ಸಿಎಸ್ಕೆ ವಿರುದ್ಧ ಗೆದ್ದು ಆರ್ಸಿಬಿ ಪ್ಲೇಆಫ್ ಹಾದಿ ಸುಲಭಗೊಳಿಸಿದ ಗುಜರಾತ್ ಟೈಟಾನ್ಸ್; ತನಗೂ ಪ್ಲೇಆಫ್ ಹಾದಿ ಜೀವಂತ
GT vs CSK Highlights: 17ನೇ ಆವೃತ್ತಿಯ ಐಪಿಎಲ್ನ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 35 ರನ್ಗಳ ಅಂತರದಿಂದ ಗೆದ್ದು ಬೀಗಿತು.
ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಭರ್ಜರಿ ಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 35 ರನ್ಗಳಿಂದ ಅಮೋಘ ಗೆಲುವು ಸಾಧಿಸಿತು. ಕಳೆದ 3 ಪಂದ್ಯಗಳಿಂದ ಸೋತಿದ್ದ ಜಿಟಿ, ಕೊನೆಗೂ ಲಯಕ್ಕೆ ಮರಳಿತು. ಅಲ್ಲದೆ, ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿತು. ಆದರೆ, ಈ ಸೋಲು ಸಿಎಸ್ಕೆ ಪ್ಲೇಆಫ್ ಹಾದಿಯನ್ನು ಕಠಿಣಗೊಳಿಸಿತು. ಈ ಗೆಲುವು ಜಿಟಿ-ಸಿಎಸ್ಕೆಗಿಂತ ಆರ್ಸಿಬಿಗೆ ಹೆಚ್ಚು ಲಾಭ ತಂದಿದೆ.
ಪ್ರಸ್ತುತ 12ರಲ್ಲಿ 6 ಸೋಲುಂಡಿರುವ ಚೆನ್ನೈ, 12 ಅಂಕ ಪಡೆದಿದೆ. ಮತ್ತೊಂದೆಡೆ 10 ಅಂಕ ಪಡೆದಿರುವ ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಉಳಿದ 2ರಲ್ಲಿ ಗೆಲ್ಲಬೇಕಿದೆ. ಇದು ಸಾಧ್ಯವಾಗಬೇಕೆಂದರೆ ಚೆನ್ನೈ ಈ ಪಂದ್ಯದಂತೆ ಉಳಿದ ಪಂದ್ಯಗಳಲ್ಲೂ ಸೋಲಬೇಕು. ಆಗ ಆರ್ಸಿಬಿ ಪ್ಲೇಆಫ್ಗೆ ಎಂಟ್ರಿಕೊಡುವ ಸಾಧ್ಯತೆ ಹೆಚ್ಚಿಸುತ್ತದೆ. ಒಂದು ವೇಳೆ ಸಿಎಸ್ಕೆ ಈ ಪಂದ್ಯ ಗೆದ್ದಿದ್ದರೆ 14 ಅಂಕ ಪಡೆಯುತ್ತಿತ್ತು. ಇದರೊಂದಿಗೆ ಆರ್ಸಿಬಿ ಪ್ಲೇಆಫ್ ಹಾದಿ ಬಹುತೇಕ ಅಂತ್ಯವಾಗುತ್ತಿತ್ತು.
ಇದೀಗ ಚೆನ್ನೈನಂತೆ ಡೆಲ್ಲಿ ಮತ್ತು ಲಕ್ನೋ ತಂಡಗಳು ಎಲ್ಲಾ ಪಂದ್ಯಗಳಲ್ಲಿ ಸೋಲಬೇಕು. ಡೆಲ್ಲಿ ಮತ್ತು ಲಕ್ನೋ ಮೇ 14ರಂದು ಮುಖಾಮುಖಿಯಾಗುತ್ತಿದ್ದು, ಆರ್ಸಿಬಿ ಪ್ಲೇಆಫ್ ಹಾದಿ ಸುಲಭವಾಗಲು ಡೆಲ್ಲಿ ಶರಣಾಗಬೇಕು. ಏಕೆಂದರೆ ಲಕ್ನೋ ರನ್ ರೇಟ್ ಡೆಲ್ಲಿಗಿಂತಲೂ ಕಳಪೆಯಾಗಿದೆ. ಲಕ್ನೋ ಮತ್ತೊಂದು ಪಂದ್ಯದಲ್ಲಿ ಪರಾಭವಗೊಳ್ಳಬೇಕು. ಉಳಿದ 2ರಲ್ಲಿ ಆರ್ಸಿಬಿ ಗೆದ್ದರೆ 14 ಅಂಕಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಲಿವೆ. ಆದರೆ ನೆಟ್ ರನ್ ರೇಟ್ ಕಾಯ್ದುಕೊಳ್ಳಬೇಕು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್, ಬೃಹತ್ ಮೊತ್ತ ಪೇರಿಸಿತು. ಸಾಯಿ ಸುದರ್ಶನ್ (103) ಮತ್ತು ಶುಭ್ಮನ್ ಗಿಲ್ (104) ತಲಾ ಶತಕ ಸಿಡಿಸಿದ ಪರಿಣಾಮ ಜಿಟಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 231 ರನ್ ಪೇರಿಸಿತು. ಆದರೆ, ಗುರಿ ಬೆನ್ನಟ್ಟಿದ ಸಿಎಸ್ಕೆ ಪರ ಡ್ಯಾರಿಲ್ ಮಿಚೆಲ್ ಮತ್ತು ಮೊಯಿನ್ ಹೋರಾಡಿದರೂ ಗೆಲುವು ಸಾಧ್ಯವಾಗಲಿಲ್ಲ. ಜಿಟಿ ಬೌಲರ್ಗಳು ಮಿಂಚಿದರು.
