ಕನ್ನಡ ಸುದ್ದಿ  /  ಜೀವನಶೈಲಿ  /  Leadership: ಕೆಲಸಗಾರರ ತಪ್ಪಿಗೆ ತಲೆದಂಡವಾಗುವುದು ತಪ್ಪಲ್ಲ; ಆದರೆ ತಪ್ಪಿಗೆ ತಲೆ ಕೊಡುವ ಮುನ್ನ ಮುಖ್ಯಸ್ಥರಾದವರು ಗಮನಿಸಬೇಕಾದ ಅಂಶಗಳಿವು

Leadership: ಕೆಲಸಗಾರರ ತಪ್ಪಿಗೆ ತಲೆದಂಡವಾಗುವುದು ತಪ್ಪಲ್ಲ; ಆದರೆ ತಪ್ಪಿಗೆ ತಲೆ ಕೊಡುವ ಮುನ್ನ ಮುಖ್ಯಸ್ಥರಾದವರು ಗಮನಿಸಬೇಕಾದ ಅಂಶಗಳಿವು

ಯಾರಿಗಾಗಿ, ಯಾವಾಗ ಜವಾಬ್ದಾರಿಯನ್ನು ಹೊರಬೇಕು ಎನ್ನುವುದು ಬಾಸ್‌ ಪಾಲಿಗೆ ನಿರ್ಣಾಯಕ. ತಪ್ಪು ಮಾಡಿದವರ ಪರವಾಗಿ ನಿಂತರೆ ದುಬಾರಿ ಬೆಲೆ ತೆರಬೇಕಾದೀತು. ಅಲ್ಲದೆ ಕೆಲವೊಮ್ಮೆ ಅವರ ವರ್ಚಸ್ಸಿಗೆ ಧಕ್ಕೆಯಾಗಬಹುದು. ಅವರು ಕೆಲವೊಮ್ಮೆ ತಪ್ಪು ಗ್ರಹಿಕೆಗಳು ಮತ್ತು ತಪ್ಪು ನಂಬಿಕೆಗಳನ್ನು ಗಮನಿಸಬೇಕು. ಈ ಕೆಳಗಿನ ಕೆಲವು ಅಂಶಗಳನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು.

ಕೆಲಸಗಾರರ ತಪ್ಪಿಗೆ ತಲೆದಂಡವಾಗುವುದು ತಪ್ಪಲ್ಲ; ಆದರೆ ತಪ್ಪಿಗೆ ತಲೆ ಕೊಡುವ ಮುನ್ನ ಮುಖ್ಯಸ್ಥರಾದವರು ಗಮನಿಸಬೇಕಾದ ಅಂಶಗಳಿವು
ಕೆಲಸಗಾರರ ತಪ್ಪಿಗೆ ತಲೆದಂಡವಾಗುವುದು ತಪ್ಪಲ್ಲ; ಆದರೆ ತಪ್ಪಿಗೆ ತಲೆ ಕೊಡುವ ಮುನ್ನ ಮುಖ್ಯಸ್ಥರಾದವರು ಗಮನಿಸಬೇಕಾದ ಅಂಶಗಳಿವು

