ಐಪಿಎಲ್ ಮೆಗಾ ಹರಾಜಿನಲ್ಲಿ 13 ವರ್ಷದ ಬ್ಯಾಟರ್; ಆಕ್ಷನ್‌ಗಿಳಿದ ಅತ್ಯಂತ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಯಾರು?
Nov 17, 2024 05:15 PM IST
ಐಪಿಎಲ್ ಆಕ್ಷನ್‌ಗಿಳಿದ ಅತ್ಯಂತ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಯಾರು?
- Vaibhav Suryavanshi: ಐಪಿಎಲ್ 2025 ಆಟಗಾರರ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ 13 ವರ್ಷದ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ. ಈ ಬಾರಿಯ ಐಪಿಎಲ್ ಮೆಗಾ ಹರಾಜು ವೇಳೆ ಇವರು ಗಮನ ಸೆಳೆಯಲಿದ್ದಾರೆ.
ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿರುವ ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಯು ಭಾರಿ ನಿರೀಕ್ಷೆ ಮೂಡಿಸಿದೆ. ವಿವಿಧ ದೇಶಗಳ ಹಲವಾರು ಪ್ರಬಲ ಆಟಗಾರರು ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹರಾಜಿಗೆ ಒಳಗಾಗಲಿರುವ ಒಟ್ಟು 574 ಆಟಗಾರರ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಡುಗಡೆ ಮಾಡಿದೆ. ಇದರಲ್ಲಿ 13ರ ಹರೆಯದ ಹುಡುಗನೊಬ್ಬ ಕ್ರಿಕೆಟ್ ಪ್ರಿಯರ ಗಮನ ಸೆಳೆದಿದ್ದಾನೆ. ಕೇವಲ 13 ವರ್ಷ ವಯಸ್ಸಿನ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ವಿವಿಧ ದೇಶಗಳ ಬಲಿಷ್ಠ ಆಟಗಾರರು ಕಾಣಿಸಿಕೊಂಡಿದ್ದಾರೆ. ಭಾರತೀಯರ ಪೈಕಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಅವರಂಥಾ ಆಟಗಾರರು ಕೂಡಾ ಇದ್ದಾರೆ. ಈ ಪಟ್ಟಿಯಲ್ಲಿ ಹೆಚ್ಚು ಗಮನ ಸೆಳೆದವರು ಸೂರ್ಯವಂಶಿ. ಹರಾಜು ಪಟ್ಟಿಯಲ್ಲಿ 491ನೇ ಸ್ಥಾನದಲ್ಲಿರುವ ಎಡಗೈ ಬ್ಯಾಟರ್, ಅನ್‌ಕ್ಯಾಪ್ಡ್ ಬ್ಯಾಟ್ಸ್ಮನ್ ವಿಭಾಗದಲ್ಲಿ (ಯುಬಿಎ 9) 68ನೇ ಗುಂಪಿನ ಆಟಗಾರರಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಕಿರಿಯ ವಯಸ್ಸಿನಲ್ಲೇ ಐಪಿಎಲ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಸೂರ್ಯವಂಶಿ, ತಂಡದ ಪಾಲಾಗುವ ನಿರೀಕ್ಷೆಯಲ್ಲಿದ್ದಾರೆ.
2024ರ ಜನವರಿ ತಿಂಗಳಲ್ಲಿ ಬಿಹಾರ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸೂರ್ಯವಂಶಿ, ಆ ನಂತರ ಕ್ರಿಕೆಟ್ ಲೋಕದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆದ ಭಾರತ ಅಂಡರ್ 19 ಮತ್ತು ಆಸ್ಟ್ರೇಲಿಯಾ ಅಂಡರ್ 19 ಯೂತ್ ಟೆಸ್ಟ್ ಸರಣಿಯಲ್ಲಿ ಸೂರ್ಯವಂಶಿ ಖ್ಯಾತಿ ಇಮ್ಮಡಿಯಾಯ್ತು. ಮೊದಲ ಪಂದ್ಯದಲ್ಲಿಯೇ ಆಕರ್ಷಕ ಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಅದರ ಬೆನ್ನಲ್ಲೇ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಯುವ ಆಟಗಾರ, ಐಪಿಎಲ್‌ನಲ್ಲಿ ಆಡಲು ಸಿದ್ಧತೆ ಆರಂಭಿಸಿದರು.
ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್ ಅಂಕಿ-ಅಂಶ
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸೂರ್ಯವಂಶಿಯ ಅಂಕಿ-ಅಂಶಗಳು ಸಾಧಾರಣವಾಗಿವೆ. ಈವರೆಗೆ ಆಡಿದ ಐದು ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ 100 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಗರಿಷ್ಠ ಸ್ಕೋರ್ 41 ರನ್. ಆದರೆ, ಅವರ ಆಟದ ಕೌಶಲ್ಯವು ಹಲವರ ಮನಗೆದ್ದಿದೆ. ಎಳೆಯ ವಯಸ್ಸಿನಲ್ಲೂ ಐಪಿಎಲ್ ಹರಾಜಿನಲ್ಲಿ ಸೂರ್ಯವಂಶಿ ಅವರ ಉಪಸ್ಥಿತಿಯು, ಫ್ರಾಂಚೈಸಿಗಳ ಆಯ್ಕೆಯನ್ನು ಹೆಚ್ಚು ಮಾಡಿವೆ. ಯುವ ಪ್ರತಿಭೆಗಳನ್ನು ಗುರುತಿಸಲು ಫ್ರಾಂಚೈಸಿಗಳಿಗೆ ಅವಕಾಶ ಒದಗಿಸಿದೆ.
ಈ ತಿಂಗಳ ಕೊನೆಯಲ್ಲಿ 19 ವರ್ಷದೊಳಗಿನವರ ಏಷ್ಯಾ ಕಪ್ ಆರಂಭವಾಗಲಿದೆ. ಇದರಲ್ಲಿ ಸೂರ್ಯವಂಶಿ ಭಾರತ ತಂಡದ ಭಾಗವಾಗಿದ್ದಾರೆ. ನವೆಂಬರ್ 30ರಂದು ಪಾಕಿಸ್ತಾನ ವಿರುದ್ಧ ಭಾರತ ತನ್ನ ಅಂಡರ್ 19 ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.