Temples in Maharashtra: ಶನಿ ಸಿಂಗ್ನಾಪುರ್, ಯಮಾಯಿ ದೇವಿ, ಶಿರಡಿ ಸೇರಿದಂತೆ ಮಹಾರಾಷ್ಟ್ರದಲ್ಲಿರುವ 10 ಖ್ಯಾತ ದೇವಾಲಯಗಳಿವು
Temples in Maharashtra: ಶಿರಡಿ, ಶನಿ ಸಿಂಗ್ನಾಪುರ್, ತ್ರಯಂಬಕೇಶ್ವರ, ಯಮಾಯಿ ದೇವಿ ದೇವಾಲಯ ಸೇರಿದಂತೆ ಮಹಾರಾಷ್ಟ್ರದಲ್ಲಿ ಅನೇಕ ದೇವಾಲಯಗಳು ಖ್ಯಾತಿ ಪಡೆದಿವೆ. ನೀವು ಮಹಾರಾಷ್ಟ್ರ ದೇವಾಲಯ ಭೇಟಿಗೆ ಪ್ಲ್ಯಾನ್ ಮಾಡುತ್ತಿದ್ದಲ್ಲಿ ಒಮ್ಮೆಈ ದೇವಾಲಯಗಳಿಗೆ ಭೇಟಿ ಕೊಡಿ.
Temples in Maharashtra: ಕರ್ನಾಟಕದಂತೆ ದೇಶದ ಇತರ ರಾಜ್ಯಗಳಲ್ಲೂ ಸಾಕಷ್ಟು ದೇವಾಲಯಗಳು ಅದರ ವಿಶೇಷತೆಗೆ ಹೆಸರುವಾಸಿಯಾಗಿದೆ. ಅದೇ ರೀತಿ ಮಹಾರಾಷ್ಟ್ರವು ಅನೇಕ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸ್ಥಳಗಳಿಂದ ಕೂಡಿದೆ. ಶಿರಡಿ, ಸಿದ್ದಿವಿನಾಯಕ ದೇವಸ್ಥಾನ ಸೇರಿದಂತೆ ಮಹಾರಾಷ್ಟ್ರದಲ್ಲಿ ಸಾಕಷ್ಟು ದೇವಾಲಯಗಳಿಗೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.
ಶಿರಡಿ
ಶಿರಡಿಯು ಮುಂಬೈನಿಂದ 258 ಕಿ.ಮೀ ದೂರದಲ್ಲಿದೆ. ಶಿರಡಿ ಸಾಯಿಬಾಬಾ ದೇವಾಲಯವು ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಹೆಸರುವಾಸಿಯಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣದ ಭಕ್ತರು ಕೂಡಾ ಇಲ್ಲಿಗೆ ಪ್ರತಿದಿನ ಭೇಟಿ ನೀಡುತ್ತಾರೆ. ಸಾಯಿಬಾಬಾ ದರ್ಶನ ಪಡೆದು ಪುನೀತರಾಗುತ್ತಾರೆ. ಪ್ರತಿವರ್ಷ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಇಲ್ಲಿ ಮೆರವಣಿಗೆ ಕೂಡಾ ಮಾಡಲಾಗುತ್ತದೆ.
ಗಣಪತಿ ಪುಲೆ
ಮಹಾರಾಷ್ಟ್ರದ ಕೊಂಕಣ ತೀರದಲ್ಲಿರುವ ಗಣಪತಿಪುಲೆ ಯಾತ್ರಾಸ್ಥಳವು ಮುಂಬೈನಿಂದ ಸುಮಾರು 345 ಕಿಮೀ ದೂರದಲ್ಲಿದ್ದು ರತ್ನಗಿರಿ ಪಟ್ಟಣಕ್ಕೆ ಸಮೀಪದಲ್ಲಿದೆ. 400 ವರ್ಷಗಳಷ್ಟು ಹಳೆಯದಾದ ಗಣಪತಿ ದೇವಸ್ಥಾನವಾಗಿರುವುದರಿಂದ ಇದಕ್ಕೆ ಗಣಪತಿಪುಲೆ ಎಂದು ಹೆಸರಿಡಲು ಪ್ರಮುಖ ಕಾರಣ. ಈ ದೇವಾಲಯವು ಸಮುದ್ರ ತೀರದಲ್ಲಿ ನೆಲೆಗೊಂಡಿದೆ. ಇಲ್ಲಿನ ಪ್ರಶಾಂತ ವಾತಾವರಣವನ್ನು ಭಕ್ತರು ಬಹಳ ಇಷ್ಟಪಡುತ್ತಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿರುವ 6 ಪ್ರಮುಖ ಹಿಂದೂ ದೇವಾಲಯಗಳಿವು
ಶನಿ ಸಿಂಗ್ನಾಪುರ್
ಶನಿ ಸಿಂಗ್ನಾಪುರ್, ಶಿರಡಿಯಿಂದ 72 ಕಿಮೀ ದೂರದಲ್ಲಿದೆ. ಇದು ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದು. ಶಿರಡಿಗೆ ಬರುವವರು ಇಲ್ಲಿ ಬಂದು ಹೋಗುತ್ತಾರೆ. ಈ ಸ್ಥಳಕ್ಕೆ ಭೇಟಿ ನೀಡುವ ಭಕ್ತರಿಗೆ ಶನಿಯು ಎಲ್ಲಾ ದೋಷಗಳನ್ನು ನಿವಾರಿಸಿ ಜೀವನದಲ್ಲಿ ಸಕಲ ಸಂತೋಷ ನೀಡುತ್ತಾನೆ ಎಂಬ ನಂಬಿಕೆ ಇದೆ.
