Kannada News  /  Nation And-world  /  Auto Driver From Ahmedabad Who Invited Arvind Kejriwal For Dinner Says He Is A Big Fan Of Modi
ಬಿಜೆಪಿ ಜೊತೆ ಗುರುತಿಸಿಕೊಂಡ ವಿಕ್ರಮ್‌ ದಂತಾನಿ
ಬಿಜೆಪಿ ಜೊತೆ ಗುರುತಿಸಿಕೊಂಡ ವಿಕ್ರಮ್‌ ದಂತಾನಿ (Verified Twitter)

Vikram Dantani: ಕೇಜ್ರಿಯನ್ನು ʼಒತ್ತಾಯದ ಊಟʼಕ್ಕೆ ಮನೆಗೆ ಕರೆದಾತನಿಂದ ಕ್ರೇಜಿ ಯು-ಟರ್ನ್:‌‌ ದಂತಾನಿ ʼಮೋದಿ ಕಾ ಫ್ಯಾನ್ʼ!

01 October 2022, 9:19 ISTHT Kannada Desk
01 October 2022, 9:19 IST

ಕೆಲವು ದಿನಗಳ ಹಿಂದಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದ ಗುಜರಾತ್‌ನ ಅಹಮದಾಬಾದ್‌ನ ಆಟೋ ಚಾಲಕ ವಿಕ್ರಮ್‌ ದಂತಾನಿ, ಇದೀಗ ಯು-ಟರ್ನ್‌ ಹೊಡಿದ್ದಾರೆ. ತಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಹುದೊಡ್ಡ ಅಭಿಮಾನಿ ಎಂದಿರುವ ಅವರು, ತಾವು ಬಿಜೆಪಿಯ ಕಟ್ಟಾ ಬೆಂಬಲಿಗ ಎಂದೂ ಘೋಷಿಸಿದ್ದಾರೆ. ಒತ್ತಡದ ಕಾರಣದಿಂದ ತಾವು ಕೇಜ್ರಿವಾಲ್‌ ಅವರನ್ನು ಊಟಕ್ಕಾಗಿ ಮನೆಗೆ ಆಹ್ವಾನಿಸಿದ್ದಾಗಿಯೂ ದಂತಾನಿ ಹೇಳಿದ್ದಾರೆ.

ಅಹಮದಾಬಾದ್:‌ ಕೆಲವು ದಿನಗಳ ಹಿಂದಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದ ಗುಜರಾತ್‌ನ ಅಹಮದಾಬಾದ್‌ನ ಆಟೋ ಚಾಲಕ ವಿಕ್ರಮ್‌ ದಂತಾನಿ, ಇದೀಗ ಯು-ಟರ್ನ್‌ ಹೊಡಿದ್ದಾರೆ. ತಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಹುದೊಡ್ಡ ಅಭಿಮಾನಿ ಎಂದಿರುವ ಅವರು, ತಾವು ಬಿಜೆಪಿಯ ಕಟ್ಟಾ ಬೆಂಬಲಿಗ ಎಂದೂ ಘೋಷಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗುಜರಾತ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಕ್ಷ(ಆಪ್)ದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಗುಜರಾತ್‌ನಲ್ಲಿ ಆಪ್‌ ಪಕ್ಷಕ್ಕೆ ಭಾರೀ ಜನಬೆಂಬಲವೂ ವ್ಯಕ್ತವಾಗುತ್ತಿದೆ. ಕೇಜ್ರಿವಾಲ್‌ ರಾಜ್ಯದ ಮೂಲೆ ಮೂಲೆಗೂ ತೆರಳಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ.

ಅದರಂತೆ ಇತ್ತೀಚಿಗೆ ಕೇಜ್ರಿವಾಲ್‌ ಅಹಮದಾಬಾದ್‌ನಲ್ಲಿ ಪ್ರಚಾರ ಸಭೆಯೊಂದನ್ನು ಹಮ್ಮಿಕೊಂಡಿದ್ದರು. ಈ ವೇಳೆ ತಮ್ಮ ಮನೆಗೆ ಊಟಕ್ಕೆ ಬರುವಂತೆ ಕೇಜ್ರಿವಾಲ್‌ ಅವರನ್ನು ನಗರದ ಆಟೋ ಚಾಲಕ ವಿಕ್ರಮ್‌ ದಂತಾನಿ ಆಹ್ವಾನ ನೀಡಿದ್ದರು. ವಿಕ್ರಮ್‌ ಅವರ ಆಹ್ವಾನ ಪುರಸ್ಕರಿಸಿದ್ದ ಕೇಜ್ರಿವಾಲ್, ಅವರ ಆಟೋದಲ್ಲೇ ಮನೆಗೆ ತೆರಳಿ ಊಟ ಮಾಡಿದ್ದರು. ಇದಕ್ಕೂ ಮೊದಲು ಆಟೋದಲ್ಲಿ ತೆರಳಲು ಅನುಮತಿ ನೀಡದ ಪೊಲೀಸರ ವಿರುದ್ಧ ಕೇಜ್ರಿವಾಲ್‌ ವಾಗ್ವಾದಕ್ಕೂ ಇಳಿದಿದ್ದರು.

