ಒಂದು ಗಾಯ ತಂಡದಲ್ಲಿ ಸ್ಥಾನ, ನಾಯಕತ್ವ ಕಿತ್ತುಕೊಂಡಿತ್ತು; ಕ್ರಿಕೆಟ್ ತ್ಯಜಿಸಲು ನಿರ್ಧರಿಸಿದ್ದ ಶ್ರೇಯಸ್ ಅಯ್ಯರ್ ಯಶಸ್ಸಿನ ಯಶೋಗಾಥೆ!
May 22, 2024 07:17 PM IST
ಒಂದು ಗಾಯ ತಂಡದಲ್ಲಿ ಸ್ಥಾನ, ನಾಯಕತ್ವ ಕಿತ್ತುಕೊಂಡಿತ್ತು; ಕ್ರಿಕೆಟ್ ತ್ಯಜಿಸಲು ನಿರ್ಧರಿಸಿದ್ದ ಶ್ರೇಯಸ್ ಅಯ್ಯರ್ ಯಶಸ್ಸಿನ ಯಶೋಗಾಥೆ!
- Shreyas Iyer: ಒಂದೇ ಒಂದು ಇಂಜುರಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಮತ್ತು ತಂಡದಲ್ಲಿ ಸ್ಥಾನ ಕಳೆದುಕೊಳ್ಳುವಂತೆ ಮಾಡಿತು. ಅದೇ ರೀತಿ ಕೆಕೆಆರ್ ತಂಡದಿಂದಲೂ ಕೈಬಿಡಲು ಮಾತುಗಳು ಕೇಳಿಬಂದಿದ್ದವು. ಇದರ ನಡುವೆಯೂ ಕುಗ್ಗದೆ ಕೆಕೆಆರ್ ತಂಡವನ್ನು ಫೈನಲ್ಗೇರಿಸಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್-2024ರ ಕ್ವಾಲಿಫೈಯರ್-1 ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಅಮೋಘ ಗೆಲುವು ಸಾಧಿಸಿ ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಫೈನಲ್ ಪ್ರವೇಶಿಸಿದೆ. 2020ರಲ್ಲಿ ತಂಡವನ್ನು ಫೈನಲ್ಗೇರಿಸಿದ್ದರೂ ಅಯ್ಯರ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ಕೈಬಿಟ್ಟಿತ್ತು. ಒಂದೇ ಒಂದು ಗಾಯ ತಂಡದಲ್ಲಿ ಸ್ಥಾನ ಮತ್ತು ನಾಯಕತ್ವವನ್ನೇ ಕಿತ್ತುಕೊಂಡಿತ್ತು. ಅಂತಹದ್ದೇ ಭೀತಿ 2022ರಲ್ಲಿ ಕೆಕೆಆರ್ ತಂಡವನ್ನು ಸೇರಿದಾಗಲೂ ಎದುರಾಗಿತ್ತು ಶ್ರೇಯಸ್ ಅಯ್ಯರ್ಗೆ.
ಐಪಿಎಲ್ ಇತಿಹಾಸದಲ್ಲಿ ಎರಡು ತಂಡಗಳನ್ನು ಫೈನಲ್ಗೇರಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶ್ರೇಯಸ್ ಅಯ್ಯರ್, ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಒಬ್ಬ ಫೈಟರ್ನಂತೆ ಎದ್ದು ನಿಂತಿದ್ದಾರೆ. ಕೆಕೆಆರ್ ನಾಯಕನಾದ ಬಳಿಕ ಅಯ್ಯರ್ ಎದುರಿಸಿದ ಟೀಕೆ ಅಷ್ಟಿಷ್ಟಲ್ಲ. ಕೆಕೆಆರ್ ನಾಯಕತ್ವದಿಂದ ತೆಗೆದು ಹಾಕಿ ಎಂದು ಕೆಲ ಮಾಜಿ ಕ್ರಿಕೆಟಿಗರ್ಗಳು ಹೇಳಿದ್ದೂ ಇದೆ. ಇದರ ನಡುವೆಯೂ ಅಯ್ಯರ್ ಮಿಂಚಿರುವ ಅಯ್ಯರ್ರ ತೆರೆಮರೆಯ ಯಶಸ್ಸಿನ ಕಥಾನಕ ಏನು? ಬನ್ನಿ ನೋಡೋಣ.