ಇಡೀ ಭಾರತವು ಚಂದ್ರಯಾನ-3 ಮಿಷನ್‌ನ ಯಶಸ್ಸನ್ನು ಸಂಭ್ರಮಿಸುವ ಸಂದರ್ಭದಲ್ಲಿ ಅನೇಕರು 1979ರ ಘಟನೆಯೊಂದನ್ನು ನೆನಪಿಸುತ್ತಿದ್ದಾರೆ. ಆಗ ಉಪಗ್ರಹ ಉಡ್ಡಯನ ವಾಹನ - 3 (ಎಸ್‌.ಎಲ್‌.ವಿ) ವಿಫಲಗೊಂಡು ಸಮುದ್ರಕ್ಕೆ ಬಿದ್ದಿತ್ತು. ಆಗ ಸತೀಶ್‌ ಧವನ್‌ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ (ಇಸ್ರೊ) ಸಂಸ್ಥೆಯ ಅಧ್ಯಕ್ಷರಾಗಿದ್ದರು ಮತ್ತು ಎ.ಪಿ.ಜೆ ಅಬ್ದುಲ್‌ ಕಲಾಂ ಅವರು ಯೋಜನಾ ನಿರ್ದೇಶಕರಾಗಿದ್ದರು. ಆ ಸಂದರ್ಭದಲ್ಲಿ ಇಡೀ ದೇಶದಲ್ಲಿ ನಿರಾಸೆ ಮಡುಗಟ್ಟಿತ್ತು ಮಾತ್ರವಲ್ಲದೆ ಕೋಪವೂ ವ್ಯಕ್ತವಾಗಿತ್ತು. ಜೊತೆಗೆ ಈ ಯೋಜನೆಗಾಗಿ ಖರ್ಚು ಮಾಡಿದ ರೂ. 20 ಕೋಟಿಯಷ್ಟು ಬೃಹತ್‌ ಮೊತ್ತಕ್ಕೆ ಯಾರು ಹೊಣೆಗಾರರು ಎಂಬ ಪ್ರಶ್ನೆ ಉದ್ಭವಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಧವನ್‌ ಅವರು ನೇರವಾಗಿ ಪತ್ರಿಕಾಗೋಷ್ಠಿಯನ್ನು ಕರೆದರು, ಮಾತ್ರವಲ್ಲದೆ ಇಡೀ ಸೋಲಿಗೆ ತಾನೇ ಹೊಣೆಗಾರ ಎಂಬುದಾಗಿ ಹೇಳಿಕೊಂಡರು. ಜೊತೆಗೆ ತನ್ನ ತಂಡದ ಮೇಲೆ ಸಂಪೂರ್ಣ ಭರವಸೆ ಇರುವುದಾಗಿ ಮಾಧ್ಯಮದ ಮೂಲಕ ದೇಶದೆದುರು ಸಾರಿದರು. ಒಂದು ವರ್ಷದ ನಂತರ, ಅಂದರೆ 1980ರ ಜುಲೈ ತಿಂಗಳಿನಲ್ಲಿ ಇದೇ ಉಡ್ಡಯನ ಪ್ರಕ್ರಿಯೆಯನ್ನು ಪುನರಾವರ್ತಿಸಲಾಯಿತು ಹಾಗೂ ಎಂಜಿನಿಯರ್‌ಗಳು ಯಶಸ್ವಿಯಾಗಿ ರೋಹಿಣಿ ಉಪಗ್ರಹವನ್ನು ಭೂಮಿಯ ಸಮೀಪದ ಕಕ್ಷೆಗೆ ತಲುಪಿಸಿ, ಬಾಹ್ಯಾಕಾಶದಲ್ಲಿ ಈ ಸಾಧನೆಗೈದ ಪ್ರತಿಷ್ಠಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸೇರುವಂತೆ ಮಾಡಿದರು.

ಈ ಬಾರಿ ಪತ್ರಿಕಾಗೋಷ್ಠಿಯನ್ನು ಮುನ್ನಡೆಸಲು ಧವನ್‌ ಅವರು ಕಲಾಂ ಅವರನ್ನು ಕೇಳಿಕೊಂಡರು. ಯೋಜನೆಯು ವಿಫಲಗೊಂಡಾಗ ಧವನ್‌ ಅವರು ತಪ್ಪನ್ನು ತನ್ನ ಮೇಲೆಳೆದುಕೊಂಡಿದ್ದರು. ಆದರೆ ಯಶಸ್ಸು ತನ್ನನ್ನು ಹುಡುಕಿಕೊಂಡು ಬಂದಾಗ ಇದರ ಕೀರ್ತಿಯನ್ನು ತನ್ನ ತಂಡಕ್ಕೆ ನೀಡಿದ್ದರು. ಈ ಉಪಾಖ್ಯಾನವು ಇಸ್ರೋ ಸಂಸ್ಥೆಯ ಕಥನಗಳ ಒಂದು ಭಾಗವೆನಿಸಿದ್ದು, ಅದರ ಬಲವಾದ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಅಂತರ್ಗತವಾಗಿರುವ ಸಿದ್ಧಾಂತವೆನಿಸಿದೆ. ಕಲಾಂ ಅವರು ಅನೇಕ ಬಾರಿ ಈ ಘಟನೆಯನ್ನು ನೆನೆಪಿಸಿಕೊಂಡಿದ್ದಾರೆ. ತನ್ನ ಮೇಲೆ ತನಗೇ ಇದ್ದ ಆತ್ಮವಿಶ್ವಾಸಕ್ಕಿಂತಲೂ ಹೆಚ್ಚಿನ ಭರವಸೆ ಬಾಸ್‌ಗೆ ತನ್ನ ಮೇಲಿತ್ತು ಎಂದು ಹೇಳಿದ್ದಾರೆ.

