ಕನ್ನಡ ಸುದ್ದಿ  /  Sports  /  India Vs Australia Fourth Test Day Three Stumps Update

India vs Australia 4th Test: ಮೂರನೇ ದಿನ ಗಿಲ್-ವಿರಾಟ್ ಬೊಂಬಾಟ್ ಆಟ; ರನ್ ಹಿನ್ನಡೆಯಾದರೂ ಮೇಲುಗೈ ಸಾಧಿಸಿದ ಭಾರತ

ಸದ್ಯ ವಿರಾಟ್‌ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್‌ ಮುಂದುವರೆಸಿದ್ದರೆ. ವಿರಾಟ್‌ ಅಜೇಯ 59 ರನ್‌ ಗಳಿಸಿದರೆ, ಜಡೇಜಾ 16 ರನ್‌ ಗಳಿಸಿ ನಾಳೆಗೆ ಬ್ಯಾಟಿಂಗ್‌ ಮುಂದುವರೆಸಲಿದ್ದಾರೆ.

ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ (BCCI)

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿ ಆಡವಾಡುತ್ತಿದೆ. ಎರಡನೇ ದಿನದಾಟದ ಅಂತ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಪೇರಿಸಿದ್ದ ಬೃಹತ್‌ ಮೊತ್ತಕ್ಕೆ ಪ್ರತಿಯಾಗಿ ಭಾರತ ಕೂಡಾ ಉತ್ತಮ ಮೊತ್ತ ಕಲೆ ಹಾಕುವತ್ತ ಮುನ್ನುಗ್ಗಿದೆ. ಸದ್ಯ ಮೂರನೇ ದಿನದಾಟದ ಅಂತ್ಯದ ವೇಳೆಗೆ ಭಾರತವು ಮೂರು ವಿಕೆಟ್ ಕಳೆದುಕೊಂಡು 289 ರನ್‌ ಗಳಿಸಿದೆ. ಅಲ್ಲದೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದ ಅಂತ್ಯದ ವೇಳೆಗೆ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 480 ರನ್‌ಗಳಿಗೆ ಆಲೌಟ್ ಆಯ್ತು. ಶುಕ್ರವಾರದ ಅಂತಿಮ ಸೆಷನ್‌ನಲ್ಲಿ ಹತ್ತು ಓವರ್‌ಗಳ ಕಾಲ ಬ್ಯಾಟಿಂಗ್‌ ಮಾಡಿದ್ದ ಭಾರತ, ವಿಕೆಟ್‌ ನಷ್ಟವಿಲ್ಲದೆ 36 ರನ್‌ ಗಳಿಸಿತ್ತು. ಇಂದು ಬ್ಯಾಟಿಂಗ್‌ ಆರಂಭಿಸಿದ ಭಾರತವು, ಮೊದಲ ಸೆಷನ್‌ನಲ್ಲಿ ನಾಯಕ ರೋಹಿತ್ ಶರ್ಮಾ(35) ವಿಕೆಟ್‌ ಅನ್ನು ಬೇಗನೆ ಕಳೆದುಕೊಂಡಿತು. ಆದರೂ, ಆಸೀಸ್ ಬ್ಯಾಟರ್‌ಗಳ ವಿರುದ್ಧ ಆರಂಭಿಕ ಆಟಗಾರ ಆಕ್ರಮಣಕಾರಿ ಆಟ ಮುಂದುವರೆಸಿದರು. 89 ಎಸೆತಗಳಲ್ಲಿ ಅರ್ಧಶತಕ ತಲುಪಿದ ಗಿಲ್‌, ಪೂಜಾರ ಜೊತೆಗೆ ಶತಕದ ಜೊತೆಯಾಟವಾಡಿದರು.

194 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಶುಬ್ಮನ್ ಮೂರಂಕಿ ಮೊತ್ತ ತಲುಪಿದರು. ಅಂತಿಮವಾಗಿ 235 ಎಸೆತಗಳಲ್ಲಿ 128 ರನ್‌ ಗಳಿಸಿದ್ದ ಅವರು, ಲಿಯಾನ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಅದಕ್ಕೂ ಮುನ್ನ ಭಾರತದ ಮೊತ್ತ 187 ಆಗುವ ವೇಳೆಗೆ 42 ರನ್‌ ಗಳಿಸಿದ್ದ ಚೇತೇಶ್ವರ ಪೂಜಾರಾ ಕೂಡ್‌ ಲೆಗ್‌ ಬಿಫೋರ್‌ ವಿಕೆಟ್‌ ಆಗಿ ಔಟಾದರು.

