ಏಕದಿನ ವಿಶ್ವಕಪ್‌ನಿಂದ ಗಾಯಾಳು ಹಾರ್ದಿಕ್ ಹೊರಬಿದ್ರೆ, ಅವರ ಸ್ಥಾನ ತುಂಬಬಲ್ಲ ಐವರು ಆಲ್ರೌಂಡರ್ಗಳು ಇವರೇ
Oct 20, 2023 03:38 PM IST
ಹಾರ್ದಿಕ್ ಪಾಂಡ್ಯ ಗಾಯಗೊಂಡ ಸಂದರ್ಭ.
- Hardik Pandya Injury: ಒಂದು ವೇಳೆ ಐಸಿಸಿ ಏಕದಿನ ವಿಶ್ವಕಪ್‌ನಿಂದ ಪಾಂಡ್ಯ ಹೊರಬಿದ್ದರೆ ಅವರ ಸ್ಥಾನ ತುಂಬುವ ಪ್ರಮುಖ ಐವರು ಆಲ್ರೌಂಡರ್ಗಳನ್ನು ಈ ಮುಂದೆ ನೋಡೋಣ.
ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ (India vs Bangladesh) ಭರ್ಜರಿ 7 ವಿಕೆಟ್ಗಳ ಗೆಲುವು ಸಾಧಿಸಿದೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ODI World Cup 2023) ಸತತ 4 ಗೆಲುವು ಸಾಧಿಸಿರುವ ಭಾರತ, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಗೆಲುವಿನ ನಾಗಾಲೋಟ ಮುಂದುವರೆಸಿರುವ ರೋಹಿತ್ ಪಡೆಗೆ ಇದೀಗ ಇಂಜುರಿ ಸಮಸ್ಯೆ ಎದುರಾಗಿದೆ. ಬಾಂಗ್ಲಾದೇಶ ಎದುರಿನ ವಿಶ್ವಕಪ್ ಪಂದ್ಯದ ವೇಳೆ ಪ್ರಮುಖ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya Injury), ಪಾದದ ಗಾಯಕ್ಕೆ ಒಳಗಾಗಿದ್ದು, ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಲಿಟ್ಟನ್ ದಾಸ್ (Litton Das) ಸ್ಟ್ರೈಟ್ ಡ್ರೈವ್ ಮಾಡಿದರು. ಆ ಚೆಂಡನ್ನು ಕಾಲಿನಿಂದ ತಡೆಯುವ ಯತ್ನಿಸಿದರು. ಆದರೆ ಕಾಲು ಉಳುಕಿತು. ಆಲ್ರೌಂಡರ್ ಕೇವಲ 3 ಎಸೆತಗಳನ್ನಷ್ಟೇ ಬೌಲಿಂಗ್ ಮಾಡಿ ಹೊರ ನಡೆದರು. ಬಳಿಕ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಪೂರ್ಣಗೊಳಿಸಿದರು. ಸದ್ಯ ಹಾರ್ದಿಕ್ ಬೆಂಗಳೂರಿನ ಎನ್ಸಿಎ ಬಂದಿದ್ದು, ಪುನಃಶ್ಚೇತನ ತರಬೇತಿ ಪಡೆಯಲಿದ್ದಾರೆ.
ಕಿವೀಸ್ ಪಂದ್ಯಕ್ಕೆ ಹಾರ್ದಿಕ್ ಅಲಭ್ಯ
ಸದ್ಯ ಅವರನ್ನು ಸ್ಕ್ಯಾನ್ಗೆ ಒಳಪಡಿಸಿದ್ದು, ಭಾನುವಾರ ನಡೆಯುವ ನ್ಯೂಜಿಲೆಂಡ್ ಎದುರಿನ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ ಗಾಯ ಗಂಭೀರವಾಗಿದ್ದರೆ ಅಥವಾ ಉಳಿದ ಟೂರ್ನಿಯಿಂದ ಹೊರಬಿದ್ದರೆ ಭಾರತ ತಂಡಕ್ಕೆ ಆರನೇ ಬೌಲಿಂಗ್ ಕೊರತೆ ಕಾಡಲಿದೆ. ಒಂದು ವೇಳೆ ವಿಶ್ವಕಪ್‌ನಿಂದ ಪಾಂಡ್ಯ ಹೊರಬಿದ್ದರೆ ಅವರ ಸ್ಥಾನ ತುಂಬುವ ಪ್ರಮುಖ ಐವರು ಆಲ್ರೌಂಡರ್ಗಳನ್ನು ಈ ಮುಂದೆ ನೋಡೋಣ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಪ್ರಮುಖ ಆಟಗಾರ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ತನ್ನ ಆಲ್ರೌಂಡ್ ಕೌಶಲದಿಂದ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆಡುವ 11ರ ಬಳಗದಲ್ಲಿ ಅವರ ಉಪಸ್ಥಿತಿ ಮುಖ್ಯವಾಗಿದೆ. ತಂಡದ ಬಲವನ್ನೂ ಹೆಚ್ಚಿಸುತ್ತದೆ. ಆದರೆ ಒಂದು ವೇಳೆ ಹೊರಬಿದ್ದರೆ, ತಂಡಕ್ಕೆ ಭಾರಿ ಹಿನ್ನಡೆಯಾಗಲಿದೆ. ಆರನೇ ಬೌಲಿಂಗ್ ಆಯ್ಕೆ ಇಲ್ಲದೆ, ಸಂಕಷ್ಟಕ್ಕೆ ಸಿಲುಕಲಿದೆ.
