ಬೆಂಗಳೂರು ಕಡಲೆಕಾಯಿ ಪರಿಷೆ 2024: ಬಸವನಗುಡಿ ಕಳ್ಳೆ ಕಾಯಿ ಪರಿಷೆ ಯಾವಾಗ? ಆಚರಣೆಯ ಮಹತ್ವ, ಐತಿಹ್ಯದ ವಿವರ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬೆಂಗಳೂರು ಕಡಲೆಕಾಯಿ ಪರಿಷೆ 2024: ಬಸವನಗುಡಿ ಕಳ್ಳೆ ಕಾಯಿ ಪರಿಷೆ ಯಾವಾಗ? ಆಚರಣೆಯ ಮಹತ್ವ, ಐತಿಹ್ಯದ ವಿವರ ಇಲ್ಲಿದೆ ನೋಡಿ

ಬೆಂಗಳೂರು ಕಡಲೆಕಾಯಿ ಪರಿಷೆ 2024: ಬಸವನಗುಡಿ ಕಳ್ಳೆ ಕಾಯಿ ಪರಿಷೆ ಯಾವಾಗ? ಆಚರಣೆಯ ಮಹತ್ವ, ಐತಿಹ್ಯದ ವಿವರ ಇಲ್ಲಿದೆ ನೋಡಿ

ಬೆಂಗಳೂರಿನ ಬಸವನಗುಡಿಯಲ್ಲಿ ಪ್ರತಿವರ್ಷದಂತೆ ಈ ವರ್ಷ ಕಾರ್ತೀಕ ಮಾಸದ ಕೊನೆಯ ಸೋಮವಾರ (ನವೆಂಬರ್‌ 25) ಪಾರಂಪಾರಿಕ ಕಡಲೆಕಾಯಿ ಪರಿಷೆ ನಡೆಯಲಿದೆ. ಕಳ್ಳೆ ಕಾಯಿ ಪರಿಷೆ ಅಥವಾ ಕಡ್ಲೆಕಾಯಿ ಪರಿಷೆ ಎಂದೂ ಇದನ್ನು ಕರೆಯಲಾಗುತ್ತದೆ. ಈ ಆಚರಣೆಯ ಇತಿಹಾಸ, ಮಹತ್ವ, ಐತಿಹ್ಯ ಇತ್ಯಾದಿ ವಿವರ ಇಲ್ಲಿದೆ.

ಬೆಂಗಳೂರು ಕಡಲೆಕಾಯಿ ಪರಿಷೆ 2024: ಬಸವನಗುಡಿ ಕಳ್ಳೆ ಕಾಯಿ ಪರಿಷೆ ಯಾವಾಗ? ಆಚರಣೆಯ ಮಹತ್ವ
ಬೆಂಗಳೂರು ಕಡಲೆಕಾಯಿ ಪರಿಷೆ 2024: ಬಸವನಗುಡಿ ಕಳ್ಳೆ ಕಾಯಿ ಪರಿಷೆ ಯಾವಾಗ? ಆಚರಣೆಯ ಮಹತ್ವ

ಬೆಂಗಳೂರು ಕಡಲೆಕಾಯಿ ಪರಿಷೆ 2024: ಕಾರ್ತೀಕ ಮಾಸದ ಕೊನೆಯ ಸೋಮವಾರ ಬೆಂಗಳೂರಿನ ಬಸವನಗುಡಿಯಲ್ಲಿ ಹಬ್ಬದ ಸಡಗರ ಮೂಡುತ್ತದೆ. ಬೀದಿಬೀದಿಗಳಲ್ಲಿ ರಾಶಿರಾಶಿ ಕಡಲೆಕಾಯಿ ಹಾಕಿಕೊಂಡು ರೈತರು, ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಈ ಸಮಯದಲ್ಲಿ ರಸ್ತೆಯ ಯಾವ ಕಡೆಯೂ ಜಾಗವಿಲ್ಲದಂತೆ ಜನಜಾತ್ರೆ ನೆರೆಯುತ್ತದೆ. ಬೆಂಗಳೂರು ಕಡಲೆಕಾಯಿ ಪರಿಷೆ 2024 ಯಾವಾಗ? ಈ ಆಚರಣೆಯ ಹಿನ್ನೆಲೆಯೇನು? ಮಹತ್ವವೇನು? ಇತ್ಯಾದಿ ವಿವರ ಪಡೆಯೋಣ.

