ಆರ್‌ಸಿಬಿಗೆ ವೆಂಟಿಲೇಟರ್ ಬೇಡ, ಆದರೆ ತಂಡ ಇನ್ನೂ ಐಸಿಯುನಲ್ಲಿದೆ; ಪ್ಲೇಆಫ್ ಲೆಕ್ಕಾಚಾರಕ್ಕೆ ಜಡೇಜಾ ಫುಲ್‌ಸ್ಟಾಪ್
May 05, 2024 04:39 PM IST
ಆರ್‌ಸಿಬಿಗೆ ವೆಂಟಿಲೇಟರ್ ಬೇಡ, ಆದರೆ ತಂಡ ಇನ್ನೂ ಐಸಿಯುನಲ್ಲಿದೆ
- ಆರ್‌ಸಿಬಿ ತಂಡ ಐಪಿಎಲ್ 2024ರ ಪ್ಲೇಆಫ್ ಪ್ರವೇಶಿಸುತ್ತಾ ಎಂಬುದು ಸದ್ಯದ ಪ್ರಶ್ನೆ. ಇದು ಸಾಧ್ಯವಾಗಲಿ ಎಂಬುದು ಅಭಿಮಾನಿಗಳ ಬಯಕೆ. ಈ ಕುರಿತು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಸಂಕ್ಷಿಪ್ತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ 2024ರ ಮೊದಲಾರ್ಧದಲ್ಲಿ ಆರ್‌ಸಿಬಿ ಪಾಲಿಗೆ ಗಗನ ಕುಸುಮವಾಗಿದ್ದ ಗೆಲುವು, ದ್ವಿತಿಯಾರ್ಧದಲ್ಲಿ ಹತ್ತಿರದ ನೆಂಟನಾಗುತ್ತಿದೆ. ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸುಲಭವಾಗಿ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹ್ಯಾಟ್ರಿಕ್ ಗೆಲುವು ಒಲಿಸಿಕೊಂಡಿದೆ. ಶುಭ್ಮನ್ ಗಿಲ್ ಬಳಗದ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಕಂಡಿದೆ. ಆದರೆ, ಆರ್‌ಸಿಬಿ ಪಾಲಿಗೆ ಪ್ಲೇ ಆಫ್ ಪ್ರವೇಶ ಅಷ್ಟು ಸುಲಭವಿಲ್ಲ. ಮುಂದೆ ತಂಡದ ಮುಂದಿರುವ ಎಲ್ಲಾ ಮೂರು ಪಂದ್ಯಗಳಲ್ಲಿ ಗೆದ್ದರೂ, ಇತರ ತಂಡಗಳ ಸೋಲು-ಗೆಲುವಿನ ಮೇಲೆ ತಂಡದ ಭವಿಷ್ಯ ನಿಂತಿದೆ.
ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು ಐಪಿಎಲ್ 2024ರಲ್ಲಿಆಡಿರುವ 11 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಕಂಡಿದೆ. ಉಳಿದ 7 ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಒಟ್ಟು 8 ಅಂಕಗಳೊಂದಿಗೆ ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ತಂಡವು ಗುರುವಾರ ಆಡಲಿರುವ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ತಂಡ ಸೋತರೆ, ಟೂರ್ನಿಯಿಂದ ಹೊರಬಿದ್ದಂತೆಯೇ.
ಸದ್ಯ ಆರ್‌ಸಿಬಿ ತಂಡದ ಪ್ಲೇ ಆಫ್ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಈ ನಡುವೆ, ಜಿಯೋ ಸಿನಿಮಾದಲ್ಲಿ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ, ಆರ್‌ಸಿಬಿಯ ಪ್ಲೇ ಆಫ್ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ. ಆರ್‌ಸಿಬಿ ತಂಡಕ್ಕೆ ಸದ್ಯ ವೆಂಟಿಲೇಟರ್‌ನ ಅಗತ್ಯವಿಲ್ಲ. ಆದರೆ ತಂಡ ಇನ್ನೂ ಐಸಿಯುನಲ್ಲಿದೆ ಎಂದು ಹೇಳಿದ್ದಾರೆ. ಇದರೊಂದಿಗೆ ತಂಡವು ನಾಕೌಟ್ ಹಂತ ಪ್ರವೇಶಿಸುವುದು ಭಾರಿ ಕಷ್ಟದ ಸಂಭಾವ್ಯತೆ ಎಂದಿದ್ದಾರೆ.
