ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಖರೀದಿಸದಿರಲು ನಿರ್ಧರಿಸಿವೆ ಈ ಐದು ಫ್ರಾಂಚೈಸಿಗಳು; ಪಾಪ ಗುರು!
Nov 23, 2024 10:28 PM IST
ಐಪಿಎಲ್ ಹರಾಜಿನಲ್ಲಿ ರಿಷಭ್ ಪಂತ್ ಖರೀದಿಸದಿರಲು ನಿರ್ಧರಿಸಿವೆ ಈ ಮೂರು ಫ್ರಾಂಚೈಸಿಗಳು
- IPL 2025 Auction: ಐಪಿಎಲ್ ಮೆಗಾ ಹರಾಜಿನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಖರೀದಿಸದಿರಲು ಐದು ಫ್ರಾಂಚೈಸಿಗಳು ನಿರ್ಧರಿಸಿವೆ. ಅದಕ್ಕೆ ವಿಶೇಷ ಕಾರಣ ಇದೆ.
ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಅವರು ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೆಗಾ ಹರಾಜಿನಲ್ಲಿ (IPL 2025 Auction) ತಾರಾ ಆಕರ್ಷಣೆಯಾಗಿದ್ದಾರೆ. ನವೆಂಬರ್ 24 ಮತ್ತು 25ರಂದು ನಡೆಯುವ ಐಪಿಎಲ್ ಮೆಗಾ ಆಕ್ಷನ್ನಲ್ಲಿ ಪಂತ್, ದಾಖಲೆಯ ಮೊತ್ತಕ್ಕೆ ಖರೀದಿಯಾಗಲಿದ್ದಾರೆ ಎಂದು ಮಾಜಿ ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ. ಎಲ್ಲಾ 10 ತಂಡಗಳು ಸಹ ಪಂತ್ ಮೇಲೆ ಕಣ್ಣಿಟ್ಟಿವೆ. ಹೀಗಾಗಿ ನಿರೀಕ್ಷೆ ದುಪ್ಪಟ್ಟಾಗಿರುವ ಕಾರಣ 20 ಕೋಟಿ ಗಡಿ ದಾಟಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ಸಾಧ್ಯವಾದರೆ, ಹರಾಜಿನಲ್ಲಿ 20 ಕೋಟಿ ದಾಟಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಾಗಿಯೂ ಐಪಿಎಲ್ನ ಐದು ತಂಡಗಳು ಯಾವುದೇ ಕಾರಣಕ್ಕೂ ರಿಷಭ್ ಖರೀದಿಗೆ ಮುಂದಾಗಲ್ಲ!
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದ ರಿಷಭ್ ಪಂತ್ ಈ ಬಾರಿ ಮೆಗಾ ಹರಾಜಿಗೆ ಬಂದಿದ್ದಾರೆ. 2016ರಿಂದ ಡೆಲ್ಲಿ ಪರ ಆಡಿದ್ದ ಪಂತ್, 2021 ರಿಂದ 2024ರ ತನಕ ನಾಯಕನಾಗಿ ಸೇವೆ ಸಲ್ಲಿಸಿದ್ದರು. ಆದರೆ ಕಾರಣಾಂತರಗಳಿಂದ ತಂಡದಿಂದ ಹೊರ ಬಂದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದೊಡ್ಡ ಹೆಸರುಗಳಲ್ಲಿ ಒಬ್ಬರು. ಬಹುತೇಕ ಪ್ರತಿಯೊಂದು ತಂಡವೂ ಪಂತ್ ಖರೀದಿಗೆ ಬಿಡ್ ಮಾಡುವ ನಿರೀಕ್ಷೆ ಇದೆ. ಪಂಜಾಬ್ ಕಿಂಗ್ಸ್ ಅವರನ್ನು ಖರೀದಿಸಲು ಒಲವು ತೋರಿದೆ ಎಂದು ವರದಿಯಾಗಿದೆ. ಪಂತ್ 20 ಕೋಟಿಗೂ ಹೆಚ್ಚು ಖರೀದಿಯಾಗುವ ಸಾಧ್ಯವಿರುವ ಕಾರಣ ಈ ಮೂರು ಫ್ರಾಂಚೈಸಿಗಳು ಆತನ ಖರೀದಿಗೆ ಬಯಸಿದ್ದರೂ ಬಿಡ್ ಮಾಡುವುದಕ್ಕೆ ಹಿಂದೆ ಮುಂದೆ ನೋಡಲಿವೆ. ಅದಕ್ಕೆ ಪ್ರಮುಖ ಕಾರಣ ಇಲ್ಲಿದೆ ನೋಡಿ.
ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್ (CSK) ಖಂಡಿತವಾಗಿಯೂ ರಿಷಭ್ ಪಂತ್ ಅವರನ್ನು ಖರೀದಿಸಲು ಬಯಸುವ ಐಪಿಎಲ್ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಏಕೆಂದರೆ ದೀರ್ಘಾವಧಿಯಲ್ಲಿ ಎಂಎಸ್ ಧೋನಿಗೆ ಪರಿಪೂರ್ಣ ಉತ್ತರಾಧಿಕಾರಿಯಾಗುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಪ್ರಸ್ತುತ ಐವರನ್ನು ಉಳಿಸಿಕೊಂಡಿರುವ ಸಿಎಸ್ಕೆ 65 ಕೋಟಿ ಖರ್ಚು ಮಾಡಿದೆ. ಹಾಗಾಗಿ ಉಳಿದ 55 ಕೋಟಿಯಲ್ಲಿ ಒಬ್ಬ ಆಟಗಾರನಿಗೆ 20 ರಿಂದ 25 ಕೋಟಿ ಖರ್ಚು ಮಾಡುವುದು ಅಸಾಧ್ಯ. ಈ ಹಣದಲ್ಲೇ ಗರಿಷ್ಠ 18 ಆಟಗಾರರನ್ನು ಖರೀದಿಸುವ ಅಗತ್ಯ ಇದೆ. ಹೀಗಾಗಿ ಕೇವಲ ಒಬ್ಬ ಆಟಗಾರನಿಗೆ 20-25 ಕೋಟಿ ಖರ್ಚು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಬಿಡ್ ಮಾಡಿದರೂ ತಾನು ಮಾಡಿಕೊಂಡ ಲೆಕ್ಕಾಚಾರದವರೆಗೂ ಬಿಡ್ ಮಾಡಬಹುದು. ಆ ಬಳಿಕ ಕೈಬಿಡಬಹುದು.
ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ಪ್ರಮುಖ ಐವರು ಆಟಗಾರರನ್ನು ಉಳಿಸಿಕೊಂಡಿದೆ. ಅವರಿಗಾಗಿ 75 ಕೋಟಿ ಖರ್ಚು ಮಾಡಿದೆ. ಸಿಎಸ್ಕೆ ತಂಡದಂತೆಯೇ ಐವರನ್ನು ಉಳಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ 75 ಕೋಟಿ ಖರ್ಚು ಮಾಡಿದ್ದು, ಕೇವಲ 45 ಕೋಟಿ ಬಾಕಿ ಇದೆ. ಹೀಗಾಗಿ ಒಬ್ಬ ಆಟಗಾರನಿಗಾಗಿ ಮುಂಬೈ 20 ರಿಂದ 25 ಕೋಟಿ ವ್ಯಯಿಸಲು ಇಚ್ಛಿಸುವುದಿಲ್ಲ. ಏಕೆಂದರೆ ತನ್ನಲ್ಲಿರುವ 45 ಕೋಟಿ ಮೊತ್ತದಲ್ಲಿ ಬೃಹತ್ ತಂಡವನ್ನು ರಚಿಸಬೇಕಿದೆ. ಒಂದು ವೇಳೆ ರಿಷಭ್ ಮೇಲೆ ಬಿಡ್ ಮಾಡಲು ಇಚ್ಛಿಸಿದರೂ ಅಂದುಕೊಂಡ ಪ್ರೈಸ್ಗೆ ಬರದಿದ್ದರೆ ಕೈಬಿಡಬಹುದು. ಅಥವಾ ರಿಷಭ್‌ಗೆ ಬಿಡ್ ಮಾಡಲು ಎಂಐಗೆ ಸಾಧ್ಯವಾಗದಿರಬಹುದು. ಮುಂಬೈ ಮತ್ತೊಮ್ಮೆ ಇಶಾನ್ ಕಿಶನ್ ಖರೀದಿಸಬಹುದು. ಈ ಬಾರಿ ಅವರ ಬೆಲೆ ಕುಸಿಯಬಹುದು.