ಬೆಂಗಳೂರು ಕಡಲೆಕಾಯಿ ಪರಿಷೆ 2024 ದಿನಾಂಕ

ಪ್ರತಿವರ್ಷವೂ ಕಾರ್ತೀಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆ ನಡೆಯುತ್ತದೆ. ಈ ಬಾರಿ ನವೆಂಬರ್‌ 25ರಂದು ಕಾರ್ತೀಕ ಮಾಸದ ಸೋಮವಾರವಾಗಿದೆ. ಅದರ ಹಿಂದಿನ ದಿನಗಳು ಭಾನುವಾರ, ಶನಿವಾರವಾಗಿರುವುದರಿಂದ ಬಸವನಗುಡಿ ಬೀದಿಗಳಲ್ಲಿ ನವೆಂಬರ್‌ 23ರಿಂದಲೇ ಹಬ್ಬದ ಸಡಗರ ಇರುವ ಸೂಚನೆ ಇದೆ.

ಕಡಲೆಕಾಯಿ ಪರಿಷೆ ಮಹತ್ವ ಮತ್ತು ಹಿನ್ನೆಲೆ

ಒಂದಾನೊಂದು ಕಾಲದಲ್ಲಿ ಬೆಂಗಳೂರು ಈಗಿನಂತೆ ಇರಲಿಲ್ಲ. ಅಂದು ಹಳ್ಳಿಗಳಿದ್ದ ಸ್ಥಳಗಳು ಈಗ ಗುರುತೇ ಸಿಗದಂತಹ ಮಹಾನಗರವಾಗಿದೆ. ರೈತರು ಬಸವನಗುಡಿಯ ಪಕ್ಕದ ಹಳ್ಳಿಗಳಲ್ಲಿ ಪ್ರತಿ ವರ್ಷ ನೆಲಗಡಲೆ ಬೆಳೆಯುತ್ತಿದ್ದರು. ಆದರೆ, ಅವರಿಗೆ ಆಗ ಒಂದು ಸಮಸ್ಯೆ ಎದುರಾಗಿತ್ತು. ಇನ್ನೇನು ಫಸಲು ಕೈಗೆ ಬಂದೇ ಬಿಡ್ತು ಎನ್ನುಷ್ಟರಲ್ಲಿ ಬೆಳೆದ ನೆಲಗಡಲೆಗೆ ದೊಡ್ಡ ಬಸವವೊಂದು ದಾಳಿ ಮಾಡುತ್ತಿತ್ತು. ರೈತರು ಬೆಳೆದ ಬೆಳೆಯನ್ನು ಹಾಳು ಮಾಡುತ್ತಿತ್ತು. ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಒಪ್ಪಿಸಿ ಪ್ರಾರ್ಥನೆ ಮಾಡಲು ಆರಂಭಿಸಿದರು. ಇದಾದ ಬಳಿಕ ಬಸವನ ದಾಳಿ ಇಂತಿತು. ಅದೇ ಸಮಯದಲ್ಲಿ ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ಪತ್ತೆಯಾಗಿತ್ತು. ಆ ಸ್ಥಳದಲ್ಲಿ ಮಾಗಡಿ ಕೆಂಪೇಗೌಡರು 1537ರಲ್ಲಿ ಗ್ರಾಮ ನಿರ್ಮಾಣ ಮಾಡಿದ್ದರು. ಈ ಗ್ರಾಮಕ್ಕೆ ಸುಂಕೇನಹಳ್ಳಿ ಎಂದು ಹೆಸರಿಟ್ಟರು. ಇಲ್ಲಿನ ರೈತರು ಮೊದಲಿಂದಲೂ ಕಡಲೆಕಾಯಿ ಬೆಳೆಯುತ್ತಿದ್ದರು. ಬೆಂಗಳೂರಿನ ಪಾರಂಪರಿಕ ಕಡಲೆಕಾಯಿ ಪರಿಷೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ. ಇದನ್ನು ನೋಡಲು ಬೆಂಗಳೂರು ನಗರ, ಗ್ರಾಮೀಣ ಹಾಗೂ ಇತರೆ ರಾಜ್ಯಗಳಿಂದ ಲಕ್ಷಾಂತರ ಜನ ಬರುತ್ತಾರೆ. ಈಗ ಬೆಂಗಳೂರಿನ ಬಸವನಗುಡಿ ಮಾತ್ರವಲ್ಲದೆ ಮಲ್ಲೇಶ್ವರಂನಲ್ಲೂ ಕಡಲೆಕಾಯಿ ಪರಿಷೆ ನಡೆಯುತ್ತದೆ.

