದೆ. ಜೊತೆಗೆ ಹೇನುಗಳ ಸಮಸ್ಯೆಗೂ ಪರಿಹಾರ ನೀಡುತ್ತದೆ. ಬೆಳ್ಳುಳ್ಳಿ ಎಸಳನ್ನು ರುಬ್ಬಿ ಅದಕ್ಕೆ ನಿಂಬೆರಸ ಬೆರೆಸಿ ಕೂದಲಿಗೆ ಹಚ್ಚಿ. ಅರ್ಧ ಗಂಟೆವರೆಗೆ ಬಿಟ್ಟು ಮೃದುವಾದ ಶ್ಯಾಂಪೂವಿನಿಂದ ಕೂದಲನ್ನು ತೊಳೆಯಿರಿ. ಇದು ಆಂಟಿಮೈಕ್ರೊಬಿಯಲ್, ಆಲಿಸಿನ್ ಮತ್ತು ಸಲ್ಫರ್ ಗುಣಲಕ್ಷಣಗಳನ್ನು ಹೊಂದಿದೆ. ಹೆಚ್ಚುವರಿ ಎಣ್ಣೆ ಮತ್ತು ಮೇದೋಗ್ರಂಥಿಗಳ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಉದ್ದವಾದ, ಬಲವಾದ ಕೂದಲಿಗೆ ಇದನ್ನು ಬಳಸಿ. ಪಿಹೆಚ್ ಸಮತೋಲನವನ್ನು ಕಾಪಾಡಿಕೊಳ್ಳಲು ಕೂಡಾ ಬೆಳ್ಳುಳ್ಳಿ ಸಹಾಯ ಮಾಡುತ್ತದೆ.
ಟೀಟ್ರೀ ಎಣ್ಣೆ: ಈ ಎಣ್ಣೆ ಕೂಡಾ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದು ಹೇನುಗಳನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಟೀಟ್ರೀ ಎಣ್ಣೆಯನ್ನು ಸ್ವಲ್ಪ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಒಂದು ಗಂಟೆಯ ನಂತರ ತಲೆಯನ್ನು ಸ್ವಚ್ಛಗೊಳಿಸಿ. ಟೀಟ್ರೀ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಟೀ ಟ್ರೀ ಎಣ್ಣೆಯನ್ನು ನೇರವಾಗಿ ತಲೆಗೆ ಬಳಸಲು ಇಷ್ಟವಿಲ್ಲದಿದ್ದರೂ ತೆಂಗಿನೆಣ್ಣೆಯಲ್ಲಿ ಬೆರೆಸಿ ಹಚ್ಚುವುದರಿಂದ ತುರಿಕೆ, ಶುಷ್ಕತೆ ಕಡಿಮೆಯಾಗುತ್ತದೆ ಮತ್ತು ಕೂದಲಿಗೆ ತೇವಾಂಶವನ್ನು ನೀಡುತ್ತದೆ.
ಕರ್ಪೂರ: ದೇವರ ಪೂಜೆಗೆ ಬಳಸುವ ಕರ್ಪೂರವನ್ನು ನೀವು ಚರ್ಮ, ಕೂದಲಿನ ಸಮಸ್ಯೆಗೆ ಬಳಸಬಹುದು. ಕರ್ಪೂರವನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ. ಇದನ್ನು ಬುಡದ ಸಹಿತ ನಿಮ್ಮ ತಲೆಗೆ ಹಚ್ಚಿಕೊಂಡು ಮಸಾಜ್ ಮಾಡಿ. ಒಂದು ಗಂಟೆ ನಂತರ ಶ್ಯಾಂಪೂ ಮಾಡಿ. ಇದರಿಂದ ಹೇನುಗಳು ಮಾತ್ರವಲ್ಲ ಅವುಗಳ ಮೊಟ್ಟೆಗಳು ಕೂಡಾ ನಿವಾರಣೆಯಾಗುತ್ತವೆ.
ಅಡುಗೆ ಸೋಡಾ: ಮನೆಯಲ್ಲಿ ನಾವು ಅಡುಗೆಗೆ ಬಳಸುವ ಸೋಡಾವನ್ನು ಕೂಡಾ ಹೇನುಗಳ ಸಮಸ್ಯೆಗೆ ಬಳಸಬಹುದು. ಸ್ವಲ್ಪ ಸೋಡಾವನ್ನು ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಜೊತೆಗೆ ಬೆರೆಸಿ ತಲೆಯ ಬುಡಕ್ಕೆ ಹಚ್ಚಿ. ಸುಮಾರು 30 ನಿಮಿಷಗಳ ನಂತರ ಶ್ಯಾಂಪೂ ಹಾಗೂ ಕಂಡಿಷನರ್‌ನಿಂದ ಸ್ವಚ್ಛಗೊಳಿಸಿ.
ಬೇವಿನ ಎಣ್ಣೆ: ಬೇವಿನ ಸೊಪ್ಪು ಮಾತ್ರವಲ್ಲದೆ ಅದರ ಎಣ್ಣೆ ಕೂಡಾ ಚರ್ಮಕ್ಕೆ ಹಾಗೂ ಕೂದಲಿಗೆ ಬಹಳ ಪರಿಣಾಮಕಾರಿಯಾಗಿದೆ. ಬೇವಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಬುಡದ ಸಹಿತ ನಿಮ್ಮ ತಲೆಗೆ ಹಚ್ಚಿಕೊಳ್ಳಿ. ನಂತರ 5-10 ನಿಮಿಷ ಮಸಾಜ್ ಮಾಡಿ. 1 ಗಂಟೆಗಳ ನಂತರ ಹರ್ಬಲ್ ಶ್ಯಾಂಪೂ ಬಳಸಿ ಕೂದಲನ್ನು ತೊಳೆಯಿರಿ.
ಗಮನಿಸಿ: ಇಲ್ಲಿ ತಿಳಿಸಿದ ಮನೆ ಮದ್ದುಗಳನ್ನು ವಾರಕ್ಕೆ 2 ಅಥವಾ 3 ಬಾರಿ ಪ್ರಯತ್ನಿಸಿ. ಕೆಲವರಿಗೆ ಕೆಲವೊಂದು ಪದಾರ್ಥಗಳು ಅಲರ್ಜಿ ಉಂಟು ಮಾಡಬಹುದು. ಆದ್ದರಿಂದ ಬಳಸುವ ಮುನ್ನ ಒಮ್ಮೆ ಪ್ಯಾಚ್ ಟೆಸ್ಟ್ ಮಾಡಿ. ಸಮಸ್ಯೆ ಕಡಿಮೆ ಆಗದಿದ್ದರೆ ಚರ್ಮರೋಗತಜ್ಞರನ್ನು ಸಂಪರ್ಕಿಸಿ.