1 ರನ್‌ಗೆ 8 ವಿಕೆಟ್ ಪತನ, 6 ಮಂದಿ ಡಕೌಟ್; ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಬ್ಯಾಟಿಂಗ್ ಕುಸಿತ ಕಂಡ ಆಸ್ಟ್ರೇಲಿಯಾದ ಕ್ರಿಕೆಟ್ ತಂಡ
Oct 25, 2024 04:59 PM IST
ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಬ್ಯಾಟಿಂಗ್ ಕುಸಿತ ಕಂಡ ಆಸ್ಟ್ರೇಲಿಯಾದ ಕ್ರಿಕೆಟ್ ತಂಡ
- ಟ್ಯಾಸ್ಮೆನಿಯಾ ವಿರುದ್ಧದ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು ಕೇವಲ ಒಂದು ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಇವರಲ್ಲಿ 6 ಬ್ಯಾಟರ್‌ಗಳು ಶೂನ್ಯ ಸಂಪಾದನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಆಟಗಾರರಿದ್ದರೂ, ಇಂಥಹ ಬ್ಯಾಟಿಂಗ್ ಕುಸಿತ ಅಪರೂಪದಲ್ಲಿ ಅಪರೂಪವಾಗಿದೆ.
ಕ್ರಿಕೆಟ್ ಕ್ರೀಡೆಯೇ ಹಾಗೆ. ಅದರಲ್ಲೂ ಸೀಮಿತ ಓವರ್‌ಗಳ ಪಂದ್ಯದ ಫಲಿತಾಂಶವು ಯಾವುದೇ ಕ್ಷಣದಲ್ಲಾದರೂ ತಿರುವು ಪಡೆಯಬಹುದು. ವೃತ್ತಿಪರ ಕ್ರಿಕೆಟ್‌ನಲ್ಲಿ ತಂಡವೊಂದು ದಿಢೀರನ್ ಆಲೌಟ್ ಆಗುವುದು, ವಿಕೆಟ್ ಕಳೆದುಕೊಳ್ಳುವುದು ತುಸು ಕಡಿಮೆ. ಆದರೆ, ಆಸ್ಟ್ರೇಲಿಯಾದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಹೀಗಾಗಿದೆ. ಉನ್ನತ ಮಟ್ಟದ ಕ್ರಿಕೆಟ್‌ನಲ್ಲಿ ತಂಡವೊಂದು ಬಲುಬೇಗನೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. ಪರ್ತ್‌ನ WACA ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ಟ್ಯಾಸ್ಮೆನಿಯಾ ತಂಡಗಳು ಮುಖಾಮುಖಿಯಾಗಿದ್ದವು. ಆಸ್ಟ್ರೇಲಿಯಾ ಏಕದಿನ ಕಪ್ ಪಂದ್ಯದಲ್ಲಿ ಆತಿಥೇಯ ತಂಡವು ಅಂತಿಮ 8 ವಿಕೆಟ್‌ಗಳನ್ನು ಕೇವಲ ಒಂದು ರನ್ ಅಂತರದಲ್ಲಿ ಕಳೆದುಕೊಂಡಿದೆ.
ತಂಡವು 53 ರನ್‌ಗಳಿಗೆ ಆಲೌಟ್ ಆಯ್ತು. ಹಾಗಂತಾ ತಂಡದಲ್ಲಿ ವೃತ್ತಿಪರ ಆಟಗಾರರು ಇರಲಿಲ್ಲ ಎಂದಲ್ಲ. ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಮತ್ತು ಜೋಶ್ ಇಂಗ್ಲಿಸ್ ಅವರಂಥ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಆಟಗಾರರು ತಂಡದಲ್ಲಿದ್ದರು. ಆದರೆ ಪರ್ತ್ ಮೂಲದ ತಂಡದ ಅಂತಿಮ ಏಳು ಬ್ಯಾಟರ್‌ಗಳಲ್ಲಿ ಯಾರೊಬ್ಬರೂ ಒಂದೇ ಒಂದು ರನ್ ಕೂಡಾ ದಾಖಲಿಸಿಲ್ಲ. ಒಂದು ಹಂತದಲ್ಲಿ ತಂಡ 52/2 ರನ್ ಗಳಿಸಿತ್ತು. ಕ್ಷಣಮಾತ್ರಕ್ಕೆ ತಂಡದ ಮೊತ್ತ 53/10 ಆಗಿದೆ. ಅಂದರೆ ತಂಡ ಆಲೌಟ್ ಆಗಿದೆ. ಇವರಲ್ಲಿ ಆರು ಬ್ಯಾಟರ್‌ಗಳು ಡಕೌಟ್ ಆಗುವ ಮೂಲಕ, ನಿಮಿಷಗಳೊಳಗೆ ಇನ್ನಿಂಗ್ಸ್ ಮುಗಿದಿದೆ.
