Jasprit Bumrah: ನೇಪಾಳ ವಿರುದ್ಧದ ಪಂದ್ಯ ತಪ್ಪಿಸಿಕೊಳ್ಳಲಿರುವ ಜಸ್ಪ್ರೀತ್ ಬುಮ್ರಾ; ವೈಯಕ್ತಿಕ ಕಾರಣದಿಂದ ಮುಂಬೈಗೆ ವಾಪಸ್
Sep 04, 2023 11:56 AM IST
ನೇಪಾಳ ವಿರುದ್ಧದ ಇಂದಿನ ಪಂದ್ಯಕ್ಕೆ ಜಸ್ಪೀತ್ ಬುಮ್ರಾ ಅಲಭ್ಯರಾಗಿದ್ದು, ಅವರ ಸ್ಥಾನವನ್ನು ಮೊಹಮ್ಮದ್ ಶಮಿ ತುಂಬಲಿದ್ದಾರೆ. (AP)
ಇಂದು (ಸೆಪ್ಟೆಂಬರ್ 4, ಸೋಮವಾರ) ಏಷ್ಯಾಕಪ್‌ನಲ್ಲಿ ನೇಪಾಳ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿರುವ ಬುಮ್ರಾ ಮುಂಬೈಗೆ ವಾಪಸ್ ಆಗಿದ್ದಾರೆ.
ಮುಂಬೈ: ಏಷ್ಯಾಕಪ್ 2023ರಲ್ಲಿ (Asia Cup 2023) ಇಂದು (ಸೆಪ್ಟೆಂಬರ್ 4, ಸೋಮವಾರ) ನೇಪಾಳ ವಿರುದ್ಧದ ನಿರ್ಣಾಯಕ ಪಂದ್ಯವನ್ನು ವೇಗಿ ಜಸ್ಪ್ರೀತ್ ಬುರ್ಮಾ ತಪ್ಪಿಸಿಕೊಳ್ಳಲಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುರ್ಮಾ (Jasprit Bumrah) ಅವರ ಸೇವೆಯನ್ನು ಕಳೆದುಕೊಳ್ಳಲಿದೆ ಎಂದು ವರದಿಯಾಗಿದೆ. ಏಷ್ಯಾಕಪ್‌ಗಾಗಿ ಶ್ರೀಲಂಕಾದ ಕ್ಯಾಂಡಿಯಲ್ಲಿದ್ದ ಬುಮ್ರಾ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಭಾನುವಾರ (ಸೆಪ್ಟೆಂಬರ್ 3) ಮುಂಬೈಗೆ ವಾಪಸ್ ಆಗಿದ್ದಾರೆ.
ಏಷ್ಯಾಕಪ್ 2023ರ ಸಹ-ಆತಿಥ್ಯ ಪಾಕಿಸ್ತಾನವಾಗಿದ್ದರೂ ಭಾರತವು ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತಿದೆ. ಶನಿವಾರ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿತ್ತು.
ವರದಿಗಳ ಪ್ರಕಾರ, ರೋಹಿತ್ ಅಂಡ್ ಟೀಂ ಏಷ್ಯಾಕಪ್‌ನ ತನ್ನ ಎರಡನೇ ಪಂದ್ಯದಲ್ಲಿ ವೇಗಿ ಬುಮ್ರಾ ಅವರು ಇಲ್ಲದೆಯೇ ಕಣಕ್ಕಿಳಿಯಲಿದೆ. ಬುಮ್ರಾ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ತವರಿಗೆ ಮರಳಿದ್ದಾರೆ ಎಂದು ಹೇಳಲಾಗಿದೆ.
