ಇತಿಹಾಸ ಸೃಷ್ಟಿಸಿದ ಜಸ್ಪ್ರೀತ್ ಬುಮ್ರಾ, ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್; ಪದಾರ್ಪಣೆ ಪಂದ್ಯದಲ್ಲೇ ನಿತೀಶ್ ರೆಡ್ಡಿ ದಾಖಲೆ!
Jasprit Bumrah Nitish Kumar Reddy: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರು ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಅವರು ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 17 ರನ್ ನೀಡಿ ನಾಲ್ಕು ವಿಕೆಟ್ಗಳೊಂದಿಗೆ ಆಸೀಸ್ ಕುಸಿತಕ್ಕೆ ಕಾರಣರಾದ ಬಲಗೈ ವೇಗಿ, ಸ್ಟೀವ್ ಸ್ಮಿತ್ ಅವರನ್ನು ಅವರದ್ದೇ ನೆಲದಲ್ಲಿ ಗೋಲ್ಡನ್ ಡಕೌಟ್ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಮಿತ್ ತಾನು ಎದುರಿಸಿದ ಬುಮ್ರಾ ಬೌಲಿಂಗ್ನ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯು ಔಟಾಗಿ ನಿರಾಸೆ ಮೂಡಿಸಿದರು.
ಇದರೊಂದಿಗೆ ಮೊದಲ ಎಸೆತದಲ್ಲಿ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ಬುಮ್ರಾ ನೂತನ ಇತಿಹಾಸ ನಿರ್ಮಿಸಿದ್ದಾರೆ. ಆ ಮೂಲಕ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಸ್ಮಿತ್ ಅವರನ್ನು ಗೋಲ್ಡನ್ ಡಕ್ ಮಾಡಿದ ಏಕೈಕ ಬೌಲರ್ ಬುಮ್ರಾ. ಸ್ಮಿತ್ ಕೇವಲ 2 ಬಾರಿ ಗೋಲ್ಡನ್ ಡಕ್‌ನಲ್ಲಿ ಔಟಾಗಿದ್ದಾರೆ. 2014 ರಲ್ಲಿ, ಡೇಲ್ ಸ್ಟೇನ್ ದಕ್ಷಿಣ ಆಫ್ರಿಕಾದಲ್ಲಿ ಸ್ಮಿತ್ ಅವರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ್ದರು. ಇದೀಗ 10 ವರ್ಷಗಳ ನಂತರ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಬುಮ್ರಾ ಸ್ಮಿತ್ ಅವರ ತವರಿನ ನೆಲದಲ್ಲಿ ಗೋಲ್ಡನ್ ಡಕ್ ಮಾಡುವ ಮೂಲಕ ಈ ಸಾಧನೆ ಮಾಡಿದ ಮೊದಲ ಎನಿಸಿದ್ದಾರೆ.
ನಿತೀಶ್ ಕುಮಾರ್ ರೆಡ್ಡಿ ದಾಖಲೆ
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ಪ್ರತಿಷ್ಠಿತ ಭಾರತ ಕ್ಯಾಪ್ ತೊಟ್ಟ 316ನೇ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ನಿತೀಶ್, ದಾಖಲೆ ಬರೆದಿದ್ದಾರೆ. ತಂಡವು ಸಂಕಷ್ಟಕ್ಕೆ ಸಿಲುಕಿದ್ದ ಅವಧಿಯಲ್ಲಿ ಕಣಕ್ಕಿಳಿದ ನಿತೀಶ್, ಉತ್ತಮ ಪ್ರದರ್ಶನದ ಮೂಲಕ ತಂಡವನ್ನು 150ರ ತನಕ ತೆಗೆದುಕೊಂಡು ಹೋದರು. ಅವರು 59 ಎಸೆತಗಳಲ್ಲಿ ಅದ್ಭುತ 41 ರನ್ ಗಳಿಸಿದರು.
ನಿತೀಶ್ ಅವರು 41 ರನ್ ಗಳಿಸುವ ಮೂಲಕ ದೊಡ್ಡ ದಾಖಲೆಯನ್ನು ನಿರ್ಮಿಸಿದರು. ಜೊತೆಗೆ ಗಣ್ಯರ ಪಟ್ಟಿಗೂ ಸೇರ್ಪಡೆಯಾದರು. ಪದಾರ್ಪಣೆ ಪಂದ್ಯದಲ್ಲಿ 8 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಗರಿಷ್ಠ ಸ್ಕೋರ್ ಮಾಡಿದ 7ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿ ಸ್ಟುವರ್ಟ್ ಬಿನ್ನಿ 8 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಅತಿ ಹೆಚ್ಚು ರನ್ ಗಳಿಸಿದ ಹಿಂದಿನ ಭಾರತೀಯ ಆಟಗಾರ. 2014ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಬಿನ್ನಿ ಭಾರತದ 2ನೇ ಇನ್ನಿಂಗ್ಸ್‌ನಲ್ಲಿ 114 ಎಸೆತಗಳಲ್ಲಿ 78 ರನ್ ಗಳಿಸಿದ್ದರು.
ಸಂಕ್ಷಿಪ್ತ ಸ್ಕೋರ್
ಬಾರ್ಡರ್ ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟರ್ಗಳ ವೈಫಲ್ಯ ಕಾರಣ ಭಾರತ ತಂಡ 150ಕ್ಕೆ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಆಸೀಸ್, ಬೃಹತ್ ಮೊತ್ತದ ನಿರೀಕ್ಷೆಯಲ್ಲಿತ್ತು. ಆದರೆ ಜಸ್ಪ್ರೀತ್ ಬುಮ್ರಾ ಅವರ ದಾಳಿಗೆ ನಡುಗಿದ ಆಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ 67ಕ್ಕೆ 7 ವಿಕೆಟ್ ಕಳೆದುಕೊಂಡಿದೆ. ಆದರೆ, ಉತ್ತಮ ಪ್ರದರ್ಶನ ನೀಡುತ್ತಿದ್ದ ಕೆಎಲ್ ರಾಹುಲ್ ವಿವಾದಾತ್ಮಕ ರೀತಿಯಲ್ಲಿ ಔಟಾದರು. ಆದರೆ, ಇದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.