634 ದಿನಗಳ ನಂತರ ಮೊದಲ ಟೆಸ್ಟ್ ಆಡಿದ ರಿಷಭ್ ಪಂತ್; ಟಿ20 ಶೈಲಿಯಲ್ಲಿ ಶತಕ ಬಾರಿಸಿ ಧೋನಿ ದಾಖಲೆ ಸರಿಗಟ್ಟಿದ ಪಂಟರ್
Sep 21, 2024 02:05 PM IST
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನ 2ನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ರಿಷಭ್ ಪಂತ್.
- Rishabh Pant: ಭೀಕರ ರಸ್ತೆ ಅಪಘಾತಕ್ಕೆ ಒಳಗಾದ ನಂತರ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ರಿಷಭ್ ಪಂತ್, ಟಿ20 ಶೈಲಿಯಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ, ಮಾಜಿ ನಾಯಕ ಎಂಎಸ್ ಧೋನಿ ದಾಖಲೆಯನ್ನೂ ಸರಿಗಟ್ಟಿದ್ದಾರೆ.
Rishabh Pant Century: 634 ದಿನಗಳ ನಂತರ ಟೆಸ್ಟ್ ಕ್ರಿಕೆಟ್ಗೆ ಮರಳಿರುವ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 39 ರನ್ ಗಳಿಸಿ ಔಟಾಗಿದ್ದ ಪಂತ್, 2ನೇ ಇನ್ನಿಂಗ್ಸ್‌ನಲ್ಲಿ 124 ಎಸೆತಗಳಲ್ಲಿ 6ನೇ ಶತಕ ಪೂರೈಸುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ನಿಧಾನವಾಗಿ ರನ್ ಗಳಿಸಿದರೂ ನಂತರ ಬಿರುಸಿನ ಬ್ಯಾಟಿಂಗ್ ನಡೆಸಿ ನೂರರ ಗಡಿ ದಾಟಿದರು.
ಅಂತಿಮವಾಗಿ ಪಂತ್ 128 ಎಸೆತಗಳಲ್ಲಿ 13 ಬೌಂಡರಿ, 4 ಸಿಕ್ಸರ್ ಸಹಿತ 109 ರನ್ ಗಳಿಸಿ ಔಟಾದರು. ಇದರೊಂದಿಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಶತಕಗಳ ದಾಖಲೆಯನ್ನೂ ಸರಿಗಟ್ಟಿದರು. ಇದು ಪಂತ್ಗೆ 6ನೇ ಟೆಸ್ಟ್ ಶತಕವಾಗಿದೆ. 7 ಬಾರಿ ನರ್ವಸ್ ನೈಂಟಿಗೆ ಔಟಾಗಿರುವ ರಿಷಭ್, ಬೌಂಡರಿ-ಸಿಕ್ಸರ್ಗಳ ಮೂಲಕವೇ 76 ರನ್ ಬಾರಿಸಿರುವುದು ವಿಶೇಷ. ಭರ್ಜರಿ ಬ್ಯಾಟಿಂಗ್ ನೆರವಿನಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತದ ಮುನ್ನಡೆ 450 ರನ್ ದಾಟಿತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಜೊತೆಯಾಗಿ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ಮತ್ತು ಶುಭ್ಮನ್ ಗಿಲ್ 4ನೇ ವಿಕೆಟ್‌ಗೆ 167 ರನ್‌ಗಳ ಜೊತೆಯಾಟವಾಡಿದರು. ಇದು ಈ ಕ್ರೀಡಾಂಗಣದಲ್ಲಿ 3ನೇ ಇನ್ನಿಂಗ್ಸ್‌ನಲ್ಲಿ ದಾಖಲಾದ ಭಾರತದ 2ನೇ ಗರಿಷ್ಠ ಜೊತೆಯಾಟವಾಗಿದೆ. ಈ ಹಿಂದೆ ಮೊಹಿಂದರ್ ಅಮರನಾಥ್-ಮೊಹಮ್ಮದ್ ಅಜರುದ್ದೀನ್ ಜೋಡಿ ಇಂಗ್ಲೆಂಡ್ 190 ರನ್‌ಗಳ ಪಾಲುದಾರಿಕೆ ನೀಡಿ ಮೊದಲ ಸ್ಥಾನದಲ್ಲಿದೆ. 20ನೇ ವಯಸ್ಸಿನಲ್ಲೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದ ಪಂತ್, ಧೋನಿ ದಾಖಲೆ ಸರಿಗಟ್ಟಿದ್ದಾರೆ.