2002 ಅರುಣ್‌ ಶೌರಿ ಅವರು ವಾಣಿಜ್ಯ ಮತ್ತು ಕೈಗಾರಿಕೆಯ ಉಸ್ತುವಾರಿ ಸಚಿವರಾಗಿದ್ದರು ಹಾಗೂ ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯೂ.ಟಿ.ಒ) ಸಭೆಯಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿಕೊಂಡಿದ್ದರು. ಅಲ್ಲಿ ಸಾಕಷ್ಟು ತುರುಸಿನ ಚರ್ಚೆಗಳು ನಡೆಯುತ್ತಿದ್ದವು. ಒಂದು ಹಂತದಲ್ಲಿ ಯೂರೋಪ್‌ ಮತ್ತು ಅಮೆರಿಕದ ಕೆಲವು ಸಚಿವರು ಕೀನ್ಯಾ ದೇಶವನ್ನು ಪ್ರತಿನಿಧಿಸುತ್ತಿದ್ದ ಅಧಿಕಾರಿಣಿಯೊಬ್ಬರನ್ನು ಅನಾವಶ್ಯಕವಾಗಿ ಪೀಡಿಸುತ್ತಿದ್ದರು. ಈ ಸಮ್ಮೇಳನದ ನಿಯಮಗಳ ಪ್ರಕಾರ ಕೀನ್ಯಾದ ಆ ಅಧಿಕಾರಿಣಿಗೆ ಇದನ್ನು ಎದುರಿಸಿ ಮಾತನಾಡಲು ಸಾಧ್ಯವಿರಲಿಲ್ಲ. ಏಕೆಂದರೆ ಸಚಿವರು ಮಾತ್ರವೇ ಅಲ್ಲಿ ಮಾತನಾಡಬಹುದಾಗಿತ್ತು. ಆದರೆ ಕೀನ್ಯಾದ ಸಚಿವರು ಅಲ್ಲಿರಲಿಲ್ಲ. ಆದರೆ ಅರುಣ್‌ ಶೌರಿಯವರು ಮಾತನಾಡಲು ಆರಂಭಿಸಿದಾಗ ಅವರು ಪಾಶ್ಚಾತ್ಯ ನಿಯೋಗವನ್ನು ತರಾಟೆಗೆ ತೆಗೆದುಕೊಂಡರು ಮಾತ್ರವಲ್ಲದೆ, ಕೀನ್ಯಾದ ನಿಲುವನ್ನು ಪ್ರಬಲವಾಗಿ ಸಮರ್ಥಿಸಿಕೊಂಡರು. ಇದು ಅವರ ಎಲ್ಲೆಯನ್ನು ಮೀರಿದ್ದ ವಿಷಯವಾಗಿತ್ತು. ಜತೆಗೆ ಅನಿರೀಕ್ಷಿತವೂ ಆಗಿತ್ತು. ಆದರೆ ಆ ಸಂದರ್ಭದಲ್ಲಿ ಅದು ತೀರಾ ಅಗತ್ಯವಾಗಿತ್ತು. ಅವರಿಗೆ ಏನು ಸರಿಯಾಗಿ ಕಂಡಿತೋ ಅದನ್ನು ಅವರು ಸಮರ್ಥಿಸಿಕೊಂಡರು ಹಾಗೂ ಪೀಡಿಸುತ್ತಿದ್ದವರ ಯೋಗ್ಯತೆ ಏನೆಂಬುದನ್ನು ತೋರಿಸಿಕೊಟ್ಟರು.

ನನ್ನ ವೃತ್ತಿ ಜೀವನದಲ್ಲಿ ಮುಖ್ಯಸ್ಥರೇ ತಲೆದಂಡವಾಗಲು ತಯಾರಾಗಿದ್ದನ್ನೂ ಅದೇ ರೀತಿ ತನ್ನ ತಂಡದ ಸದಸ್ಯರು ತಲೆ ತಗ್ಗುವಂತೆ ಮಾಡಿದ್ದನ್ನೂ ಕಂಡಿದ್ದೇನೆ.

