logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ; ಏಷ್ಯಾಕಪ್ ಆಯ್ಕೆ ಕುರಿತು ತಿಲಕ್ ವರ್ಮಾ ಪ್ರತಿಕ್ರಿಯೆ

ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ; ಏಷ್ಯಾಕಪ್ ಆಯ್ಕೆ ಕುರಿತು ತಿಲಕ್ ವರ್ಮಾ ಪ್ರತಿಕ್ರಿಯೆ

HT Sports Desk HT Kannada

Aug 22, 2023 02:36 PM IST

google News

ಏಷ್ಯಾಕಪ್‌ಗೆ ಆಯ್ಕೆಯಾದ ತಿಲಕ್‌ ವರ್ಮಾ

    • Tilak Varma: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯಲ್ಲಿ ಅಬ್ಬರಿಸಿದ್ದ ಯುವ ಆಟಗಾರ ತಿಲಕ್‌ ವರ್ಮಾ ಇದೀಗ ಇದೀಗ ಏಷ್ಯಾಕಪ್‌ ಟೂರ್ನಿಗೆ ಆಯ್ಕೆಯಾಗಿದ್ದಾರೆ. ತಮ್ಮ ಆಯ್ಕೆ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಏಷ್ಯಾಕಪ್‌ಗೆ ಆಯ್ಕೆಯಾದ ತಿಲಕ್‌ ವರ್ಮಾ
ಏಷ್ಯಾಕಪ್‌ಗೆ ಆಯ್ಕೆಯಾದ ತಿಲಕ್‌ ವರ್ಮಾ

ಐಪಿಎಲ್‌ನಲ್ಲಿ ಮಿಂಚಿದ್ದ ಯುವ ಆಟಗಾರ ತಿಲಕ್‌ ವರ್ಮಾ (Tilak Varma), ಟೀಮ್‌ ಇಂಡಿಯಾಗೆ ಆಯ್ಕೆಯಾಗುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರಿ ಭರವಸೆ ಮೂಡಿಸಿದ್ದಾರೆ. ಇದೀಗ ಮಹತ್ವದ ಏಷ್ಯಾಕಪ್‌ (2023 Asia Cup) ಟೂರ್ನಿಗೆ ಆಯ್ಕೆಯಾಗುವುದರೊಂದಿಗೆ ಮತ್ತೆ ಪ್ರವರ್ಧಮಾನಕ್ಕೆ ಬಂದಿದ್ದಾರೆ.

ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ಅವರು 2023ರ ಏಷ್ಯಾಕಪ್‌ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದ್ದು, ಒಟ್ಟು 17 ಆಟಗಾರರಲ್ಲಿ ತಿಲಕ್ ವರ್ಮಾ ಕೂಡ ಸ್ಥಾನ ಪಡೆದಿದ್ದಾರೆ. ವಿಂಡೀಸ್‌ ವಿರುದ್ಧದ ತಮ್ಮ ಚೊಚ್ಚಲ ಟಿ20 ಸರಣಿಯಲ್ಲೇ ಯಶಸ್ವಿಯಾಗಿದ್ದ ಯುವ ಕ್ರಿಕೆಟಿಗ ಇದೀಗ ಏಕದಿನ ಸ್ವರೂಪದಲ್ಲೂ ಸಾಮರ್ಥ್ಯ ಪ್ರದರ್ಶಿಸಲು ಸಿದ್ಧರಾಗಿದ್ದಾರೆ.

ಪ್ರತಿಷ್ಠಿತ ಏಷ್ಯಾಕಪ್‌ ಟೂರ್ನಿಯಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಆಂಧ್ರಪ್ರದೇಶದ ಕ್ರಿಕೆಟಿಗ ಸಜ್ಜಾಗಿದ್ದಾರೆ. ಐಪಿಎಲ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಮುಂಬೈ ಇಂಡಿಯನ್ಸ್‌ ಪರ ಆಡಿ ಜಾಗತಿಕವಾಗಿ ಗುರುತಿಸಿಕೊಂಡಿರುವ ವರ್ಮಾ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.

ಆಗಸ್ಟ್ 3ರಂದು ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ತಿಲಕ್‌, ಆ ಬಳಿಕ ಐರ್ಲೆಂಡ್‌ ವಿರುದ್ಧದ ಎರಡು ಟಿ20 ಸೇರಿಂದತೆ ಒಟ್ಟು ಏಳು ಪಂದ್ಯಗಳಲ್ಲಿ 138.09ರ ಸ್ಟ್ರೈಕ್ ರೇಟ್ ಮತ್ತು 34.80ರ ಸರಾಸರಿಯಲ್ಲಿ 174 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಹಾಗೂ ಒಂದು ಅಜೇಯ 49 ರನ್‌ ಕೂಡಾ ಸೇರಿದೆ.

ಕನಸಿನಲ್ಲೂ ಅಂದುಕೊಂಡಿರಲಿಲ್ಲ

ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಬೆನ್ನಲ್ಲೇ ತಿಲಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಆಡಬೇಕೆಂದು ಬಯಸಿದ್ದ ವರ್ಮಾ, ಏಷ್ಯಾಕಪ್‌ಗೆ ಆಯ್ಕೆಯಾಗುವ ಬಗ್ಗೆ ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲವಂತೆ.

