Kadalekai Parishe: ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭಕ್ಕೆ ಕ್ಷಣಗಣನೆ; ಇತಿಹಾಸ ಪ್ರಸಿದ್ಧ ಪರಿಷೆ ಆರಂಭವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ
Nov 22, 2024 01:27 PM IST
ಬಸವನಗುಡಿ ಕಡಲೆಕಾಯಿ ಪರಿಷೆಗೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ರೈತರು ತಾವು ಬೆಳೆದಿರುವ ಶೇಂಗಾವನ್ನು ಜಾತ್ರೆಗೆ ತಂದು ಮಾರಾಟ ಮಾಡುತ್ತಿದ್ದಾರೆ
- ಪ್ರತಿ ವರ್ಷದಂತೆ ಈ ಬಾರಿಯ ಬಸವನಗುಡಿಯಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕರ್ನಾಟಕ ಅಲ್ಲದೆ, ನೆರೆಯ ರಾಜ್ಯಗಳಿಂದಲೂ ಪರಿಷೆ ನೋಡಲು ಜನ ಬರುತ್ತಾರೆ. ಈ ಬಾರಿಯೂ ಕಡೆಲೆಕಾಯಿ ಪರಿಷೆ ಹೋದರೆ ಕೈ ಚೀಲವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ. ಪರಿಷೆಯ ಸಿದ್ಧತೆ ಮತ್ತು ಇತಿಹಾಸದ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಪ್ರಮುಖ ಜಾತ್ರೆಗಳಲ್ಲೊಂದಾಗಿರುವ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿಯ ಪರಿಷೆಯನ್ನು 2024ರ ನವೆಂಬರ್ 25 ರ ಸೋಮವಾರ ಮತ್ತು 26ರ ಮಂಗಳವಾರದಂದು ನಡೆಯಲಿದೆ. ಈ ಬಾರಿ ಶೇಂಗಾ ಬೆಳೆಗಾರರು ಕಡಲೆಕಾಯಿ ಪರಿಷೆಯಲ್ಲಿ ಸುಂಕ ಅಥವಾ ಶುಲ್ಕ ಪಾವತಿಸುವಂತಿಲ್ಲ. ಕರ್ನಾಟಕ ಸರ್ಕಾರದ ಈ ನಡೆಯಿಂದ ಶೇಂಗಾ ಬೆಳಗಾರರು ಫುಲ್ ಖುಷ್ ಆಗಿದ್ದಾರೆ. ರೈತರ ಸಂತೆಯಾದ ಕಾರಣ ಅವರು ಯಾವುದೇ ಶುಲ್ಕ ಪಾವತಿಸದೇ ವ್ಯಾಪಾರ ಮಾಡಬಹುದು ಎಂದು ಸರ್ಕಾರ ಘೋಷಿಸಿದೆ.
ತಾಜಾ ಫೋಟೊಗಳು
ಕೆಲವು ದಿನಗಳ ಮುಂಚಿತವಾಗಿಯೇ ರೈತರು ಪರಿಷೆಗೆ ಬಂದಿದ್ದು, ತಾವು ಬೆಳದ ಕಡಲೆಕಾಯಿ ರಾಶಿಗಳನ್ನು ಹಾಕಿ ವ್ಯಾಪಾರವನ್ನು ಆರಂಭಿಸಿದ್ದಾರೆ. ಬಸವನಗುಡಿ ಶ್ರೀ ದೊಡ್ಡಬಸವಣ್ಣ ದೇವಾಲಯದಲ್ಲಿ ನವೆಂಬರ್ 23 ರಿಂದ ನವೆಂಬರ್ 27 ರ ತನಕ ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆ ಮತ್ತು ಜಾತ್ರೆ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯ ಕಾರ್ತಿಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆ ನಡೆಯಲಿದೆ. ಅದರಂತೆ ನವೆಂಬರ್ 25ರ ಸೋಮವಾರ ಪರಿಷೆಗೆ ಚಾಲನೆ ನೀಡಲಾಗುತ್ತದೆ.
ಈ ಬಾರಿಯೂ ಪರಿಷೆಗೆ ಬನ್ನಿ ಕೈ ಚೀಲ ತನ್ನಿ
ಪರಿಷೆಗೆ ಬನ್ನಿ ಕೈ ಚೀಲ ತನ್ನಿ: ಪ್ರತಿ ವರ್ಷದಂತೆ ಈ ಬಾರಿ ಕೂಡ ಕಡಲೆಕಾಯಿ ಪರಿಷೆಗೆ ಬರುವಾಗ ಕೈ ಚೀಲ ತನ್ನಿ ಎಂಬ ಸಂದೇಶ ರವಾನಿಸಲು ಬಿಬಿಎಂಪಿ ಸಜ್ಜಾಗಿದೆ. ಪ್ಲಾಸ್ಟಿಕ್ ಕವರ್ ನಿಷೇಧಿಸಲಾಗಿದೆ. ಎನ್‌ಜಿಒಗಳ ಸಹಕಾರದೊಂದಿಗೆ ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಿದೆ.