ಕೋಲ್ಕತ್ತಾ ನೈಟ್ ರೈಡರ್ಸ್
ಕೋಲ್ಕತ್ತಾ ನೈಟ್ ರೈಡರ್ಸ್ (KKR) 6 ಆಟಗಾರರನ್ನು ಉಳಿಸಿಕೊಂಡ ಎರಡು ತಂಡಗಳಲ್ಲಿ ಒಂದಾಗಿದೆ. ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಂಡ ಕಾರಣ ಕೆಕೆಆರ್ 51 ಕೋಟಿ ರೂಪಾಯಿ ಬಾಕಿ ಉಳಿದಿದ್ದು, ಮೆಗಾ ಹರಾಜಿನಲ್ಲಿ ಹೊಸ ನಾಯಕನನ್ನು ಖರೀದಿಸಬೇಕಾಗಿದೆ. ರಿಷಭ್ ಅವರನ್ನು ತಮ್ಮ ಭವಿಷ್ಯದ ನಾಯಕನಾಗಿ ನೋಡುತ್ತಿದ್ದರೆ ಕೆಕೆಆರ್ ಖಂಡಿತವಾಗಿಯೂ ಕಷ್ಟವಾಗುತ್ತದೆ. ತನ್ನಲ್ಲಿರುವ ಪರ್ಸ್ ಮೊತ್ತದಲ್ಲಿ ಒಬ್ಬ ಆಟಗಾರನಿಗೆ 20 ಕೋಟಿಗೂ ಅತ್ಯಧಿಕ ಮೊತ್ತ ವ್ಯಯಿಸಲು ಮುಂದಾಗುವುದಿಲ್ಲ. ನಾಯಕತ್ವದ ಸ್ಥಾನಕ್ಕೆ ಖರೀದಿಸುವ ಯೋಜನೆ ಇಲ್ಲದಿದ್ದರೆ ಕೆಕೆಆರ್ ಬಿಡ್ ಮಾಡದೇ ಇರಲು ನಿರ್ಧರಿಸುತ್ತದೆ. ಕೆಕೆಆರ್ ತಮ್ಮ ಮುಂದಿನ ನಾಯಕನಿಗೆ 'ದೊಡ್ಡ ಹಣವನ್ನು' ಖರ್ಚು ಮಾಡುವ ನಿರೀಕ್ಷೆಯಿದೆ.
ರಾಜಸ್ಥಾನ್ ರಾಯಲ್ಸ್ ಮತ್ತು ಎಸ್ಆರ್ಹೆಚ್
ರಾಯಲ್ಸ್ ಪರ್ಸ್ನಲ್ಲಿ ಕೇವಲ 41 ಕೋಟಿ ಇದೆ. ಅಲ್ಲದೆ, ಸಂಜು ಸ್ಯಾಮ್ಸನ್ ನಾಯಕ ಮತ್ತು ವಿಕೆಟ್ ಕೀಪರ್ ಆಗಿರುವ ಕಾರಣ, ಈ ತಂಡಕ್ಕೆ ಪಂತ್ ಅವಶ್ಯಕತೆ ಇರುವುದಿಲ್ಲ. ಈ ತಂಡವು ಪಂತ್ ಮೇಲೆ ಬಿಡ್ ಮಾಡಲು ಯತ್ನಿಸುವುದಿಲ್ಲ. ಮತ್ತೊಂಡೆದೆ ಸನ್ರೈಸರ್ಸ್ ಹೈದರಾಬಾದ್ ಕೂಡ ಪಂತ್ ಮೇಲೆ ಬಿಡ್ ಸಲ್ಲಿಸುವುದಿಲ್ಲ. ಏಕೆಂದರೆ ತಂಡದಲ್ಲಿ ನಾಯಕ ಮತ್ತು ವಿಕೆಟ್ ಕೀಪರ್ ಅನ್ನು ರಿಟೈನ್ ಮಾಡಿಕೊಂಡಿದ್ದು, ತನ್ನಲ್ಲಿರುವ 45 ಕೋಟಿ ರೂಪಾಯಿಯಲ್ಲಿ ಬೇರೆ ಆಟಗಾರರನ್ನು ಖರೀದಿಸಲು ಯತ್ನಿಸುತ್ತದೆ.