logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Brahma Temple: ಭಾರತದ ಖ್ಯಾತ ಬ್ರಹ್ಮನ ದೇವಸ್ಥಾನಗಳಿವು; ಭೂಲೋಕದಲ್ಲಿ ನಿನಗೆ ಪೂಜೆ ಇಲ್ಲದಿರಲಿ ಎಂದು ಸೃಷ್ಟಿಕರ್ತನನ್ನು ಶಪಿಸಿದ್ದು ಯಾರು?

Brahma Temple: ಭಾರತದ ಖ್ಯಾತ ಬ್ರಹ್ಮನ ದೇವಸ್ಥಾನಗಳಿವು; ಭೂಲೋಕದಲ್ಲಿ ನಿನಗೆ ಪೂಜೆ ಇಲ್ಲದಿರಲಿ ಎಂದು ಸೃಷ್ಟಿಕರ್ತನನ್ನು ಶಪಿಸಿದ್ದು ಯಾರು?

Rakshitha Sowmya HT Kannada

Apr 01, 2024 07:23 AM IST

ಭಾರತದಲ್ಲಿರು ಬ್ರಹ್ಮನ ದೇವಸ್ಥಾನಗಳು

  • Brahma Temples: ಶಿವ, ಗಣೇಶ, ರಾಮ, ವಿಷ್ಣು, ಶ್ರೀಕೃಷ್ಣ ಸೇರಿದಂತೆ ಅನೇಕ ಹಿಂದೂ ದೇವತೆಗಳಿಗೆ ಭಾರತದಲ್ಲಿ ಬಹಳಷ್ಟು ದೇವಾಲಯಗಳಿವೆ. ಆದರೆ ಸೃಷ್ಟಿಕರ್ತ ಬಹ್ಮನ ದೇವಸ್ಥಾನಗಳು ಬಹಳ ಕಡಿಮೆ.  ಭಾರತದಲ್ಲಿ ಖ್ಯಾತ ಬ್ರಹ್ಮನ ದೇವಾಲಯಗಳ ಬಗ್ಗೆ ಮಾಹಿತಿ ಇಲ್ಲಿದೆ. 

ಭಾರತದಲ್ಲಿರು ಬ್ರಹ್ಮನ ದೇವಸ್ಥಾನಗಳು
ಭಾರತದಲ್ಲಿರು ಬ್ರಹ್ಮನ ದೇವಸ್ಥಾನಗಳು (PC: Unsplash)

Brahma Temples: ತ್ರಿಮೂರ್ತಿಗಳಲ್ಲಿ ಬ್ರಹ್ಮನನ್ನು ಸೃಷ್ಟಿಕರ್ತ ಎಂದು ಉಲ್ಲೇಖಿಸಲಾಗಿದೆ. ಭಾರತದಲ್ಲಿ ಕೆಲವೊಂದು ದೇವತೆಗಳಿಗೆ ಅನೇಕ ದೇವಸ್ಥಾನಗಳಿವೆ. ಪ್ರತಿ ಊರಿನಲ್ಲೂ ಈ ದೇವರನ್ನು ಪೂಜಿಸಲಾಗುತ್ತದೆ. ಆದರೆ ಬ್ರಹ್ಮನಿಗೆ ದೇವಸ್ಥಾನಗಳು ಕಡಿಮೆ.  ಶಾಪ ನೀಡಿದ್ದರ ಫಲವಾಗಿ ಬ್ರಹ್ಮನಿಗೆ ದೇವಾಲಯಗಳು ಕಡಿಮೆ ಎಂದು ನಂಬಲಾಗಿದೆ.

ತಾಜಾ ಫೋಟೊಗಳು

ಮೇ 21 ರಿಂದ ಲಕ್ಷ್ಮೀ ನಾರಾಯಣ ಯೋಗ; ಈ 5 ರಾಶಿಯವರಿಗೆ ಇನ್ಮುಂದೆ ಸಂತೋಷವೇ ಎಲ್ಲ, ಸಮಸ್ಯೆಗೆ ಅವಕಾಶವೇ ಇಲ್ಲ

May 21, 2024 03:52 PM

ಮೇ ತಿಂಗಳ 2ನೇ ಪಂಚಕ ಯಾವಾಗ? ಈ ದಿನ ಯಾವುದೇ ಶುಭ ಕಾರ್ಯಗಳನ್ನು ಮಾಡುವಂತಿಲ್ಲ ಏಕೆ, ಜ್ಯೋತಿಷ್ಯಶಾಸ್ತ್ರ ಹೇಳುವುದೇನು?

