ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಹುಟ್ಟೂರಿನಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ
Nov 18, 2023 03:39 PM IST
ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ 7 ವಿಕೆಟ್ ಪಡೆದಿದ್ದ ಮೊಹಮ್ಮದ್ ಶಮಿ ಅವರು ಚೆಂಡನ್ನು ಪ್ರದರ್ಶಿಸಿದರು.
ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೇಗಿ ಮೊಹಮ್ಮದ್ ಶಮಿ ಅವರ ಹುಟ್ಟೂರಿನಲ್ಲಿ ಸ್ಟೇಡಿಯಂನ ನಿರ್ಮಾಣ ಮಾಡಲು ಸಿಎಂ ಯೋಗಿ ಸರ್ಕಾರ ಮುಂದಾಗಿದೆ.
ಅಮ್ರೋಹಾ (ಉತ್ತರ ಪ್ರದೇಶ): ಐಸಿಸಿ ಏಕದಿನ ವಿಶ್ವಕಪ್‌ನ (ICC ODI World Cup 2023) ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾದ (Team India) ವೇಗಿ ಮೊಹಮ್ಮದ್ ಶಮಿ (Mohammed Shami) 7 ವಿಕೆಟ್ ಪಡೆದು ವಿಶ್ವ ದಾಖಲೆ ಬರೆದಿದ್ದರು. ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ 70 ರನ್‌ಗಳಿಂದ ಗೆದ್ದು ವಿಶ್ವಕಪ್ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸೆಮಿ ಫೈನಲ್‌ನಲ್ಲಿ ಮೊಹಮ್ಮದ್ ಶಮಿ ಅವರ ನೀಡಿದ ಅತ್ಯುತ್ತಮ ಪ್ರದರ್ಶನವನ್ನು ಸ್ಮರಣೀಯವಾಗಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದೆ. ಅಮ್ರೋಹಾ ಜಿಲ್ಲೆಯಲ್ಲಿರುವ ಶಮಿ ಅವರ ಹುಟ್ಟೂರಿನಲ್ಲಿ ಮಿನಿ ಕ್ರೀಡಾಂಗಣ ಮತ್ತು ಓಪನ್ ಜಿಮ್ ನಿರ್ಮಾಣಕ್ಕೆ ಪ್ಲಾನ್ ಮಾಡಿಕೊಂಡಿದೆ. ಮಿನಿ ಸ್ಟೇಡಿಯಂನ ನಿರ್ಮಾಣ ಮಾಡುವುದಾಗಿ ಅಮ್ರೋಹಾ ಜಿಲ್ಲಾಡಳಿತ ಘೋಷಣೆ ಮಾಡಿದೆ.
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮೊಮ್ಮದ್ ಶಮಿ ಅವರು ಅದ್ಭುತ ಪ್ರದರ್ಶನದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆ ಮೇರೆಗೆ ಅಲ್ಲಿನ ಜಿಲ್ಲಾಡಳಿತ ಈ ನಿರ್ಧಾರವನ್ನು ಕೈಗೊಂಡಿದೆ. ಈ ಸಂಬಂಧ ಅಮ್ರೋಹಾ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ತ್ಯಾಜಿ ಶುಕ್ರವಾರ (ನವೆಂಬರ್ 17) ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಮೊಹಮ್ಮದ್ ಶಮಿ ಅವರ ಗ್ರಾಮ ಸಹಸ್‌ಪುರ್ ಅಲಿನಗರದಲ್ಲಿ ಮಿನಿ ಸ್ಟೇಡಿಯಂ ಮತ್ತು ಓಪನ್ ಜಿಮ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಎಂ ರಾಜೇಶ್ ತ್ಯಾಜಿ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿರುವುದಾಗಿ ವರದಿಯಾಗಿದೆ.
ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಪಕ್ಷದ ನಾಯಕ ಜಯಂತ್ ಸಿಂಗ್ ಅವರು ಶಮಿ ಅವರ ಗ್ರಾಮದಲ್ಲಿ ಕ್ರೀಡಾ ಸೌಲಭ್ಯಗಳನ್ನು ಒದಗಿಸಲು ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಮೊಹಮ್ಮದ್ ಶಮಿ ಅವರ ಹಳ್ಳಿ ಸಹಪುರ್ ಅಲಿನಗರದಲ್ಲಿ ಕ್ರೀಡಾ ಸೌಲಭ್ಯಗಳಿಗಾಗಿ ನನ್ನ ಎಂಪಿಎಲ್‌ಎಡಿ ನಿಧಿಯಿಂದ ಆರ್ಥಿಕ ಸಹಾಯ ಮಾಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಏಕದಿನ ವಿಶ್ವಕಪ್‌ನ 5 ಗ್ರೂಪ್ ಪಂದ್ಯಗಳು ಹಾಗೂ 1 ಸೆಮಿ ಫೈನಲ್ ಸೇರಿ ಆಡಿದ 6 ಪಂದ್ಯಗಳಲ್ಲೇ 9.13 ಸರಾಸರಿ ಮತ್ತು 10.91 ಸ್ಟ್ರೇಕ್ ರೇಟ್‌ನಲ್ಲಿ 23 ವಿಕೆಟ್ ಪಡೆದಿದ್ದಾರೆ. ಪಂದ್ಯವೊಂದರಲ್ಲಿ 57 ರನ್ ನೀಡಿ 7 ವಿಕೆಟ್ ಪಡೆದಿರುವುದು ಇವರ ಅತ್ಯುತ್ತಮ ಪ್ರದರ್ಶನವಾಗಿದೆ. ವಿಶ್ವಕಪ್ ಮಹಾ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಶಮಿ ನಂಬರ್ 1 ಸ್ಥಾನದಲ್ಲಿದ್ದಾರೆ.
ಮುಂಬೈನ ವಾಂಖೆಡೆಯಲ್ಲಿ ನಡೆದಿದ್ದ ವಿಶ್ವಕಪ್ ಮೊದಲ ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾ ಪರ ಶಮಿ 7 ವಿಕೆಟ್‌ಗಳ ಸಾಧನೆ ಮಾಡಿದ್ದರು. 1 ರಿಂದ 5 ವಿಕೆಟ್‌ಗಳನ್ನು ಇವರೇ ಕಬಳಿಸಿದ್ದರು. ಡೆವೊನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಟೀಮ್ ಸೌಥಿ ಹಾಗೂ ಲಾಕಿ ಫರ್ಗುಸನ್ ಅವರ ವಿಕೆಟ್ ಪಡೆದು ಟೀಂ ಇಂಡಿಯಾ 70 ರನ್‌ಗಳಿಂದ ಗೆಲವು ಪಡೆಯಲು ನೆರವಾಗಿದ್ದರು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ ಬಾರಿಸಿತ್ತು. 398 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ್ದ ನ್ಯೂಜಿಲೆಂಡ್ 48.5 ಓವರ್‌ಗಳಲ್ಲಿ 327 ರನ್ ಗಳಿಸಿ ಆಲೌಟ್ ಆಗಿತ್ತು. ನಾಳೆ (ನವೆಂಬರ್ 19, ಭಾನುವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹೈ ವೋಲ್ಟೇಜ್ ವಿಶ್ವಕಪ್ ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ.