ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಗುಲಾಬಿ ಬಣ್ಣದ ಜೆರ್ಸಿ ಧರಿಸಿದ್ದೇಕೆ?
India vs South Africa 1st ODI: ಟೀಮ್ ಇಂಡಿಯಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಗುಲಾಬಿ ಬಣ್ಣದ (ಪಿಂಕ್) ಜರ್ಸಿಯನ್ನು ಧರಿಸಿದ್ದೇಕೆ? ವಿಭಿನ್ನವಾದ ಕಿಟ್ ಧರಿಸುವುದರ ಹಿಂದಿನ ಕಾರಣ ಏನು? ಇಲ್ಲಿದೆ ವಿವರ.
ಭಾನುವಾರ (ಡಿಸೆಂಬರ್ 17) ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು (India vs South Africa 1st ODI) ಸೆಣಸಾಟ ನಡೆಸುತ್ತಿವೆ. ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಿ20 ಸರಣಿಯ ಸಮಬಲಗೊಂಡ ಕಾರಣ, ಏಕದಿನ ಸರಣಿಯನ್ನು ಗೆಲ್ಲಲು ಉಭಯ ತಂಡಗಳು ಸಜ್ಜಾಗಿವೆ.
2011ರ ಜನವರಿ 15ರಂದು ದಕ್ಷಿಣ ಆಫ್ರಿಕಾ ತಂಡವನ್ನು 1 ರನ್ನಿಂದ ಸೋಲಿಸಿದ ನಂತರ ಭಾರತ ತಂಡ ಜೋಹಾನ್ಸ್ಬರ್ಗ್ನಲ್ಲಿ ಈವರೆಗೂ ಒಂದು ಪಂದ್ಯವನ್ನೂ ಗೆದ್ದಿಲ್ಲ. ಇದೀಗ ಕೆಎಲ್ ರಾಹುಲ್ ನಾಯಕತ್ವದಲ್ಲಿ ವಿಶ್ವದ ನಂ. 1 ಏಕದಿನ ತಂಡವು ಗೆಲ್ಲುವ ಮೂಲಕ 12 ವರ್ಷಗಳ ಕಾಯುವಿಕೆಗೆ ಬ್ರೇಕ್ ಹಾಕಲು ಎದುರು ನೋಡುತ್ತಿದೆ.
ಪಿಂಕ್ ಜೆರ್ಸಿಯಲ್ಲಿ ಕಾಣಿಸಿಕೊಂಡ ಸೌತ್ ಆಫ್ರಿಕಾ
ಭಾರತದ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಹಸಿರು ಜೆರ್ಸಿಯ ಬದಲಿಗೆ ಗುಲಾಬಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಿದೆ. ಆಟಗಾರರು ಮಾತ್ರವಲ್ಲ, ಮೈದಾನಕ್ಕೆ ಬಂದಿರುವ ಪ್ರೋಟಿಯಾಸ್ ಅಭಿಮಾನಿಗಳು ಸಹ ಪಿಂಕ್ ಡ್ರೆಸ್ ಮತ್ತು ಪಿಂಕ್ ಜೆರ್ಸಿಯಲ್ಲೇ ಕಾಣಿಸಿಕೊಳ್ಳಲಿದ್ದಾರೆ.
ಹಾಗಾದರೆ ಹರಿಣಗಳು ಗುಲಾಬಿ ಬಣ್ಣದ ಜರ್ಸಿಯನ್ನು ಧರಿಸಿದ್ದೇಕೆ? ವಿಭಿನ್ನವಾದ ಕಿಟ್ ಧರಿಸುವುದರ ಹಿಂದಿನ ಕಾರಣ ಏನು? ವರ್ಷಕ್ಕೆ ಪಂದ್ಯವೊಂದರಲ್ಲಿ ಪಿಂಕ್ ಜೆರ್ಸಿ ಧರಿಸುವುದು ಸೌತ್ ಆಫ್ರಿಕಾದ ಒಂದು ಭಾಗವಾಗಿದೆ. ಇನ್ನು ಗುಲಾಬಿ ಬಣ್ಣದ ಜೆರ್ಸಿ ಧರಿಸುವುದರ ಹಿಂದೆ ಅತ್ಯುತ್ತಮ ಉದ್ದೇಶ ಇದೆ ಎಂಬುದು ವಿಶೇಷ.
ಪಿಂಕ್ ಜೆರ್ಸಿ ಧರಿಸುವುದೇಕೆ?
ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಬೆಂಬಲ ನೀಡುವ ಸಲುವಾಗಿ ಈ ಜೆರ್ಸಿಯನ್ನು ದಕ್ಷಿಣ ಆಫ್ರಿಕಾ ಧರಿಸುತ್ತದೆ. ಮೈದಾನಕ್ಕೆ ಬರುವ ಅಭಿಮಾನಿಗಳು ಸಹ ಗುಲಾಬಿ ಬಣ್ಣದ ಶರ್ಟ್ಗಳನ್ನೇ ಧರಿಸಿ ಸ್ತನ ಕ್ಯಾನ್ಸರ್ ಜಾಗೃತಿಗೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಈ ಮಹತ್ವದ ಉದ್ದೇಶದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪಂದ್ಯಕ್ಕೂ ಮುನ್ನ ಮನವಿ ಮಾಡಿತ್ತು
ಈ ಪಂದ್ಯದ ವೆಚ್ಚವು ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಉಪಕ್ರಮಗಳಿಗೆ ದೇಣಿಗೆ ನೀಡಲಾಗುತ್ತದೆ. ಜೊತೆಗೆ ಶಿಕ್ಷಣ ಮತ್ತು ಸಂಶೋಧನೆಗಳಿಗೂ ಈ ಹಣವನ್ನು ವ್ಯಯಿಸಲಾಗುತ್ತದೆ. ಮಹತ್ವದ ಕಾರ್ಯಕ್ಕೆ ದಕ್ಷಿಣ ಆಫ್ರಿಕಾ ತಂಡವು ಈ ಗುಲಾಬಿ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿದು ಸಾಮಾಜಿಕ ಸಂದೇಶದ ಮೂಲಕ ಪ್ರತಿ ವರ್ಷ ಗಮನ ಸೆಳೆಯುತ್ತಿದೆ.
2011ರ ಏಕದಿನ ವಿಶ್ವಕಪ್ ನಂತರ ದಕ್ಷಿಣ ಆಫ್ರಿಕಾ ಗುಲಾಬಿ ಜರ್ಸಿಯನ್ನು ಧರಿಸಲು ಪ್ರಾರಂಭಿಸಿತು. 2012ರಲ್ಲಿ ಆಫ್ರಿಕಾ ಮೊದಲ ಬಾರಿಗೆ ಪಿಂಕ್ ಜೆರ್ಸಿಯೊಂದಿಗೆ ಕಣಕ್ಕಿಳಿಯಿತು. ಮತ್ತು ಅಂದಿನಿಂದ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕಾರಣಕ್ಕಾಗಿ ಈ ಜೆರ್ಸಿ ಧರಿಸುತ್ತಿದ್ದಾರೆ. ಈ ಸಂಪ್ರದಾಯ ಈಗಲೂ ಮುಂದುವರೆದಿದೆ.
ಸಿಇಒ ಫೋಲೆಟ್ಸಿ ಮೊಸೆಕಿ ಹೇಳಿದ್ದೇನು?
ಈ ಸಂಪ್ರದಾಯದ ಬಗ್ಗೆ ಮಾತನಾಡಿದ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಸಿಇಒ ಫೋಲೆಟ್ಸಿ ಮೊಸೆಕಿ, ಕ್ರಿಕೆಟ್ ಅಭಿಮಾನಿಗಳೊಂದಿಗೆ ಮತ್ತೊಮ್ಮೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಸಂತೋಷಪಡುತ್ತೇವೆ. ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡಲು, ಜಾಗೃತಿ ಮಾತ್ರ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತದೆ. ಆದರೆ ಇದು ಪುರುಷರ ಮೇಲೂ ಪರಿಣಾಮ ಬೀರಬಹುದು. ಆರಂಭಿಕ ಪತ್ತೆ ಪರಿಣಾಮಕಾರಿ ಚಿಕಿತ್ಸೆ ಮತ್ತು ಧನಾತ್ಮಕ ಫಲಿತಾಂಶಕ್ಕೆ ಕಾರಣವಾಗಬಹುದು. ಹಾಗಾಗಿ ಪಂದ್ಯದ ವೆಚ್ಚವನ್ನು ದೇಣಿಗೆ ಮೂಲಕ ನೀಡುತ್ತೇವೆ ಎಂದು ಹೇಳಿದ್ದಾರೆ.
ಪಿಂಕ್ ಜೆರ್ಸಿಯಲ್ಲಿ ಸೌತ್ ಆಫ್ರಿಕಾ ಏಕದಿನ ದಾಖಲೆ
ದಕ್ಷಿಣ ಆಫ್ರಿಕಾದ ಪುರುಷರ ಕ್ರಿಕೆಟ್ ತಂಡವು ಇದುವರೆಗೆ 11 ಏಕದಿನ ಪಂದ್ಯಗಳಲ್ಲಿ ಪಿಂಕ್ ಜೆರ್ಸಿ ಧರಿಸಿ ಕಣಕ್ಕಿಳಿದಿದೆ. ಈ ಪೈಕಿ 9 ಪಂದ್ಯಗಳಲ್ಲಿ ಜಯದ ನಗೆ ಬೀರಿದೆ. 2015ರಲ್ಲಿ ಪಿಂಕ್ ಜೆರ್ಸಿ ಧರಿಸಿದ್ದ ಏಕದಿನ ಪಂದ್ಯದಲ್ಲಿ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 31 ಎಸೆತಗಳಲ್ಲಿ ಒಡಿಐ ಶತಕ ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದರು.