ಭುವಿ ಈಸ್ ಬ್ಯಾಕ್, ರಣಜಿಯಲ್ಲಿ 6 ವರ್ಷಗಳ ನಂತರ ಕಣಕ್ಕಿಳಿದು ವಿಕೆಟ್ ಬೇಟೆ; ಕಂಬ್ಯಾಕ್ ನಿರೀಕ್ಷೆಯಲ್ಲಿ ವೇಗಿ
Jan 13, 2024 01:34 PM IST
ವಿಕೆಟ್ ಪಡೆದು ಸಹ ಆಟಗಾರರೊಂದಿಗೆ ಸಂಭ್ರಮಿಸಿದ ಭುವನೇಶ್ವರ್ ಕುಮಾರ್.
- Bhuvneshwar Kumar: 6 ವರ್ಷಗಳ ನಂತರ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿದಿರುವ ವೇಗಿ ಭುವನೇಶ್ವರ್ ಕುಮಾರ್, ಬಂಗಾಳದ ವಿರುದ್ಧ 5 ವಿಕೆಟ್ ಪಡೆದು ಮಿಂಚಿದ್ದಾರೆ.
ಒಂದೂವರೆ ವರ್ಷದಿಂದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿರುವ ಸ್ಟಾರ್ ವೇಗದ ಬೌಲರ್ ಭುವನೇಶ್ವರ್ ಕುಮಾರ್ (Bhuvneshwar Kumar) 6 ವರ್ಷಗಳ ನಂತರ ರಣಜಿ ಟ್ರೋಫಿಗೆ (Ranji Trophy) ಮರಳಿದ್ದು, ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಆ ಮೂಲಕ ತಮ್ಮನ್ನು ಆಯ್ಕೆಗೆ ಪರಿಗಣಿಸುವಂತೆ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಿಗೆ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಇಂಗ್ಲೆಂಡ್ ಸರಣಿಯ 2 ಪಂದ್ಯಗಳಿಗೆ ಭಾರತ ತಂಡ ಪ್ರಕಟವಾಗಿದ್ದು, ಮುಂದಿನ ಮೂರು ಟೆಸ್ಟ್ಗಳಿಗೆ ಆಯ್ಕೆಯಾದರೂ ಅಚ್ಚರಿ ಇಲ್ಲ.
ರಣಜಿ ಟ್ರೋಫಿ 2024ರ ಎರಡನೇ ಸುತ್ತು ಜನವರಿ 12ರ ಶುಕ್ರವಾರದಿಂದ ಪ್ರಾರಂಭವಾಗಿದೆ. ಎಲೈಟ್ ಗ್ರೂಪ್ ಹಂತದಲ್ಲಿ 32 ತಂಡಗಳು ಭಾರತದ ಪ್ರಧಾನ ದೇಶೀಯ ಟೂರ್ನಿಯಲ್ಲಿ ಹೋರಾಡುತ್ತಿವೆ. ಏಸ್ ಸೀಮರ್ ಭುವನೇಶ್ವರ್ ಕುಮಾರ್ 6 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್ಗೆ ಮರಳಿದ್ದು, ಪಶ್ಚಿಮ ಬಂಗಾಳದ ವಿರುದ್ಧ ಕಣಕ್ಕಿಳಿದ ಉತ್ತರ ಪ್ರದೇಶದ ಪರ ಮೊದಲ ದಿನದಾಟದಲ್ಲಿ 5 ವಿಕೆಟ್ ಉರುಳಿಸಿದರು.
ಮೊದಲ ದಿನದಾಟದ ಅಂತ್ಯಕ್ಕೆ ಬೆಂಕಿ ಪ್ರದರ್ಶನ ನೀಡಿದ ಭುವಿ, 13 ಓವರ್‌ಗಳಲ್ಲಿ 5 ವಿಕೆಟ್ ಪಡೆದು 25 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಅದರಲ್ಲಿ ಮೂರು ಮೇಡನ್. ಬಂಗಾಳ ಮೊದಲ ದಿನ 28 ಓವರ್‌ಗಳಲ್ಲಿ ತನ್ನ 5 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿತ್ತು. ಆ ಐದು ವಿಕೆಟ್ಗಳನ್ನೂ ಭುವಿಯೇ ಪಡೆದಿದ್ದು ವಿಶೇಷ. ಮೀರತ್ ವೇಗಿ ಸುಮಾರು ಆರು ವರ್ಷಗಳ ನಂತರ ಸ್ವರೂಪಕ್ಕೆ ಮರಳಿದ್ದಲ್ಲದೆ, ಭಾರತ ತಂಡಕ್ಕೆ ಮರಳುವುದಾಗಿ ಸೂಚನೆ ಕೊಟ್ಟಿದ್ದಾರೆ.
