Bengaluru News: ಕೆಎಸ್‌ಆರ್‌ಟಿಸಿ ವಾಹನ ಅಪಘಾತವಾದರೆ ಮೃತ ಪ್ರಯಾಣಿಕರ ಅವಲಂಬಿತರಿಗೆ ಸಿಗಲಿದೆ 10 ಲಕ್ಷ ರೂ ಪರಿಹಾರ; ಜನವರಿ 1ರಿಂದ ಜಾರಿಗೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ವಾಹನಗಳು ಅಪಘಾತಕ್ಕೀಡಾದರೆ ಮೃತ ಪ್ರಯಾಣಿಕರ ಅವಲಂಬಿತರಿಗೆ ನೀಡುವ ಪರಿಹಾರ ಮೊತ್ತವನ್ನು 10 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇದು ಜನವರಿ 1ರಿಂದ ಜಾರಿಗೆ ಬರಲಿದೆ. ಅಪಘಾತ ಪರಿಹಾರ ನಿಧಿಗೆ ಸಂಬಂಧಿಸಿ ಇನ್ನೂ ಕೆಲವು ಬದಲಾವಣೆಗಳು ಜನವರಿ 1ರಿಂದ ಜಾರಿಯಾಗಲಿದೆ. ಅವುಗಳ ವಿವರ ಇಲ್ಲಿದೆ.
(1 / 5)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳು ಅಪಘಾತಕ್ಕೆ ಈಡಾದ ಸಂದರ್ಭದಲ್ಲಿ ನಿಗಮದ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದವರು ಮೃತಪಟ್ಟರೆ, ಅವರ ಅವಲಂಬಿತರಿಗೆ ಈಗ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಈ ಪರಿಹಾರ ಮೊತ್ತವನ್ನು ಜನವರಿ 1ರಿಂದ ಅನ್ವಯವಾಗುವಂತೆ 10 ಲಕ್ಷ ರೂಪಾಯಿಗೆ ಏರಿಸಲು ಕೆಎಸ್‌ಆರ್‌ಟಿಸಿಯ ಅಪಘಾತ ಪರಿಹಾರ ನಿಧಿ ಟ್ರಸ್ಟ್‌ನ ಸಭೆ ತೀರ್ಮಾನಿಸಿದೆ.
(2 / 5)
ಕೆಎಸ್‌ಆರ್‌ಟಿಸಿ ಅಪಘಾತ ಪರಿಹಾರ ನಿಧಿ ಟ್ರಸ್ಟ್ ಈಗ ನೀಡುತ್ತಿರುವ ಮೊತ್ತ 3 ಲಕ್ಷ ರೂಪಾಯಿ ಆಗಿದ್ದು, ಇದನ್ನು 2017ರ ಮಾರ್ಚ್ 1ರಂದು ಪರಿಷ್ಕರಿಸಿ ಜಾರಿಗೆ ತರಲಾಗಿದೆ. ಆ ನಂತರ ಪರಿಷ್ಕರಣೆ ಆಗಿರಲಿಲ್ಲ. ಅಕ್ಟೋಬರ್ 31ರಂದು ನಡೆದ ಅಪಘಾತ ಪರಿಹಾರ ನಿಧಿ ಟ್ರಸ್ಟ್‌ನ ಸಭೆಯಲ್ಲಿ ಪರಿಹಾರ ಮೊತ್ತವನ್ನು 10 ಲಕ್ಷ ರೂಪಾಯಿಗೆ ಏರಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
(3 / 5)
ಅಪಘಾತವಾದ ಸಂದರ್ಭದಲ್ಲಿ ತತ್‌ಕ್ಷಣದ ಪರಿಹಾರವಾಗಿ ಸಂತ್ರಸ್ತರ ಅವಲಂಬಿತರಿಗೆ 25,000 ರೂಪಾಯಿ ನೀಡಲಾಗುತ್ತದೆ. ಈ ಮೊತ್ತವನ್ನು ಕೆಎಸ್‌ಆರ್‌ಟಿಸಿಯ ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪಾವತಿಸಬೇಕು. ಅವರಿಗೆ ಆ ಮೊತ್ತವನ್ನು ಟ್ರಸ್ಟ್ ಹಿಂದಿರುಗಿಸುತ್ತದೆ. ಉಳಿದ 9.75 ಲಕ್ಷ ರೂಪಾಯಿಯನ್ನು ಅಪಘಾತ ಪರಿಹಾರ ನಿಧಿ ಟ್ರಸ್ಟ್ ಬಳಿಕ ಸಂತ್ರಸ್ತರ ಅವಲಂಬಿತರಿಗೆ ನೀಡುತ್ತದೆ.
(4 / 5)
ಮೃತರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸಿರುವ ಕಾರಣ ಕೆಎಸ್‌ಆರ್‌ಟಿಸಿಯ ಅಪಘಾತ ಪರಿಹಾರ ನಿಧಿ ಟ್ರಸ್ಟ್‌ನ ಆದಾಯಕ್ಕಿಂತ ಖರ್ಚು ಅಧಿಕವಾಗಲಿದೆ. ಈ ಹೊರೆಯನ್ನು ನಿಭಾಯಿಸಲು ಪ್ರಯಾಣಿಕರಿಂದಲೇ ಪ್ರತಿ ಟಿಕೆಟ್‌ನಲ್ಲಿ ಪರಿಹಾರ ನಿಧಿಯ ರೂಪದಲ್ಲಿ ವಂತಿಕೆ ಪಡೆಯಲು ನಿಗಮ ನಿರ್ಧರಿಸಿದೆ.
ಇತರ ಗ್ಯಾಲರಿಗಳು