ಬುಮ್ರಾ ಸೇರಿ ಪ್ರಮುಖರು ವಾಪಸ್; ಅಫ್ಘನ್ ಸರಣಿಯಿಂದ ಇಂಗ್ಲೆಂಡ್ ಟೆಸ್ಟ್ಗೆ ಭಾರತ ತಂಡದಲ್ಲಿ 8 ಬದಲಾವಣೆ
India vs England Test Series: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಭಾರತದ ಟಿ20 ತಂಡದ ಭಾಗವಾಗಿರುವ 8 ಆಟಗಾರರು ಮಾತ್ರ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ20ಐ ಸರಣಿಯ ಮುಕ್ತಾಯದ ನಂತರ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ 16 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಶುಕ್ರವಾರ (ಜನವರಿ 12) ಪ್ರಕಟಿಸಿದೆ.
ರೋಹಿತ್ ನೇತೃತ್ವದ ಭಾರತ ನಾಲ್ವರು ಸ್ಪಿನ್ನರ್ಗಳನ್ನು ಒಳಗೊಂಡಿದೆ. ಸ್ಟಾರ್ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಜೋಡಿ ಮರಳಿದ್ದಾರೆ. ಆದರೆ, ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಭಾರತದ ಟಿ20 ತಂಡದ ಭಾಗವಾಗಿರುವ 8 ಆಟಗಾರರು ಮಾತ್ರ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ಸರಣಿಗೆ ಪ್ರಕಟಗೊಂಡ ತಂಡ ಮತ್ತು ಪ್ರಸ್ತುತ ನಡೆಯುತ್ತಿರುವ ಅಫ್ಘಾನಿಸ್ತಾನ ಟಿ20 ಸರಣಿಯಲ್ಲಿ ಪಾಲ್ಗೊಂಡ ಭಾರತ ತಂಡಕ್ಕೆ ಹೋಲಿಸಿದರೆ, ಒಟ್ಟು 8 ಬದಲಾವಣೆ ಕಂಡಿದೆ. ಜಸ್ಪ್ರೀತ್ ಬುಮ್ರಾ, ಸಿರಾಜ್, ರಾಹುಲ್ ಸೇರಿ 8 ಮಂದಿ ತಂಡಕ್ಕೆ ಮರಳಿದರೆ, ಇನ್ನುಳಿದ 8 ಮಂದಿ ಅಫ್ಘನ್ ವಿರುದ್ಧ ಟಿ20 ಆಡುತ್ತಿದ್ದಾರೆ. ಬದಲಾದ ಆಟಗಾರರ ಪಟ್ಟಿಯನ್ನು ಈ ಮುಂದೆ ನೋಡೋಣ ಬನ್ನಿ.
ಇಂಗ್ಲೆಂಡ್ ಸರಣಿಯಿಂದ ಔಟ್
ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್‌ಗಳಿಗೆ ಆಲ್ ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್, ಶಿವಂ ದುಬೆ ಅವರನ್ನು ಪರಿಗಣಿಸಲಾಗಿಲ್ಲ. ವೇಗಿ ಅರ್ಷದೀಪ್ ಸಿಂಗ್, ಸ್ಪಿನ್ನರ್ ರವಿ ಬಿಷ್ಣೋಯ್, ಬ್ಯಾಟರ್‌ಗಳಾದ ರಿಂಕು ಸಿಂಗ್, ತಿಲಕ್ ವರ್ಮಾ, ವಿಕೆಟ್ ಕೀಪರ್‌ಗಳಾದ ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾರನ್ನು ಪರಿಗಣಿಸಿಲ್ಲ. ಅಫ್ಘನ್ ಸರಣಿ ಮುಕ್ತಾಯದ ನಂತರ ರಣಜಿ ಆಡಲು ತಮ್ಮ ತಮ್ಮ ರಾಜ್ಯಗಳತ್ತ ಮರಳಲಿದ್ದಾರೆ.
