logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬೆಂಗಳೂರಿನಲ್ಲಿ ನಡೆಯುವ ಭಾರತ Vs ನ್ಯೂಜಿಲೆಂಡ್ ಮೊದಲ ಟೆಸ್ಟ್ ಗೆ ಮಳೆಯೇ ಅಡ್ಡಿ; ಪಂದ್ಯ ಆರಂಭವಾಗುವುದೇ ಅನುಮಾನ?

ಬೆಂಗಳೂರಿನಲ್ಲಿ ನಡೆಯುವ ಭಾರತ vs ನ್ಯೂಜಿಲೆಂಡ್ ಮೊದಲ ಟೆಸ್ಟ್ ಗೆ ಮಳೆಯೇ ಅಡ್ಡಿ; ಪಂದ್ಯ ಆರಂಭವಾಗುವುದೇ ಅನುಮಾನ?

Prasanna Kumar P N HT Kannada

Oct 15, 2024 03:49 PM IST

google News

ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದ್ದ ವೇಳೆ ಮಳೆಯಾದ ಸಂದರ್ಭ.

    • Chinnaswamy Weather Forecast: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 16 ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಕ್ಕೂ ಮುನ್ನ ಬೆಂಗಳೂರಿನ ಹವಾಮಾನ ವರದಿ ಹೇಗಿದೆ ನೋಡಿ.
ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದ್ದ ವೇಳೆ ಮಳೆಯಾದ ಸಂದರ್ಭ.
ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದ್ದ ವೇಳೆ ಮಳೆಯಾದ ಸಂದರ್ಭ. (BCCI)

ಇತ್ತೀಚೆಗೆ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಗೆದ್ದುಕೊಂಡ ಬಳಿಕ ಇದೀಗ ನ್ಯೂಜಿಲೆಂಡ್ ಎದುರಿನ 3 ಪಂದ್ಯಗಳ ಟೆಸ್ಟ್​ ಸಿರೀಸ್​ಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಇಂಡೋ-ಕಿವೀಸ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಅಕ್ಟೋಬರ್​​ 16ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. 2013 ರಿಂದ ತವರು ನೆಲದಲ್ಲಿ ಸೋಲೇ ಇಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ, ಬ್ಲ್ಯಾಕ್​ಕ್ಯಾಪ್ಸ್ ವಿರುದ್ಧ ಮತ್ತೊಂದು ಲಾಭ ಪಡೆಯಲು ಸನ್ನದ್ಧವಾಗಿದೆ. ಆದರೆ, ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗುತ್ತಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡದ ಫೈನಲ್ ಹಾದಿ ಮತ್ತಷ್ಟು ಸನಿಹವಾಗಬೇಕೆಂದರೆ ಈ ಸರಣಿ ಗೆಲ್ಲುವುದು ಅನಿವಾರ್ಯ. 2021ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಕಿವೀಸ್, 1-0 ಅಂತರದಲ್ಲಿ ಈ ಸರಣಿ ಸೋತಿತ್ತು. ಇದೀಗ ಅದರ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ 2-0 ಅಂತರದಲ್ಲಿ ಸೋತಿರುವ ನ್ಯೂಜಿಲೆಂಡ್, ಕಂಬ್ಯಾಕ್​ ಮಾಡಲು ಈ ಸರಣಿ ಗೆಲ್ಲುವುದು ಅನಿವಾರ್ಯವಾಗಿದೆ. ಆದರೆ ಬೆಂಗಳೂರು ಟೆಸ್ಟ್ ಮಳೆಗೆ ಕೊಚ್ಚಿ ಹೋಗುವ ನಿರೀಕ್ಷೆ ಇದೆ. ಏಕೆಂದರೆ ಬೆಂಗಳೂರಿನಲ್ಲಿ ಬಿಡುವು ನೀಡದೆ ಜಡಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಇನ್ನೂ 5 ದಿನ ಇದೇ ಮಳೆ ಮುಂದುವರೆಯಲಿದೆ.