ತ್ರಯಂಬಕೇಶ್ವರ
12 ಜ್ಯೋತಿರ್ಲಿಂಗಗಳಲ್ಲಿ ಒಂದು, ತ್ರಯಂಬಕೇಶ್ವರದಲ್ಲಿ ನೆಲೆಗೊಂಡಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ. ತ್ರಯಂಬಕೇಶ್ವರದಲ್ಲಿರುವ ಕುಶಾವರ್ತ ಕುಂಡಕ್ಕೆ ಈ ಸ್ಥಳ ಅತ್ಯಂತ ಜನಪ್ರಿಯವಾಗಿದೆ. ಈ ಕುಂಡದಲ್ಲಿ ಗೋದಾವರಿ ನೀರು ಸಿಗುತ್ತದೆ. ದೇವಾಲಯದ ಆವರಣದಲ್ಲಿ ಬ್ರಹ್ಮ, ವಿಷ್ಣು ಮತ್ತು ಶಿವನ ಮೂರು ಲಿಂಗಗಳಿವೆ. ಈ ದೇವಾಲಯವನ್ನು ಪೇಶ್ವೆ ಬಾಲಾಜಿ ಬಾಜಿ ರಾವ್ ನಿರ್ಮಿಸಿದರು.
ಭೀಮಾಶಂಕರ
ಸುಂದರ ಹಸಿರು ಪರಿಸರದಲ್ಲಿ ಈ ದೇವಾಲಯ ನಿರ್ಮಿತವಾಗಿದೆ. ಹೆಚ್ಚಾಗಿ ಚಾರಣಿಗರು ಇಲ್ಲಿ ಹೋಗಲು ಇಷ್ಟಪಡುತ್ತಾರೆ. ಮಹಾರಾಷ್ಟ್ರಕ್ಕೆ ನೀವು ಭೇಟಿ ನೀಡಲು ಪ್ಲಾನ್ ಮಾಡುತ್ತಿದ್ದಲ್ಲಿ ಭೀಮಾಶಂಕರಕ್ಕೆ ಹೋಗುವುದನ್ನು ಮರೆಯಬೇಡಿ. ಇದೂ ಕೂಡಾ ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ದೇವಾಲಯವಾಗಿದೆ. ದೇಶದ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ದೇಶದ 12 ಜ್ಯೋತಿರ್ಲಿಂಗಗಳ ಪೈಕಿ ಐದು ಮಹಾರಾಷ್ಟ್ರದಲ್ಲೇ ಇವೆ.
ಯಮಾಯಿ ದೇವಿ ದೇವಾಲಯ
ಈ ದೇವಸ್ಥಾನ ಔಂಧ್‌ನ ಹೃದಯಭಾಗದಲ್ಲಿ ನೆಲೆಗೊಂಡಿದೆ. ಈ ದೇವಸ್ಥಾನದಲ್ಲಿ ಯಮಾಯಿ ದೇವಿಯ ವಿಗ್ರಹವು ಭಕ್ತರನ್ನು ಆಕರ್ಷಿಸುತ್ತಿದೆ. ತ್ರಿಶೂಲ, ಬಾಣ, ಗದಾ ಮತ್ತು ಪಾನ ಪತ್ರಗಳಿಂದ ಅಲಂಕರಿಸಲ್ಪಟ್ಟಿದೆ. ಸುಂದರವಾದ ಕಣಿವೆಯ ಬೆಟ್ಟದ ಮೇಲೆ ಈ ದೇವಸ್ಥಾನ ನಿರ್ಮಾಣವಾಗಿದೆ. ದೇವಾಲಯದ ಜೊತೆಗೆ ಇಲ್ಲಿ ಭಕ್ತರು ಭೇಟಿ ನೀಡಬಹುದಾದ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ.
