Mount Bromo: ಉರಿಯುತ್ತಿರುವ ಜ್ವಾಲಾಮುಖಿಯನ್ನು ಆರಾಧಿಸುತ್ತಾರೆ ಈ ದೇಶದ ಹಿಂದುಗಳು; ಇದು ಬ್ರಹ್ಮದೇವರ ಪೂಜೆ ಎಂಬುದು ಅವರ ನಂಬಿಕೆ
Mount Bromo Volcano ceremony: ಇಂಡೋನೇಷ್ಯಾದಲ್ಲಿರುವ ಸಕ್ರಿಯ ಜ್ವಾಲಾಮುಖಿ ಮೌಂಟ್ ಬ್ರೋಮೋ. ಬ್ರೋಮೋ ಎಂದರೆ ಬ್ರಹ್ಮ. ಅಂದರೆ ಈ ಜ್ವಾಲಾಮುಖಿ ಪರ್ವತದ ಹೆಸರು ಬ್ರಹ್ಮ ಪರ್ವತ. ಇಲ್ಲಿ ವಾರ್ಷಿಕ ಪೂಜಾ ಉತ್ಸವ ನಡೆಯುತ್ತದೆ. ಹಿಂದುಗಳು ಪ್ರತಿವರ್ಷ ಬ್ರಹ್ಮದೇವರನ್ನು ಪೂಜಿಸಲು ಈ ಜ್ವಾಲಾಮುಖಿ ಬಳಿ ಬರುವುದು ವಾಡಿಕೆ. ಈ ವರ್ಷ ಜೂ.5ರಂದು ಇದು ಸಂಪನ್ನವಾಗಿದೆ.
ಭಾರತವು ಅತಿ ಹೆಚ್ಚು ಹಿಂದು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿರಬಹುದು. ಆದರೆ ಇಂಡೋನೇಷ್ಯಾದ ಜನಜೀವನದಲ್ಲಿ ಹಿಂದು ಧಾರ್ಮಿಕ ಸಂಕೇತಗಳನ್ನು ಹೆಚ್ಚು ಬಳಕೆಯಲ್ಲಿದೆ ಮತ್ತು ಮಿಳಿತವಾಗಿದೆ. ಇಲ್ಲಿನ ನೋಟುಗಳ ಮೇಲೆ ಗಣೇಶನ ಚಿತ್ರವನ್ನೂ ಮುದ್ರಿಸಲಾಗಿದೆ. ಇಂಡೋನೇಷ್ಯಾದಲ್ಲಿ ಬ್ರಹ್ಮದೇವನ ಹೆಸರಿನ ಪರ್ವತವಿದೆ. ಜಾವಾ ಭಾಷೆಯಲ್ಲಿ ಇದನ್ನು ಬ್ರೋಮೋ ಎಂದು ಕರೆಯಲಾಗುತ್ತದೆ. ಇಲ್ಲಿ ಸಕ್ರಿಯ ಜ್ವಾಲಾಮುಖಿ ಇದೆ.
ಪ್ರತಿ ವರ್ಷ ಸಾವಿರಾರು ಜನರು ಬ್ರಹ್ಮ ಮತ್ತು ಗಣೇಶನನ್ನು ಪೂಜಿಸಲು ಇಲ್ಲಿಗೆ ಬರುತ್ತಾರೆ. ಈ ಸಕ್ರಿಯ ಜ್ವಾಲಾಮುಖಿಯಲ್ಲಿ ಬ್ರಹ್ಮ ದೇವರು ನೆಲೆಸಿದ್ದಾನೆ ಎಂಬುದು ಇಲ್ಲಿನ ಹಿಂದುಗಳ ನಂಬಿಕೆ. ಈ ವರ್ಷ ಇಲ್ಲಿ ಜೂನ್ 5ರಂದು ಬ್ರಹ್ಮದೇವನ ಪೂಜೆ, ಉತ್ಸವ ನಡೆಯಿತು. ತೆಂಗರ್ ಎಂಬ ಉಪ ಸಮುದಾಯದ ಜನರು ಈ ರೀತಿ ಪೂಜೆ ಪುನಸ್ಕಾರಗಳನ್ನು ನಡೆಸುತ್ತಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇಂಡೋನೇಷ್ಯಾದಲ್ಲಿ ಇನ್ನೂ 130 ಸಕ್ರಿಯ ಜ್ವಾಲಾಮುಖಿಗಳಿವೆ. ಬ್ರೋಮಾ ಪರ್ವತ 7000 ಸಾವಿರ ಅಡಿ ಎತ್ತರವಿದೆ. ಜನರ ನಂಬಿಕೆಯ ಎದುರು ಈ ಎತ್ತರ ಏನೂ ಅಲ್ಲ. ಕಣ್ಣುಮುಚ್ಚಿ ಹತ್ತಿಬಿಡುತ್ತಾರೆ. ಕೊರೊನಾ ಅವಧಿಯಲ್ಲಿ ಇಲ್ಲಿಗೆ ಹೋಗಲು ಜನರಿಗೆ ಅವಕಾಶವಿರಲಿಲ್ಲ. ಆಗಲೂ ಕೆಲವು ಅರ್ಚಕರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದರು. ಅಗ್ನಿಪರ್ವತದ ಬಳಿ ಗಣೇಶನ ವಿಗ್ರಹವಿದೆ. ಈ ಭಗವಾನ್ ಗಣೇಶನು ಈ ಜ್ವಾಲಾಮುಖಿಯನ್ನು ವಿನಾಶವನ್ನು ಸೃಷ್ಟಿಸುವುದನ್ನು ತಡೆಯುತ್ತಾನೆ ಎಂದು ಈ ಜನರು ನಂಬುತ್ತಾರೆ. ಸ್ವಲ್ಪ ದೂರದಲ್ಲಿ ಬ್ರಹ್ಮದೇವನ ಚಿಕ್ಕ ದೇವಾಲಯವೂ ಇದೆ.