ಶ್ರೇಯಸ್ ಅಯ್ಯರ್.. ಭರವಸೆಯ ಆಟಗಾರ. ಈಗಾಗಲೇ ನಾಯಕನಾಗಿ ತನ್ನನ್ನು ತಾನು ನಿರೂಪಿಸಿದ್ದಾರೆ. ಇದೀಗ ಮತ್ತೊಮ್ಮೆ ತನ್ನ ಕ್ಯಾಪ್ಟನ್ಸಿ ಎಂತಹದ್ದು ಎಂಬುದನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದ್ದಾರೆ. ದಿಗ್ಗಜ ಕ್ರಿಕೆಟರ್ಗಳೇ ಬೇಷ್ ಎನ್ನುತ್ತಿದ್ದಾರೆ. ಪ್ರಶಂಸೆ ಗಿಟ್ಟಿಸಿಗೊಂಡಿದ್ದಾರೆ. ಆದರೆ, ಮುಂಬೈ ಆಟಗಾರನ ಯಶಸ್ಸು ಅಷ್ಟು ಸುಲಭಕ್ಕೆ ಸಿಕ್ಕಿದ್ದಲ್ಲ. ಈ ಯಶೋಗಾಥೆಯ ಹಿಂದೆ ಅಪಾರ ಪರಿಶ್ರಮವೇ ಅಡಗಿದೆ. ಗಾಯದಿಂದ ಕಳೆದ ವರ್ಷ ಕೆಕೆಆರ್ ತಂಡವನ್ನು ಮುನ್ನಡೆಸಲು ಸಾಧ್ಯವಾಗದ ಅಯ್ಯರ್, ಈ ಬಾರಿ ಸಖತ್ ಕಂಬ್ಯಾಕ್ ಮಾಡಿದ್ದಾರೆ.
ಮೈದಾನದಲ್ಲಿ ಸಮಯೋಚಿತ ಇನ್ನಿಂಗ್ಸ್ ಕಟ್ಟುವ ಅಯ್ಯರ್, ತುಂಬಾ ಹಾರ್ಡ್ವರ್ಕರ್. ಜಿಮ್ನಲ್ಲಿ ಸತತ ಕಸರತ್ತು ನಡೆಸುವ ಈ ಬಲಗೈ ಬ್ಯಾಟ್ಸ್ಮನ್, ದಿನವಿಡೀ ಅಭ್ಯಾಸ ನಡೆಸುತ್ತಾರೆ. ಕ್ರಿಕೆಟ್ ಕಿಟ್ ಹೊತ್ತು ನೆಟ್ಸ್ಗೆ ಹೋದರೆ ಮನೆಗೆ ಮರಳುತ್ತಿದ್ದದ್ದು ಸೂರ್ಯ ಮುಳುಗಿದ ಮೇಲೆಯೇ. ಅಯ್ಯರ್ರ ಈ ಪರಿಶ್ರಮವೇ ಇಂದು ಸ್ಟಾರ್ ಪಟ್ಟ ತಂದು ಕೊಟ್ಟಿದೆ. ಆದರೆ ಕಳೆದ ವರ್ಷ ಅಯ್ಯರ್ ಪಟ್ಟ ಕಷ್ಟದೊಂದಿಗೆ ಅನೇಕ ಸವಾಲುಗಳನ್ನ ಮೆಟ್ಟಿ ನಿಂತು ಫೈಟರ್ನಂತೆ ಎದ್ದು ನಿಂತಿದ್ದಾರೆ.
ಕೆಕೆಆರ್ನಿಂದ ಕೈಬಿಡಬೇಕು ಎಂದಿದ್ರು
2022ರಲ್ಲಿ ಕೆಕೆಆರ್ ತಂಡವನ್ನು ಸೇರಿದ್ದ ಅಯ್ಯರ್, ಮೊದಲ ಸೀಸನ್ನಲ್ಲಿ ಕೇವಲ 6 ಜಯ ಸಾಧಿಸಿದ್ದರು. ಅದರ ಮರು ವರ್ಷವೇ ಅಯ್ಯರ್ ಗಾಯಗೊಂಡು ಟೂರ್ನಿಯಿಂದ ಹೊರಬಂದಿದ್ದರು. ಹೀಗಾಗಿ ಕೆಲ ಮಾಜಿಗಳು ಅವರನ್ನು ತಂಡದಿಂದ ಕಿತ್ತೊಗೆಯಬೇಕು. ನಾಯಕನಾಗಿ ಗಾಯಗಳ ಬಗ್ಗೆ ಎಚ್ಚರಿವಹಿಸದ ಆಟಗಾರರನ್ನು ತಂಡದಲ್ಲಿರುವುದು ಅನಗತ್ಯ. ಮಿನಿ ಹರಾಜಿಗೂ ಮುನ್ನ ಕೈ ಬಿಡಬೇಕು ಎಂಬುದು ಅವರ ಒತ್ತಾಯವಾಗಿತ್ತು. ಇದು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ಇದು ಇಂಜುರಿಯಿಂದ ಡೆಲ್ಲಿ ತಂಡದಲ್ಲಿ ನಾಯಕತ್ವ ಮತ್ತು ತಂಡದಲ್ಲಿ ಸ್ಥಾನ ಕಳೆದುಕೊಂಡಂತೆ ಕೆಕೆಆರ್ ತಂಡದಲ್ಲೂ ಸ್ಥಾನ ಕಳೆದುಕೊಳ್ಳುವ ಭೀತಿಗೆ ಒಳಗಾಗುವಂತೆ ಮಾಡಿತ್ತು.
