logo
ಕನ್ನಡ ಸುದ್ದಿ  /  ಕ್ರಿಕೆಟ್  /  India Vs Sri Lanka: ಸಿರಾಜ್ ದಾಳಿಗೆ ಲಂಕಾ ದಹನ; 8ನೇ ಬಾರಿ ಏಷ್ಯಾಕಪ್ ಕಪ್ ಎತ್ತಿ ಹಿಡಿದ ಟೀಂ ಇಂಡಿಯಾ

India vs Sri Lanka: ಸಿರಾಜ್ ದಾಳಿಗೆ ಲಂಕಾ ದಹನ; 8ನೇ ಬಾರಿ ಏಷ್ಯಾಕಪ್ ಕಪ್ ಎತ್ತಿ ಹಿಡಿದ ಟೀಂ ಇಂಡಿಯಾ

Raghavendra M Y HT Kannada

Sep 17, 2023 07:11 PM IST

google News

ಶ್ರೀಲಂಕಾ ಬ್ಯಾಟರ್‌ಗಳ ವಿಕೆಟ್ ಪಡೆದಾಗ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮತ್ತು ವಿರಾಟ್ ಕೊಹ್ಲಿ ಸಂಭ್ರಮಿಸಿದ್ದು ಹೀಗೆ (PTI)

  • ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 51 ರನ್‌ಗಳ ಅಸಾಧಾರಣ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, 6.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿ, 8ನೇ ಬಾರಿಗೆ ಏಷ್ಯಾಕಪ್ ಎತ್ತಿಹಿಡಿದೆ.

ಶ್ರೀಲಂಕಾ ಬ್ಯಾಟರ್‌ಗಳ ವಿಕೆಟ್ ಪಡೆದಾಗ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮತ್ತು ವಿರಾಟ್ ಕೊಹ್ಲಿ ಸಂಭ್ರಮಿಸಿದ್ದು ಹೀಗೆ (PTI)
ಶ್ರೀಲಂಕಾ ಬ್ಯಾಟರ್‌ಗಳ ವಿಕೆಟ್ ಪಡೆದಾಗ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮತ್ತು ವಿರಾಟ್ ಕೊಹ್ಲಿ ಸಂಭ್ರಮಿಸಿದ್ದು ಹೀಗೆ (PTI)

ಕೊಲಂಬೊ (ಶ್ರೀಲಂಕಾ): ಟೀಂ ಇಂಡಿಯಾ (Team India) ಏಷ್ಯಾಕಪ್ 2023ರ (Asia Cup Final 2023) ಸಾಲಿನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶ್ರೀಲಂಕಾ (Sri Lanka) ನೀಡಿದ್ದ 51 ರನ್‌ಗಳ ಸಾಧಾರಣ ಗುರಿಯನ್ನು ಕೇವಲ 6.1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ ತಲುಪಿತು. ಆ ಮೂಲಕ 2022ರ ಚಾಂಪಿಯನ್ ತಂಡವನ್ನು ಮಣಿಸಿ 8ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಆಗಿದೆ.

ಭಾರತ ತಂಡದ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಆಟವನ್ನು ಬೇಗ ಮುಗಿಸಿದರು. ಇಶಾನ್ ಕಿಶನ್ 18 ಎಸೆತಗಳಿಂದ 3 ಬೌಂಡರಿ ಸೇರಿ 23 ರನ್ ಗಳಿಸಿದರೆ, ಶುಭ್ಮನ್ ಗಿಲ್ 19 ಎಸೆತಗಳಿಂದ 6 ಬೌಂಡರಿ ಸೇರಿ 27 ರನ್ ಗಳಿಸಿ ಔಟಾಗದೆ ಉಳಿದರು.

ಟೀಂ ಇಂಡಿಯಾ ರೋಹಿತ್ ಅವರ ನಾಯಕತ್ವದಲ್ಲೇ 2018ರಲ್ಲಿ ಕೊನೆಯ ಬಾರಿಗೆ ತನ್ನ 7ನೇ ಏಷ್ಯಾಕಪ್ ಗೆದ್ದುಕೊಂಡಿತ್ತು. ಶ್ರೀಲಂಕಾ ಈವರೆಗೆ 6 ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದಿತ್ತು. ಈ ಬಾರಿಯೂ ಭಾರತ ಹಿಟ್‌ ಮ್ಯಾನ್ ರೋಹಿತ್ ಅವರ ಮುಂದಾಳತ್ವದಲ್ಲೇ 2023ರ ಚಾಂಪಿಯನ್ ಆಗುವ ಮೂಲಕ 8ನೇ ಬಾರಿಗೆ ಏಷ್ಯಾಕಪ್‌ಅನ್ನು ಮುಡಿಗೇರಿಸಿಕೊಂಡಿದೆ. ಫೈನಲ್ ಕದನದಲ್ಲಿ 6 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಕುಲ್ದೀಪ್ ಯಾದವ್ ಟೂರ್ನಿ ಶ್ರೇಷ್ಠ ಎನಿಸಿದರು.

