ಚೊಚ್ಚಲ ಐಪಿಎಲ್ ಸೆಂಚುರಿ ಸಿಡಿಸಿದ ಸಾಯಿ ಸುದರ್ಶನ್; ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಉಡೀಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಚೊಚ್ಚಲ ಐಪಿಎಲ್ ಸೆಂಚುರಿ ಸಿಡಿಸಿದ ಸಾಯಿ ಸುದರ್ಶನ್; ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಉಡೀಸ್

ಚೊಚ್ಚಲ ಐಪಿಎಲ್ ಸೆಂಚುರಿ ಸಿಡಿಸಿದ ಸಾಯಿ ಸುದರ್ಶನ್; ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಉಡೀಸ್

Sai Sudharsan : ಐಪಿಎಲ್​ನಲ್ಲಿ ಚೊಚ್ಚಲ ಶತಕವನ್ನು ದಾಖಲಿಸಿದ ಸಾಯಿ ಸುದರ್ಶನ್, ಶ್ರೀಮಂತ ಲೀಗ್​ ಇತಿಹಾಸದಲ್ಲಿ ವೇಗವಾಗಿ 1000 ರನ್ ಕಲೆ ಹಾಕಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಚೊಚ್ಚಲ ಐಪಿಎಲ್ ಸೆಂಚುರಿ ಸಿಡಿಸಿದ ಸಾಯಿ ಸುದರ್ಶನ್; ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಉಡೀಸ್
ಚೊಚ್ಚಲ ಐಪಿಎಲ್ ಸೆಂಚುರಿ ಸಿಡಿಸಿದ ಸಾಯಿ ಸುದರ್ಶನ್; ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಉಡೀಸ್

ನಿರ್ಣಾಯಕ ಪಂದ್ಯದಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ತಂಡದ ಎಡಗೈ ಬ್ಯಾಟರ್​ ಸಾಯಿ ಸುದರ್ಶನ್ (Sai Sudharsan)​ ಐಪಿಎಲ್​ನಲ್ಲಿ ಚೊಚ್ಚಲ ಶತಕ ದಾಖಲಿಸಿದ್ದಾರೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ (GT vs CSK) ವಿರುದ್ಧದ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ 100 ರನ್ ಪೂರೈಸಿ ಹಲವು ದಾಖಲೆ ನಿರ್ಮಿಸಿದ್ದಾರೆ. ಸಚಿನ್ ತೆಂಡೂಲ್ಕರ್ (Sachin Tendulkar) ರೆಕಾರ್ಡ್ ಅನ್ನೂ ಪುಡಿಗಟ್ಟಿದ್ದಾರೆ.

ಟಾಸ್ ಮೊದಲು ಬ್ಯಾಟಿಂಗ್ ನಡೆಸಿದ ಜಿಟಿ, ಸ್ಫೋಟಕ ಆರಂಭ ಪಡೆಯಿತು. ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್​ಗೆ ದಾಖಲೆಯ 210 ರನ್​ ಕಲೆ ಹಾಕಿದರು. ಸಾಯಿ ಸುದರ್ಶನ್ ಜೊತೆಗೆ ಶುಭ್ಮನ್ ಗಿಲ್ ಸಹ ಐಪಿಎಲ್​ನಲ್ಲಿ 4ನೇ ಶತಕ ಸಿಡಿಸಿದರು. ಗಿಲ್ ಕೂಡ 50 ಎಸೆತಗಳಲ್ಲೇ ನೂರರ ಗಡಿ ದಾಟಿದ್ದಾರೆ. ಗುಜರಾತ್ ಟೈಟಾನ್ಸ್ ಪರ ಶತಕ ಸಿಡಿಸಿದ ಎರಡನೇ ಆಟಗಾರ ಎನಿಸಿದ್ದಾರೆ.

ಸಾಯಿ ಸುದರ್ಶನ್ ಚೊಚ್ಚಲ ಐಪಿಎಲ್ ಶತಕ

ತಮಿಳುನಾಡು ಕ್ರಿಕೆಟಿಗ ಸಾಯಿ ಸುದರ್ಶನ್​ ಐಪಿಎಲ್​ನಲ್ಲಿ ಮೊದಲ ಸೆಂಚುರಿಯನ್ನು ಪೂರ್ಣಗೊಳಿಸಿದರು. ಗಿಲ್ ಜೊತೆಗೆ 210 ರನ್​ಗಳ ಪಾಲುದಾರಿಕೆ ನೀಡಿದ ಎಡಗೈ ಬ್ಯಾಟರ್​, 51 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್​ ಸಹಿತ 10 ರನ್ ಗಳಿಸಿ ತುಷಾರ್​ ದೇಶಪಾಂಡೆ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ಸ್ಟ್ರೈಕ್​ರೇಟ್ 201.96.