ಇದನ್ನೂ ಓದಿ | ಆರ್‌ಸಿಬಿಗೆ ಹ್ಯಾಟ್ರಿಕ್ ಗೆಲುವು, ಗುಜರಾತ್ಗೆ ಹ್ಯಾಟ್ರಿಕ್ ಸೋಲು; 10 ರಿಂದ 7ನೇ ಸ್ಥಾನಕ್ಕೆ ಜಿಗಿದ ಫಾಫ್ ಪಡೆ
“ಗುಜರಾತ್ ವಿರುದ್ಧ ವಿರಾಟ್ ಮತ್ತು ಫಾಫ್ ಬ್ಯಾಟಿಂಗ್ ನೋಡಿದ ನಂತರ ಪಂದ್ಯದ ಕುರಿತು ಉತ್ಸುಕರಾಗಿದ್ದೇವೆ. ಆದರೆ ತಂಡದ ಗೆಲುವಿನ ನಿಜವಾದ ಹೀರೋಗಳು ಬೌಲರ್‌ಗಳು. ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿ ಹಿಂದಿನಿಂದಲೂ ಹೆಣಗಾಡುತ್ತಿದೆ” ಎಂದು ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.
ಪ್ಲೇಆಫ್ ಪ್ರವೇಶ ಕಷ್ಟ ಕಷ್ಟ
ಆರ್‌ಸಿಬಿ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ ಎಂದು ಊಹಿಸುವುದು ತುಂಬಾ ಕಠಿಣ ಎಂದು ಜಡೇಜಾ ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ, ನಾಯಕ ಡು ಪ್ಲೆಸಿಸ್ ಅವರ ಬ್ಯಾಟಿಂಗ್ ವೈಖರಿವನ್ನು ಶ್ಲಾಘಿಸಿದರು. ಪಂದ್ಯದಲ್ಲಿ ಫಾಫ್ ಆಟ ಪ್ರಮುಖ ವ್ಯತ್ಯಾಸವಾಗಿದೆ ಎಂದರು.
ಗುಜರಾತ್ ವಿರುದ್ಧ 148 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಆರ್‌ಸಿಬಿ 13.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆದ್ದು ಬೀಗಿತು. ನಾಯಕ ಫಾಫ್ ಡು ಪ್ಲೆಸಿಸ್ 64 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ 42 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಕೊಟ್ಟರು. ಫಾಫ್ ಔಟಾದ ಬಳಿಕ ತಂಡವು ಕೆಲವೊಂದು ವಿಕೆಟ್‌ಗಳನ್ನು ಕಳೆದುಕೊಂಡಿತು. ಒಂದು ಹಂತದಲ್ಲಿ 92 ರನ್ ವೇಳೆಗೆ ಕೇವಲ 1 ವಿಕೆಟ್ ಮಾತ್ರ ಕಳೆದುಕೊಂಡಿದ್ದ ತಂಡ, ಕ್ಷಣ ಮಾತ್ರದಲ್ಲೇ 117 ರನ್ ವೇಳೆಗೆ 6 ವಿಕೆಟ್ ಒಪ್ಪಿಸಿತು. ಆದರೆ ದಿನೇಶ್ ಕಾರ್ತಿಕ್ ಅಜೇಯ 21 ಮತ್ತು ಸ್ವಪ್ನಿಲ್ ಸಿಂಗ್ ಅಜೇಯ 15 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.