2, 0, 0, 0, 4, 0, 8, 1, 0 ಇದು ಶ್ರೀಲಂಕಾ ಬ್ಯಾಟರ್‌ಗಳ ವೈಯಕ್ತಿಕ ಸ್ಕೋರ್

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಸಿರಾಜ್ ದಾಳಿಯ ಮುಂದೆ ಫುಲ್ ಸೈಲೆಂಟ್ ಆಯ್ತು. 2, 0, 0, 0, 4, 0, 8, 1, 0 ಇದು ಯಾವುದೋ ಫೋನ್ ನಂಬರ್ ಅಲ್ಲ. ಬದಲಾಗಿ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ ಬ್ಯಾಟ್ಸಮನ್‌ಗಳು ಗಳಿಸಿರುವ ರನ್‌.

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಅವರ ಬೆಂಕಿಯ ದಾಳಿಗೆ ತತ್ತರಿಸಿದ ಲಂಕಾ ತಂಡ ಕೇವಲ 15.2 ಓವರ್‌ಗಳಲ್ಲಿ ಕೇವಲ 50 ರನ್ ಗಳಿಸಿ ಸರ್ವ ಪತನ ಕಂಡಿದೆ. ಆ ಮೂಲಕ ಟೀಂ ಇಂಡಿಯಾ ಏಷ್ಯಾ ಕಪ್ ಚಾಂಪಿಯನ್ ಆಗಲು ಕೇವಲ 51 ರನ್ ಗಳ ಅಸಾಧಾರಣ ಗುರಿ ನೀಡಿತು.

ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಲಂಕಾದ ಮೊದಲ ವಿಕೆಟ್ ಪತನವಾಯ್ತು. ಜಸ್ಪ್ರೀತ್ ಬುಮ್ರಾ ಎಸೆದ ಮೂರನೇ ಎಸೆತದಲ್ಲೇ ಕುಸಾಲ್ ಪೆರೇರ (0) ಕೀಪರ್ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ನಡೆದಿದ್ದೇ ಮೊಹಮ್ಮದ್ ಸಿರಾಜ್ ಅವರ ಬೆಂಕಿಯಂತಹ ದಾಳಿ.

ವೃತ್ತಿ ಜೀವನದ ಬೆಸ್ಟ್ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್

ಇನ್ನಿಂಗ್ಸ್‌ನ ಎರಡನೇ ಓವರ್‌ ಎಸೆಯಲು ಬಂದ ಮೊಹಮ್ಮದ್ ಸಿರಾಜ್ ಲಂಕಾದ ಬ್ಯಾಟರ್‌ಗಳನ್ನು ಅಕ್ಷರಶಃ ಕಾಡಿದರು. ಸಿರಾಜ್ ಅವರ ಬೆಂಕಿಯಂತಹ ಎಸೆತಗಳನ್ನು ಮುಟ್ಟಲು ಹಿಂದೇಟು ಹಾಕಿದರು. ಧೈರ್ಯ ಮಾಡಿ ಸಿರಾಜ್ ಎಸೆತಗಳನ್ನು ಮುಟ್ಟಿದರೆ ಸಾಕು ವಿಕೆಟ್ ಖಚಿತ ಆ ಮಟ್ಟಿಗೆ ಮಾರಕ ಬೌಲಿಂಗ್ ನಡೆಸಿದರು.

ಪಾತುಮ್ ನಿಸ್ಸಾಂಕ (2), ಕುಸಾಲ್ ಮೆಂಡಿಸ್ (17), ಸದೀರ ಸಮರವಿಕ್ರಮ (0), ಚರಿತ್ ಅಸಲಂಕಾ (0), ಧನಂಜಯ ಡಿ ಸಿಲ್ವ (4), ನಾಯಕ ಶನಕ (0) ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಸಿರಾಜ್ 7 ಓವರ್‌ಗಳಲ್ಲಿ 1 ಮೆಡಿನ್ ಸೇರಿ 21 ರನ್ ನೀಡಿ ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿದರು.

ಆ ಬಳಿಕ ದಾಳಿಗೆ ಇಳಿದ ಉಪ ನಾಯಕ ಹಾರ್ದಿಕ್ ಪಾಂಡ್ಯ, ದುನಿತ್ ವೆಲ್ಲಲಾಗೆ (8), ಪ್ರಮೋದ್ ಮದುಶನ್ (1) ಹಾಗೂ ಮಥೀಶ ಪತಿರಣ (0) ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ 15.2 ಓವರ್‌ಗಳಲ್ಲಿ ಶ್ರೀಲಂಕಾ ಇನ್ನಿಂಗ್ಸ್ ಮುಗಿಸುವಂತೆ ನೋಡಿಕೊಂಡರು.

ಇದನ್ನೂ ತಿಳಿಯಿರಿ: ಏಷ್ಯಾಕಪ್ 2023 ವೇಳಾಪಟ್ಟಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