ಪ್ರವಾಸೋದ್ಯಮಕ್ಕೆ ಹೆಸರುವಾಸಿ ಮೌಂಟ್ ಬ್ರೋಮೋ
ಇದು ಪರ್ವತ ಪ್ರವಾಸೋದ್ಯಮಕ್ಕೂ ಹೆಸರುವಾಸಿ. ಈ ಮೌಂಟ್ ಬ್ರೋಮೋ ಪರ್ವತದ ಸುತ್ತಲೂ ಸುಮಾರು 50 ಹಳ್ಳಿಗಳಿವೆ. ಅಲ್ಲಿ ದೊಡ್ಡ ಸಂಖ್ಯೆಯ ಹಿಂದು ಸಮುದಾಯ ವಾಸಿಸುತ್ತಿದೆ. ಹತ್ತಿರದ ಹಳ್ಳಿಯ ಹೆಸರು ಕೆಮೊರೊ ಲಾವಾಂಗ್. ಅವರು ತಮ್ಮನ್ನು ಮಜಾಪಾಹಿತ್ ಆಡಳಿತಗಾರನ ವಂಶಸ್ಥರು ಎಂದು ಪರಿಗಣಿಸುತ್ತಾರೆ.
ಪ್ರತಿ ವರ್ಷ ಇಲ್ಲಿ ಆಚರಿಸಲಾಗುವ ಈ ಹಬ್ಬವನ್ನು 'ಯಾದ್ನ್ಯಾ ಕಸದ' (Yadnya Kasada festival) ಎಂದು ಕರೆಯಲಾಗುತ್ತದೆ. ಈ ಸಂಪ್ರದಾಯವು 500 ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ. 2016ರಲ್ಲಿಯೂ ಜ್ವಾಲಾಮುಖಿ ಸ್ಫೋಟಗಳು ಸಂಭವಿಸಿದ್ದರಿಂದ ಇಲ್ಲಿಗೆ ಹೋಗಲು ಸರ್ಕಾರ ಅವಕಾಶ ನೀಡಿರಲಿಲ್ಲ. ಈಗ ಕೇವಲ 15 ಪುರೋಹಿತರನ್ನು ಇಲ್ಲಿಗೆ ಕಳುಹಿಸಲಾಗಿದೆ. ಆದರೆ ಅವರ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪೂಜೆಗೆ ಆಗಮಿಸಿದರು.
ಈ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆ
ಹಬ್ಬದ 14 ನೇ ದಿನದಂದು ಹೆಚ್ಚಿನ ಸಂಖ್ಯೆಯ ಜನರು ಜ್ವಾಲಾಮುಖಿಯ ಬಾಯಿಯ ಬಳಿ ತಲುಪುತ್ತಾರೆ. ಅದರ ಕಿರಿದಾದ ಬಾಯಿಯ ಸಮೀಪ ದೊಡ್ಡ ಗುಂಪು ಕಂಡುಬರುತ್ತದೆ. ಜನರು ತಾವು ತಂದ ಆಹಾರ ಮತ್ತು ಪಾನೀಯಗಳನ್ನು, ಪ್ರಾಣಿಗಳನ್ನು ಜ್ವಾಲಾಮುಖಿಯ ಬಾಯಿಗೆ ಹಾಕುತ್ತಾರೆ. ಹೀಗೆ ಜನರು ತಮ್ಮ ವಸ್ತುಗಳನ್ನು ಈ ಜ್ವಾಲಾಮುಖಿಗೆ ಅರ್ಪಿಸುತ್ತಾರೆ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ. ಇಲ್ಲಿ ಹಿಂದುಗಳು ಬ್ರಹ್ಮ ದೇವರನ್ನು ಇತರ ದೇವರು ಮತ್ತು ದೇವತೆಗಳನ್ನೂ ಪೂಜಿಸುತ್ತಾರೆ.