ಕನ್ನಡ ಸುದ್ದಿ  /  ಕ್ರೀಡೆ  /  India Vs Australia 1st Test: ಮೊದಲ ಟೆಸ್ಟ್‌ನಿಂದ ಅಯ್ಯರ್ ಹೊರಕ್ಕೆ! ತಂಡ ಸೇರ್ತಾರಾ ಅಗ್ರ ಶ್ರೇಯಾಂಕಿತ ಆಟಗಾರ?

India vs Australia 1st Test: ಮೊದಲ ಟೆಸ್ಟ್‌ನಿಂದ ಅಯ್ಯರ್ ಹೊರಕ್ಕೆ! ತಂಡ ಸೇರ್ತಾರಾ ಅಗ್ರ ಶ್ರೇಯಾಂಕಿತ ಆಟಗಾರ?

“ಅವರ ಗಾಯವು ನಿರೀಕ್ಷೆಯಂತೆ ವಾಸಿಯಾಗಿಲ್ಲ. ಹೀಗಾಗಿ ಅವರು ಮತ್ತೆ ಕ್ರಿಕೆಟ್ ಆಡಲು ಕನಿಷ್ಠ ಎರಡು ವಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಖಂಡಿತವಾಗಿಯೂ ಮೊದಲ ಟೆಸ್ಟ್‌ಗೆ ಲಭ್ಯವಿರುವುದಿಲ್ಲ. ಎರಡನೇ ಟೆಸ್ಟ್‌ಗೆ ಅವರ ಲಭ್ಯತೆಯು ಅವರ ಫಿಟ್‌ನೆಸ್ ಮೇಲೆ ಅವಲಂಬಿಸಿದೆ,” ಎಂದು ಮೂಲಗಳು ತಿಳಿಸಿದೆ.

ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್ (AP)

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾಗೆ ಭಾರಿ ಹಿನ್ನಡೆಯಾಗಿದ್ದು, ಬೆನ್ನಿನ ಗಾಯದಿಂದ ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಆದರೆ, ಮುಂಬೈ ಬ್ಯಾಟರ್ ಎರಡನೇ ಟೆಸ್ಟ್‌ ಪಂದ್ಯದ ವೇಳೆಗೆ ಸಂಪೂರ್ಣ ಚೇತರಿಸಿಕೊಂಡು, ತಂಡಕ್ಕೆ ಮರಳುವ ಸಾಧ್ಯತೆಯಿದೆ.

ಟ್ರೆಂಡಿಂಗ್​ ಸುದ್ದಿ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದ ಅಯ್ಯರ್, ಆ ಬಳಿಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA)ಯಲ್ಲಿ ಪುನರ್ವಸತಿಗೆ ಒಳಗಾಗಿದ್ದಾರೆ. ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಅಯ್ಯರ್ ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಹೀಗಾಗಿ ಅವರು ಮತ್ತೆ ಕ್ರಿಕೆಟ್ ಆಡಲು ಎರಡು ವಾರಗಳ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.

“ಅವರ ಗಾಯವು ನಿರೀಕ್ಷೆಯಂತೆ ವಾಸಿಯಾಗಿಲ್ಲ. ಹೀಗಾಗಿ ಅವರು ಮತ್ತೆ ಕ್ರಿಕೆಟ್ ಆಡಲು ಕನಿಷ್ಠ ಎರಡು ವಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಖಂಡಿತವಾಗಿಯೂ ಮೊದಲ ಟೆಸ್ಟ್‌ಗೆ ಲಭ್ಯವಿರುವುದಿಲ್ಲ. ಎರಡನೇ ಟೆಸ್ಟ್‌ಗೆ ಅವರ ಲಭ್ಯತೆಯು ಅವರ ಫಿಟ್‌ನೆಸ್ ಮೇಲೆ ಅವಲಂಬಿಸಿದೆ,” ಎಂದು ಮೂಲವೊಂದು ಪತ್ರಿಕೆಗೆ ತಿಳಿಸಿದೆ.