May 21, 2024 11:48 AM

ಮೇ 19 ರಂದು ವೃಷಭ ರಾಶಿಗೆ ಶುಕ್ರನ ಸಂಚಾರ; ಈ ರಾಶಿಯವರಿಗೆ ಶುಕ್ರಾದಿತ್ಯ ಯೋಗ ತರಲಿದೆ ಸಕಲ ಸುಖ ಸಮೃದ್ಧಿ

May 19, 2024 01:38 PM

ವೃಷಭ ರಾಶಿಯಲ್ಲಿ ಬೃಹಸ್ಪತಿ ಅಸ್ತಂಗತ್ವ ಹಂತ; ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಗುರುಬಲ ಸಾಧ್ಯವಿಲ್ಲ

May 16, 2024 02:27 PM

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

May 14, 2024 08:48 AM

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

May 13, 2024 12:41 PM

ಬ್ರಹ್ಮನು ಒಮ್ಮೆ ಯಜ್ಞ ಮಾಡಲು ನಿರ್ಧರಿಸುತ್ತಾನೆ. ಆದರೆ ಪತ್ನಿ ಇಲ್ಲದೆ ಯಜ್ಞ ಮಾಡುವಂತಿರಲಿಲ್ಲ. ಏಕೆಂದರೆ ಆ ಸಮಯದಲ್ಲಿ ಬ್ರಹ್ಮನ ಪತ್ನಿ ಸಾವಿತ್ರಿ (ಸರಸ್ವತಿಯ ಮತ್ತೊಂದು ರೂಪ) ಯಜ್ಞದ ಸಮಯದಲ್ಲಿ ಇರುವುದಿಲ್ಲ. ಜನಜನಿತವಾಗಿರುವ ಮತ್ತೊಂದು ಕಥೆಯ ಪ್ರಕಾರ ಆ ಕ್ಷಣದಲ್ಲಿ ಬ್ರಹ್ಮನು ಯಜ್ಞ ಮಾಡಲೇಬೇಕಿದ್ದರಿಂದ ಗಾಯತ್ರಿಯನ್ನು ಮದುವೆ ಆಗಿ ಯಜ್ಞದಲ್ಲಿ ಪಾಲ್ಗೊಳ್ಳುತ್ತಾನೆ. ನಂತರ ಸಾವಿತ್ರಿಗೆ ವಿಚಾರ ತಿಳಿಯುತ್ತಿದೆ. ಇದರಿಂದ ಕೋಪಗೊಂಡ ಆಕೆ ನಿನಗೆ ಭೂಲೋಕದಲ್ಲಿ ಪೂಜೆ ಇಲ್ಲದಂತೆ ಆಗಲಿ ಎಂದು ಶಾಪ ನೀಡುತ್ತಾಳೆ. ಆದ್ದರಿಂದ ಬ್ರಹ್ಮನಿಗೆ ಎಲ್ಲಿಯೂ ಪೂಜೆ ಸಲ್ಲಿಸುವುದಿಲ್ಲ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇಷ್ಟಾದರೂ ಭಾರತದಲ್ಲಿ ಬ್ರಹ್ಮನ ದೇವಸ್ಥಾನಗಳಿವೆ.

ಬ್ರಹ್ಮ ದೇವಸ್ಥಾನ, ರಾಜಸ್ಥಾನ

ರಾಜಸ್ಥಾನ ಅಜ್ಮೀರ್‌ ಜಿಲ್ಲೆಯ ಪುಷ್ಕರ್‌ನಲ್ಲಿ ಬ್ರಹ್ಮ ದೇವಸ್ಥಾನವಿದೆ. ಭಾರತದಲ್ಲಿ ಜನರು ಹೆಚ್ಚು ಭೇಟಿ ನೀಡುವ ಬ್ರಹ್ಮನ ದೇವಾಲಯಗಳಲ್ಲಿ ಪುಷ್ಕರ್‌ ದೇವಸ್ಥಾನ ಪ್ರಮುಖವಾದುದು. ಅದರಲ್ಲೂ ಕಾರ್ತಿಕ ಮಾಸದಲ್ಲಿ ಭಕ್ತರು ಹೆಚ್ಚಾಗಿ ಈ ದೇವಾಲಯಕ್ಕೆ ಭೇಟಿ ನೀಡಿ ಇಲ್ಲಿನ ನದಿಯಲ್ಲಿ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬ್ರಹ್ಮನ ಕೈಯಲ್ಲಿದ್ದ ಕಮಲದ ಹೂ ಈ ಸ್ಥಳದಲ್ಲಿ ಬಿದ್ದಿದ್ದರಿಂದ ಈ ಸ್ಥಳಕ್ಕೆ ಪುಷ್ಕರ್‌ ಎಂದು ಹೆಸರು ಬಂತು ಎಂದು ನಂಬಲಾಗಿದೆ. ಈ ದೇವಾಲಯದಲ್ಲಿ ಬ್ರಹ್ಮನು ತನ್ನ ಇಬ್ಬರೂ ಪತ್ನಿಯಂದಿರಾದ ಸಾವಿತ್ರಿ ಹಾಗೂ ಗಾಯತ್ರಿ ಜೊತೆ ಕುಳಿತಿದ್ದಾನೆ.

