ಟೀಮ್ ಇಂಡಿಯಾ ಟಿ20 ವಿಶ್ವಕಪ್ ಸೆಮಿಫೈನಲ್ಗೂ ಹೋಗಲ್ಲ; ಭವಿಷ್ಯ ನುಡಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ
Michael Vaughan: ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್ ವಾನ್ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ 4 ತಂಡಗಳನ್ನು ಆರಿಸಿದ್ದಾರೆ. ಆದರೆ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಕ್ಕೆ ಅವಕಾಶ ಕೊಟ್ಟಿಲ್ಲ.
ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಪ್ರಮುಖ ಆಟಗಾರರನ್ನೊಳಗೊಂಡ ಟೀಮ್ ಇಂಡಿಯಾ, ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಆದರೆ, ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ (Michael Vaughan), ಭಾರತ ತಂಡವನ್ನೇ (Team India) ಹೊರಗಿಟ್ಟು ಸೆಮಿಫೈನಲ್ ಪ್ರವೇಶಿಸುವ ತಂಡಗಳ ಕುರಿತು ಭವಿಷ್ಯ ನುಡಿದಿದ್ದಾರೆ. ಭಾರತ ಒಂದೇ ಅಲ್ಲ, ಏಷ್ಯನ್ ತಂಡಗಳನ್ನೂ ಕೈಬಿಟ್ಟಿದ್ದಾರೆ.
2007ರ ಚಾಂಪಿಯನ್ ಭಾರತ ತಂಡವನ್ನು ಪಟ್ಟಿಯಿಂದ ಹೊರಗಿಟ್ಟು ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈ ಬಾರಿ ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಮೈಕಲ್ ವಾನ್ ಹೇಳಿಕೆ ನೀಡಿದ್ದಾರೆ. ಜೂನ್ 1ರಿಂದ ಶುರುವಾಗುವ ಈ ಟೂರ್ನಿಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಟೀಮ್ ಇಂಡಿಯಾ ಜೂನ್ 5ರಿಂದ ತನ್ನ ಅಭಿಯಾನ ಆರಂಭಿಸಲಿದೆ.
ಏಷ್ಯನ್ ತಂಡಗಳಿಗಿಲ್ಲ ಜಾಗ
ಭಾರತ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಸೇರಿದಂತೆ ಹಲವು ತಂಡಗಳು ಈಗಾಗಲೇ ತಮ್ಮ 15 ಸದಸ್ಯರ ತಂಡವನ್ನು ಘೋಷಿಸಿವೆ. ಇದರ ಬೆನ್ನಲ್ಲೇ ತಂಡಗಳಲ್ಲಿ ಆಟಗಾರರ ಪರಿಶೀಲನೆ ನಡೆಸಿದ ಬಳಿಕ ಮೈಕಲ್ ವಾನ್, ರೋಹಿತ್ ಶರ್ಮಾ ನೇತೃತ್ವದ ತಂಡ ಕೈಬಿಟ್ಟಿದ್ದಾರೆ. ಆಸೀಸ್ ತನ್ನ ತಂಡ ಪ್ರಕಟಿಸಿದ ಬಳಿಕ ಮಾಜಿ ಬ್ಯಾಟ್ಸ್ಮನ್ ಸೆಮೀಸ್ಗೇರುವ ತಂಡಗಳ ಹೆಸರನ್ನು ಪ್ರಕಟಿಸಿದ್ದಾರೆ.
ಎರಡು ಬಾರಿ ಮಾಜಿ ಚಾಂಪಿಯನ್ ಆದ ಸಹ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಬೆಂಬಲಿಸಿದ್ದಾರೆ. ಹಾಗೆಯೇ ಏಡೆನ್ ಮಾರ್ಕ್ರಮ್ ನೇತೃತ್ವದ ದಕ್ಷಿಣ ಆಫ್ರಿಕಾದ ತಂಡ ಸಹ ಸೆಮಿಫೈನಲ್ ತಲುಪಲಿದೆ ಎಂದು ವಾನ್ ಭವಿಷ್ಯ ನುಡಿದಿದ್ದಾರೆ. ಟಿ20 ವಿಶ್ವಕಪ್ಗೆ ನನ್ನ 4 ಸೆಮಿಫೈನಲ್ ಸ್ಪರ್ಧಿಗಳು ಅಂದರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಎಂದು ಮಾಜಿ ಇಂಗ್ಲಿಷ್ ಆಟಗಾರ ಟ್ವೀಟ್ ಮಾಡಿದ್ದಾರೆ.