2016ರಲ್ಲಿ ಅಯ್ಯರ್ಗೆ ದ್ರಾವಿಡ್ರಿಂದ ಸಿಕ್ತು ಮಾರ್ಗದರ್ಶನ
ಶ್ರೇಯಸ್ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದು 2015ರಲ್ಲಿ. ಮೊದಲ ಆವೃತ್ತಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿದ ಅಯ್ಯರ್, 2016ರ ಐಪಿಎಲ್ನಲ್ಲಿ ತೀವ್ರ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಡೆಲ್ಲಿ ಡೇರ್ಡೆವಿಲ್ಸ್ ತಂಡದ ಮೆಂಟರ್ ಆಗಿದ್ದ ರಾಹುಲ್ ದ್ರಾವಿಡ್ ಅವರಿಂದ ಅಯ್ಯರ್, ಬ್ಯಾಟಿಂಗ್ ಬಗ್ಗೆ ವಿಶೇಷ ಸಲಹೆ ಪಡೆದಿದ್ದರು. ಅಂದು ದ್ರಾವಿಡ್ ನೀಡಿದ ಸಲಹೆಗಳು, ತಂಡದಲ್ಲಿ ನೆಲೆಯೂರವಂತೆ ಮಾಡಿದ್ದವು. ಪರ್ಫೆಕ್ಟ್ ಬ್ಯಾಟರ್ ಆಗಿ ರೂಪುಗೊಂಡರು.
ಇಂಜುರಿ ಕಸಿಯಿತು ನಾಯಕತ್ವ ಹಾಗೂ ತಂಡದಲ್ಲಿ ಸ್ಥಾನ!
2021ರ ಮಾರ್ಚ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭುಜದ ಗಾಯದ ಸಮಸ್ಯೆಗೆ ಒಳಗಾದ ಅಯ್ಯರ್, ಐಪಿಎಲ್ಗೆ ದೂರ ಮಾಡಿತ್ತು. ಡೆಲ್ಲಿ ನಾಯಕತ್ವವನ್ನೂ ಕಸಿದುಕೊಂಡಿತು. ಅಲ್ಲದೆ, ಅವರನ್ನು ತಂಡದಿಂದಲೇ ಕೈಬಿಡಲಾಯಿತು. ಹಾಗೆಯೇ ಫಿಟ್ ಆಗದ ಕಾರಣ ಶ್ರೀಲಂಕಾ ಎದುರಿನ ಸರಣಿಯನ್ನೂ ಕಳೆದುಕೊಂಡಿದ್ದರು. ಒಂದ್ವೇಳೆ ಫಿಟ್ ಆಗಿದ್ದರೆ ಈ ಪ್ರವಾಸಕ್ಕೆ ನಾಯಕನಾಗುವ ಸಾಧ್ಯತೆ ಇತ್ತು. ಜತೆಗೆ ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು.
ಇಂತಹದ್ದೇ ಇಂಜುರಿಯಿಂದ ಕೆಕೆಆರ್ ತಂಡದಿಂದಲೂ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ಭೀತಿಗೆ ಒಳಗಾಗಿದ್ದ ಶ್ರೇಯಸ್ ಅಯ್ಯರ್, ಮಾನಸಿಕ ಒತ್ತಡ, ಇಂಜುರಿ, ಐಪಿಎಲ್ನಲ್ಲೂ ನೀರಸ ಪ್ರದರ್ಶನ, ಜೊತೆಗೆ ಟೀಕಾ ಪ್ರಹಾರ ಇವೆಲ್ಲವನ್ನೂ ಮೆಟ್ಟಿ ನಿಂತು ಈಗ ಕೆಕೆಆರ್ ಹೀರೋ ಆಗಿದ್ದಾರೆ. ಸಾಕಷ್ಟು ಪರಿಶ್ರಮದೊಂದಿಗೆ ಬೆಳೆದ ಶ್ರೇಯಸ್ ಅಯ್ಯರ್ಗೆ ಯಶಸ್ಸಿನ ಶ್ರೇಯಸ್ಸು ನಿರಂತರ ಸಿಗಲಿ ಅನ್ನೋದೇ ನಮ್ಮೆಲ್ಲರ ಆಶಯ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)