ಅಸೋತ್ರ ಬ್ರಹ್ಮ ದೇವಸ್ಥಾನ, ರಾಜಸ್ಥಾನ

ರಾಜಸ್ಥಾನದ ಬರ್ಮೆರ್‌ ಜಿಲ್ಲೆಯಲ್ಲಿ ಅಸೊತ್ರ ಬ್ರಹ್ಮ ದೇವಸ್ಥಾನವಿದೆ. ಈ ಗ್ರಾಮದ ರಾಜಪುರೋಹಿತರು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಜೈಸ್ಮಲೇರ್‌ ಹಾಗೂ ಜೋಧ್‌ಪುರ್‌ ಕಲ್ಲುಗಳಿಂದ ದೇವಸ್ಥಾನವನ್ನು ಕಟ್ಟಲಾಗಿದೆ. ಬ್ರಹ್ಮನ ಮೂರ್ತಿಯನ್ನು ಅಮೃತಶಿಲೆಯಿಂದ ಕೆತ್ತಲಾಗಿದೆ. ಈ ದೇವಾಲಯಕ್ಕೆ ಬರುವ ಭಕ್ತರಿಗೆ ಇಲ್ಲಿ ಪ್ರತಿದಿನ ಅನ್ನ ಸಂತರ್ಪಣೆ ಮಾಡಲಾಗುತ್ತದೆ.

ಆದಿ ಬ್ರಹ್ಮ ದೇವಾಲಯ, ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ಖೋಖಾನ್‌ ಹಳ್ಳಿಯಲ್ಲಿ ಈ ದೇವಾಲಯವಿದೆ. ಕುಲು ಕಣಿವೆ ನಡುವೆ ಸ್ಥಾಪಿಸಲಾಗಿರುವ ಈ ದೇವಾಲಯಕ್ಕೆ ಕೂಡಾ ಪ್ರತಿದಿನ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ದೇವಾಲಯದ ಕಟ್ಟಡವನ್ನು ಕಲ್ಲು, ಮರಗಳನ್ನು ಬಳಸಿ ಪಗೋಡಾ ಶೈಲಿಯಲ್ಲಿ ಕಟ್ಟಲಾಗಿದೆ. ದೇವಸ್ಥಾನ ಶಂಕುವಿನಾಕಾರದ ಛಾವಣಿಗಳನ್ನು ಹೊಂದಿದೆ. ಇಲ್ಲಿ ಬ್ರಹ್ಮನ ಜೊತೆ ವಿಷ್ಣುವಿನ ಮೂರ್ತಿ ಕೂಡಾ ಇದೆ.

ಕುಂಭಕೋಣಂ ಬ್ರಹ್ಮ ದೇವಸ್ಥಾನ, ತಮಿಳುನಾಡು

ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿ ಬ್ರಹ್ಮನ ದೇವಾಲಯವಿದೆ. ಆದರೆ ಇಲ್ಲಿ ಪ್ರಮುಖವಾಗಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಒಮ್ಮೆ ಬ್ರಹ್ಮನಿಗೆ ತಾನು ರಚಿಸಿದ ಸೃಷ್ಟಿಯ ಬಗ್ಗೆ ಬಹಳ ಹೆಮ್ಮಯಾಗುತ್ತದೆ. ಶಿವ ಹಾಗೂ ವಿಷ್ಣುವಿಗಿಂತ ನಾನೇ ದೊಡ್ಡವನು ಎಂಬ ಭಾವನೆ ಉಂಟಾಗುತ್ತದೆ. ಬ್ರಹ್ಮನ ಅಹಂ ಇಳಿಸಲು ವಿಷ್ಣುವು ಭೂತವೊಂದನ್ನು ಸೃಷ್ಟಿಸುತ್ತಾನೆ. ಇದಕ್ಕೆ ಹೆದರಿದ ಬ್ರಹ್ಮನು ವಿಷ್ಣುವಿನ ಬಳಿ ಬಂದು ಕ್ಷಮೆ ಕೇಳುತ್ತಾನೆ. ಭೂಮಿಗೆ ಹೋಗಿ ತಪಸ್ಸು ಮಾಡುವಂತೆ ವಿಷ್ಣು ಹೇಳಿದಾಗ ಬ್ರಹ್ಮನು ಈ ಕುಂಭಕೋಣಂನನ್ನ ಆರಿಸಿಕೊಂಡಿದ್ದಾಗಿ ಪುರಾಣದಲ್ಲಿ ಕಥೆಯಿದೆ.

