Hair Care: ಕೂದಲಿನ ಸಮಸ್ಯೆಗಳಿಂದ ಬೇಸತ್ತಿದ್ದರೆ ಈ 8 ಯೋಗಾಸನಗಳನ್ನು ಅಭ್ಯಾಸ ಮಾಡಿ; ನಿರಂತರ ಅನುಕರಣೆಯಿಂದ ಫಲಿತಾಂಶ ಖಚಿತ
ಕೂದಲಿನ ಹಲವು ಸಮಸ್ಯೆಗಳಿಗೆ ಯೋಗಭ್ಯಾಸದಿಂದ ಪರಿಹಾರ ಕಂಡುಕೊಳ್ಳಬಹುದು ಎಂಬುದು ಹಲವರಿಗೆ ತಿಳಿದಿಲ್ಲ. ಈ ಕೆಲವು ಆಸನಗಳನ್ನು ಅಭ್ಯಾಸ ಮಾಡುವುದರಿಂದ ಕೂದಲು ಬುಡದಿಂದ ಸದೃಢವಾಗುವ ಜೊತೆಗೆ ಕೂದಲ ಬೆಳವಣಿಗೆಯೂ ವೃದ್ಧಿಯಾಗುತ್ತದೆ. ಅಂತಹ ಯೋಗಾಸನಗಳು ಯಾವುವು ನೋಡಿ.
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸೇರಿದಂತೆ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಬಹುತೇಕರನ್ನು ಕಾಡುತ್ತಿದೆ. ಅದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ಕೂಡ ಎದುರಾಗಿದೆ. ಜೀವನಶೈಲಿ, ಕಲುಷಿತ ನೀರು, ಆಹಾರಪದ್ಧತಿ ಈ ಅಂಶಗಳು ಕೂದಲು ಉದುರಲು ಪ್ರಮುಖ ಕಾರಣಗಳಾಗಿವೆ. ಆದರೆ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಯೋಗದಲ್ಲಿದೆ ಪರಿಹಾರ. ಯೋಗ ಮಾಡುವುದರಿಂದ ಕೂದಲಿನ ಆರೋಗ್ಯಕ್ಕೆ ಅವಶ್ಯವಿರುವ ವಿಟಮಿನ್ ಸಿ, ಒಮೆಗಾ -3 ಕೊಬ್ಬಿನಾಮ್ಲ ಸೇರಿದಂತೆ ಹಲವು ಅಂಶಗಳು ಲಭ್ಯವಾಗುತ್ತವೆ. ಅದಕ್ಕಾಗಿ ಈ ಕೆಲವು ಆಸನಗಳನ್ನು ಅಭ್ಯಾಸ ಮಾಡಬೇಕು.
ಅಕ್ಷರ ಯೋಗ ಕೇಂದ್ರದ ಸಂಸ್ಥಾಪಕರಾದ ಹಿಮಾಲಯನ್ ಸಿದ್ದಾ ಅಕ್ಷರ್ ಅವರು ಹಿಂದೂಸ್ತಾನ್ ಟೈಮ್ಸ್ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ʼಜೇಷ್ಠಮಧು, ನೆಲ್ಲಿಕಾಯಿ, ಮೆಂತ್ಯೆದಂತಹ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಕಾರಣ ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿಯೂ ಹೆಚ್ಚು ಗಮನ ಹರಿಸಬೇಕು. ನೈರ್ಮಲ್ಯದ ಕಾರಣದಿಂದ ಕೂದಲಿಗೆ ಹೆಚ್ಚು ಹಾನಿಯಾಗಬಹುದು. ಹಾಗಾಗಿ ವಾರದಲ್ಲಿ ಎರಡು ಬಾರಿ ಚೆನ್ನಾಗಿ ತಲೆಸ್ನಾನ ಮಾಡಬೇಕು. ಕೂದಲನ್ನು ತೀವ್ರವಾಗಿ ಉಜ್ಜುವುದನ್ನು ತಪ್ಪಿಸಬೇಕು. ಇದು ತಲೆಯ ಮೇಲಿನ ಚರ್ಮವನ್ನು ಸಡಿಲಗೊಳಿಸುತ್ತದೆ. ಕೂದಲಿನ ಬೇರುಗಳು ದುರ್ಬಲಗೊಳ್ಳಲು ಇದು ಕಾರಣವಾಗಬಹುದು. ಕೂದಲಿನ ಬುಡಕ್ಕೆ ನಿಧಾನವಾಗಿ ಮಸಾಜ್ ಮಾಡುವುದರಿಂದ ಬೇರುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಕೂದಲ ಬೆಳವಣಿಗೆ ಹಾಗೂ ನೆತ್ತಿಯ ಆರೋಗ್ಯಕ್ಕೆ ಈ ಯೋಗಾಸನಾಗಳನ್ನು ಅಭ್ಯಾಸ ಮಾಡಿ
ಅಧೋ ಮುಖ ಶ್ವಾನಾಸನ: ಈ ಭಂಗಿಯು ನೆತ್ತಿಯ ರಕ್ತದ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ಫಾಲಿಕಲ್ಸ್‌ಗಳನ್ನು ಪೋಷಿಸುತ್ತದೆ. ನೇರವಾಗಿ ನಿಂತು ದೇಹವನ್ನು ಮುಂದಕ್ಕೆ ಬಾಗಿಸಿ. ಕೈ ಮುಂದಕ್ಕೆ ಚಾಚಿ ನೆಲಕ್ಕೆ ಊರಿ. ಉಸಿರನ್ನು ಹಿಡಿದಿಟ್ಟುಕೊಳ್ಳಿ. ಬೆನ್ನುಮೂಳೆಯ ಮೇಲೆ ಗಮನ ಕೇಂದ್ರೀಕರಿಸಿ. ಈ ಯೋಗಾಭ್ಯಾಸವನ್ನು ನಿರಂತರವಾಗಿ ರೂಢಿಸಿಕೊಳ್ಳಿ.