ಜಸ್ಪ್ರೀತ್ ಬುಮ್ರಾ ಫಿಟ್‌ನೆಸ್‌ನಲ್ಲಿ ಯಾವುದೇ ರಾಜಿಇಲ್ಲ
ಜಸ್ಪ್ರೀತ್ ಬುಮ್ರಾ ಅವರು ನೇಪಾಳ ವಿರುದ್ಧದ ಪಂದ್ಯವನ್ನು ಆಡದೆ ತವರಿಗೆ ವಾಪಸ್ ಆಗಿದ್ದಾರೆ. ಆದರೆ ಬುಮ್ರಾ ಅವರಿಗೆ ಫಿಟ್‌ನೆಸ್ ಸಮಸ್ಯೆ ಇಲ್ಲ ಎಂದು ಹೇಳಲಾಗಿದೆ. ದೀರ್ಘ ಕಾಲದ ಗಾಯದ ನಂತರ ವೇಗಿ ಬುಮ್ರಾ ಇತ್ತೀಚೆಗೆ ಟೀಂ ಇಂಡಿಯಾವನ್ನು ಸೇರಿದ್ದರು. ಅಲ್ಲದೆ, ಐರ್ಲೆಂಡ್ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯನ್ನು ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ, ದೇಶಕ್ಕೆ ಸರಣಿಯನ್ನು ತಂದುಕೊಟ್ಟಿದ್ದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-ಬಿಸಿಸಿಐ ಅನುಮತಿಯೊಂದಿಗೆ ಸ್ಟಾರ್ ವೇಗಿ ಬುಮ್ರಾ ತಮ್ಮ ವೈಯಕ್ತಿಕ ಕಾರಣಗಳನ್ನು ನೀಡಿ ಭಾನುವಾರ (ಸೆಪ್ಟೆಂಬರ್ 3) ಮುಂಬೈಗೆ ವಾಪಸ್ ಬಂದಿದ್ದಾರೆ. ಅವರಿಗೆ ಯಾವುದೇ ಫಿಟ್‌ನೆಸ್ ಸಮಸ್ಯೆ ಇಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. 29ರ ಹರೆಯದ ವೇಗದ ಬೌಲರ್ ಬುಮ್ರಾ ಅವರು ಏಷ್ಯಾಕಪ್‌ನಲ್ಲಿ ಸೂಪರ್ ಫೋರ್ ಸುತ್ತು ಆರಂಭವಾಗುವಷ್ಟರಲ್ಲಿ ಟೀಂ ಇಂಡಿಯಾವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.
ಬುಮ್ರಾ ಔಟ್, ಶನಿ ಇನ್?
ಇಂದಿನ ಪಂದ್ಯದಲ್ಲಿ ಬುಮ್ರಾ ಅವರು ಅಲಭ್ಯರಾಗಿರುವುದರಿಂದ ಅವರ ಬದಲಿಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇವತ್ತು ಪಲ್ಲೆಕೆಲೆಯಲ್ಲಿ ನಡೆಯುವ ಏಷ್ಯಾಕಪ್ 5ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮೊದಲ ಬಾರಿಗೆ ನೇಪಾಳ ತಂಡವನ್ನು ಎದುರಿಸಲಿದೆ.
ಏಷ್ಯಾಕಪ್‌ನಲ್ಲಿ ಇದೇ ಮೊದಲ ಬಾರಿಗೆ ನೇಪಾಳ ತಂಡಕ್ಕೆ ಅವಕಾಶ ನೀಡಲಾಗಿತ್ತು. ಶನಿವಾರ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವೇಗಿ ಶಮಿ ಅವರಿಗೆ ಸ್ಥಾನ ನೀಡಿರಲಿಲ್ಲ. ಆ ಪಂದ್ಯದಲ್ಲಿ ಟೀಂ ಇಂಡಿಯಾ 48.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 266 ರನ್‌ಗಳಿಸಷ್ಟೇ ಶಕ್ತವಾಗಿತ್ತು.
ಟೀಂ ಇಂಡಿಯಾದ ಇನ್ನಿಂಗ್ಸ್ ಬಳಿಕ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ಇನ್ನಿಂಗ್ಸ್ ಆರಂಭಿಸಲು ಸಾಧ್ಯವಾಗಿಲ್ಲ. ಮಳೆ ಸುರಿಯುತ್ತಲೇ ಇದ್ದ ಕಾರಣ ಪಂದ್ಯವನ್ನು ಡ್ರಾ ಮಾಡಿ ಎರಡು ತಂಡಗಳಿಗೆ ತಲಾ ಒಂದೊಂದು ಅಂಕವನ್ನು ಹಂಚಲಾಗಿತ್ತು.
ನೇಪಾಳ ವಿರುದ್ಧದ ಪಂದ್ಯವನ್ನು ರೋಹಿತ್ ಅಂಡ್ ಟೀಂ ಗೆದ್ದರೇ ಮೂರು ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆದು ಸೂಪರ್ 4 ಹಂತಕ್ಕೆ ತಲುಪಲಿದೆ. ಹೀಗಾಗಿ ಭಾರತ ತಂಡಕ್ಕೆ ಇವತ್ತಿನ ಪಂದ್ಯದ ಗೆಲುವು ಅನಿವಾರ್ಯವಾಗಿದೆ. ಆದರೆ ಈ ಪಂದ್ಯಕ್ಕೂ ಮಳೆರಾಯ ಅಡ್ಡಿ ಪಡಿಸುವ ಸಾಧ್ಯತೆ ಇದೆ.