ಬ್ರಹ್ಮಪುರೀಶ್ವರ ದೇವಸ್ಥಾನ, ತಮಿಳುನಾಡು

ತಮಿಳುನಾಡಿನ ತಿರುಪತ್ತೂರ್‌ನಲ್ಲಿ ಬ್ರಹ್ಮಪುರೀಶ್ವರ ದೇವಸ್ಥಾನವಿದೆ. ಇದು ಶಿವನ ದೇವಾಲಯವಾಗಿದ್ದರೂ ಬ್ರಹ್ಮನೊಂದಿಗೆ ನಿಕಟ ಸಂಬಂಧವನ್ನೊಂದಿದೆ. ಈ ದೇವಾಲಯದ ಮುಂಭಾಗದಲ್ಲಿರುವ ನದಿಯಲ್ಲಿ ಗೊಂಬೆಯನ್ನು ಸೊಂಟಕ್ಕೆ ಕಟ್ಟಿಕೊಂಡು ಮುಳುಗಿ, ಪೂಜೆ ಸಲ್ಲಿಸಿದರೆ ಜನರ ಜೀವನ ಬದಲಾಗಲಿದೆ ಎಂಬ ನಂಬಿಕೆ ಇದೆ. ಪ್ರತಿ ವರ್ಷ ಮಾರ್ಚ್‌ ಏಪ್ರಿಲ್‌ ತಮಿಳು ತಿಂಗಳ ಪಂಗುನಿಯಲ್ಲಿ (ಮಾರ್ಚ್-ಏಪ್ರಿಲ್) ಮೂರು ದಿನಗಳ ಕಾಲ ಸೂರ್ಯನ ಬೆಳಕು 7 ದ್ವಾರಗಳನ್ನು ದಾಟಿ ನೇರವಾಗಿ ಲಿಂಗದ ಮೇಲೆ ಬೀಳುವುದು ಇಲ್ಲಿಯ ಪವಾಡ. ಶಿವನ ದೇವಸ್ಥಾನದ ಕಟ್ಟಡದ ಪಕ್ಕದಲ್ಲೇ ಕಮಲದ ಮೇಲೆ ಕುಳಿತಿರುವ ಧ್ಯಾನ ಭಂಗಿಯಲ್ಲಿರುವ ಬ್ರಹ್ಮನಿಗೆ ಪ್ರತ್ಯೇಕ ದೇವಾಲಯವಿದೆ.

ಬ್ರಹ್ಮ ಕರ್ಮಲಿ ಮಂದಿರ, ಗೋವಾ

ಗೋವಾದ ಪಣಜಿಯಲ್ಲಿ ಬ್ರಹ್ಮ ಕರ್ಮಲಿ ದೇವಸ್ಥಾನವಿದೆ. ಪಣಜಿಯಿಂದ ಸುಮಾರು 60 ಕಿಮೀ ದೂರದಲ್ಲಿದೆ. ದೇವಸ್ಥಾನವು ಅಷ್ಟು ಹಳೆಯದಲ್ಲದಿದ್ದರೂ ಇಲ್ಲಿನ ಬ್ರಹ್ಮ ವಿಗ್ರಹವು ಸುಮಾರು 11ನೇ ಶತಮಾನದಷ್ಟು ಹಳೆಯದಾಗಿದೆ. ದೇವಾಲಯದಲ್ಲಿರುವ ಬ್ರಹ್ಮನ ಕಪ್ಪು ಕಲ್ಲಿನ ಪ್ರತಿಮೆಯನ್ನು 20 ನೇ ಶತಮಾನದಲ್ಲಿ ಗೋವಾದ ಕ್ಯಾರಂಬೋಲಿಮ್‌ಗೆ ತರಲಾಯಿತು ಎನ್ನಲಾಗಿದೆ. ದೇವಸ್ಥಾನದ ಐತಿಹಾಸಿಕ ಪ್ರಾಮುಖ್ಯತೆ ಮತ್ತು ವಾಸ್ತುಶಿಲ್ಪದ ಸೌಂದರ್ಯವು ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