ಭಾರತದ ವಿಶ್ವಕಪ್ ಕನಸನ್ನು ನುಚ್ಚುನೂರಾಗಿಸಿದ ಪಾಕಿಸ್ತಾನ; ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಹರ್ಮನ್‌ಪ್ರೀತ್ ಬಳಗ
ಪಾಕಿಸ್ತಾನ ವಿರುದ್ಧ 54 ರನ್‌ಗಳ ಜಯದೊಂದಿಗೆ ನ್ಯೂಜಿಲೆಂಡ್ ತಂಡ ವನಿತೆಯರ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಭಾರತ ತಂಡ ಗುಂಪು ಹಂತದಿಂದಲೇ ಹೊರಬಿದ್ದಿದೆ.
ಪಾಕಿಸ್ತಾನ ವನಿತೆಯರ ತಂಡವನ್ನು ಮಣಿಸುವ ಮೂಲಕ ನ್ಯೂಜಿಲೆಂಡ್ ತಂಡ ಐಸಿಸಿ ವನಿತೆಯರ ಟಿ20 ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಭಾರತ ಮಹಿಳಾ ತಂಡ ವಿಶ್ವಕಪ್ ಕೂಟದಿಂದ ಹೊರಬಿದ್ದಿದೆ. ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಕಿವೀಸ್ ವನಿತೆಯರು 54 ರನ್‌ಗಳಿಂದ ಭರ್ಜರಿ ಅಂತರದಿಂದ ಸೋಲಿಸಿ 5ನೇ ಬಾರಿ ಚುಟುಕು ವಿಶ್ವಕಪ್ ಸೆಮಿಫೈನಲ್‌ಗೆ ಪ್ರವೇಶಿಸಿತು. ಭಾರತ ತಂಡವು ಸೆಮಿಕದನಕ್ಕೆ ಪ್ರವೇಶಿಸಬೇಕಿದ್ದರೆ, ಇಂದು ಪಾಕಿಸ್ತಾನ ಗೆಲ್ಲಬೇಕಿತ್ತು. ಆದರೆ, 111 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಕೇವಲ 56 ರನ್‌ಗಳಿಗೆ ಆಲೌಟ್ ಆಗಿ, ಭಾರತದ ವಿಶ್ವಕಪ್ ಕನಸನ್ನು ನುಚ್ಚುನೂರಾಗಿಸಿತು.
ಪಾಕ್ ಹಾಗೂ ನ್ಯೂಜಿಲೆಂಡ್ ನಡುವಿನ ಅಂತಿಮ ಪಂದ್ಯದಲ್ಲಿ ಕಿವೀಸ್ ಗೆದ್ದರೆ ಸೆಮಿಫೈನಲ್ ಟಿಕೆಟ್ ಖಚಿತವಾಗಿತ್ತು. ಆದರೆ, ಪಾಕಿಸ್ತಾನಕ್ಕೆ ಬೃಹತ್ ಗೆಲುವೇ ಬೇಕಾಗಿತ್ತು. ಒಂದು ವೇಳೆ ಪಾಕಿಸ್ತಾನ ಸಣ್ಣ ಅಂತರದಿಂದ ಗೆದ್ದಿದ್ದರೆ, ಭಾರತ ತಂಡ ಸೆಮಿಫೈನಲ್ ಲಗ್ಗೆ ಹಾಕುತ್ತಿತ್ತು. ಹೀಗಾಗಿ ಭಾರತದ ಅಭಿಮಾನಿಗಳು ಪಾಕಿಸ್ತಾನದ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಕೇವಲ 110 ರನ್ ಗಳಿಸಲಷ್ಟೇ ಶಕ್ತವಾಯ್ತು. ಈ ವೇಳೆ ಪಾಕಿಸ್ತಾನದ ಗೆಲುವು ಸುಲಭ ಎಂದು ಭಾರತದ ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದರು. ಕಿವೀಸ್ ಬೌಲರ್‌ಗಳು ಮಾತ್ರ ಅವಕಾಶ ಬಿಟ್ಟುಕೊಡಲಿಲ್ಲ. ಪ್ರಭಾವಶಾಲಿ ಪ್ರದರ್ಶನ ನೀಡಿ, ಪಾಕಿಸ್ತಾನವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.
ಸೆಮಿಫೈನಲ್ ಪ್ರವೇಶಿಸಲು ಫಾತಿಮಾ ಸನಾ ಬಳಗವು 10.4 ಓವರ್‌ಗಳಲ್ಲಿ ಗುರಿ ತಲುಪುವುದು ಅನಿವಾರ್ಯವಾಗಿತ್ತು. ಭಾರತದ ಅರ್ಹತೆಗಾಗಿ ಕಿವೀಸ್ ಸೋತರೆ ಸಾಕಿತ್ತು. ಇವೆಲ್ಲ ಲೆಕ್ಕಾಚಾರಗಳ ನಡುವೆ ನ್ಯೂಜಿಲೆಂಡ್ ಬೌಲರ್‌ಗಳು ಮಾತ್ರ ತಾವು ಅಂದುಕೊಂಡಿದ್ದನ್ನೇ ಸಾಧಿಸಿದರು.
ವಿಶ್ವಕಪ್‌ನಿಂದ ಭಾರತ ನಿರ್ಗಮನ
ಪಂದ್ಯಾವಳಿ ಆರಂಭಕ್ಕೂ ಮುನ್ನ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಭಾರತ, ಟಿ20 ವಿಶ್ವಕಪ್‌ನಿಂದ ನಿರ್ಗಮಿಸಿದೆ. ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ್ದ ಹರ್ಮನ್‌ಪ್ರೀತ್ ಕೌರ್ ಬಳಗವು, ಅದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧವೂ ಚೇಸಿಂಗ್ ಮಾಡುವಲ್ಲಿ ವಿಫಲವಾಗಿತ್ತು. ತಂಡವು ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಅಭಿಯಾನ ಅಂತ್ಯಗೊಳಿಸಿದೆ.
ಗ್ರೂಪ್ ಎ ಕಡೆಯಿಂದ ಇದೀಗ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಬಿ ಗುಂಪಿನ ತಂಡಗಳು ಇನ್ನಷ್ಟೇ ಖಚಿತವಾಗಬೇಕಿದೆ. ಸದ್ಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಮುಂಚೂಣಿಯಲ್ಲಿದ್ದು, ವೆಸ್ಟ್ ಇಂಡೀಸ್ ಕೂಡಾ ಪೈಪೋಟಿ ಕೊಡುತ್ತಿದೆ.