ತಮ್ಮ ಮನೆಗೆ ಊಟಕ್ಕೆ ಬಂದ ಕೇಜ್ರಿವಾಲ್‌ ಅವರನ್ನು ಕೊಂಡಾಡಿದ್ದ ವಿಕ್ರಮ್‌ ದಂತಾನಿ, ಮುಖ್ಯಮಂತ್ರಿಯೊಬ್ಬರು ಬಡವರ ಮನೆಗೆ ಬಂದು ಊಟ ಮಾಡಿದ್ದನ್ನು ನಾನು ಎಲ್ಲಿಯೂ ನೋಡಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಯು-ಟರ್ನ್‌ ಹೊಡೆದಿರುವ ವಿಕ್ರಮ್‌ ದಂತಾನಿ, ನಾನು ಪ್ರಧಾನಿ ಮೋದಿ ಅವರ ಅಭಿಮಾನಿ ಎಂದು ಹೇಳಿದ್ದಾರೆ.

ಅಹಮದಾಬಾದ್‌ ಆಟೋ ಚಾಲಕರ ಸಂಘದ ಒತ್ತಡಕ್ಕೆ ಮಣಿದು ನಾನು ಕೇಜ್ರಿವಾಲ್‌ ಅವರನ್ನು ಊಟಕ್ಕಾಗಿ ಮನೆಗೆ ಆಹ್ವಾನಿಸಿದ್ದೆ. ನಾನು ಅಸಲಿಗೆ ಬಿಜೆಪಿಯ ಕಟ್ಟಾ ಬೆಂಬಲಿಗ. ನಾನು ಯಾವಾಗಲೂ ಬಿಜೆಪಿಗೆ ಮತ ನೀಡುತ್ತಾ ಬಂದಿದ್ದೇನೆ ಎಂದು ವಿಕ್ರಮ್‌ ದಂತಾನಿ ಹೇಳಿರುವುದು ದೇಶದ ಗಮನ ಸೆಳೆದಿದೆ.

ಸೆಪ್ಟೆಂಬರ್ 13 ರಂದು ಅಹಮದಾಬಾದ್‌ನಲ್ಲಿ ನಡೆದಿದ್ದ ಆಪ್ ಟೌನ್ ಹಾಲ್ ಸಭೆಯಲ್ಲಿ‌, ಕೇಜ್ರಿವಾಲ್ ಅವರನ್ನು ತಮ್ಮ ಮನೆಗೆ ಆಹ್ವಾನಿಸುವಂತೆ ಆಟೋ ರಿಕ್ಷಾ ಯೂನಿಯನ್ ನಾಯಕರು ನನ್ನ ಮೇಲೆ ಒತ್ತಡ ಹೇರಿದ್ದರು. ಅವರ ಒತ್ತಡಕ್ಕೆ ಮಣಿದು ನಾನು ಕೇಜ್ರಿವಾಲ್‌ ಅವರನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದಾಗಿ ವಿಕ್ರಮ್‌ ದಂತಾನಿ ಸ್ಪಷ್ಟಪಡಿಸಿದ್ದಾರೆ.

ನಾನು ಕೇಜ್ರಿವಾಲ್‌ ಅವರನ್ನು ಊಟಕ್ಕಾಗಿ ಮನೆಗೆ ಆಹ್ವಾನಿಸಿದ್ದು ಇಷ್ಟು ದೊಡ್ಡ ಸುದ್ದಿಯಾಗುತ್ತದೆ ಎಂದಿದ್ದರೆ, ನಾನು ಅವರಿಗೆ ಆಹ್ವಾನವನ್ನೇ ನೀಡುತ್ತಿರಲಿಲ್ಲ. ಕೇಜ್ರಿವಾಲ್‌ ನನ್ನ ಮನೆಗೆ ಊಟಕ್ಕೆ ಬಂದಿದ್ದನ್ನು ಆಪ್‌ ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳಲಿದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ವಿಕ್ರಮ್‌ ದಂತಾನಿ ಅಸಮಾಧಾನ ಹೊರಹಾಕಿದ್ದಾರೆ.

ನಾನು ಆಪ್‌ ಬೆಂಬಲಿಗನಲ್ಲ. ನಾನು ಆಪ್‌ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ. ಆಪ್‌ ಪಕ್ಷದ ಯಾರೊಂದಿಗೂ ನಾನು ಸಂಪರ್ಕದಲ್ಲಿ ಇಲ್ಲ. ನಾನು ಪ್ರಧಾನಿ ಮೋದಿ ಅವರ ಕಟ್ಟಾ ಅಭಿಮಾನಿ. ನಾನು ಹಲವಾರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ವಿಕ್ರಮ್‌ ದಂತಾನಿ ಹೇಳಿದ್ದಾರೆ.

ಅಹಮದಾಬಾದ್‌ನ ಥಾಲ್ತೇಜ್ ಪ್ರದೇಶದಲ್ಲಿ ಜರುಗಿದ ಪ್ರಧಾನಿ ಮೋದಿಯವರ ಸಾರ್ವಜನಿಕ ಸಭೆಯಲ್ಲೂ ವಿಕ್ರಮ್‌ ದಂತಾನಿ ಭಾಗವಹಿಸಿದ್ದಾರೆ. ಕೇಸರಿ ಸ್ಕಾರ್ಫ್ ಮತ್ತು ಕ್ಯಾಪ್ ಧರಿಸಿದ್ದ ಅವರು, ನನ್ನ ಮತ ಬಿಜೆಪಿಗೆ ಮಾತ್ರ ಎಂದು ಹೇಳಿದ್ದಾರೆ. ವಿಕ್ರಮ್‌ ದಂತಾನಿ ಅವರು ಬಿಜೆಪಿ ಸಭೆಗೆ ಹೋಗುತ್ತಿದ್ದ ವಾಹನದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಇರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ವಿಭಾಗ