logo
ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು ಕರ್ನಾಟಕದವ, ಆರ್​ಸಿಬಿಯಲ್ಲೇ ಇದ್ದಿದ್ದರೆ ಚೆನ್ನಾಗಿರ್ತಿತ್ತು; ಮತ್ತೆ ಬೆಂಗಳೂರು ಪರ ಆಡಲು ಕೆಎಲ್ ರಾಹುಲ್ ಇಂಗಿತ

ನಾನು ಕರ್ನಾಟಕದವ, ಆರ್​ಸಿಬಿಯಲ್ಲೇ ಇದ್ದಿದ್ದರೆ ಚೆನ್ನಾಗಿರ್ತಿತ್ತು; ಮತ್ತೆ ಬೆಂಗಳೂರು ಪರ ಆಡಲು ಕೆಎಲ್ ರಾಹುಲ್ ಇಂಗಿತ

Prasanna Kumar P N HT Kannada

Apr 20, 2024 03:35 PM IST

google News

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಕೆಎಲ್ ರಾಹುಲ್ ಇಂಗಿತ

    • KL Rahul : ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿರುವ ಕೆಎಲ್ ರಾಹುಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಕೆಎಲ್ ರಾಹುಲ್ ಇಂಗಿತ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಕೆಎಲ್ ರಾಹುಲ್ ಇಂಗಿತ

ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ (KL Rahul) ತನ್ನ ತವರಿನ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಲು ಮಹದಾಸೆ ವ್ಯಕ್ತಪಡಿಸಿದ್ದಾರೆ. ಐಪಿಎಲ್​ನಲ್ಲಿ (IPL) ಆಡುತ್ತಿರುವ 12 ಕರ್ನಾಟಕ ಆಟಗಾರರ ಪೈಕಿ ಒಬ್ಬರಾದ ಕೆಎಲ್ ರಾಹುಲ್, ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2013 ಮತ್ತು 2016ರಲ್ಲಿ ಆರ್​​ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಮತ್ತೆ ಆ ತಂಡದ ಪರ ಆಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತನ್ನ ಯೂಟ್ಯೂಬ್ ಚಾನೆಲ್​​ನಲ್ಲಿ ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಕೆಎಲ್ ರಾಹುಲ್, ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆರ್​ಸಿಬಿ ಸೇರಿದ್ದೇಗೆ? ಅದಕ್ಕಾಗಿ ವಿರಾಟ್ ಕೊಹ್ಲಿ ಮಾಡಿದ್ದೇನು? ಮತ್ತು ಆರ್​ಸಿಬಿ ಪರ ಆಡಬೇಕೆಂಬ ಮನದಾಳದ ಮಾತನ್ನು ಹೇಳಿದ್ದಾರೆ. ಅಲ್ಲದೆ, ಏಕದಿನ ವಿಶ್ವಕಪ್​​ನಲ್ಲಿ ನಾನು ಕೊನೆಯವರೆಗೂ ಇದ್ದಿದ್ದರೆ ಪಂದ್ಯ ಗೆಲ್ಲಿಸಿಕೊಡುತ್ತಿದ್ದೆ ಎಂಬ ಮಾತನ್ನೂ ಇದೇ ವೇಳೆ ಹೇಳಿದ್ದಾರೆ.

ಮನದಾಳದ ಮಾತು ಹೇಳಿದ ಕೆಎಲ್ ರಾಹುಲ್

ಆರ್​ಸಿಬಿ ಕುರಿತು ಮಾತನಾಡಿದ ಕನ್ನಡಿಗ ರಾಹುಲ್, ಮೊದಲಿಗೆ ನಾನು ಕರ್ನಾಟಕದ ಆಟಗಾರ. ಅದರಲ್ಲೂ ಬೆಂಗಳೂರು. ಇದು ಎಂದಿಗೂ ಬದಲಾಗಲು ಮತ್ತು ಬದಲಿಸಲು ಸಾಧ್ಯವಿಲ್ಲ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ನನ್ನ ತವರು ಮನೆ. ಇದೆಲ್ಲರದ ಬಳಿಕವೇ ಐಪಿಎಲ್. ನಾನಷ್ಟೇ ಅಲ್ಲ, ಪ್ರತಿಯೊಬ್ಬ ಆಟಗಾರನೂ ತನ್ನ ತವರು ತಂಡದ ಫ್ರಾಂಚೈಸಿ ಪರ ಆಡಲು ಇಷ್ಟಪಡುತ್ತಾರೆ. ಅದರಂತೆ ನಾನು ಸಹ ಆರ್​ಸಿಬಿ ಪರ ಆಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ತವರಿನ ತಂಡದ ಫ್ರಾಂಚೈಸಿ ಪರ ಆಡುವುದು ನನ್ನ ಕನಸಾಗಿತ್ತು. ಎರಡು ಬಾರಿ ಆರ್​ಸಿಬಿ ಪರ ಆಡಿದ್ದೇನೆ. ನಾನು ಆರ್​ಸಿಬಿಯಲ್ಲೇ ಇದ್ದಿದ್ದರೆ ಚೆನ್ನಾಗಿರ್ತಿತ್ತು. ಮತ್ತೆ ಅವಕಾಶ ಸಿಕ್ಕಿದ್ದರೂ ಚೆನ್ನಾಗಿರುತ್ತಿತ್ತು. ನಾನು ಆರ್​ಸಿಬಿ ಪರ ಮೊದಲ ಆಡಿದ್ದೆ. ಆದರೆ ಎಲ್ಲಿ ಆರಂಭಿಸಿದ್ದೇನೋ ಅಲ್ಲಿಯೇ ಮುಗಿಸಬೇಕು ಎಂದುಕೊಂಡಿದ್ದೆ. ಆದರೆ ಇದು ಸಾಧ್ಯವಾಗಿಲ್ಲ ಎಂಬ ಬೇಸರ ಇದೆ. ಲಕ್ನೋ ತಂಡಕ್ಕೆ ಸೇರಿದ್ದರಿಂದ ನನ್ನ ಸ್ವಂತ ಸಂಸ್ಕೃತಿ ಆರಂಭಿಸಲು ಶುರು ಮಾಡಿದೆ. ಇಲ್ಲಿಯೇ ಕೊನೆಯದಾಗಿ ಆಡುತ್ತೇನೋ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಆರ್​ಸಿಬಿ ಸೇರಿದ್ದೇಗೆ ಎಂದು ಹೇಳಿದ ರಾಹುಲ್

