ಕನ್ನಡ ಸುದ್ದಿ  /  ಕ್ರೀಡೆ  /  Taekwondo Premier League: ಐಪಿಎಲ್​ನಂತೆ ಬಂತು ಟೇಕ್ವಾಂಡೋ ಪ್ರೀಮಿಯರ್ ಲೀಗ್; ಬೆಂಗಳೂರು ನಿಂಜಾಸ್​ ತಂಡವೇ ಪ್ರಮುಖ ಆಕರ್ಷಣೆ

Taekwondo Premier League: ಐಪಿಎಲ್​ನಂತೆ ಬಂತು ಟೇಕ್ವಾಂಡೋ ಪ್ರೀಮಿಯರ್ ಲೀಗ್; ಬೆಂಗಳೂರು ನಿಂಜಾಸ್​ ತಂಡವೇ ಪ್ರಮುಖ ಆಕರ್ಷಣೆ

ಟೇಕ್ವಾಂಡೋ ಪ್ರೀಮಿಯರ್ ಲೀಗ್​​ನಲ್ಲಿ 4 ತಂಡಗಳನ್ನು ಮಹಿಳೆಯರೇ ಖರೀದಿಸಿರುವುದು ವಿಶೇಷ. ಬೆಂಗಳೂರು ನಿಂಜಾಸ್ ಸೇರಿ 8 ತಂಡಗಳ ನಡುವೆ ಸೆಣಸಾಟ ಜೂನ್ 22 ರಿಂದ ಆರಂಭಗೊಳ್ಳಲಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಜೂನ್​ 22ರಿಂದ ಟೇಕ್ವಾಂಡೋ ಪ್ರೀಮಿಯರ್ ಲೀಗ್ ಆರಂಭ
ಜೂನ್​ 22ರಿಂದ ಟೇಕ್ವಾಂಡೋ ಪ್ರೀಮಿಯರ್ ಲೀಗ್ ಆರಂಭ

ಕ್ರಿಕೆಟ್​ನಲ್ಲಿ ಇಂಡಿಯನ್​ ಪ್ರೀಮಿಯರ್ ಲೀಗ್​ ರೀತಿ ಇದೀಗ ಟೇಕ್ವಾಂಡೋ ಪ್ರೀಮಿಯರ್ ಲೀಗ್ (Taekwondo Premier League) ಕೂಡ ಶುರುವಾಗಲಿದೆ. ಲೀಗ್‌ನ ಉದ್ಘಾಟನಾ ಆವೃತ್ತಿಯು ಜೂನ್ 22 ರಿಂದ 26 ರವರೆಗೂ ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಹೈದರಾಬಾದ್​ನಲ್ಲಿ ನಡೆದ ‘ಮೀಟ್ ಆ್ಯಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಲೀಗ್‌ನ ಸಂಸ್ಥಾಪಕ ನಿರ್ದೇಶಕ ಡಾ. ವೆಂಕಟ ಕೆ. ಗಂಜಾಮ್ ಅವರು, ಫ್ರಾಂಚೈಸಿಗಳ ಅನಾವರಣ ಕಾರ್ಯಕ್ರಮದಲ್ಲಿ ತಂಡಗಳ ಮಾಲೀಕರು, ಮೆಂಟರ್‌ಗಳು ಹಾಗೂ ಕೋಚ್‌ಗಳ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಭಾರೀ ಜನಪ್ರಿಯತೆ ಹೊಂದಿರುವ ಕ್ರೀಡೆಯು ಜೂನ್​​ 22ರಿಂದ​​ ಹೊಸ ಯುಗ ಆರಂಭಗೊಳ್ಳಲಿದೆ. ಪುರುಷರ ಲೀಗ್‌ನ ಬಳಿಕ ಕತಾರ್‌ನ ದೋಹಾದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೂ ಲೀಗ್ ಆರಂಭಿಸಲಿದ್ದೇವೆ. ಇದರೊಂದಿಗೆ ಭಾರತದಲ್ಲಿ ವರ್ಷವಿಡೀ ನಡೆಯಲಿರುವ ಮೊದಲ ಲೀಗ್ ಆಗಿ ಹೊರಹೊಮ್ಮಲಿದೆ ಎಂದು ಡಾ. ವೆಂಕಟ ತಿಳಿಸಿದ್ದಾರೆ.

ಲೀಗ್‌ನ ಸಂಸ್ಥಾಪಕ ನಿರ್ದೇಶಕ ದುವ್ವರಿ ಗಣೇಶ್ ಮಾತನಾಡಿ, ‘ಪ್ರತಿ ತಂಡವು ನಾಯಕ ಸೇರಿದಂತೆ 5 ಸದಸ್ಯರನ್ನು ಒಳಗೊಂಡಿರುತ್ತದೆ. ಸ್ಪರ್ಧೆಯು ವೇಗ ಹಾಗೂ ರೋಚಕವಾಗಿರಲಿ ಎನ್ನುವ ಉದ್ದೇಶದಿಂದ 58.1-67.9 ಕೆ.ಜಿ ವಿಭಾಗಗಳಿಗೆ ಸೀಮಿತಗೊಳಿಸಲಾಗಿದೆ. ತಲಾ 1.30 ನಿಮಿಷಗಳ ಐದು ಸುತ್ತುಗಳಿರುತ್ತವೆ’ ಎಂದು ವಿವರಿಸಿದ್ದಾರೆ.