ಇದೀಗ ಧೋನಿ ಜೊತೆಗೆ ಭಾರತ ಪರ ಅತಿ ಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆರು ಟೆಸ್ಟ್ ಶತಕ ಗಳಿಸಲು ಧೋನಿ 144 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರೆ, ರಿಷಬ್ ಪಂತ್ ಈ ಮೈಲಿಗಲ್ಲನ್ನು ಕೇವಲ 58 ಇನ್ನಿಂಗ್ಸ್‌ಗಳಲ್ಲಿ ಸಾಧಿಸಿದ್ದಾರೆ. 2022ರ ಡಿಸೆಂಬರ್ 30ರಂದು ಭೀಕರ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದ ಪಂತ್, ಸುಮಾರು ಒಂದೂವರೆ ವರ್ಷದ ತನಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಂಬ್ಯಾಕ್ ಮಾಡಿರಲಿಲ್ಲ. 2024ರ ಟಿ20 ವಿಶ್ವಕಪ್ಗೆ ಮರಳಿದ ಪಂತ್, ಅದಕ್ಕೂ ಮುನ್ನ ಐಪಿಎಲ್ನಲ್ಲಿ ಆಡಿದ್ದರು. ವಿಶ್ವಕಪ್ನಲ್ಲೂ ಮಿಂಚಿದ್ದ ಪಂತ್, ಟೆಸ್ಟ್ನಲ್ಲೂ ಪರಾಕ್ರಮ ಮೆರೆದಿದ್ದಾರೆ.
ಶುಭ್ಮನ್ ಗಿಲ್ ಶತಕ, ಟೀಕಾಕಾರರಿಗೆ ತಿರುಗೇಟು
ಮೊದಲ ಇನ್ನಿಂಗ್ಸ್‌ನಲ್ಲಿ ಡಕೌಟ್ ಆಗಿದ್ದ ಕಾರಣ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಶುಭ್ಮನ್ ಗಿಲ್, ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ತಿರುಗೇಟು ನೀಡಿದ್ದಾರೆ. ಪಂತ್ ಜೊತೆಗೂಡಿ ಬೊಂಬಾಟ್ ಪ್ರದರ್ಶನ ನೀಡಿದ ಗಿಲ್, 5ನೇ ಟೆಸ್ಟ್ ಶತಕ ಸಿಡಿಸಿ ಮಿಂಚಿದರು. 176 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 119 ರನ್ ಬಾರಿಸಿದ ಗಿಲ್, ಭಾರತ ತಂಡ ಬೃಹತ್ ಮುನ್ನಡೆ ಪಡೆಯಲು ನೆರವಾದರು. ಇದೀಗ ಬಾಂಗ್ಲಾಗೆ 515 ರನ್‌ಗಳ ಟಾರ್ಗೆಟ್ ನೀಡಲಾಗಿದೆ. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 5, ಜೈಸ್ವಾಲ್ 10, ವಿರಾಟ್ 17 ರನ್ ಸಿಡಿಸಿದರು. ಭಾರತ 2ನೇ ಇನ್ನಿಂಗ್ಸ್‌ನಲ್ಲಿ 287 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ. ಕೆಎಲ್ ರಾಹುಲ್ ಅಜೇಯ 22 ರನ್ ಗಳಿಸಿದರು.
ಟೀಮ್ ಇಂಡಿಯಾ 2024ರಲ್ಲಿ 7 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಒಟ್ಟು 83 ಸಿಕ್ಸರ್ಗಳನ್ನು ಚಚ್ಚಿದೆ. ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ದಾಖಲೆ ಇಂಗ್ಲೆಂಡ್ ಹೆಸರಿನಲ್ಲಿದೆ. 2022ರಲ್ಲಿ ಇಂಗ್ಲೆಂಡ್ 89 ಸಿಕ್ಸರ್, 2021ರಲ್ಲಿ ಭಾರತ 87 ಸಿಕ್ಸರ್ ಬಾರಿಸಿತ್ತು. ಇದೀಗ 2024ರಲ್ಲಿ ಭಾರತ 83 (ಪಂತ್ ಔಟಾಗುವ ಹೊತ್ತಿಗೆ) ಸಿಕ್ಸರ್ ಸಿಡಿಸಿ 3ನೇ ಸ್ಥಾನದಲ್ಲಿದ್ದು, ಇದೇ ವರ್ಷ ಅಗ್ರಸ್ಥಾನ ಪಡೆಯುವುದು ಖಚಿತ.