IPL 2024: ಸತತ ಗೆಲುವಿಗೆ ನೂತನ ನಾಯಕರ ಪೈಪೋಟಿ; ಸಿಎಸ್‌ಕೆ-ಗುಜರಾತ್ ಪಂದ್ಯದ ಪಿಚ್, ಹವಾಮಾನ ವರದಿ ಹೀಗಿದೆ
Mar 26, 2024 06:05 AM IST
ಸಿಎಸ್‌ಕೆ-ಗುಜರಾತ್ ಪಂದ್ಯದ ಪಿಚ್, ಹವಾಮಾನ ವರದಿ ಹೀಗಿದೆ
- ಇಬ್ಬರು ಯುವ ನಾಯಕರು ಐಪಿಎಲ್ ಗೆಲುವಿನ ಅಭಿಯಾನ ಮುಂದುವರೆಸಲು ಮುಂದಾಗಿದ್ದಾರೆ. ಚಾಂಪಿಯನ್ ತಂಡಗಳಾದ ಸಿಎಸ್‌ಕೆ ಮತ್ತು ಗುಜರಾತ್ ಟೈಟಾನ್ಸ್ ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಪಂದ್ಯದ ಪಿಚ್, ಹವಾಮಾನ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ.
ಐಪಿಎಲ್ 2023ರ ಆವೃತ್ತಿಯ ಫೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (Gujarat Titans) ಸಜ್ಜಾಗಿದೆ. ಐಪಿಎಲ್ 2024ರ ಆವೃತ್ತಿಯ 7ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಪ್ರಸಕ್ತ ಆವೃತ್ತಿಯನ್ನು ಗೆಲುವಿನೊಂದಿಗೆ ಆರಂಭಿಸಿರುವ ಸಿಎಸ್‌ಕೆ ತಂಡವು, ತನ್ನದೇ ತವರು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ಆಡುತ್ತಿದೆ. ಅತ್ತ ನೂತನ ನಾಯಕ ಶುಭ್ಮನ್ ಗಿಲ್ ನೇತೃತ್ವದಲ್ಲಿ ಗೆಲುವಿನ ಓಟ ಮುಂದುವರೆಸಲು ಟೈಟಾನ್ಸ್ ಸಜ್ಜಾಗಿದೆ.
ಉಭಯ ತಂಡಗಳು ಕೂಡಾ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಗೆದ್ದಿವೆ. ಸಿಎಸ್‌ಕೆ ತಂಡವು ತವರು ನೆಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಅತ್ತ ಗುಜರಾತ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಆರು ರನ್‌ಗಳಿಂದ ರೋಚಕ ಗೆಲುವು ಒಲಿಸಿಕೊಂಡಿತು. ಸದ್ಯ ಮೊದಲ ಹಂತದ ಪಂದ್ಯಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ನಾಲ್ಕನೇ ಸ್ಥಾನದಲ್ಲಿದೆ.
ಹೇಗಿದೆ ಎಂಎ ಚಿದಂಬರಂ ಸ್ಟೇಡಿಯಂ ಪಿಚ್
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ಸಮತೋಲಿತ ಪಿಚ್‌ಗೆ ಹೆಸರುವಾಸಿ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಸಮನಾಗಿ ನೆರವಾಗಲಿದೆ. ಈ ಮೈದಾನದಲ್ಲಿ ನಡೆದ ಕಳೆದ 20 ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 150 ರನ್. ಮೈದಾನದಲ್ಲಿ ಟಾಸ್ ಗೆಲ್ಲುವ ತಂಡವು ದಿನದ ಪಿಚ್‌ಗೆ ಅನುಗುಣವಾಗಿ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಬಹುದು. ಮೈದಾನದಲ್ಲಿ ರನ್ ಮಳೆ ಹರಿಯುವ ಸಾಧ್ಯತೆ ಕಡಿಮೆ. 180 ರನ್ ಈ ಮೈದಾನದಲ್ಲಿ ಸ್ಪರ್ಧಾತ್ಮಕ ಮೊತ್ತವಾಗಲಿದೆ. ಈ ಪಿಚ್ ವೇಗಿಗಳು ಮತ್ತು ಸ್ಪಿನ್ನರ್‌ಗಳಿಗೆ ಸಮಾನಾಗಿ ನೆರವಾದರೂ, ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳಿಗೆ ಅನುಕೂಲ ಕಲ್ಪಿಸಲಿದೆ.
ಚೆನ್ನೈ ಹವಾಮಾನ ವರದಿ
ಮಾರ್ಚ್ 26ರಂದು ನಡೆಯುವ ಪಂದ್ಯದ ದಿನ ಚೆನ್ನೈನಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ತಾಪಮಾನವು ಸುಮಾರು 27 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆಯಿದೆ. ಸಮುದ್ರತೀರವಾಗಿರುವುದರಿಂದ ಹೆಚ್ಚು ಸೆಕೆ ಇರಲಿದೆ. ಮಳೆಯ ಚಿಂತೆಯಿಲ್ಲದೆ ಪಂದ್ಯ ನಡೆಯಲಿದೆ.
ಲೈವ್ ಸ್ಟ್ರೀಮಿಂಗ್ ವಿವರ
ಸಿಎಸ್‌ಕೆ ಮತ್ತು ಗುಜರಾತ್ ತಂಡಗಳ ನಡುವಿನ ಐಪಿಎಲ್ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಜಿಯೋ ಸಿನಿಮಾ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಲೈವ್ ಸ್ಟ್ರೀಮ್ ವೀಕ್ಷಿಸಬಹುದು. ಯಾವುದೇ ಶುಲ್ಕ ಪಾವತಿಸದೆ ಉಚಿತವಾಗಿ ಪಂದ್ಯ ವೀಕ್ಷಣೆ ಮಾಡಬಹುದು.
ಸಿಎಸ್‌ಕೆ ಸಂಭಾವ್ಯ ಆಡುವ ಬಳಗ
ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ.
ಇದನ್ನೂ ಓದಿ | ಐಪಿಎಲ್ 2024ರ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಎಲ್ಲಾ ಪಂದ್ಯಗಳು ಭಾರತದಲ್ಲೇ, ಇಲ್ಲಿದೆ ಸಂಪೂರ್ಣ ಶೆಡ್ಯೂಲ್
ಇಂಪ್ಯಾಕ್ಟ್ ಆಟಗಾರರು: ಶಾರ್ದೂಲ್ ಠಾಕೂರ್, ಶಿವಂ ದುಬೆ, ಶೇಕ್ ರಶೀದ್, ಮೊಯಿನ್ ಅಲಿ, ಸಿಮರ್‌ಜೀತ್‌ಸಿಂಗ್.
ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ
ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್.
ಇಂಪ್ಯಾಕ್ಟ್ ಆಟಗಾರರು: ಬಿಆರ್ ಶರತ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮಾನವ್ ಸುತಾರ್, ಶಾರುಖ್ ಖಾನ್.