ಟಿಪಿಎಲ್‌ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಈ ಪೈಕಿ 4 ತಂಡಗಳನ್ನು ಮಹಿಳೆಯರು ಖರೀದಿಸಿರುವುದು ಗಮನಾರ್ಹ. ಈ ಲೀಗ್‌ನ ಸ್ಥಾಪಕ ನಿರ್ದೇಶಕರಾದ ನವನೀತಾ ಬಛು ಅವರು, ಭಾರತದ ಮೊದಲ ಮಹಿಳಾ ಟೇಕ್ವಾಂಡೋ ಟ್ರೈನರ್ ಎನ್ನುವುದು ಗಮನಾರ್ಹ ಸಂಗತಿ.

‘ಟೇಕ್ವಾಂಡೋ ಕೇವಲ ಒಂದು ಕ್ರೀಡೆಯಲ್ಲ. ಅದು ಮಹಿಳೆಯರ ಸ್ವಯಂ ರಕ್ಷಣಾ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುವಂತೆ ಮಾಡುತ್ತದೆ. ಟಿಪಿಎಲ್ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಲಿದೆ’ ಎಂದು ನವನೀತಾ ಹೇಳಿದರು.

ತಂಡಗಳು ಮತ್ತು ಅವುಗಳ ಮಾಲೀಕರು

  1. ರಾಣಾ ಹರ್ಯಾಣ ಹಂಟರ್ಸ್‌ ತಂಡಕ್ಕೆ 2013ರ ಮಿಸ್ ಏಷ್ಯಾ ಪೆಸಿಫಿಕ್ ವರ್ಲ್ಡ್ ಶೃಷ್ಟಿ ಮಾಲೀಕರು
  2. ಮಹಾರಾಷ್ಟ್ರ ಆ್ಯವೆಂಜರ್ಸ್‌ ತಂಡಕ್ಕೆ ರುಚಿತಾ ಮಿತ್ತಲ್ ಓನರ್ಸ್​
  3. ಬೆಂಗಳೂರು ನಿಂಜಾಸ್ ತಂಡಕ್ಕೆ ಶಿಲ್ಪಾ ಪಟೇಲ್ ಒಡತಿ
  4. ಚೆನ್ನೈ ಸ್ಟ್ರೈಕರ್ಸ್‌ ತಂಡಕ್ಕೆ ಇಶಾ ಪಟೇಲ್ ಮಾಲೀಕೆ
  5. ಡೆಲ್ಲಿ ವಾರಿಯರ್ಸ್‌ ತಂಡವನ್ನು ಗ್ಲೋಬಲ್ ಸ್ಪೋರ್ಟ್ಸ್ ಸಂಸ್ಥೆಯ ಒಡೆಯರು ಶ್ಯಾಮ್ ಪಟೇಲ್ ಖರೀದಿಸಿದ್ದಾರೆ.
  6. ಹೈದರಾಬಾದ್ ಗ್ಲೈಡರ್ಸ್‌ ತಂಡವನ್ನು ಐಮಾರ್ಕ್ ಡೆವಲಪರ್ಸ್‌ನ ಮಾಲೀಕ ಅಲ್ಲು ವೆಂಕಟ ರೆಡ್ಡಿ ಖರೀದಿ.
  7. ಗುಜರಾತ್ ಥಂಡರ್ಸ್‌ ತಂಡಕ್ಕೆ ವಿಜಯ್ ಕುಮಾರ್ ಭನ್ಸಾಲಿ ಮಾಲೀಕ.
  8. 2006ರಲ್ಲಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದ ಬಿಜಿತ್ ಗೊಗೊಯ್, ಅಸ್ಸಾಂ ಹೀರೋಸ್ ತಂಡದ ಮಾಲೀಕರು.

ಟೇಕ್ವಾಂಡೋ ಪ್ರೀಮಿಯರ್ ಲೀಗ್ ಎಂದರೇನು?

ದಕ್ಷಿಣ ಕೊರಿಯಾ ಮೂಲದ ಸಮರ ಕಲೆ ಟೇಕ್ವಾಂಡೋನಲ್ಲಿ ಸ್ಪರ್ಧಿಗಳು ಪರಸ್ಪರ ಒದೆಯುವ ಹಾಗೂ ಗುದ್ದುವ ಮೂಲಕ ಮೇಲುಗೈ ಸಾಧಿಸಲು ಯತ್ನಿಸಲಿದ್ದಾರೆ. ಒಲಿಂಪಿಕ್ ಕ್ರೀಡೆಯಾಗಿರುವ ಟೇಕ್ವಾಂಡೋವನ್ನು 200ಕ್ಕೂ ಹೆಚ್ಚು ದೇಶಗಳಲ್ಲಿ 2 ಕೋಟಿಗೂ ಹೆಚ್ಚು ಅಥ್ಲೀಟ್‌ಗಳು ಆಡುತ್ತಾರೆ. ಬಹುಮಾನ ಮೊತ್ತ 15 ಲಕ್ಷ ಇರಲಿದೆ.

ಟೇ - ಒದೆಯುವುದು

ಕ್ವಾನ್ - ಗುದ್ದುವುದು

ಭಾನುವಾರ ನಡೆದ ‘ಮೀಟ್ ಆ್ಯಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ಪೈಕಿ ಕೊರಿಯಾದ ಗೌರವಾನ್ವಿತ ಕೌನ್ಸಲ್ ಜನರಲ್ ಸುರೇಶ್ ಚುಕ್ಕಪಲ್ಲಿ, ಆಂಧ್ರಪ್ರದೇಶದ ಮಾಜಿ ಡಿಜಿ ಡಾ. ಸಿ.ಎನ್. ಗೋಪಿನಾಥ್ ರೆಡ್ಡಿ, ಮಿಸ್ ಏಷ್ಯಾ ಇಂಟರ್‌ನ್ಯಾಷನಲ್ ರಶ್ಮಿ ಠಾಕೂರ್ ಪ್ರಮುಖರು ಇದ್ದರು.