ಪಾದಹಸ್ತಾಸನ: ಈ ಆಸನವು ನೆತ್ತಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಬೆನ್ನುಮೂಳೆ ಮತ್ತು ಮಂಡಿರಜ್ಜು ಸೇರಿದಂತೆ ದೇಹದ ಹಿಂಭಾಗವನ್ನು ವಿಸ್ತರಿಸುತ್ತದೆ. ನೇರವಾಗಿ ನಿಂತು ದೇಹವನ್ನು ಕೆಳಕ್ಕೆ ಬಾಗಿಸಿ. ಕಾಲುಗಳ ಪಕ್ಕದಲ್ಲಿ ಕೈಗಳನ್ನು ಊರಿ. ಇದು ನೆತ್ತಿಗೆ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ.
ಸರ್ವಾಂಗಾಸನ: ಈ ಆಸನವು ನೆತ್ತಿಯ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುತ್ತದೆ. ಇದು ಹಾರ್ಮೋನ್ ಮಟ್ಟವನ್ನು ನಿಯಂತ್ರಿಸುತ್ತದೆ. ನೇರವಾಗಿ ಮಲಗಿ ಸೊಂಟದಿಂದ ಕಾಲಿನವರೆಗಿನ ಭಾಗವನ್ನು ಮೇಲಕ್ಕೆ ಎತ್ತಿ. ಕೈಗಳನ್ನು ಕೆಳ ಬೆನ್ನಿನ ಭಾಗಕ್ಕೆ ಆನಿಸಿ ಇಡಿ.
ವಜ್ರಾಸನ: ಈ ಯೋಗಾಸನವು ಜೀರ್ಣಕ್ರಿಯೆನ್ನು ಸುಧಾರಿಸಲು ಹಾಗೂ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಪರೋಕ್ಷವಾಗಿ ಕೂದಲಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ನೆಲದ ಮೇಲೆ ಕುಳಿತು ಕಾಲುಗಳನ್ನು ಹಿಂದಕ್ಕೆ ಚಾಚಿ, ಕಾಲಿನ ಮೇಲೆ ಕುಳಿತುಕೊಳ್ಳಿ. ಕೈಗಳನ್ನು ಮೊಣಕಾಲುಗಳ ಮೇಲೆ ಇರಿಸಿ. ದೀರ್ಘವಾಗಿ ಉಸಿರಾಡಿ.
ಮತ್ಸ್ಯಾಸನ: ಈ ಆಸನವು ಕುತ್ತಿಗೆ ಮತ್ತು ಗಂಟಲನ್ನು ವಿಸ್ತರಿಸುತ್ತದೆ. ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುತ್ತದೆ. ತಲೆಯ ಭಾಗದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ನೇರವಾಗಿ ಮಲಗಿಕೊಂಡು ಕಾಲುಗಳನ್ನು ಮಡಿಸಿ ತೊಡೆ ಮೇಲಿರಿಸಿ. ಬೆರಳುಗಳನ್ನು ಕೈಗಳಿಂದ ಹಿಡಿದುಕೊಳ್ಳಿ.