ಬೆಂಗಳೂರಿನ ಹವಾಮಾನ ಮುನ್ಸೂಚನೆ

ಇಂಡೋ-ಕಿವೀಸ್ ನಡುವಿನ ಮೊದಲ ಟೆಸ್ಟ್​​​​ಗೆ ಬೆಂಗಳೂರು ಹವಾಮಾನ ಸಹಕರಿಸುವುದಿಲ್ಲ. ವಾರವಿಡೀ ನಗರದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣದಿಂದ ಭಾರೀ ವರ್ಷಧಾರೆಯಾಗಲಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬುಧವಾರ, ಗುರುವಾರ ಮತ್ತು ಶುಕ್ರವಾರ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ನಗರದಲ್ಲಿ ಮತ್ತಷ್ಟು ಮಳೆ ಬೀಳುವ ನಿರೀಕ್ಷೆಯಿರುವುದರಿಂದ ಎಚ್ಚರಿಕೆಯ ಭಾಗವಾಗಿ ಆರೆಂಜ್ ಅಲರ್ಟ್ ಘೋಷಿಸುವ ಸಾಧ್ಯತೆ ಇದೆ.

ಕಳೆದ ಮೂರು ದಿನಗಳಿಂದ ಮುಂಜಾನೆಯಿಂದಲೇ ಬಿಡುವು ನೀಡದೆ ವರುಣ ಅಬ್ಬರಿಸುತ್ತಿದ್ದಾನೆ. ಅಲ್ಲದೆ, ಮುಂದಿನ ಮೂರು ದಿನಗಳಲ್ಲೂ ಇಂತಹದ್ದೇ ವಾತಾವರಣ ಇರುವ ಕಾರಣ ಪಂದ್ಯದ ಟಾಸ್ ಆರಂಭ ಕೂಡ ಕಷ್ಟವಾಗಲಿದೆ. ಪಂದ್ಯದ ಮೊದಲ 2 ದಿನಗಳಲ್ಲಿ ಶೇ 40ರಷ್ಟು, 3ನೇ ದಿನ ಶೇ 67ರಷ್ಟು, ನಾಲ್ಕನೇ ದಿನ 25ರಷ್ಟು, 5ನೇ ದಿನ 40 ರಷ್ಟು ಮಳೆ ಸುರಿಯುವ ಸಾಧ್ಯತೆಯಿದೆ. ಹಾಗಾಗಿ ಪಂದ್ಯ ಬಹುತೇಕ ನಡೆಯುವುದೇ ಡೌಟ್ ಎಂದು ಮುನ್ಸೂಚನೆ ನೀಡಲಾಗಿದೆ. ಮೊದಲ ದಿನ ಆರ್ದ್ರತೆಯ ಮಟ್ಟವು ಸುಮಾರು 98 ಪ್ರತಿ ಶತದಷ್ಟು ಇರುತ್ತದೆ. ಅಕ್ಟೋಬರ್ 16 ರಂದು ಶೇ 100ರಷ್ಟು ಮೋಡ ಕವಿದ ವಾತಾವರಣ ಇರಲಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಹೊಂದಿರುವ ಕಾರಣ ಪಂದ್ಯದ ವೇಳೆ ಸಾಧಾರಣ ಮಳೆಯಾದರೆ ಯಾವುದೇ ಸಮಸ್ಯೆ ಆಗುವುದಿಲ್ಲ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ನ್ಯೂಜಿಲೆಂಡ್ ತಂಡ: ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ವಿಲ್ ಓ'ರೂರ್ಕ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್, ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಮೈಕೆಲ್ ಬ್ರೇಸ್‌ವೆಲ್ (ಮೊದಲನೇ ಟೆಸ್ಟ್ ಮಾತ್ರ), ಇಶ್ ಸೋಧಿ (2ನೇ ಮತ್ತು 3ನೇ ಟೆಸ್ಟ್ ಮಾತ್ರ).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