ವಿರಾಟ್ ಕೊಹ್ಲಿಯಂತೆ ಎಲ್ಲರೂ ಆಗಬೇಕು: ಬಾಂಗ್ಲಾದೇಶ ಟೆಸ್ಟ್ ಬಳಿಕ ಬಿಸಿಸಿಐ ಕ್ರಾಂತಿಕಾರಿ ನಿರ್ಧಾರ
Oct 02, 2024 09:59 AM IST
ವಿರಾಟ್ ಕೊಹ್ಲಿಯಂತೆ ಎಲ್ಲರೂ ಆಗಬೇಕು: ಬಾಂಗ್ಲಾದೇಶ ಟೆಸ್ಟ್ ಬಳಿಕ ಬಿಸಿಸಿಐ ಕ್ರಾಂತಿಕಾರಿ ನಿರ್ಧಾರ
- BCCI: ಟೀಮ್ ಇಂಡಿಯಾವನ್ನು ಫಿಟ್ ಆಗಿ ಇರಿಸಿಕೊಳ್ಳಲು ಬಿಸಿಸಿಐ ಹೆಚ್ಚಿನ ಗಮನ ನೀಡಿದ್ದು, ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದೆ. ಇಂತಹದೊಂದು ವಿಶೇಷ ಸೌಲಭ್ಯ ಇದೀಗ ಭಾರತದ ಪ್ರತಿಯೊಬ್ಬ ವೃತ್ತಿಪರ ಕ್ರಿಕೆಟಿಗರಿಗೂ ಲಭ್ಯವಾಗಲಿದೆ.
ಕಾನ್ಪುರ ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು ಕೇವಲ ಎರಡೂವರೆ ದಿನಗಳ ಆಟದಲ್ಲಿ ಸೋಲಿಸುವ ಮೂಲಕ ಟೀಮ್ ಇಂಡಿಯಾ ಎಲ್ಲರನ್ನು ಅಚ್ಚರಿಗೊಳಿಸಿತು. ಈ ಮೂಲಕ ಕಳೆದ 12 ವರ್ಷಗಳಿಂದ ತವರಿನಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಬ್ಯಾಟಿಂಗ್, ಬೌಲಿಂಗ್ ಅಥವಾ ಫೀಲ್ಡಿಂಗ್ ಆಗಿರಲಿ ಟೀಮ್ ಇಂಡಿಯಾದ ಗೆಲುವಿಗೆ ಪ್ರತಿಯೊಬ್ಬ ಆಟಗಾರನೂ ಕೊಡುಗೆ ನೀಡಿದ್ದಾರೆ. ಇದರಲ್ಲಿ ಆಟಗಾರರ ಸಾಮರ್ಥ್ಯ ಖಂಡಿತವಾಗಿಯೂ ಇದೆ, ಜೊತೆಗೆ ಅವರ ಫಿಟ್ನೆಸ್ ಕೂಡ ದೊಡ್ಡ ಪಾತ್ರ ವಹಿಸಿದೆ.
ಟೀಮ್ ಇಂಡಿಯಾವನ್ನು ಫಿಟ್ ಆಗಿ ಇರಿಸಿಕೊಳ್ಳಲು ಬಿಸಿಸಿಐ ಹೆಚ್ಚಿನ ಗಮನ ನೀಡಿದ್ದು, ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದೆ. ಇಂತಹದೊಂದು ವಿಶೇಷ ಸೌಲಭ್ಯ ಇದೀಗ ಭಾರತದ ಪ್ರತಿಯೊಬ್ಬ ವೃತ್ತಿಪರ ಕ್ರಿಕೆಟಿಗರಿಗೂ ಲಭ್ಯವಾಗಲಿದೆ. ಈ ಕುರಿತು ಬಿಸಿಸಿಐ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡಿದೆ.
ದೇಶೀಯ ಕ್ರಿಕೆಟಿಗರಿಗೂ ಎಎಂಎಸ್ ಸಿಗಲಿದೆ
ವಿರಾಟ್ ಕೊಹ್ಲಿ ಅವರ ಫಿಟ್‌ನೆಸ್ ಭಾರತದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲೂ ಸ್ಫೂರ್ತಿಯಾಗಿದೆ. ಅದೇ ರೀತಿ, ಅಪಾಯಕಾರಿ ಬೆನ್ನುನೋವಿನಿಂದ ಚೇತರಿಸಿಕೊಂಡ ನಂತರ ಜಸ್ಪ್ರೀತ್ ಬುಮ್ರಾ ಕೂಡ ಅತ್ಯಂತ ಫಿಟ್ ಆಗಿ ಕಾಣುತ್ತಿದ್ದಾರೆ. ಗಿಲ್, ಜೈಸ್ವಾಲ್, ಅಶ್ವಿನ್, ಸಿರಾಜ್ ಸೇರಿದಂತೆ ಎಲ್ಲಾ ಆಟಗಾರರು ಫಿಟ್‌ನೆಸ್ ವಿಷಯದಲ್ಲಿ ಯಾವುದನ್ನೂ ನಿರ್ಲಕ್ಷಿಸುವುದಿಲ್ಲ ಮತ್ತು ಇದಕ್ಕೆ ಕಾರಣ ಬಿಸಿಸಿಐನ ಅಥ್ಲೀಟ್ ಮಾನಿಟರಿಂಗ್ ಸಿಸ್ಟಮ್, ಇದು ಈಗ ದೇಶೀಯ ಕ್ರಿಕೆಟಿಗರಿಗೂ ತಲುಪಲಿದೆ.
