ಅವರದ್ದೇನೂ ತಪ್ಪಿಲ್ಲ; ಟಿ20 ವಿಶ್ವಕಪ್ ತಂಡದಿಂದ ರಿಂಕು ಸಿಂಗ್ ಕೈಬಿಟ್ಟ ಕುರಿತು ಅಜಿತ್ ಅಗರ್ಕರ್ ಸ್ಪಷ್ಟನೆ
May 02, 2024 07:10 PM IST
ಟಿ20 ವಿಶ್ವಕಪ್ ತಂಡದಿಂದ ರಿಂಕು ಸಿಂಗ್ ಕೈಬಿಟ್ಟ ಕುರಿತು ಅಜಿತ್ ಅಗರ್ಕರ್ ಸ್ಪಷ್ಟನೆ
- ರಿಂಕು ಸಿಂಗ್ ಯಾವುದೇ ತಪ್ಪು ಮಾಡಿಲ್ಲ. ಟಿ20 ವಿಶ್ವಕಪ್‌ಗೆ ಭಾರತ ಕ್ರಿಕೆಟ್ ತಂಡದಲ್ಲಿ ಹೆಚ್ಚು ಬೌಲರ್‌ಗಳು ಬೇಕಿದ್ದರಿಂದ ಆಯ್ಕೆದಾರರು ಅಂತಿಮ 15 ಆಟಗಾರನ್ನು ಆಯ್ಕೆ ಮಾಡುವಾಗಿ ಅವರನ್ನು ಕೈಬಿಡಬೇಕಾಯ್ತು ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2024ರ ಪಂದ್ಯಾವಳಿಗೆ ಭಾರತ ತಂಡವನ್ನು ಆಯ್ಕೆ ಮಾಡಿದಾಗ, ಅಭಿಮಾನಿಗಳಿಗೆ ಅಚ್ಚರಿಯಾಗಿದ್ದು ಒಂದೇ. ಸ್ಫೋಟಕ ಫಿನಿಶರ್ ರಿಂಕು ಸಿಂಗ್‌ಗೆ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ. 15 ಆಟಗಾರರ ತಂಡದಲ್ಲಿ ಸ್ಥಾನ ಗಳಿಸದ ರಿಂಕು, ರಿಸರ್ವ್ ಪ್ಲೇಯರ್ ಆಗಿ ಪಟ್ಟಿಯಲ್ಲಿ ಸೇರ್ಪಡೆಯಾದರು. ಟೀಮ್ ಇಂಡಿಯಾ ಘೋಷಣೆ ಬಳಿಕ ಈ ವಿಚಾರ ಭಾರಿ ಚರ್ಚೆಗೆ ಕಾರಣವಾಯ್ತು. ಅಲ್ಲದೆ ರಿಂಕು ಸಿಂಗ್ ತಂಡದಲ್ಲಿ ಬೇಕಿತ್ತು ಎಂದು ಹಲವು ಮಾಜಿ ಕ್ರಿಕೆಟಿಗರು ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಯಾಯ್ತು. ಇದೀಗ, ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಈ ಕುರಿತು ಮೌನ ಮುರಿದಿದ್ದಾರೆ. ಕೆಕೆಆರ್ ಆಟಗಾರ ರಿಂಕು ಸಿಂಗ್ ಯಾವುದೇ ತಪ್ಪು ಮಾಡಿಲ್ಲ. ವಿಶ್ವಕಪ್‌ಗಾಗಿ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯದೇ ಇರುವುದು ಅವರ ತಪ್ಪಲ್ಲ ಎಂದು ಅಗರ್ಕರ್ ಹೇಳಿದ್ದಾರೆ.
