logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್​ಕೆ ಬೌಲರ್ಸ್ ದಾಳಿಗೆ ಎಸ್​ಆರ್​ಹೆಚ್ ಬ್ಯಾಟರ್ಸ್ ತತ್ತರ; ಲಯಕ್ಕೆ ಮರಳಿದ ಚೆನ್ನೈ, ಹೈದರಾಬಾದ್​ಗೆ ಸತತ ಸೋಲು

ಸಿಎಸ್​ಕೆ ಬೌಲರ್ಸ್ ದಾಳಿಗೆ ಎಸ್​ಆರ್​ಹೆಚ್ ಬ್ಯಾಟರ್ಸ್ ತತ್ತರ; ಲಯಕ್ಕೆ ಮರಳಿದ ಚೆನ್ನೈ, ಹೈದರಾಬಾದ್​ಗೆ ಸತತ ಸೋಲು

Prasanna Kumar P N HT Kannada

Apr 28, 2024 11:56 PM IST

google News

ಸಿಎಸ್​ಕೆ ಬೌಲರ್ಸ್ ದಾಳಿಗೆ ಎಸ್​ಆರ್​ಹೆಚ್ ಬ್ಯಾಟರ್ಸ್ ತತ್ತರ; ಲಯಕ್ಕೆ ಮರಳಿದ ಚೆನ್ನೈ, ಹೈದರಾಬಾದ್​ಗೆ ಸತತ ಸೋಲು

    • CSK vs SRH : ಐಪಿಎಲ್​ನ 46ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್​​ ಕಿಂಗ್ಸ್​ 78 ರನ್​ಗಳ ಅಮೋಘ ಗೆಲುವು ಸಾಧಿಸಿತು. ಬ್ಯಾಟಿಂಗ್​​ನಲ್ಲಿ ಋತುರಾಜ್​ ಗಾಯಕ್ವಾಡ್ 98 ರನ್ ಗಳಿಸಿದರೆ, ಬೌಲಿಂಗ್​​ನಲ್ಲಿ ತುಷಾರ್​ ದೇಶಪಾಂಡೆ 4 ವಿಕೆಟ್ ಪಡೆದು ಮಿಂಚಿದರು.
ಸಿಎಸ್​ಕೆ ಬೌಲರ್ಸ್ ದಾಳಿಗೆ ಎಸ್​ಆರ್​ಹೆಚ್ ಬ್ಯಾಟರ್ಸ್ ತತ್ತರ; ಲಯಕ್ಕೆ ಮರಳಿದ ಚೆನ್ನೈ, ಹೈದರಾಬಾದ್​ಗೆ ಸತತ ಸೋಲು
ಸಿಎಸ್​ಕೆ ಬೌಲರ್ಸ್ ದಾಳಿಗೆ ಎಸ್​ಆರ್​ಹೆಚ್ ಬ್ಯಾಟರ್ಸ್ ತತ್ತರ; ಲಯಕ್ಕೆ ಮರಳಿದ ಚೆನ್ನೈ, ಹೈದರಾಬಾದ್​ಗೆ ಸತತ ಸೋಲು (PTI)

ಬ್ಯಾಟಿಂಗ್​​ ಮೂಲಕ ಎದುರಾಳಿಗಳನ್ನು ಬೆದರಿಸುತ್ತಿದ್ದ ಸನ್​ರೈಸರ್ಸ್​ ಹೈದರಾಬಾದ್ ತಂಡ ಸತತ 2ನೇ ಸೋಲಿಗೆ ಶರಣಾಗಿದೆ. ಆರ್​ಸಿಬಿ ವಿರುದ್ಧ 35 ರನ್​ಗೆ ಮಂಡಿಯೂರಿದ ಎಸ್​​ಆರ್​​ಹೆಚ್​, ಈಗ ಚೆನ್ನೈ ಸೂಪರ್ ಕಿಂಗ್ಸ್ ಎದುರು 78 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಇದರೊಂದಿಗೆ ಟೂರ್ನಿಯಲ್ಲಿ 4ನೇ ಸೋಲು ಅನುಭವಿಸಿತು. ಮತ್ತೊಂದೆಡೆ ಎಲ್​ಎಸ್​ಜಿ ವಿರುದ್ಧ ಸತತ ಎರಡು ಸೋಲುಂಡಿದ್ದ ಸಿಎಸ್​ಕೆ ತವರಿನಲ್ಲಿ ಕೊನೆಗೂ ಲಯಕ್ಕೆ ಮರಳಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು, ಎಸ್​ಆರ್​ಹೆಚ್ 4ನೇ ಸ್ಥಾನಕ್ಕೆ ಕುಸಿಯಿತು.

ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ನ 46ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್​ಕೆ, ಸ್ಪಿನ್​ ಪಿಚ್​​​ನಲ್ಲಿ ಬೃಹತ್ ಮೊತ್ತ ಪೇರಿಸಿತು. ಋತುರಾಜ್ ಗಾಯಕ್ವಾಡ್​ ಜಸ್ಟ್ ಮಿಸ್ ಮಾಡಿಕೊಂಡರು. ಋತುರಾಜ್ 98 ರನ್ ಪೇರಿಸಿದರೆ, ಸತತ ವೈಫಲ್ಯದಿಂದ ಲಯಕ್ಕೆ ಮರಳಿದ ಡ್ಯಾರಿಲ್ ಮಿಚೆಲ್ ಅರ್ಧಶತಕ ಸಿಡಿಸಿ ಮಿಂಚಿದರು. ಪರಿಣಾಮ 20 ಓವರ್​ಗೆ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಆದರೆ ಎಸ್​ಆರ್​​ಹೆಚ್, 134 ರನ್​ ಗಳಿಸಲು ಶಕ್ತವಾಯಿತು.

ತುಷಾರ್ ದೇಶಪಾಂಡೆ ಮಿಂಚು

ಬೃಹತ್ ಸವಾಲು ಬೆನ್ನಟ್ಟಿದ ಹೈದರಾಬಾದ್, ಸಿಎಸ್​ಕೆ ಬೌಲರ್​​ಗಳ ದಾಳಿಗೆ ರನ್​ ಗಳಿಸಲು ಪರದಾಡಿದರು. ಏಡನ್ ಮಾರ್ಕ್ರಮ್ 32 ರನ್ ಗಳಿಸಿದ್ದೇ ಎಸ್​ಆರ್​ಹೆಚ್ ಪರ ಗರಿಷ್ಠ ಸ್ಕೋರ್ ಆಗಿದೆ. ಉಳಿದಂತೆ ಅದಕ್ಕಿಂತ ಕಡಿಮೆ ಸ್ಕೋರ್ ಮಾಡಿದ್ದಾರೆ. ಟ್ರಾವಿಸ್ ಹೆಡ್ (13), ಅಭಿಷೇಕ್ ಶರ್ಮಾ (15), ಅನ್ಮೋಲ್​ಪ್ರೀತ್ ಸಿಂಗ್ (0), ನಿತೀಶ್ ರೆಡ್ಡಿ (15), ಹೆನ್ರಿಚ್ ಕ್ಲಾಸೆನ್ (20), ಅಬ್ದುಲ್ ಸಮದ್ (19), ಶಹಬಾಜ್ ಅಹ್ಮದ್ (7) ನಿರಾಸೆ ಮೂಡಿಸಿದರು. ತುಷಾರ್ ದೇಶಪಾಂಡೆ 4 ವಿಕೆಟ್, ಮುಸ್ತಫಿಜುರ್ ಮತ್ತು ಮತೀಶಾ ಪತಿರಾಣ ತಲಾ 2 ವಿಕೆಟ್ ಪಡೆದರು.