ಬಾಂಗ್ಲಾದೇಶ ವಿರುದ್ಧದ ಭಾರತದ ಹಿಂದಿನ ಟೆಸ್ಟ್ ಸರಣಿಯಲ್ಲಿ, ಅಯ್ಯರ್ 101.00 ಸರಾಸರಿಯಲ್ಲಿ ಬ್ಯಾಟ್‌ ಬೀಸಿದ್ದರು. ಈವರೆಗೆ ಭಾರತದ ಪರ 7 ಟೆಸ್ಟ್‌ಗಳಲ್ಲಿ ಆಡಿರುವ 28 ವರ್ಷ ವಯಸ್ಸಿನ ಅಯ್ಯರ್‌, 56.73 ಸರಾಸರಿಯಲ್ಲಿ 624 ರನ್ ಗಳಿಸಿದ್ದಾರೆ. ಒಂದು ವೇಳೆ ಅಯ್ಯರ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ವಿಫಲರಾದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ಶುಬ್ಮನ್ ಗಿಲ್ ಮತ್ತು‌ ಸೂರ್ಯಕುಮಾರ್ ಯಾದವ್ ಸ್ಥಾನ ಗಿಟ್ಟಿಸಿಕೊಳ್ಳಲು ಮುಂಚೂಣಿಯಲ್ಲಿದ್ದಾರೆ. ಇವರಲ್ಲಿ ಸೂರ್ಯ ಟೆಸ್ಟ್‌ಗೆ ಇನ್ನೂ ಪದಾರ್ಪಣೆ ಮಾಡಿಲ್ಲ.

ಜಡ್ಡು ತಂಡಕ್ಕೆ ಬರ್ತಾರಾ?

ಈ ನಡುವೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅಭ್ಯಾಸದ ಭಾಗವಾಗಿ ರಣಜಿ ಟ್ರೋಫಿಯಲ್ಲಿ ಆಡಿದ ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜಾ, ಪ್ರಮುಖ ಟೂರ್ನಿಯಾಗಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡವನ್ನು ಸೇರಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

ಚೆನ್ನೈನಲ್ಲಿ ನಡೆದ ತಮಿಳುನಾಡು ವಿರುದ್ಧದ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಬೌಲಿಂಗ್ ದಾಳಿಯನ್ನು ಜಡೇಜಾ ಮುನ್ನಡೆಸಿದ್ದರು. ಕಳೆದ ವಾರ ನಡೆದ ರಣಜಿ ಟ್ರೋಫಿ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಸ್ಟಾರ್ ಆಲ್‌ರೌಂಡರ್ ಸುಮಾರು 42 ಓವರ್‌ಗಳನ್ನು ಬೌಲ್ ಮಾಡಿ ಏಳು ವಿಕೆಟ್‌ಗಳನ್ನು ಕಬಳಿಸಿದ್ದರು. ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ, ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿಲ್ಲ. ಸದ್ಯ ಆಸೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡಲು ಜಡ್ಡು ಸಿದ್ಧರಾಗಿದ್ದಾರೆ.

ಜಡೇಜಾ ಈ ವಾರ ಆಸ್ಟ್ರೇಲಿಯಾ ಮತ್ತು ಆತಿಥೇಯ ಭಾರತ ನಡುವಿನ ಬಾರ್ಡರ್ ಗವಾಸ್ಕರ್‌ ಟ್ರೋಫಿಯ ಮೊದಲನೇ ಟೆಸ್ಟ್‌ಗೂ ಮುಂಚಿತವಾಗಿ, ನಾಗ್ಪುರದಲ್ಲಿ ಭಾರತೀಯ ಟೆಸ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ESPNCricinfo ವರದಿ ತಿಳಿಸಿದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಮರಳಿದ ನಂತರ, ಜಡೇಜಾ ತಮ್ಮ ಅಂತಿಮ ಸುತ್ತಿನ ಫಿಟ್‌ನೆಸ್ ಪರೀಕ್ಷೆಯನ್ನು ಪೂರ್ಣಗೊಳಿಸಲಿದ್ದಾರೆ. 17 ಆಟಗಾರರ ತಂಡದಲ್ಲಿ ಜಡೇಜಾ ಅವರ ಆಯ್ಕೆಯು ಅವರ ಫಿಟ್ನೆಸ್ ಮೇಲೆ ಅವಲಂಬಿಸಿದೆ ಎಂದು ಬಿಸಿಸಿಐ ಈ ಹಿಂದೆಯೇ ತಿಳಿಸಿತ್ತು.

ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲನೇ ಟೆಸ್ಟ್ ಫೆಬ್ರವರಿ 9 ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ.‌ ಇಂದು ನಡೆಯಲಿರುವ ಕಿವೀಸ್‌ ವಿರುದ್ಧದ ಕೊನೆಯ ಟಿ20 ಪಂದ್ಯದ ಬಳಿಕ, ಭಾರತ ಟೆಸ್ಟ್‌ ಸರಣಿಗೆ ಸಿದ್ಧವಾಗಲಿದೆ.