ಮೇ 2ರ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಿಂಕು ಅವರನ್ನು ತಂಡದಿಂದ ಕೈಬಿಡುವುದು ಅತ್ಯಂತ ಕಠಿಣ ನಿರ್ಧಾರವಾಗಿತ್ತು. ಅವರು ಯಾವುದೇ ತಪ್ಪು ಮಾಡಿಲ್ಲ. ನಿಜ ಹೇಳಬೇಕಂದ್ರೆ ಶುಭ್ಮನ್ ಗಿಲ್ ಕೂಡಾ ಅಷ್ಟು ಉತ್ತಮ ಆಯ್ಕೆ ಅಲ್ಲ. ಆದರೆ, ಇಲ್ಲಿ ನಮಗೆ ತಂಡದ ಸಂಯೋಜನೆಯದ್ದೇ ಸಮಸ್ಯೆ. ರೋಹಿತ್ ಶರ್ಮಾ ಅವರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲು ಒಂದೆರಡು ವ್ರಿಸ್ಟ್ ಸ್ಪಿನ್ನರ್‌ಗಳನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ” ಎಂದು ಅಗರ್ಕರ್ ಹೇಳಿದ್ದಾರೆ.
“ರಿಂಕು ತಂಡದಿಂದ ಹೊರಗುಳಿದಿದ್ದು ದುರದೃಷ್ಟಕರ ಎಂದಷ್ಟೇ ಹೇಳಬಹುದು. ಅದಕ್ಕಾಗಿಯೇ ಅವರನ್ನು ರಿಸರ್ವ್ ಸ್ಥಾನದಲ್ಲಿ ಇಡಲಾಗಿದೆ. ಇದರರ್ಥ ಅವರು 15ರೊಳಗೆ ಸ್ಥಾನ ಪಡೆಯಬಲ್ಲ ಆಟಗಾರರಗೆ ತುಂಬಾ ಹತ್ತಿರ ಇದ್ದಾರೆ ಎಂಬುದು ನಿಮಗೆ ತಿಳಿಸುತ್ತದೆ. ನಮ್ಮಿಂದ ಅಂತಿಮವಾಗಿ ತಂಡದಲ್ಲಿ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಲು ಸಾಧ್ಯ” ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ ಭಾರತದ ಪರ ರಿಂಕು 11 ಇನ್ನಿಂಗ್ಸ್‌ಗಳಲ್ಲಿ ಆಡಿದ್ದಾರೆ. ಸಿಕ್ಕ ಅವಕಾಶಗಳಲ್ಲಿ ಅತ್ಯುತ್ತಮ ಹಾಗೂ ಅದ್ಭುತ ಪ್ರದರ್ಶನ ನೀಡಿರುವ ಅವರು, ಭರ್ಜರಿ 176.23ರ ಸ್ಟ್ರೈಕ್ ರೇಟ್ ಹಾಗೂ 89ರ ಸರಾಸರಿಯಲ್ಲಿ ಬ್ಯಾಟ್ ಬೀಸಿ ಬರೋಬ್ಬರಿ 356 ರನ್ ಗಳಿಸಿದ್ದಾರೆ. ಮುಖ್ಯವಾಗಿ ಫಿನಿಶರ್ ಆಗಿ ಟೀಮ್ ಇಂಡಿಯಾಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ | ಟೀಮ್ ಇಂಡಿಯಾ ಟಿ20 ವಿಶ್ವಕಪ್ ಸೆಮಿಫೈನಲ್ಗೂ ಹೋಗಲ್ಲ; ಭವಿಷ್ಯ ನುಡಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ
ಐಪಿಎಲ್‌ನಲ್ಲಿ ರಿಂಕು ಸಿಂಗ್ ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ರಿಂಕು ಎಂಟು ಬಾರಿ ಬ್ಯಾಟಿಂಗ್ ಮಾಡಿದ್ದಾರೆ. 150 ಸ್ಟ್ರೈಕ್ ರೇಟ್ ಮತ್ತು 20.50ರ ಸರಾಸರಿಯಲ್ಲಿ 123 ರನ್ ಗಳಿಸಿದ್ದಾರೆ.
ಜೂನ್ 1ರಂದು ಚುಟುಕು ವಿಶ್ವಸಮರ ಆರಂಭವಾಗುತ್ತಿದೆ. ಈ ಬಾರಿಯ ಟೂರ್ನಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿದೆ. ಜೂನ್ 5ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
2024ರ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಮೀಸಲು ಆಟಗಾರರು
ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಆವೇಶ್ ಖಾನ್.