ಪ್ರತಿ ಐಸಿಸಿ ಟೂರ್ನಿಯಲ್ಲಿ ಭಾರತ ತಂಡವನ್ನು ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿ ಆಯ್ಕೆ ಮಾಡುವ ಮೈಕಲ್ ವಾನ್ ಅವರ ಈ ಬಾರಿಯ ಭವಿಷ್ಯವಾಣಿ ಆಶ್ಚರ್ಯವನ್ನುಂಟು ಮಾಡಿತು. ಆದಾಗ್ಯೂ, ಈ ನಿರ್ಧಾರವನ್ನು ಅಭಿಮಾನಿಗಳು ಸಕಾರಾತ್ಮಕವಾಗಿ ಸ್ವಾಗತಿಸಿದ್ದಾರೆ. ನಿಮ್ಮ ತಜ್ಞರ ಅಭಿಪ್ರಾಯಕ್ಕೆ ಧನ್ಯವಾದಗಳು" ಎಂದು ಬಳಕೆದಾರರು ವಾನ್ ಅವರ ಟ್ವೀಟ್ ಅನ್ನು ಮರು ಪೋಸ್ಟ್ ಮಾಡಿದ್ದಾರೆ.
ಭಾರತವನ್ನು ಉಲ್ಲೇಖಿಸದಿರುವುದೇ ಒಳ್ಳೆಯದು ಎಂದ ನೆಟ್ಟಿಗರು
ಮಾಜಿ ಕ್ರಿಕೆಟಿಗ ತಂಡವನ್ನು ಸಂಭಾವ್ಯ ಸೆಮಿ-ಫೈನಲಿಸ್ಟ್ ಆಗಿ ಸೇರಿಸದ ನಂತರ ದ್ವೈವಾರ್ಷಿಕ ಟೂರ್ನಿಯಲ್ಲಿ ಭಾರತವು ಟ್ರೋಫಿಯನ್ನು ಎತ್ತುವ ಹೆಚ್ಚಿನ ಅವಕಾಶ ಇದೆ ಎಂದು ಇನ್ನೊಬ್ಬ ಬಳಕೆದಾರರು ಭವಿಷ್ಯ ನುಡಿದಿದ್ದಾರೆ. ಇದರರ್ಥ ನಾವು ಈ ಬಾರಿ ಟ್ರೋಫಿಯನ್ನು ಗೆಲ್ಲುತ್ತಿದ್ದೇವೆ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ‘ಮಿಸ್ಟರ್ ವಾನ್, ನಿಮ್ಮ ಭವಿಷ್ಯವಾಣಿಯ ಆಟ ನಮಗೆಲ್ಲರಿಗೂ ತಿಳಿದಿದೆ. ನೀವು ಭಾರತ ತಂಡವನ್ನು ಉಲ್ಲೇಖಿಸಲಿಲ್ಲ, ಅದು ಭಾರತಕ್ಕೆ ಒಳ್ಳೆಯದು’ ಎಂದಿದ್ದಾರೆ.
ಭಾರತ ತಂಡ ಜೂನ್ 5 ರಂದು ತನ್ನ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದ್ದು, ಜೂನ್ 9 ರಂದು ಪಾಕಿಸ್ತಾನ ವಿರುದ್ಧ ಬಹುನಿರೀಕ್ಷಿತ ಪಂದ್ಯವನ್ನು ಆಡಲಿದೆ. ಭಾರತ ತಂಡಕ್ಕೆ ಪ್ರಮುಖ ಆಟಗಾರರಿಗೆ ಅವಕಾಶ ನೀಡದೇ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.