ಅಕ್ಷರ್ ಪಟೇಲ್
ಹಾರ್ದಿಕ್ ಪಾಂಡ್ಯ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಪರಿಗಣಿಸಬಹುದು. ಇಂಜುರಿಯಿಂದ ಚೇತರಿಸಿಕೊಂಡಿರುವ ಅಕ್ಷರ್, ಏಷ್ಯಾಕಪ್ನಲ್ಲಿ ಗಾಯದ ಸಮಸ್ಯೆಗೂ ಮುನ್ನ ವಿಶ್ವಕಪ್ ತಂಡದಲ್ಲಿದ್ದರು. ಆದರೆ ಏಷ್ಯಾಕಪ್ನಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಕಾರಣ ಅವರ ಬದಲಿಗೆ ಅಶ್ವಿನ್ಗೆ ಅವಕಾಶ ನೀಡಲಾಗಿತ್ತು. ಅಕ್ಷರ್ ಪಟೇಲ್ ಸದ್ಯ ಫಾರ್ಮ್ನಲ್ಲಿದ್ದು, 59 ಏಕದಿನ ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ. 481 ರನ್ ಕೂಡ ಸಿಡಿಸಿದ್ದಾರೆ.
ವಾಷಿಂಗ್ಟನ್ ಸುಂದರ್
ವಾಷಿಂಗ್ಟನ್ ಸುಂದರ್ ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ಎದುರಿನ ಸರಣಿಗೆ ಭಾರತ ತಂಡದ ಭಾಗವಾಗಿದ್ದರು. ಸುಂದರ್ ಕೂಡ ಹಾರ್ದಿಕ್ಗೆ ಉತ್ತಮ ಬದಲಿ ಆಟಗಾರ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಬಲ್ಲರು. ಆದರೆ ತಂಡದಲ್ಲಿ ಕುಲ್ದೀಪ್ ಮತ್ತು ಅಶ್ವಿನ್ ಈಗಾಗಲೇ ಸ್ಫಿನ್ನರ್ಗಳಿದ್ದು, ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಅವಶ್ಯಕತೆ ಇದೆ.
ದೀಪಕ್ ಚಹರ್, ದುಬೆ, ವಿಜಯ್ ಶಂಕರ್
ಫಾಸ್ಟ್ ಬೌಲಿಂಗ್ ಆಲ್ರೌಂಡರ್ಗಳೇ ಬೇಕೆಂದು ಬಯಸಿದರೆ, ಮೂವರು ಪ್ರಮುಖ ಆಟಗಾರರು ಇದ್ದಾರೆ. ದೀಪರ್ ಚಹರ್ ಅವರನ್ನು ಪರಿಗಣಿಸಬಹುದು. ಚಹರ್ ಟೀಮ್ ಇಂಡಿಯಾ ಪರ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಶಿವಂ ದುಬೆ ಅವರು ಕೂಡ ಉತ್ತಮ ಆಯ್ಕೆ. ಐಪಿಎಲ್, ದೇಶೀಯ ಕ್ರಿಕೆಟ್ ಮತ್ತು ಭಾರತ ತಂಡದ ಪರವೂ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಮತ್ತೊಬ್ಬ ಆಟಗಾರ ಅಂದರೆ ವಿಜಯ್ ಶಂಕರ್. ಈತ ದೇಶಿಯ ಕ್ರಿಕೆಟ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ದಾರೆ. ಈ ಮೂವರು ಬ್ಯಾಟಿಂಗ್-ಬೌಲಿಂಗ್ನಲ್ಲಿ ತಂಡದ ಬಲವನ್ನು ಹೆಚ್ಚಿಸಲಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಶಂಕರ್ 2019ರ ವಿಶ್ವಕಪ್ ತಂಡದ ಭಾಗವಾಗಿದ್ದರು. ಒಂದು ವೇಳೆ ಹಾರ್ದಿಕ್ ಹೊರಬಿದ್ದರೆ, ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.