28 ಎಸೆತಗಳ ಅವಧಿಯಲ್ಲಿ ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಔಟ್ ಆಗುತ್ತಿದ್ದಂತೆಯೇ, ಬ್ಯಾಟರ್‌ಗಳ ಡ್ರೆಸ್ಸಿಂಗ್ ರೂಮ್ ಪರೇಡ್ ಆರಂಭವಾಗಿದೆ. ಟ್ಯಾಸ್ಮೆನಿಯಾದ ತಂಡದ ಬ್ಯೂ ವೆಬ್ ಸ್ಟರ್, ತಂಡದ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ. ಅವರು 6 ವಿಕೆಟ್‌ಗಳನ್ನು ಪಡೆದರು. ಮತ್ತೊಂದೆಡೆ, ಬಿಲ್ಲಿ ಸ್ಟಾನ್ಲೇಕ್ ಕೂಡ 3 ವಿಕೆಟ್ ಕಬಳಿಸಿದರು.
ವೆಸ್ಟರ್ನ್ ಆಸ್ಟ್ರೇಲಿಯಾ 52 ರನ್ ಗಳಿಸಿದ್ದಾಗ 5 ವಿಕೆಟ್‌ಗಳನ್ನು ಕಳೆದುಕೊಂಡಿತು. 14 ಎಸೆತಗಳಲ್ಲಿ ಈ 5 ವಿಕೆಟ್‌ಗಳು ಉರುಳಿದವು. ವೆಸ್ಟರ್ನ್ ಆಸ್ಟ್ರೇಲಿಯಾ ಆರಂಭದಲ್ಲಿಯೇ ಆರನ್ ಹಾರ್ಡಿ ವಿಕೆಟ್ ಕಳೆದುಕೊಂಡರೂ ಉತ್ತಮ ಆರಂಭ ಪಡೆಯಿತು. ಬ್ಯಾನ್ಕ್ರಾಫ್ಟ್ ಮತ್ತು ಡಾರ್ಸಿ ಶಾರ್ಟ್ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು 45/1ಕ್ಕೆ ಕೊಂಡೊಯ್ದರು. ಎರಡನೇ ವಿಕೆಟ್ ಪತನವಾದ ಬೆನ್ನಲ್ಲೇ ಎಲ್ಲಾ ಬ್ಯಾಟರ್‌ಗಳು ಮೇಲಿಂದ ಮೇಲೆ ಪೆವಿಲಿಯನ್ ಸೇರಿಕೊಂಡರು.
ಚೇಸಿಂಗ್ ವೇಳೆ ಏನಾಯ್ತು?
ಚೇಸಿಂಗ್ ವೇಳೆ, ಟ್ಯಾಸ್ಮೆನಿಯಾ ತಂಡಕ್ಕೆ 50 ಓವರ್‌ಗಳಲ್ಲಿ ಕೇವಲ 54 ರನ್‌ಗಳ ಅಗತ್ಯವಿತ್ತು. ತಂಡವು ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ಮಿಚೆಲ್ ಓವನ್ ಆರಂಭಿಕರಾಗಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಟ್ಯಾಸ್ಮೆನಿಯಾ ತಂಡವು ಒಂದು ಹಂತದಲ್ಲಿ 33-0 ಸ್ಕೋರ್‌ನಿಂದ 34-3ಕ್ಕೆ ಮಿನಿ ಕುಸಿತ ಅನುಭವಿಸಿತು. ಆದರೆ, ಮ್ಯಾಥ್ಯೂ ವೇಡ್ ಅವರ ಅನುಭವದ ಆಟದ ಬಳಿಕ, ತಂಡವು 8.3 ಓವರ್‌ಗಳಲ್ಲಿ ಚೇಸಿಂಗ್ ಪೂರ್ಣಗೊಳಿಸಿತು.
ವಿಭಾಗ