ಭಾರತಕ್ಕೆ ಕೊನೆಯದಾಗಿ ಆಡಿದ್ದು ಯಾವಾಗ?
ಸ್ವಿಂಗ್ ಮಾಸ್ಟರ್ ಎಂದೇ ಕರೆಸಿಕೊಳ್ಳುವ ಭುವನೇಶ್ವರ್ ಕುಮಾರ್, ಕಳೆದ ಒಂದೂವರೆ ವರ್ಷದಿಂದ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಇನ್ನು ಏಕದಿನ ತಂಡಕ್ಕೆ ಎರಡು ವರ್ಷಗಳಾಗಿದೆ. ಟಿ20 ಕ್ರಿಕೆಟ್ನಲ್ಲಿ 2022ರ ನವೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ಪರ ಆಡಿದ್ದ ಭುವಿ, 2022ರ ಜನವರಿ 21ರಂದು ಏಕದಿನ ಪಂದ್ಯವನ್ನು ಕೊನೆಯದಾಗಿ ಆಡಿದ್ದರು. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ 2018ರಿಂದ ಆಡಿಯೇ ಇಲ್ಲ.
ಟೀಮ್ ಇಂಡಿಯಾ ಪರ ಪ್ರದರ್ಶನ
ಭಾರತದ ಅತ್ಯಂತ ಯಶಸ್ವಿ ವೇಗಿಗಳಲ್ಲಿ ಭುವಿಯೂ ಒಬ್ಬರು. ಟೆಸ್ಟ್ ಕ್ರಿಕೆಟ್ನಲ್ಲಿ 21 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ವೇಗಿ, 63 ವಿಕೆಟ್ ಉರುಳಿಸಿದ್ದಾರೆ. ಇನ್ನು ಈವರೆಗೂ 121 ಏಕದಿನಗಳಲ್ಲಿ ಬೌಲಿಂಗ್ ಮಾಡಿದ್ದು, 141 ವಿಕೆಟ್ ಕಬಳಿಸಿದ್ದಾರೆ. 87 ಟಿ20 ಪಂದ್ಯಗಳಲ್ಲಿ 90 ವಿಕೆಟ್ ಗಳಿಸಿದ್ದಾರೆ. ಈಗ ರಣಜಿಯಲ್ಲಿ ಅದ್ಭುತ ಕಂಬ್ಯಾಕ್ ಮಾಡಿದ್ದು, ಮತ್ತೆ ಭಾರತ ತಂಡದಲ್ಲಿ ಅವಕಾಶ ಪಡೆಯುವ ಕನಸಿನಲ್ಲಿದ್ದಾರೆ.
ಪಂದ್ಯದ ವಿವರ
ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವು ಮೊದಲು ಬ್ಯಾಟಿಂಗ್ ನಡೆಸಿತು. ಆದರೆ ಅತ್ಯಂತ ಕಳಪೆ ಪ್ರದರ್ಶನ ತೋರಿತು. ಉತ್ತರ ಪ್ರದೇಶ ಕೇವಲ 60 ರನ್ಗಳಿಗೆ ಆಲೌಟ್ ಆಯಿತು. ಆದರೆ ಈ ಗುರಿ ಬೆನ್ನಟ್ಟಿದ ಬಂಗಾಳ ಮೊದಲ ದಿನದಾಟದಲ್ಲಿ 5 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತ್ತು. ಯುಪಿ ಪರ ಭುವಿ 5 ವಿಕೆಟ್ ಪಡೆದು ಮಿಂಚಿದರು. ಆದರೆ ಬಂಗಾಳ 35 ರನ್ಗಳ ಮುನ್ನಡೆ ಪಡೆದಿದೆ. ಆದರೆ 2ನೇ ದಿನದಾಟ ಇನ್ನೂ ಆರಂಭಗೊಂಡಿಲ್ಲ. ಬ್ಯಾಟ್ ಲೈಟ್ನಿಂದ ಪಂದ್ಯ ಸ್ಥಗಿತಗೊಂಡಿದೆ.