ಭುಜಂಗಾಸನ: ಈ ಯೋಗಾಸನವು ಬೆನ್ನುಮೂಳೆ ಹಾಗೂ ಎದೆಯ ಭಾಗವನ್ನು ವಿಸ್ತರಿಸುತ್ತದೆ. ಕಿಬ್ಬೊಬ್ಬೆಯ ಅಂಗಗಳನ್ನು ಉತ್ತೇಜಿಸುತ್ತದೆ. ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ. ನೆಲದ ಮೇಲೆ ಉಲ್ಟಾ ಮಲಗಿ. ಹೊಟ್ಟೆಯಿಂದ ಮೇಲ್ಭಾಗವನ್ನು ಮೇಲಕ್ಕೆ ಎತ್ತಿ ಕೈಗಳನ್ನು ಮುಂದಕ್ಕೆ ಚಾಚಿ ನೆಲಕ್ಕೆ ಊರಿ.
ಬಲಯುಂ ಮುದ್ರ: ಬಲಯುಂ ಮುದ್ರ ಎಂದರೆ ಎರಡೂ ಕೈಗಳನ್ನು ಉಗುರನ್ನು ಒಟ್ಟಿಗೆ ಉಜ್ಜುವುದನ್ನು ಒಳಗೊಂಡಿರುತ್ತದೆ. ಇದು ನೆತ್ತಿಗೆ ರಕ್ತದ ಹರಿವನ್ನು ಉತ್ತೇಜಿಸುವ ಮೂಲಕ ಕೂದಲಿನ ಬೆಳವಣೆಗೆಗೆ ಸಹಕರಿಸುತ್ತದೆ. ಪ್ರತಿದಿನ 5 ರಿಂದ 10 ನಿಮಿಷಗಳ ಕಾಲ ಉಗುರುಗಳನ್ನು ಪರಿಸ್ಪರ ವಿರುದ್ಧ ದಿಕ್ಕಿನಲ್ಲಿ ಉಜ್ಜಿಕೊಳ್ಳುವುದರಿಂದ ಕೂದಲ ಬೆಳವಣಿಗೆ ಸುಧಾರಿಸುತ್ತದೆ.
ಕಪಾಲಭತಿ ಪ್ರಾಣಾಯಾಮ: ಕಪಾಲಭತಿ ಪ್ರಾಣಾಯಾಮವು ದೇಹವನ್ನು ಶುದ್ಧೀಕರಿಸಲು ಮತ್ತು ಆಮ್ಲಜನಕವನ್ನು ಹೆಚ್ಚಿಸಲು ಸಹಾಯ ಮಾಡುವ ಉಸಿರಾಟದ ತಂತ್ರವಾಗಿದೆ, ಇದು ಕೂದಲಿನ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ನೆಲದ ಮೇಲೆ ಕುಳಿತು ಕಾಲುಗಳನ್ನು ಮಡಿಸಿ ತೊಡೆಯ ಮೇಲಿರಿಸಿ, ಕೈಗಳನ್ನು ಮೊಣಕಾಲಿನ ಮೇಲೆ ಇರಿಸಿ, ಧ್ಯಾನಸ್ಥ ಸ್ಥಿತಿಗೆ ಜಾರುವುದಾಗಿದೆ.
ʼಈ ಮೇಲೆ ತಿಳಿಸಿದ ಯೋಗಾಸನಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರ ಜೊತೆಗೆ ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಜೀವಸತ್ವಗಳು, ಖನಿಜ ಹಾಗೂ ಪ್ರೊಟೀನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದು ಅಷ್ಟೇ ಮುಖ್ಯ. ಸಾಕಷ್ಟು ನೀರು ಕುಡಿಯುವುದು, ಒತ್ತಡ ನಿರ್ವಹಣೆ ಹಾಗೂ ನೆತ್ತಿಯ ಭಾಗಕ್ಕೆ ಮಸಾಜ್ ಮಾಡುವುದು ಕೂಡ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಒತ್ತಡ ಹಾಗೂ ಆತಂಕ ನಿವಾರಣೆಗೆ ನಿರಂತರ ವ್ಯಾಯಾಮ ಮಾಡುವುದು ಬಹಳ ಮುಖ್ಯವಾಗುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡಲು ತಾಜಾ, ಹಣ್ಣು-ತರಕಾರಿಗಳ ಸೇವನೆಯೂ ಮುಖ್ಯವಾಗುತ್ತದೆ.
ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದ ಈ ಲೇಖನಗಳನ್ನೂ ಓದಿ
Hair Care: ರಾಶಿ ರಾಶಿ ಕೂದಲು ಉದುರುವ ಕಾರಣ ಬೇಸರ ಕಾಡ್ತಿದ್ಯಾ; ನಿಮ್ಮ ಕೂದಲಿನ ಮೇಲೆ ಚಮತ್ಕಾರ ಮಾಡಲಿದೆ ಈ ಪಾನೀಯ