ಸಚಿನ್ ದಾಖಲೆ ಮುರಿದ ಸಾಯಿ ಸುದರ್ಶನ್

ಶತಕ ಸಿಡಿಸಿದ ಸಾಯಿ ಸುದರ್ಶನ್​, ಇದೇ ವೇಳೆ ಐಪಿಎಲ್​ನಲ್ಲಿ 1000 ರನ್ ಪೂರೈಸಿದ್ದಾರೆ. ಇದರೊಂದಿಗೆ 22ರ ಹರೆಯದ ಆಟಗಾರ ಐಪಿಎಲ್ ಇತಿಹಾಸದಲ್ಲಿ 1,000 ರನ್ ಗಳಿಸಿದ ಅತ್ಯಂತ ವೇಗದ ಭಾರತೀಯ ಮತ್ತು ಒಟ್ಟಾರೆ ಜಂಟಿ 3ನೇ ಕ್ರಿಕೆಟಿಗ ಎನಿಸಿದ್ದಾರೆ. ಸಚಿನ್ ಮತ್ತು ಋತುರಾಜ್ ಗಾಯಕ್ವಾಡ್ 31 ಇನ್ನಿಂಗ್ಸ್‌ಗಳಲ್ಲಿ 1,000 ರನ್​ಗಳಿಸಿದ್ದರೆ, ಸಾಯಿ 25 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.

ಒಂದೇ ಇನ್ನಿಂಗ್ಸ್​​ನಲ್ಲಿ ಇಬ್ಬರು ಶತಕ

ಐಪಿಎಲ್​ನಲ್ಲಿ ಒಂದೇ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ ಮೂರನೇ ಜೋಡಿ ಎಂಬ ಹೆಗ್ಗಳಿಕೆಗೆ ಸಾಯಿ ಸುದರ್ಶನ್ ಮತ್ತು ಶುಭ್ನನ್ ಗಿಲ್ ಪಾತ್ರರಾಗಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್ ಗುಜರಾತ್ ಲಯನ್ಸ್ ವಿರುದ್ಧ ಶತಕ ಸಿಡಿಸಿ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು. 2019ರಲ್ಲಿ ಎಸ್​​ಆರ್​​ಹೆಚ್​ ಪರ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್​​ಸ್ಟೋ ಆರ್​ಸಿಬಿ ವಿರುದ್ಧ ಶತಕ ಸಿಡಿಸಿದ್ದರು.

ಆರೆಂಜ್ ಕ್ಯಾಪ್ ರೇಸ್​​ಗಿಳಿದ ಸುದರ್ಶನ್

ಸುದರ್ಶನ್​ ಪ್ರಸ್ತುತ ಆರೆಂಜ್​ ಕ್ಯಾಪ್​​ ರೇಸ್​ಗೆ ಇಳಿದಿದ್ದಾರೆ. ಈವರೆಗೂ ಆಡಿರುವ 12 ಪಂದ್ಯಗಳಲ್ಲಿ 47.91ರ ಬ್ಯಾಟಿಂಗ್ ಸರಾಸರಿಯಲ್ಲಿ 527 ರನ್ ಗಳಿಸಿದ್ದಾರೆ. ಸ್ಟ್ರೇಕ್​ರೇಟ್​ 141.29. ಅರ್ಧಶತಕ 2, ಶತಕ 1. ಪ್ರಸಕ್ತ ಐಪಿಎಲ್​ನಲ್ಲಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ (634) ಅಗ್ರಸ್ಥಾನದಲ್ಲಿದ್ದರೆ, ಋತುರಾಜ್ ಗಾಯಕ್ವಾಡ್ (541), ಟ್ರಾವಿಸ್ ಹೆಡ್ (533) ಕ್ರಮವಾಗಿ 2, 3ನೇ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಅತ್ಯಧಿಕ ಜೊತೆಯಾಟ (ಯಾವುದೇ ವಿಕೆಟ್‌)

  • 229 ರನ್ - ಎಬಿ ಡಿವಿಲಿಯರ್ಸ್ & ಕೊಹ್ಲಿ vs ಗುಜರಾತ್ ಲಯನ್ಸ್, ಬೆಂಗಳೂರು, 2016 (2ನೇ ವಿಕೆಟ್)
  • 215* ರನ್ - ಎಬಿ ಡಿವಿಲಿಯರ್ಸ್ & ಕೊಹ್ಲಿ vs ಮುಂಬೈ ಇಂಡಿಯನ್ಸ್, ವಾಂಖೆಡೆ, 2015 (2ನೇ ವಿಕೆಟ್)
  • 210* ರನ್ - ಕ್ಯೂ ಡಿ ಕಾಕ್ & ಕೆಎಲ್ ರಾಹುಲ್ vs ಕೆಕೆಆರ್, ಡಿವೈ ಪಾಟೀಲ್ , 2022 (ಮೊದಲನೇ ವಿಕೆಟ್)
  • 210 ರನ್ - ಶುಭ್ಮನ್ ಗಿಲ್ & ಸಾಯಿ ಸುದರ್ಶನ್ vs ಸಿಎಸ್‌ಕೆ, ಅಹಮದಾಬಾದ್, 2024 (ಮೊದಲನೇ ವಿಕೆಟ್) ಹೊಸ ಸೇರ್ಪಡೆ
  • 206 ರನ್ - ಗಿಲ್‌ಕ್ರಿಸ್ಟ್ & ಮಾರ್ಷ್ vs ಆರ್​​ಸಿಬಿ, ಧರ್ಮಶಾಲಾ, 2011 (2ನೇ ವಿಕೆಟ್)
  • 204* ರನ್ - ಕ್ರಿಸ್​ಗೇಲ್ ಗೇಲ್ & ವಿರಾಟ್ ಕೊಹ್ಲಿ vs ಡಿಸಿ, ದೆಹಲಿ, 2012 (2ನೇ ವಿಕೆಟ್)

Whats_app_banner