ಋತುರಾಜ್ ಗಾಯಕ್ವಾಡ್ ಶತಕ ವಂಚಿತ

ಸಿಎಸ್​ಕೆ ನಾಯಕ ಋತುರಾಜ್ ಗಾಯಕ್ವಾಡ್ ಶತಕ ವಂಚಿತರಾದರು. ಆರಂಭಿಕರಾಗಿ ಬಂದ ಅಜಿಂಕ್ಯ ರಹಾನೆ (9) ಬೇಗನೇ ಔಟಾದ ನಂತರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಡ್ಯಾರಿಲ್ ಮಿಚೆಲ್ ಜತೆ ಸೇರಿ 107 ರನ್​​ಗಳ ಪಾಲುದಾರಿಕೆ ನೀಡಿದರು. ಋತುರಾಜ್, 54 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್​ ಸಹಿತ 98 ರನ್ ಚಚ್ಚಿದರು. ಆದರೆ ಕೊನೆಯ ಓವರ್​​ನಲ್ಲಿ ಸಿಕ್ಸರ್​ ಬಾರಿಸಲು ಯತ್ನಿಸಿ ಶತಕವನ್ನು ಜಸ್ಟ್ 2 ರನ್ನಿಂದ ಮಿಸ್ ಮಾಡಿಕೊಂಡರು. ಮತ್ತೊಂದೆಡೆ ಮಿಚೆಲ್ 32 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 52 ಬಾರಿಸಿದರೆ, ಶಿವಂ ದುಬೆ ಅಜೇಯ 39 ರನ್ ಸಿಡಿಸಿದರು.

ಸೇಡು ತೀರಿಸಿಕೊಂಡ ಸಿಎಸ್​ಕೆ

ಎಸ್​​ಆರ್​ಹೆಚ್ ವಿರುದ್ಧ ಸಿಎಸ್​ಕೆ ಗೆಲುವು ಸಾಧಿಸುವುದರೊಂದಿಗೆ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಏಪ್ರಿಲ್ 5ರಂದು ಹೈದರಾಬಾದ್​​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಸಿಎಸ್​ಕೆ, ಸನ್​ರೈಸರ್ಸ್ ವಿರುದ್ಧ 6 ವಿಕೆಟ್​ಗಳ ಸೋಲಿಗೆ ಶರಣಾಗಿತ್ತು. ಅಂದು ಸಿಎಸ್​ಕೆ ಮೊದಲು ಬ್ಯಾಟಿಂಗ್​ ನಡೆಸಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಹೈದರಾಬಾದ್ ತಂಡ, 4 ವಿಕೆಟ್ ಕಳೆದುಕೊಂಡು 18.1 ಓವರ್​​ಗಳಲ್ಲಿ ಜಯ ಸಾಧಿಸಿತ್ತು. ಇದೀಗ ಈ ಸೋಲಿಗೆ ಸಿಎಸ್​ಕೆ ಸೇಡು ತೀರಿಸಿಕೊಂಡಿದೆ.

ಅಂಕಪಟ್ಟಿಯಲ್ಲಿ ಉಭಯ ತಂಡಗಳು

ಅಂಕಪಟ್ಟಿಯಲ್ಲಿ ಉಭಯ ತಂಡಗಳು ಅಗ್ರ-4 ಸ್ಥಾನದಲ್ಲಿ ಉಳಿದಿವೆ. ಎಸ್​​ಆರ್​ಹೆಚ್​ ಆಡಿರುವ 9 ಪಂದ್ಯಗಳಲ್ಲಿ ಐದು ಗೆಲುವು, 4 ಸೋಲಿನೊಂದಿಗೆ 10 ಅಂಕ ಸಂಪಾದಿಸಿ 4ನೇ ಸ್ಥಾನದಲ್ಲಿದೆ. ಈ ಪಂದ್ಯಕ್ಕೂ 3ನೇ ಸ್ಥಾನದಲ್ಲಿತ್ತು. ಮತ್ತೊಂದೆಡೆ, 5ನೇ ಸ್ಥಾನದಲ್ಲಿದ್ದ ಸಿಎಸ್​ಕೆ ಇದೀಗ 3ನೇ ಸ್ಥಾನಕ್ಕೆ ಜಿಗಿತ ಕಂಡಿದೆ. 9 ಪಂದ್ಯಗಳಲ್ಲಿ 5 ಗೆಲುವು, 4 ಸೋಲು, 10 ಅಂಕ ಪಡೆದಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