ಮಲ್ಲೇಶ್ವರಂನಲ್ಲೂ ನಡೆಯುತ್ತದೆ ಕಡಲೆಕಾಯಿ ಪರಿಷೆ

ಇತ್ತೀಚಿನ ವರ್ಷಗಳಲ್ಲಿ ಮಲ್ಲೇಶ್ವರಂನಲ್ಲೂ ಕಡಲೆಕಾಯಿ ಪರಿಷೆ ಆರಂಭವಾಗಿದೆ. ಸಾಮಾನ್ಯವಾಗಿ ಡಿಸೆಂಬರ್‌ ಮೊದಲ ವಾರದಲ್ಲಿ ಈ ಪರಿಷೆ ಇರುತ್ತದೆ. ಈ ವರ್ಷವೂ ನಡೆಯಲಿದೆ. ಕಾಡುಮಲ್ಲೇಶ್ವರ ಗೆಳೆಯ ಬಳಗದ ಮುಂದಾಳತ್ವದಲ್ಲಿ ಪರಿಷೆ ನಡೆಯಲಿದೆ. ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿರುವ ಕಾಡುಮಲ್ಲೇಶ್ವರ ದೇವಾಲಯದ ಬಳಿ ಕಡಲೆಕಾಯಿ ಪರಿಷೆ ನಡೆಯುತ್ತದೆ.

ಸಂಭ್ರಮದ ಕಡಲೆಕಾಯಿ ಪರಿಷೆ

ಕೃಷ್ಣದೇವರಾಯನ ಕಾಲದಲ್ಲಿ ಬೀದಿಬದಿಯಲ್ಲಿ ಚಿನ್ನ ಮಾರಾಟ ಮಾಡುತ್ತಿದ್ದರಂತೆ. ಆದರೆ, ಕಡಲೆಕಾಯಿ ಪರಿಷೆ ಸಮಯದಲ್ಲಿ ಬಸವನಗುಡಿ ರಾಮಕೃಷ್ಣ ಆಶ್ರಮದ ಸುತ್ತಮುತ್ತ ರಸ್ತೆಯ ಸುತ್ತಮುತ್ತ ಕಡಲೆಕಾಯಿಗಳದ್ದೇ ಜಾತ್ರೆ. ಕಡಲೆಕಾಯಿ ಮಾತ್ರವಲ್ಲದೆ ತಿಂಡಿತಿನಿಸುಗಳು, ಆಟಿಕೆಗಳು, ಜನಜಂಗುಳಿಯಿಂದ ಜಾತ್ರೆಯ ರಂಗು ಮೂಡುತ್ತದೆ. ಜನರು ಕಡಲೆಕಾಯಿಯನ್ನು ಸವಿಯುತ್ತ ಜಾತ್ರೆಯಲ್ಲಿ ಸುತ್ತಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕಿವಿ ಹರಿದುಹೋಗುವಂತೆ ಪೀಪೀ ಊದುವವರ ಉಪಟಳವೂ ಜಾತ್ರೆಯನ್ನು ತುಸು ಅಸಹನೀಯವಾಗಿಸಿದೆ ಎಂದು ಜಾತ್ರೆಗೆ ಬಂದವರು ದೂರುತ್ತಿದ್ದಾರೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.