ಇಂಗ್ಲೆಂಡ್ ಸರಣಿಗೆ ಇನ್
ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಭಾರತ ತಂಡಕ್ಕೆ ಮರಳಿದ್ದಾರೆ. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಕೆಎಸ್ ಭರತ್ ಕೂಡ ಮೊದಲ ಎರಡು ಟೆಸ್ಟ್‌ಗಳಿಗೆ ಆಯ್ಕೆಯಾಗಿದ್ದಾರೆ. ಇವರೆಲ್ಲರೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ತಂಡದ ಭಾಗವಾಗಿದ್ದರು. ಆದರೆ ಟಿ20 ಸರಣಿಗೆ ಪರಿಗಣಿಸಲಾಗಿಲ್ಲ. ಈ 7 ಆಟಗಾರರ ಜೊತೆಗೆ ಉತ್ತರ ಪ್ರದೇಶದ ವಿಕೆಟ್ ಕೀಪರ್ ಧ್ರುವ್ ಜುರೆಲ್ ಕೂಡ ತಂಡದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಅವರು ಅವಕಾಶ ಪಡೆದಿದ್ದಾರೆ.
ಉಳಿಸಿಕೊಂಡಿರುವ ಆಟಗಾರರು
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮುಕೇಶ್ ಕುಮಾರ್ ಮತ್ತು ಅವೇಶ್ ಖಾನ್ ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೂ ಆಯ್ಕೆಯಾಗಿದ್ದಾರೆ. ಇವರು ಅಫ್ಘನ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಭಾರತದ ತಂಡದ ಭಾಗವಾಗಿದ್ದಾರೆ.
ಗೈರು ಹಾಜರಾದ ಆಟಗಾರರು
ಪಾದದ ಗಾಯದ ಸಮಸ್ಯೆಗೆ ಸಿಲುಕಿದ ವೇಗಿ ಮೊಹಮ್ಮದ್ ಶಮಿ ಮತ್ತು ಸೌತ್ ಆಫ್ರಿಕಾ ಟೆಸ್ಟ್ ಸರಣಿಗೂ ಮುನ್ನ ಡಿಸೆಂಬರ್ 19ರಂದು ಬೆರಳಿಗೆ ಗಾಯಗೊಂಡಿದ್ದ ಬ್ಯಾಟರ್ ಋತುರಾಜ್ ಗಾಯಕ್ವಾಡ್, ಮೊದಲ 2 ಟೆಸ್ಟ್‌ಗಳಿಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ. ಅಷ್ಟೆ ಅಲ್ಲದೆ, ಬ್ಯಾಟರ್ ಅಭಿಮನ್ಯು ಈಶ್ವರನ್, ವೇಗಿ ಪ್ರಸಿದ್ಧ್ ಕೃಷ್ಣ, ಆಲ್ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ಇಶಾನ್ ಕಿಶನ್ ಕೂಡ ತಂಡದಲ್ಲಿಲ್ಲ.
ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ಆರ್. ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.
ಟೆಸ್ಟ್ ಸರಣಿ ವೇಳಾಪಟ್ಟಿ ಇಂತಿದೆ
ಮೊದಲನೇ ಟೆಸ್ಟ್: ಜನವರಿ 25-29, ಹೈದರಾಬಾದ್ (ಬೆಳಿಗ್ಗೆ 9.30)
ಎರಡನೇ ಟೆಸ್ಟ್: ಫೆಬ್ರವರಿ 2-6, ವಿಶಾಖಪಟ್ಟಣಂ (ಬೆಳಿಗ್ಗೆ 9.30)
ಮೂರನೇ ಟೆಸ್ಟ್: ಫೆಬ್ರವರಿ 15-19, ರಾಜ್ಕೋಟ್ (ಬೆಳಿಗ್ಗೆ 9.30)
ನಾಲ್ಕನೇ ಟೆಸ್ಟ್: ಫೆಬ್ರವರಿ 23-27, ರಾಂಚಿ (ಬೆಳಿಗ್ಗೆ 9.30)
ಐದನೇ ಟೆಸ್ಟ್: ಮಾರ್ಚ್ 7-11, ಧರ್ಮಶಾಲಾ (ಬೆಳಿಗ್ಗೆ 9.30)