ಅನಾನುಭವಿ ಬೌಲರ್ಸ್ ಎದುರು ತತ್ತರಿಸಿದ ಘಟಾನುಘಟಿ ಬ್ಯಾಟರ್ಸ್; ಭಾರತದ ವಿರುದ್ಧ ಸೌತ್ ಆಫ್ರಿಕಾ 116ಕ್ಕೆ ಆಲೌಟ್
Dec 17, 2023 04:31 PM IST
ಅರ್ಷದೀಪ್ ಸಿಂಗ್ ವಿಕೆಟ್ ಪಡೆದ ಸಂದರ್ಭ.
- India vs South Africa 1st ODI: ಬ್ಯಾಟಿಂಗ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಸೌತ್ ಆಫ್ರಿಕಾ, ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 117 ರನ್ಗಳ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದೆ.
ಜೋಹಾನ್ಸ್ಬರ್ಗ್ನ ನ್ಯೂ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್ಗಳ ದಾಳಿಗೆ ದಕ್ಷಿಣ ಆಫ್ರಿಕಾ ಅಕ್ಷರಶಃ ನಲುಗಿತು. ಅನಾನುಭವಿ ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಆವೇಶ್ ಖಾನ್ ಬೌಲಿಂಗ್ ದಾಳಿಗೆ ಬಹುತೇಕ ಅನುಭವಿ ಬ್ಯಾಟರ್ಗಳಿಂದಲೇ ತುಂಬಿದ್ದ ಆಫ್ರಿಕಾ ತತ್ತರಿಸಿತು. ಇದರೊಂದಿಗೆ ಬಹುನಿರೀಕ್ಷಿತ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದ್ದು, ಟೀಮ್ ಇಂಡಿಯಾಗೆ 117 ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ಬೃಹತ್ ಮೊತ್ತ ಕಲೆ ಹಾಕುವ ಗುರಿಯೊಂದಿಗೆ ಕಣಕ್ಕಿಳಿಯಿತು. ಆದರೆ ಭಾರತದ ಬೌಲರ್ಗಳು ಹರಿಣಗಳ ಲೆಕ್ಕಾಚಾರ ತಲೆಕೆಳಗೆ ಮಾಡಿಬಿಟ್ಟರು. ಆರಂಭಿಕ ಓವರ್ನಿಂದಲೇ ಮಾರಕ ಬೌಲಿಂಗ್ ನಡೆಸಿ ಆಫ್ರಿಕನ್ನರನ್ನು ಕಟ್ಟಿ ಹಾಕಿದರು. ಘಟಾನುಘಟಿ ಬ್ಯಾಟರ್ಗಳೇ ಅನಾನುಭವಿ ಬೌಲರ್ಗಳ ದಾಳಿ ಎದುರಿಸಲು ಪರದಾಡಿ ಪೆವಿಲಿಯನ್ ಪರೇಡ್ ನಡೆಸಿದರು.
ಕುಸಿತಕ್ಕೆ ಕಾರಣರಾದ ಅರ್ಷದೀಪ್ಗೆ 5 ವಿಕೆಟ್
ವೇಗಿ ಅರ್ಷದೀಪ್ ಇನ್ನಿಂಗ್ಸ್ 2ನೇ ಓವರ್ನ 4ನೇ ಎಸೆತದಲ್ಲೇ ರೀಜಾ ಹೆಂಡ್ರಿಕ್ಸ್ರನ್ನು ಕ್ಲೀನ್ ಬೋಲ್ಡ್ ಮಾಡಿ ಭಾರತಕ್ಕೆ ಮುನ್ನಡೆ ತಂದರು. ಇದರ ಮರು ಎಸೆತದಲ್ಲೇ ವಾನ್ ಡರ್ ಡುಸೆನ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿ ಶೂನ್ಯಕ್ಕೆ ಔಟ್ ಮಾಡಿದರು. ಆರಂಭಿಕ ಡಬಲ್ ಆಘಾತ ಅನುಭವಿಸಿದ್ದ ಆಫ್ರಿಕಾಗೆ ಆಸರೆಯಾಗುತ್ತಿದ್ದ ಟೋನಿ ಡಿ ಜೋರ್ಜಿ 28 ರನ್ಗಳಿಸಿ ಅರ್ಷದೀಪ್ ಬೌಲಿಂಗ್ನಲ್ಲಿ ಹೊರ ನಡೆದರು.