ಡ್ಯಾರಿಲ್ ಮಿಚೆಲ್-ಮೊಯಿನ್ ಅಲಿ ಹೋರಾಟ ವ್ಯರ್ಥ
ಬೃಹತ್ ಗುರಿ ಹಿಂಬಾಲಿಸಿದ ಸಿಎಸ್ಕೆ, ಮೊದಲ 3 ಓವರ್ಗಳಲ್ಲೇ ಅಗ್ರ ಕ್ರಮಾಂಕದ ಮೂವರನ್ನು ಕಳೆದುಕೊಂಡಿತು. ಅಜಿಂಕ್ಯ ರಹಾನೆ 1, ರಚಿನ್ ರವೀಂದ್ರ 1, ಋತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟಾದರು. ಬಳಿಕ ಒಂದಾದ ಡ್ಯಾರಿಲ್ ಮಿಚೆಲ್ ಮತ್ತು ಮೊಯಿನ್ ಅಲಿ ಮಾರಕ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. 4ನೇ ವಿಕೆಟ್ಗೆ 109 ರನ್ಗಳ ಪಾಲುದಾರಿಗೆ ಒದಗಿಸಿದ ಇವರು ತಲಾ ಅರ್ಧಶತಕ ಸಿಡಿಸಿ ಹೋರಾಟ ನೀಡಿದರು.
ಅರ್ಧಶತಕ ಸಿಡಿಸಿದ ಬಳಿಕ ಇಬ್ಬರ ಹೋರಾಟ ಅಂತ್ಯವಾಯಿತು. ಮಿಚೆಲ್ 34 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 63 ರನ್ ಚಚ್ಚಿದರೆ, ಮೊಯಿನ್ 36 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಿತ 56 ರನ್ ಬಾರಿಸಿದರು. ಆದರೆ ಶಿವಂ ದುಬೆ 21, ರವೀಂದ್ರ ಜಡೇಜಾ 18 ರನ್ ಗಳಿಸಲಷ್ಟೇ ಶಕ್ತರಾದರು. ಮೋಹಿತ್ ಶರ್ಮಾ 3, ರಶೀದ್ ಖಾನ್ 2 ವಿಕೆಟ್ ಪಡೆದು ಮಿಂಚಿದರು.
ಶುಭ್ಮನ್ ಗಿಲ್ - ಸಾಯಿ ಸುದರ್ಶನ್ ಕಮಾಲ್
ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಸಿಎಸ್ಕೆ ಬೌಲರ್ಗಳ ವಿರುದ್ಧ ಸಿಡಿದೆದ್ದ ಜೋಡಿ ಜೊತೆಯಾಟವಾಡಿದ್ದು ದಾಖಲೆಯ 210 ರನ್. ಬೊಂಬಾಟ್ ಬ್ಯಾಟಿಂಗ್ ನಡೆಸಿದ ಶುಭ್ಮನ್-ಸುದರ್ಶನ್ ತಲಾ ಶತಕ ಸಿಡಿಸಿ ಮಿಂಚಿದರು. ಗಿಲ್ ಐಪಿಎಲ್ನಲ್ಲಿ 4ನೇ ಸೆಂಚುರಿ ಬಾರಿಸಿದರೆ, ಸಾಯಿ ಚೊಚ್ಚಲ ನೂರು ಚಚ್ಚಿದರು.
ಗಿಲ್ 55 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ ಸಹಿತ 104 ರನ್, ಸಾಯಿ 51 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸಹಿತ 103 ರನ್ ಸಿಡಿಸಿದರು. ಇವರಿಬ್ಬರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಗುಜರಾತ್, 20 ಓವರ್ಗಳಲ್ಲಿ 231 ರನ್ಗಳ ದೊಡ್ಡ ಮೊತ್ತ ಕಲೆ ಹಾಕಿತು. ಇದರೊಂದಿಗೆ ಸಿಎಸ್ಕೆ ವಿರುದ್ಧ ಅತ್ಯಧಿಕ ಸ್ಕೋರ್ ಇದಾಗಿದೆ. ಐಪಿಎಲ್ ಇತಿಹಾಸದಲ್ಲಿ ಜಿಟಿ ತಂಡದ 2ನೇ ಬೃಹತ್ ಸ್ಕೋರ್ ಆಗಿದೆ.