ವಿರಾಟ್, ಕೋಚ್ ರೇ ಜೆನ್ನಿಂಗ್ಸ್ ಮತ್ತು ಇತರ ಸಹಾಯಕ ಸಿಬ್ಬಂದಿ ಐಟಿಸಿ ಗಾರ್ಡೇನಿಯಾ ಹೋಟೆಲ್​​ನಲ್ಲಿದ್ದರು. ಆಗ ವಿರಾಟ್, 'ನೀವು ಈ ಒಪ್ಪಂದಕ್ಕೆ ಸಹಿ ಹಾಕಿ ಆರ್​​ಸಿಬಿಗೆ ಆಡಲು ಬಯಸುತ್ತೀರಾ?' ಎಂದು ಕೇಳಿದ್ದರು. ನಾನು, 'ನೀವು ತಮಾಷೆ ಮಾಡುತ್ತಿದ್ದೀರಾ? ಅದು ಯಾವಾಗಲೂ ನನ್ನ ಕನಸು ಎಂದು ಹೇಳಿದ್ದೆ. ತದನಂತರ ಅವರು, 'ನಾನು ತಮಾಷೆ ಮಾಡುತ್ತಿದ್ದೇನೆ. ಇದು ಆಯ್ಕೆಯಲ್ಲ, ಈ ಒಪ್ಪಂದಕ್ಕೆ ಸಹಿ ಹಾಕು ಎಂದಿದ್ದರು. ಆಗ ನಾನು ಸಹಿ ಹಾಕಿದೆ ಎಂದು ಹೇಳಿದ್ದಾರೆ.

ನಾನು ಇದ್ದಿದ್ದರೆ ವಿಶ್ವಕಪ್ ಗೆಲ್ತಿದ್ವಿ

ಏಕದಿನ ವಿಶ್ವಕಪ್ ಸೋಲಿನ ಕುರಿತು ಮಾತನಾಡಿದ ರಾಹುಲ್, ತಾನು ಕೊನೆಯವರೆಗೂ ಕ್ರೀಸ್​ನಲ್ಲಿ ಉಳಿದಿದ್ದರೆ ಇನ್ನೂ 30-40 ರನ್​​ ಸೇರಿಸುತ್ತಿದ್ದೆ. ಇದು ಪಂದ್ಯದ ಫಲಿತಾಂಶ ಬದಲಾಯಿಸಬಹುದಿತ್ತು. ನನ್ನ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ 2023ರ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು. ನಾನು ಮಿಚೆಲ್ ಸ್ಟಾರ್ಕ್ ಬೌಲಿಂಗ್​ನಲ್ಲಿ ದಾಳಿ ನಡೆಸಲು ಮುಂದಾಗಿದ್ದೆ. ಆದರೆ ನಾನು ಸ್ಟಕ್ ಆಗಿದ್ದೆ. ರನ್​ ಗಳಿಸಲು ಸಾಧ್ಯವಾಗಿಲ್ಲ. ಕಷ್ಟಕರವಾಗಿತ್ತು ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

2013ರಲ್ಲಿ ಆರ್​ಸಿಬಿ ತಂಡದ ಡೆಬ್ಯೂ ಮಾಡಿ ತನ್ನ ಐಪಿಎಲ್ ಕೆರಿಯರ್ ಪ್ರಾರಂಭಿಸಿದ್ದ ಕೆಎಲ್ ರಾಹುಲ್, ಆ ಸೀಸನ್​ ಬಳಿಕ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿದ್ದರು. ನಂತರ 2016ರಲ್ಲಿ ಆರ್​​ಸಿಬಿಗೆ ಮರಳಿದ್ದ ಕೆಎಲ್,​ 14 ಪಂದ್ಯಗಳಲ್ಲಿ 4 ಅರ್ಧಶತಕ ಸಹಿತ 397 ರನ್ ಬಾರಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