8ನೇ ಓವರ್ನಲ್ಲಿ ದಾಳಿಗಿಳಿದು ಆಫ್ರಿಕಾಗೆ ಮತ್ತೊಮ್ಮೆ ಆಘಾತ ಕೊಟ್ಟರು. ಆ ಬಳಿಕ ಹೆನ್ರಿಚ್ ಕ್ಲಾಸೆನ್ ಕೇವಲ 6 ರನ್ ಗಳಿಸಿ ನಿರ್ಗಮಿಸಿದರು. ಇದರೊಂದಿಗೆ ಆಫ್ರಿಕಾ ಸಂಕಷ್ಟಕ್ಕೆ ಸಿಲುಕಿತು. ಕೇವಲ 52 ರನ್ಗಳಲ್ಲಿ ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡಿತು. ಅರ್ಷದೀಪ್ ಬಳಿಕ ಕಣಕ್ಕಿಳಿದ ಅವೇಶ್ ಖಾನ್ ಮತ್ತೆ ಬಿಗಿ ದಾಳಿ ನಡೆಸಿ ತಂಡಕ್ಕೆ ಮೇಲುಗೈ ತಂದರು. ಅಲ್ಲದೆ, ಕೊನೆಯಲ್ಲೂ ವಿಕೆಟ್ ಉರುಳಿಸಿದರು.
ಆವೇಶ್ ಖಾನ್ ಅಬ್ಬರದ ಬೌಲಿಂಗ್
ಸಂಕಷ್ಟದಲ್ಲಿದ್ದ ವೇಳೆ ಬ್ಯಾಟಿಂಗ್ ನಡೆಸುತ್ತಿದ್ದ ನಾಯಕ ಮಾರ್ಕ್ರಮ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 12 ರನ್ ಗಳಿಸಿ ಆವೇಶ್ಗೆ ಕ್ಲೀನ್ ಬೋಲ್ಡ್ ಆದರು. ಮಾರ್ಕ್ರಮ್ ಔಟಾದ ಮರು ಎಸೆತದಲ್ಲೇ ವಿಯಾನ್ ಮುಲ್ಡರ್ (0), ಎಲ್ಬಿ ಬಲೆಗೆ ಬಿದ್ದರು. ಅಲ್ಲದೆ, ಡೇವಿಡ್ ಮಿಲ್ಲರ್ 2, ಕೇಶವ್ ಮಹಾರಾಜ್ ಸಹ 4 ರನ್ ಗಳಿಸಿ ಆವೇಶ್ಗೆ 3 ಮತ್ತು 4ನೇ ಬಲಿಯಾದರು. ಇದರೊಂದಿಗೆ 73 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿತು.
116 ರನ್ಗಳಿಗೆ ಆಲೌಟ್
8 ವಿಕೆಟ್ ಪತನಗೊಂಡಿದ್ದ ವೇಳೆ ಕೊನೆಯಲ್ಲಿ ಮಿಂಚಿದ ಆಂಡಿಲೆ ಫೆಹ್ಲುಕ್ವಾಯೊ 49 ಎಸೆತಗಳಲ್ಲಿ 33 ರನ್ ಸಿಡಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಈ ವೇಳೆ ದಾಳಿ ನಡೆಸಿದ ಅರ್ಷದೀಪ್, ಫೆಹ್ಲುಕ್ವಾಯೊಗೆ ಗೇಟ್ ಪಾಸ್ ನೀಡಿ 5ನೇ ವಿಕೆಟ್ ಪಡೆದರು. ಕೊನೆಯಲ್ಲಿ ಕುಲ್ದೀಪ್ ಯಾದವ್, ಬರ್ಗರ್ ಅವರನ್ನು ಬೋಲ್ಡ್ ಮಾಡಿದರು. ಪರಿಣಾಮ ಸೌತ್ ಆಫ್ರಿಕಾ 27.3 ಓವರ್ಗಳಲ್ಲಿ 116 ರನ್ಗಳಿಗೆ ಆಲೌಟ್ ಆಯಿತು. ಅರ್ಷದೀಪ್ 10 ಓವರ್ಗಳಲ್ಲಿ 37 ರನ್ ನೀಡಿ 5 ವಿಕೆಟ್ ಪಡೆದರು. ಆವೇಶ್ 8 ಓವರ್ಗಳಲ್ಲಿ 27 ರನ್ ನೀಡಿ 4 ವಿಕೆಟ್ ಉರುಳಿಸಿದರು.