ಹಾರ್ದಿಕ್ ಪಾಂಡ್ಯ ನೋ ಲುಕ್ ಶಾಟ್‌ಗೆ ಸ್ತಬ್ದವಾದ ಸ್ಟೇಡಿಯಂ; ಬೌಲರ್ ದಂಡಿಸಿ ಕಿಲ್ಲರ್ ನೋಟ, ವಿಡಿಯೋ ನೋಡಿ
Oct 07, 2024 10:23 AM IST
ಹಾರ್ದಿಕ್ ಪಾಂಡ್ಯ ನೋ ಲುಕ್ ಶಾಟ್‌ಗೆ ಸ್ತಬ್ದವಾದ ಸ್ಟೇಡಿಯಂ; ವಿಡಿಯೋ ನೋಡಿ
- ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳನ್ನು ಎದುರಿಸಿ 243.75 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 39 ರನ್ ಸಿಡಿಸಿದರು. ಪಂದ್ಯದ ಮಧ್ಯೆ 12ನೇ ಓವರ್‌ನಲ್ಲಿ ಇವರು ಹೊಡದ ನೋ ಲುಕ್ ಶಾಟ್ ಇಡೀ ಸ್ಟೇಡಿಯಂ ಅನ್ನು ಸ್ತಬ್ದಗೊಳಿಸಿತು.
ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಸೆಪ್ಟೆಂಬರ್ 6ರ ಭಾನುವಾರ, ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯವು ಗ್ವಾಲಿಯರ್‌ನ ನ್ಯೂ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ತಂಡದ ಪರ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅಮೋಘ ಪ್ರದರ್ಶನ ನೀಡಿದರು. ಬೌಲಿಂಗ್ ಜೊತೆ ಬ್ಯಾಟ್‌ನಲ್ಲೂ ಯಶಸ್ವಿಯಾದರು. ಅದರಲ್ಲೂ ಪಂದ್ಯದ ಮಧ್ಯೆ ಇವರು ಹೊಡೆದ ಶಾಟ್ ಒಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು.
ಈ ಪಂದ್ಯದಲ್ಲಿ ಹಾರ್ದಿಕ್ ಅವರು 12ನೇ ಓವರ್‌ನಲ್ಲಿ ಹೊಡದ ನೋ ಲುಕ್ ಶಾಟ್ ಇಡೀ ಸ್ಟೇಡಿಯಂ ಅನ್ನು ಸ್ತಬ್ದಗೊಳಿಸಿತು. ಬಾಂಗ್ಲಾದೇಶದ ಅನುಭವಿ ಬೌಲರ್ ತಸ್ಕಿನ್ ಅಹ್ಮದ್ ಅವರು ತಮ್ಮ ಮೂರನೇ ಎಸೆತವನ್ನು ಶಾರ್ಟ್ ಆಗಿ ಎಸೆತದರು. ಇದನ್ನು ಅರಿತ ಪಾಂಡ್ಯ ಚೆಂಡನ್ನು ನೋಡದೆ ಹಿಮ್ಮುಖವಾಗಿ ಅದ್ಭುತ ಶಾಟ್ ಹೊಡೆದರು. ಚೆಂಡು ಬೌಂಡರಿಗೆ ತಲುಪಿತು.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾರ್ದಿಕ್ ಪಾಂಡ್ಯ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದಲ್ಲಿ ಹಾರ್ದಿಕ್ ಕೇವಲ 16 ಎಸೆತಗಳನ್ನು ಎದುರಿಸಿ 243.75 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 39 ರನ್ ಸಿಡಿಸಿದರು. ಇದರಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳು ಒಳಗೊಂಡಿತ್ತು. ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಇನ್ನು ಹಾರ್ದಿಕ್ ಪಂದ್ಯವನ್ನು ಸಿಕ್ಸರ್‌ನೊಂದಿಗೆ ಅಂತ್ಯಗೊಳಿಸಿದ್ದು ಇದು ಐದನೇ ಬಾರಿ. ಪಾಂಡ್ಯ ಬಿಟ್ಟರೆ ಬೇರೆ ಯಾವ ಭಾರತೀಯ ಬ್ಯಾಟ್ಸ್ಮನ್ ಕೂಡ ಇಷ್ಟು ಬಾರಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ.
ಭಾರತಕ್ಕೆ ಏಕಪಕ್ಷೀಯ ಗೆಲುವು
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಅವರ ನಿರ್ಧಾರ ಸರಿ ಎಂದು ಸಾಬೀತಾಯಿತು. ಬಾಂಗ್ಲಾದೇಶ ತಂಡ 19.4 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ವರುಣ್ ಚಕ್ರವರ್ತಿ ಮತ್ತು ಅರ್ಷದೀಪ್ ಸಿಂಗ್ ಅದ್ಭುತ ಬೌಲಿಂಗ್ ಮಾಡಿ ತಲಾ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ಮಯಾಂಕ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು. 128 ರನ್‌ಗಳ ಗುರಿಯನ್ನು ಟೀಮ್ ಇಂಡಿಯಾ ಕೇವಲ 11.5 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಮುಟ್ಟಿತು. ಪಾಂಡ್ಯ ಅಲ್ಲದೆ ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ತಲಾ 29 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಸಹಕರಿಸಿದರು.
ವರದಿ: ವಿನಯ್ ಭಟ್.
ಇದನ್ನೂ ಓದಿ | ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್: ಸ್ಟಾರ್ ಪ್ಲೇಯರ್ ಸರಣಿಯಿಂದಲೇ ಔಟ್