ಟೆಸ್ಕೊ ಸಂಸ್ಥೆಯ ಐ.ಟಿ ನಿರ್ದೇಶಕರು ನನಗೊಂದು ಕಥೆಯನ್ನು ಹೇಳಿದ್ದರು. ಕಂಪನಿಗೆ ಹೊಸದಾಗಿ ಸೇರಿದ್ದ ವೇಳೆ ಅವರು ಅಚಾತುರ್ಯದಿಂದ ತಪ್ಪಾದ ದತ್ತಾಂಶವನ್ನು ಹೊಂದಿದ್ದ ವರದಿಯೊಂದನ್ನು ಆಡಳಿತ ಮಂಡಳಿಗೆ ಕಳುಹಿಸಿದ್ದರು. ಹೀಗಾಗಿ ಈ ವರದಿಯು ತಪ್ಪಾದ ತೀರ್ಮಾನಗಳನ್ನು ಹೊಂದಿತ್ತು. ಹೊಸ ಉದ್ಯೋಗಿಯಾಗಿದ್ದ ಇವರು ಈ ಅಚಾತುರ್ಯದ ಪರಿಣಾಮಗಳ ಕುರಿತು ಹೆದರಿದ್ದರು. ಆಡಳಿತ ಮಂಡಳಿಯ ಸಭೆಯಲ್ಲಿದ್ದ ಅವರ ಬಾಸ್‌ ಈ ತಪ್ಪನ್ನು ಒಪ್ಪಿಕೊಂಡಿದ್ದರು ಹಾಗೂ ಇದಕ್ಕೆ ತಾನು ಜವಾಬ್ದಾರನೇ ಹೊರತು ಹೊಸ ಐ.ಟಿ ನಿರ್ದೇಶಕರು ಅಥವಾ ತಂಡದ ಸದಸ್ಯರಲ್ಲ ಎಂಬುದಾಗಿ ಖಡಾಖಂಡಿತವಾಗಿ ಹೇಳಿದ್ದರು. ಅವರ ಈ ಒಂದು ಕಾರ್ಯವು ಇಡೀ ತಂಡದ ವಿಶ್ವಾಸವನ್ನು ಗೆದ್ದಿತ್ತು.

ಸುಮಾರು ಎಂಬತ್ತರ ದಶಕದ ಆರಂಭದಲ್ಲಿ ನನ್ನ ಹುಟ್ಟೂರಾದ ನಂಜನಗೂಡಿನಲ್ಲಿ ಎರಡು ಸಮುದಾಯಗಳ ನಡುವೆ ಯಾವಾಗಲೂ ಘರ್ಷಣೆಯುಂಟಾಗುತ್ತಿತ್ತು. ನನ್ನ ಕುಟುಂಬವು ಈ ಪಟ್ಟಣದಲ್ಲಿ ಹಲ್ಲುಪುಡಿ ಮತ್ತು ಆಯುರ್ವೇದಿಕ್‌ ಔಷಧಿಗಳ ಕಾರ್ಖಾನೆಯನ್ನು ನಡೆಸುತ್ತಿದೆ. ಈ ಕಾರ್ಖಾನೆಯು ನೂರಾರು ಕಾರ್ಮಿಕರಿಗೆ ಉದ್ಯೋಗವನ್ನು ನೀಡಿತ್ತು. ಇಲ್ಲಿನ ಘರ್ಷಣೆಯು ಒಮ್ಮೆ ಕಾರ್ಖಾನೆಯ ಬಾಗಿಲಿನ ಬಳಿ ತಲುಪಿತ್ತು. ಒಂದು ಸಮುದಾಯಕ್ಕೆ ಸೇರಿದ್ದ ಉದ್ರಿಕ್ತ ಗುಂಪೊಂದು ಇನ್ನೊಂದು ಸಮುದಾಯದ ಗುಂಪಿನ ಕಾರ್ಮಿಕರ ಮೇಲೆ ದಾಳಿ ನಡೆಸುವುದಕ್ಕಾಗಿ ಕಾರ್ಖಾನೆಯ ಒಳಕ್ಕೆ ನುಗ್ಗಲು ಯತ್ನಿಸುತ್ತಿತ್ತು. ಅವರು ಒಂದು ವೇಳೆ ಯಶಸ್ವಿಯಾಗಿದ್ದರೆ ಒಂದಷ್ಟು ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ವ್ಯವಹಾರವನ್ನು ನಡೆಸುತ್ತಿದ್ದ ನನ್ನ ದೊಡ್ಡಪ್ಪ ಆ ಸಂದರ್ಭದಲ್ಲಿ ಸಮಾಜದಲ್ಲಿ ವರ್ಚಸ್ವಿ ವ್ಯಕ್ತಿಯಾಗಿದ್ದರು. ಅವರು ಆ ಗುಂಪಿಗೆ ಹೇಳಿದ್ದಿಷ್ಟೇ: ʼನನ್ನ ಕೆಲಸಗಾರರನ್ನು ಕೊಲ್ಲುವ ಮೊದಲು ನೀವು ನನ್ನನ್ನು ಕೊಲ್ಲಬೇಕುʼ ಈ ಗುಂಪು ಮೆಲ್ಲನೆ ಹಿಂದಕ್ಕೆ ಸರಿಯಿತು.