ಸಿದ್ದಿ ವಿನಾಯಕ ದೇವಸ್ಥಾನ
ಮಹಾರಾಷ್ಟ್ರದ ಪ್ರಮುಖ ದೇವಾಲಯಗಳಲ್ಲಿ ಸಿದ್ಧಿವಿನಾಯಕ ದೇವಾಲಯ ಕೂಡಾ ಒಂದು. ಜನಸಾಮಾನ್ಯರು, ಸೆಲೆಬ್ರಿಟಿಗಳು ಪ್ರತಿದಿನ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹೆಚ್ಚಾಗಿ ಪ್ರತಿ ಮಂಗಳವಾರ ಅನೇಕ ಭಕ್ತರು ಮನೆಯಿಂದ ದೇವಸ್ಥಾನಕ್ಕೆ ಬರಿಗಾಲಿನಲ್ಲಿ ನಡೆದೇ ಹೋಗುತ್ತಾರೆ.
ಕೊಲ್ಹಾಪುರ
ಕೊಲ್ಹಾಪುರ ದೇವಾಲಯ ಪಂಚಗಂಗಾ ನದಿಯ ದಡದಲ್ಲಿ ನೆಲೆಸಿರುವ ಧಾರ್ಮಿಕ ನಗರವಾಗಿದೆ. ಮಹಾಲಕ್ಷ್ಮೀ ದೇವಸ್ಥಾನದಿಂದ ಜ್ಯೋತಿಬಾ ದೇವಸ್ಥಾನದವರೆಗೆ ಕೊಲ್ಲಾಪುರದಲ್ಲಿ ಅನೇಕ ದೇವಾಲಯಗಳಿವೆ. ಕುಟುಂಬದೊಂದಿಗೆ ಕಾಲ ಸಮಯ ಕಳೆಯಲು ಇದು ಉತ್ತಮ ಸ್ಥಳವಾಗಿದೆ.
ಹರಿಹರೇಶ್ವರ ದೇವಾಲಯ
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿರುವ ಹರಿಹರೇಶ್ವರ ದೇವಾಲಯಕ್ಕೆ ಕೂಡಾ ಯಾತ್ರಾರ್ಥಿಗಳು ಪ್ರತಿದಿನ ಭೇಟಿ ನೀಡುತ್ತಾರೆ. ಕೊಂಕಣ ಕರಾವಳಿಯಲ್ಲಿ ಸ್ಥಾಪಿತವಾಗಿರುವ ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಹರಿಹರೇಶ್ವರ ಪಟ್ಟಣವನ್ನು ಶಿವನು ಸಲಹುತ್ತಿದ್ದಾನೆ ಎಂದು ಭಕ್ತರು ನಂಬಿದ್ದಾರೆ. ಈ ದೇವಾಲಯವು ಹರಿಹರೇಶ್ವರ, ಬ್ರಹ್ಮಾದ್ರಿ, ಹರ್ಷಿನಾಚಲ ಮತ್ತು ಪುಷ್ಪಾದ್ರಿ ಎಂಬ ನಾಲ್ಕು ಬೆಟ್ಟಗಳಿಂದ ಕೂಡಿದೆ.
ಗೃಷ್ಣೇಶ್ವರ ಜ್ಯೋತಿರ್ಲಿಂಗ ದೇವಸ್ಥಾನ
ಔರಂಗಾಬಾದ್ ಜಿಲ್ಲೆಯಲ್ಲಿರುವ ಗ್ರಿಷ್ಣೇಶ್ವರ ಜ್ಯೋತಿರ್ಲಿಂಗ ದೇವಾಲಯವು ಮಹಾರಾಷ್ಟ್ರದಲ್ಲಿ ಭೇಟಿ ನೀಡಬೇಕಾದ ಪ್ರಮುಖ 10 ದೇವಾಲಯಗಳಲ್ಲಿ ಒಂದಾಗಿದೆ. 12 ಜ್ಯೋತಿರ್ಲಿಂಗಳಲ್ಲಿ ಇಲ್ಲಿರುವ ಲಿಂಗ ಕೂಡಾ ಒಂದಾಗಿದೆ. ಈ ದೇವಾಲಯ ರಾಣಿ ಅಹಲ್ಯಾ ಭಾಯಿ ಹೋಳ್ಕರ್ ಮತ್ತು ಮಾಲೋಜಿ ರಾಜೇ ಭೋಸ್ಲೆ ಆಳ್ವಿಕೆಯಲ್ಲಿ ನಿರ್ಮಾಣವಾಗಿದೆ.