ಕಾನ್ಪುರ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಗೆಲುವಿನ ನಂತರ ಬಿಸಿಸಿಐನ ಈ ಕ್ರಾಂತಿಕಾರಿ ಹೆಜ್ಜೆಯ ಸುದ್ದಿ ಬೆಳಕಿಗೆ ಬಂದಿದೆ. ಪಿಟಿಐ ವರದಿಯ ಪ್ರಕಾರ, ಭಾರತೀಯ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವ ಆಟಗಾರರಿಗೆ AMS ಬೆಂಬಲವನ್ನು ನೀಡಲಾಗುವುದು. ಇದರಲ್ಲಿ ಪ್ರತಿ ಆಟಗಾರನ ಫಿಟ್‌ನೆಸ್ ಅನ್ನು ಅಪ್ಲಿಕೇಶನ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಪ್ರತಿಯೊಬ್ಬ ದೇಶೀಯ ಕ್ರಿಕೆಟಿಗನ ಈ ಸೌಲಭ್ಯದ ಸಂಪೂರ್ಣ ವೆಚ್ಚವನ್ನು ಮಂಡಳಿಯೇ ಭರಿಸಲಿದೆ ಎಂದು ಹೇಳಿದ್ದಾರೆ.
ಆಟಗಾರರ ಗಾಯ-ಪುನರ್ವಸತಿ ಬಗ್ಗೆ ಮಾಹಿತಿ ನೀಡುತ್ತದೆ
ರೋಹಿತ್, ವಿರಾಟ್, ಗಿಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿರುವ ಆಟಗಾರರಿಗೆ ಮಾತ್ರ ಈ ಸೌಲಭ್ಯ ಲಭ್ಯವಿತ್ತು. ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ಗಾಯಗೊಂಡರೂ ಅವರನ್ನು ಬಿಸಿಸಿಐ ತನ್ನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವಿಶೇಷ ಶಿಬಿರದಲ್ಲಿ ಸೇರಿಸುತ್ತದೆ. ಈ ವ್ಯವಸ್ಥೆಯ ಮೂಲಕ ಪುನರ್ವಸತಿ, ಫಿಟ್‌ನೆಸ್ ಮತ್ತು ಪಂದ್ಯದ ಸನ್ನದ್ಧತೆಯ ಬಗ್ಗೆ ಆಟಗಾರರು, ಕೋಚಿಂಗ್ ಸಿಬ್ಬಂದಿ ಮತ್ತು ಫಿಸಿಯೋ-ತರಬೇತುದಾರರಿಗೆ ಕಳುಹಿಸಲಾಗುತ್ತದೆ.
ಇದು ಆಟಗಾರರ ಕೆಲಸದ ಹೊರೆ ಕಡಿಮೆ ಮಾಡಿ ಫಿಟ್ನೆಸ್ ಅನ್ನು ಹೆಚ್ಚಿಸುತ್ತದೆ ಮತ್ತು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ. ಬಿಸಿಸಿಐ ಕಳೆದ ವಾರ ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿ ತನ್ನ ಹೊಸ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸಿತ್ತು. ಇಲ್ಲಿ ಮಂಡಳಿಯು ಅತ್ಯಂತ ಆಧುನಿಕ ಔಷಧ ಮತ್ತು ಕ್ರೀಡಾ ವಿಜ್ಞಾನ ಘಟಕವನ್ನು ಸಹ ರಚಿಸಿದ್ದು, ಈ ವಿಷಯದಲ್ಲಿ ರಾಜ್ಯ ಸಂಘಗಳನ್ನು ಸಂಪರ್ಕಿಸಿ ಅವರಿಗೆ ಈ ಸೌಲಭ್ಯವನ್ನು ಒದಗಿಸಲಿದೆ.
ವರದಿ: ವಿನಯ್ ಭಟ್
ಇದನ್ನೂ ಓದಿ: Virat Kohli: ಶಕೀಬ್ ಅಲ್ ಹಸನ್ಗೆ ವಿರಾಟ್ ಸ್ಪೆಷಲ್ ಗಿಫ್ಟ್: ಮರೆಯಲಾಗದ ಉಡುಗೊರೆ ನೀಡಿದ ಕೊಹ್ಲಿ