“ನಾನು ಏಷ್ಯಾಕಪ್‌ ತಂಡಕ್ಕೆ ಆಯ್ಕೆಯಾಗುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಅದು ಕೂಡ ಏಕದಿನ ತಂಡದಲ್ಲಿ. ನಾನು ಭಾರತ ಏಕದಿನ ತಂಡದಲ್ಲಿ ಆಡಬೇಕೆಂಬ ಕನಸು ಯಾವಾಗಲೂ ಕಾಣುತ್ತಿದ್ದೆ. ಆದರೆ ಇದು ನನಗೆ ದೊಡ್ಡ ವಿಷಯ. ಅದು ಕೂಡಾ ಒಂದೇ ವರ್ಷದಲ್ಲಿ ಎಲ್ಲವೂ ನನಸಾಗಿದೆ. ನಾನು ಟಿ20 ಪದಾರ್ಪಣೆ ಮಾಡಿದ ಒಂದು ತಿಂಗಳೊಳಗೆ ಏಷ್ಯಾಕಪ್‌ ಏಕದಿನ ತಂಡಕ್ಕೂ ಆಯ್ಕೆಯಾಗಿದ್ದೇನೆ. ಇದು ನನ್ನ ಕನಸು ನನಸಾದ ಸಮಯ. ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ” ಎಂದು BCCI.tvಗೆ ತಿಲಕ್ ಪ್ರತಿಕ್ರಿಯೆ ನೀಡಿದ್ದಾರೆ.‌

ಏಕದಿನದಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ

“ನಾನು ಏಕದಿನ ಕ್ರಿಕೆಟ್ ಆಡುವ ಬಗ್ಗೆ ಸಾಕಷ್ಟು ವಿಶ್ವಾಸದಲ್ಲಿದ್ದೇನೆ. ಏಕೆಂದರೆ ನಾನು ಲಿಸ್ಟ್ ಎ ಕ್ರಿಕೆಟ್‌ ಮೂಲಕ ನಾನು ಏಕದಿನ ಕ್ರಿಕೆಟ್‌ ಅನ್ನು ದೀರ್ಘಕಾಲ ಆಡಿದ್ದೇನೆ. ನಾನು ನನ್ನ ರಾಜ್ಯದ ಪರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ನನ್ನ ತಂಡ ಕೂಡಾ ಉತ್ತಮ ಪ್ರದರ್ಶನ ನೀಡಿವೆ. ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲೆ ಎಂಬ ವಿಶ್ವಾಸ ನನಗಿದೆ. ಹೀಗಾಗಿ ಏಷ್ಯಾಕಪ್‌ನಲ್ಲಿ ಆಡುವುದಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ” ಎಂದು ತಿಲಕ್ ಹೇಳಿದ್ದಾರೆ.

ರೋಹಿತ್ ಶರ್ಮಾ ಬೆಂಬಲ

ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೆಂಬಲ ನನಗೆ ತುಂಬಾ ನೆರವಾಗಿದೆ ಎಂದು ತಿಲಕ್ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕನೂ ಆಗಿರುವ ರೋಹಿತ್ ತಂಡದಲ್ಲೇ ತಿಲಕ್‌ ಆಡಿದ್ದಾರೆ. ಐಪಿಎಲ್ ವೃತ್ತಿಜೀವನದಲ್ಲಿ 25 ಪಂದ್ಯಗಳಲ್ಲಿ 144.53ರ ಸ್ಟ್ರೈಕ್ ರೇಟ್ ಹಾಗೂ 38.95ರ ಸರಾಸರಿಯಲ್ಲಿ 740 ರನ್ ಗಳಿಸಿರುವ ತಿಲಕ್‌, ಮೂರು ಅರ್ಧ ಶತಕ ಸಿಡಿಸಿದ್ದಾರೆ. “ರೋಹಿತ್ ಭಯ್ಯಾ ಯಾವಾಗಲೂ ನನ್ನನ್ನು ಬೆಂಬಲಿಸುತ್ತಿದ್ದರು. ನಾನು ಐಪಿಎಲ್‌ನಲ್ಲಿ ಆಡುವಾಗ, ಆರಂಭದಲ್ಲಿ ಸ್ವಲ್ಪ ನರ್ವಸ್‌ ಆಗಿದ್ದೆ. ಆಗ ಅವರೇ ನನ್ನ ಬಳಿ ಬಂದು ಆಟದ ಬಗ್ಗೆ ಮಾತನಾಡುತ್ತಿದ್ದರು. ಯಾವಾಗಲೂ ನಿಮ್ಮ ಆಟವನ್ನು ಆನಂದಿಸಿ ಮತ್ತು ಯಾವಾಗಲೂ ಮುಕ್ತವಾಗಿರಿ ಎಂದು ಹೇಳಿದರು. ಮಾತನಾಡಲು ಬಯಸಿದಾಗ ಯಾವಾಗ ಬೇಕಾದರೂ ನನ್ನೊಂದಿಗೆ ಮಾತನಾಡಬಹುದು ಅಥವಾ ನನಗೆ ಸಂದೇಶ ಕಳುಹಿಸಬಹುದು. ನಾನು ನಿಮ್ಮೊಂದಿಗೆ ಇರುತ್ತೇನೆ ಎಂಬ ಭರವಸೆ ನೀಡಿದರು” ಎಂದು ತಿಲಕ್ ಹೇಳಿದ್ದಾರೆ.

ಕ್ರಿಕೆಟ್‌ ಕುರಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