ಆದರೆ ಯಾರಿಗಾಗಿ ಮತ್ತು ಯಾವಾಗ ನಾವು ಜವಾಬ್ದಾರಿಯನ್ನು ಹೊರಬೇಕು ಎನ್ನುವುದು ಬಾಸ್‌ ಪಾಲಿಗೆ ನಿರ್ಣಾಯಕ ಎನಿಸುತ್ತದೆ. ತಪ್ಪು ಮಾಡಿದವರ ಪರವಾಗಿ ನಿಂತರೆ ದುಬಾರಿ ಬೆಲೆ ತೆರಬೇಕಾದೀತು. ಅಲ್ಲದೆ ಕೆಲವೊಮ್ಮೆ ಅವರ ವರ್ಚಸ್ಸಿಗೆ ಧಕ್ಕೆಯಾಗಬಹುದು. ಅವರು ಕೆಲವೊಮ್ಮೆ ತಪ್ಪು ಗ್ರಹಿಕೆಗಳು ಮತ್ತು ತಪ್ಪು ನಂಬಿಕೆಗಳನ್ನು ಗಮನಿಸಬೇಕು. ಈ ಕೆಳಗಿನ ಕೆಲವು ಅಂಶಗಳನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು.

  • ಹೋರಾಟವು ನ್ಯಾಯಯುತ ಉದ್ದೇಶಕ್ಕೆ ಸಂಬಂಧಿಸಿರಬೇಕು.
  • ನಿಮ್ಮ ಮೌಲ್ಯಗಳನ್ನು ಅರಿತುಕೊಂಡರೆ ಯಾವಾಗ ಸಮರ್ಥಿಸಿಕೊಳ್ಳಬೇಕು ಮತ್ತು ಯಾವಾಗ ಸಮರ್ಥಿಸಿಕೊಳ್ಳಬಾರದು ಎಂಬುದನ್ನು ನಿರ್ಧರಿಸಲು ಸಹಾಯವಾಗುತ್ತದೆ. ಸತ್ಯವು ನಿಮ್ಮ ಸ್ನೇಹಿತನಾಗಿದ್ದಾನೆ.
  • ನಿಮ್ಮ ಬೆಂಬಲವನ್ನು ಪಡೆಯುವ ವ್ಯಕ್ತಿಯು ಅದಕ್ಕೆ ಅರ್ಹನಾಗಿರಬೇಕು. ನೀವು ಕುರುಡಾಗಿ ವರ್ತಿಸಬಾರದು. ತಂಡದ ಪರವಾಗಿ ಮಾಡುವ ಮೊಂಡುತನದ ಸಮರ್ಥನೆ, ಪರ್ಯಾಯ ನಿಲುವುಗಳನ್ನು ತಳ್ಳಿಹಾಕುವುದು ಇತ್ಯಾದಿಗಳು ಬೇಜವಾಬ್ದಾರಿತನದ ವರ್ತನೆಗಳೆನಿಸಬಹುದು ಹಾಗೂ ಸರಿಪಡಿಸಲಾಗದ ಸನ್ನಿವೇಶಗಳನ್ನು ಸೃಷ್ಟಿಸಬಹುದು.
  • ನೀವು ಇಷ್ಟಾನಿಷ್ಟಗಳನ್ನು ಮೀರಿ ಅಗತ್ಯವಿರುವ ಎಲ್ಲರನ್ನೂ ಬೆಂಬಲಿಸಬೇಕೇ ಹೊರತು ನಿಮ್ಮ ಆಪ್ತರನ್ನು ಮಾತ್ರವೇ ಬೆಂಬಲಿಸುವುದಲ್ಲ.
  • ಯಾರೂ ಸಹ ಎಲ್ಲೆಯಿಲ್ಲದಷ್ಟು ಬೆಂಬಲಕ್ಕೆ ಅರ್ಹರಲ್ಲ. ನಿಮ್ಮ ತಂಡದ ಸದಸ್ಯರು ಎಲ್ಲಿ ಎಡವಿದ್ದಾರೆ ಅವರು ಅರಿತುಕೊಳ್ಳುವುದನ್ನು ಹಾಗೂ ಮುಂದೆ ಹೀಗೆ ಆಗದಂತೆ ಏನು ಮಾಡಬೇಕು ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.

ತನ್ನ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಬಾರ್ಸೆಲೋನಾ ತಂಡವು 14 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವಂತೆ ಮಾಡಿದ್ದ ತರಬೇತುದಾರ ಪೆಪ್‌ ಗಾರ್ಡಿಯೋಲಾ ಅವರು ತನ್ನ ತಂಡದ ಸದಸ್ಯರಿಗೆ ಹೀಗೆ ಹೇಳಿದ್ದರು: ʼನೀವು ಕಳಪೆ ಸಾಧನೆ ಮಾಡಿದರೂ ಸಹ ಕೊನೆಯ ಉಸಿರು ಇರುವ ತನಕ ನಾನು ನಿಮ್ಮನ್ನು ಸಮರ್ಥಿಸುತ್ತೇನೆ. ಆದರೆ ನೀವು ಪ್ರಯತ್ನವೇ ಮಾಡದಿದ್ದರೆ ನಾನು ಸುಮ್ಮನಿರುವುದಿಲ್ಲʼ ಪೆಪ್‌ ಸಹಾನುಭೂತಿಯನ್ನು ಹೊಂದಿದ್ದರು. ಸೋಲುವುದು ಸುರಕ್ಷಿತವೆಂಬುದನ್ನು ಅವರ ಆಟಗಾರರು ಅರಿತುಕೊಂಡಿದ್ದರು. ಇದೇ ವೇಳೆ ಈ ತರಬೇತುದಾರರು ಸಬಲೀಕರಣದ ಗುರಿಯನ್ನು ಹೊಂದಿದ್ದರು. ತನ್ನಲ್ಲಿರುವ ಎಲ್ಲವನ್ನು ಪಂದ್ಯಕ್ಕಾಗಿ ಸಮರ್ಪಿಸಲು ಅವರು ಪ್ರೇರಣೆ ಪಡೆದಿದ್ದರು. ಹೀಗಾಗಿಯೇ ಅವರನ್ನು ಎಲ್ಲರೂ ಸಾರ್ವಕಾಲೀನ ಅತ್ಯುತ್ತಮ ಫುಟ್ಬಾಲ್‌ ಮ್ಯಾನೇಜರ್‌ ಆಗಿ ಪರಿಗಣಿಸುತ್ತಾರೆ!

ಬರಹ: ಸುಧೀಶ್‌ ವೆಂಕಟೇಶ್‌, ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಮುಖ್ಯ ಸಂವಹನ ಅಧಿಕಾರಿ

(ಈ ಲೇಖನದಲ್ಲಿ ವ್ಯಕ್ತಪಡಿಸಲಾದ ಎಲ್ಲಾ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳಾಗಿವೆ ಹಾಗೂ ಅವರು ಪ್ರತಿನಿಧಿಸುವ ಸಂಸ್ಥೆಯ ಅಧಿಕೃತ ನೀತಿ ಅಥವಾ ನಿಲುವನ್ನು ಪ್ರತಿಫಲಿಸಬೇಕು ಎಂದೇನಿಲ್ಲ)

ವಿಭಾಗ