ಸದ್ಯ ವಿರಾಟ್‌ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್‌ ಮುಂದುವರೆಸಿದ್ದರೆ. ವಿರಾಟ್‌ ಅಜೇಯ 59 ರನ್‌ ಗಳಿಸಿದರೆ, ಜಡೇಜಾ 16 ರನ್‌ ಗಳಿಸಿ ನಾಳೆಗೆ ಬ್ಯಾಟಿಂಗ್‌ ಮುಂದುವರೆಸಲಿದ್ದಾರೆ.

ದಿನದ ಪ್ರಮುಖ ಹೈಲೈಟ್

ಮೂರನೇ ದಿನವಾದ ಇಂದು ಕೆಲವೊಂದು ಮೈಲಿಗಲ್ಲು ಸೃಷ್ಟಿಯಾಯ್ತು. ಶುಬ್ಮನ್ ಗಿಲ್ ಅವರು ತಮ್ಮ ಎರಡನೇ ಟೆಸ್ಟ್ ಶತಕ ಗಳಿಸಿದರು.‌ ಇದು ಭಾರತದ ನೆಲದಲ್ಲಿ ಅವರ ಮೊದಲ ಟೆಸ್ಟ್ ಶತಕ ಎಂಬುದು ವಿಶೇಷ. ಅಲ್ಲದೆ ಈ ಒಂದೇ ವರ್ಷದಲ್ಲಿ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಅವರು ಶತಕದ ಸಾಧನೆ ಮಾಡಿದ್ದಾರೆ.‌ ಗಿಲ್ ಮತ್ತು ಪೂಜಾರ ಎರಡನೇ ವಿಕೆಟ್‌ಗೆ 113 ರನ್‌ಗಳ ಜೊತೆಯಾಟವಾಡಿದರು. ಭಾರತದ ಇನ್ನಿಂಗ್ಸ್‌ನಲ್ಲಿ ರನ್‌ ಹೆಚ್ಚಿಸಲು ಈ ಪಾಲುದಾರಿಕೆ ಪ್ರಮುಖ ಪಾತ್ರ ವಹಿಸಿತು.

ಕೊಹ್ಲಿ 14 ತಿಂಗಳ ನಂತರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದರು. ಅವರು ಕೊನೆಯದಾಗಿ 2022ರ ಜನವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫಿಫ್ಟಿ ದಾಖಲಿಸಿದ್ದರು. ಮತ್ತೊಂದೆಡೆ ವಿರಾಟ್ ಕೊಹ್ಲಿ ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್‌ಗಳ ಗಡಿಯನ್ನು ತಲುಪಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಮೂರನೇ ದಿನದಾಟದಲ್ಲಿ ಭಾರತವು ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಒಟ್ಟು 253 ರನ್ ಗಳಿಸಿತು. ಭಾರತವು ಟೆಸ್ಟ್‌ ಕ್ರಿಕೆಟ್‌ಗೆ ಸರಿಹೊಂದುವಂತೆ ಸಾವಧಾನವದಿಂದ ಬ್ಯಾಟಿಂಗ್ ನಡೆಸಿತು. ಆದರೆ ರನ್‌ ವೇಗ ತುಸು ಹೆಚ್ಚಿದ್ದರೆ, ಪಂದ್ಯ ಇನ್ನಷ್ಟು ಆಸಕ್ತಿದಾಯಕವಾಗಿರುತ್ತಿತ್ತು. ಮೂರನೇ ದಿನದಾಟದ ಮುಕ್ತಾಯದ ವೇಳೆಗೆ ಭಾರತ ಇನ್ನೂ 191 ರನ್‌ಗಳ ಹಿನ್ನಡೆಯಲ್ಲಿದೆ. ಇನ್ನು ಎರಡು ದಿನಗಳ ಆಟ ಮಾತ್ರವೇ ಬಾಕಿ ಉಳಿದಿದ್ದು, ಭಾರತದ ಕೈಯಲ್ಲಿ ಇನ್ನೂ ಏಳು ವಿಕೆಟ್‌ಗಳಿವೆ. ಹೀಗಾಗಿ ನಾಲ್ಕನೇ ದಿನದಾಟದ ವೇಳೆ ಭಾರತ ಉತ್ತಮ ರನ್‌ ಕಲೆ ಹಾಕುವ ವಿಶ್ವಾಸದಲ್ಲಿದೆ. ಆದರೆ, ಈ ಪಂದ್ಯವು ಡ್ರಾ ಸಾಧಿಸುವ ಸಂಭಾವ್ಯತೆ ಹೆಚ್ಚಿದೆ.