ಕಡಲೆಕಾಯಿ ಪರಿಷೆಗೆ ಹೆಚ್ಚಿನ ಜನರು ಆಗಮಿಸುವ ಸಾಧ್ಯತೆ ಇರುವುದರಿಂದ ಪರಿಷೆಯ ಆಯೋಜಕರು, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪರಿಷೆಯ ಸಂದರ್ಭದಲ್ಲಿ ವಾಹನ ಸಂಚಾರ, ಟ್ರಾಫಿಕ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಸಾರ್ವಜನಿಕರಿಗೆ ವಾಹನಗಳ ಪಾರ್ಕಿಂಗ್ ಗೆ ತಾತ್ಕಾಲಿಕ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುನ್ನೆಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಚಟುವಟಿಕೆಗಳನ್ನು ನಡೆಯದಂತೆ ಹಲವು ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಭಕ್ತಾದಿಗಳಿಗೆ ಮಾರ್ಗದರ್ಶನ ನೀಡಲು ಪೋಲೀಸ್ ಇಲಾಖೆ ಹಾಗೂ ಧ್ವನಿವರ್ಧಕಗಳನ್ನು ಬಳಸಿಕೊಳ್ಳುತ್ತದೆ. ಮುನ್ನೆಚರಿಕೆ ಸಲುವಾಗಿ ಅಗ್ನಿಶಾಮಕ ವಾಹನ/ಸಿಬ್ಬಂದಿಯನ್ನು ನಿಯೋಜಿಸಲಾಗುತ್ತೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸರು ಸ್ಥಳದಲ್ಲಿ ನಿಯೋಜಿಸಲಾಗುತ್ತದೆ.
ಐತಿಹಾಸಿಕ ಕಡಲೆಕಾಯಿ ಪರಿಷೆಯ ಇತಿಹಾಸ
ನೂರಾರು ವರ್ಷಗಳ ಹಿಂದೆ ಬಸವನಗುಡಿಯ ಸುತ್ತಮುತ್ತ ಹಳ್ಳಿಗಳಿದ್ದವು. ಇಲ್ಲಿನ ರೈತರು ಕಡಲೆಕಾಯಿ ಬೆಳೆಯುತ್ತಿದ್ದರು. ಆದರೆ, ರೈತರಿಗೆ ಒಂದು ಸಮಸ್ಯೆ ಎದುರಾಗಿತ್ತು. ಇನ್ನೇನು ಕಡಲೆಕಾಯಿ ಫಸಲು ಕೈಗೆ ಬಂದೇ ಬಿಡ್ತು ಎನ್ನುಷ್ಟರಲ್ಲಿ ಬೆಳೆದ ನೆಲಗಡಲೆಗೆ ದೊಡ್ಡ ಬಸವವೊಂದು ದಾಳಿ ಮಾಡುತ್ತಿತ್ತು. ರೈತರು ಬೆಳೆದ ಬೆಳೆಯನ್ನು ಹಾಳು ಮಾಡುತ್ತಿತ್ತು. ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಒಪ್ಪಿಸಿ ಪ್ರಾರ್ಥನೆ ಮಾಡಲು ಆರಂಭಿಸಿದರು. ಇದಾದ ಬಳಿಕ ಬಸವನ ದಾಳಿ ಇಂತಿತು.
ಅದೇ ಸಮಯದಲ್ಲಿ ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ಪತ್ತೆಯಾಗಿತ್ತು. ಆ ಸ್ಥಳದಲ್ಲಿ ಮಾಗಡಿ ಕೆಂಪೇಗೌಡರು 1537ರಲ್ಲಿ ಗ್ರಾಮ ನಿರ್ಮಾಣ ಮಾಡಿದ್ದರು. ಈ ಗ್ರಾಮಕ್ಕೆ ಸುಂಕೇನಹಳ್ಳಿ ಎಂದು ಹೆಸರಿಟ್ಟರು. ಇಲ್ಲಿನ ರೈತರು ಮೊದಲಿಂದಲೂ ಕಡಲೆಕಾಯಿ ಬೆಳೆಯುತ್ತಿದ್ದರು. ಬೆಂಗಳೂರಿನ ಪಾರಂಪರಿಕ ಕಡಲೆಕಾಯಿ ಪರಿಷೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ. ಇದನ್ನು ನೋಡಲು ಬೆಂಗಳೂರು ನಗರ, ಗ್ರಾಮೀಣ ಹಾಗೂ ಇತರೆ ರಾಜ್ಯಗಳಿಂದ ಲಕ್ಷಾಂತರ ಜನ ಬರುತ್ತಾರೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.