logo
ಕನ್ನಡ ಸುದ್ದಿ  /  ಕ್ರಿಕೆಟ್  /  Virat Kohli Profile: ಕಿಂಗ್ ಕೊಹ್ಲಿಯ ಕ್ರಿಕೆಟ್‍ ಬದುಕಿಗೆ ತುಂಬಿತು 15; ವಿರಾಟ್‍ ಆಟದ ಕಡೆಗೊಂದು ಕಿರುನೋಟ

Virat Kohli Profile: ಕಿಂಗ್ ಕೊಹ್ಲಿಯ ಕ್ರಿಕೆಟ್‍ ಬದುಕಿಗೆ ತುಂಬಿತು 15; ವಿರಾಟ್‍ ಆಟದ ಕಡೆಗೊಂದು ಕಿರುನೋಟ

Umesh Kumar S HT Kannada

Aug 21, 2023 07:30 AM IST

google News

ವ್ಯಕ್ತಿ ವ್ಯಕ್ತಿತ್ವ ಅಂಕಣದಲ್ಲಿ ವಿರಾಟ್ ಕೊಹ್ಲಿ ಕಿರು ಪರಿಚಯ

  • Virat Kohli Profile: ಕ್ರಿಕೆಟ್ ಸುದ್ದಿ ಬಂದಾಗೆಲ್ಲ ಪದೇಪದೆ ಉಲ್ಲೇಖವಾಗುವ ಹೆಸರು ವಿರಾಟ್ ಕೊಹ್ಲಿ. ಹೌದು, ವಿರಾಟ್ ಕೊಹ್ಲಿ ಕ್ರಿಕೆಟ್ ಬದುಕಿಗೆ ಕಳೆದ ಶುಕ್ರವಾರ 15 ತುಂಬಿತು. “Forever grateful” ಎಂಬ ಎರಡು ಪದ ಬಳಸಿ 15 ವರ್ಷದ ಕ್ರಿಕೆಟ್ ಬದುಕನ್ನು ಇನ್‍ಸ್ಟಾಗ್ರಾಂನಲ್ಲಿ ಸ್ಮರಿಸಿಕೊಂಡು ಧನ್ಯತೆ ಭಾವ ತೋರಿದ್ದರು. 

ವ್ಯಕ್ತಿ ವ್ಯಕ್ತಿತ್ವ ಅಂಕಣದಲ್ಲಿ ವಿರಾಟ್ ಕೊಹ್ಲಿ  ಕಿರು ಪರಿಚಯ
ವ್ಯಕ್ತಿ ವ್ಯಕ್ತಿತ್ವ ಅಂಕಣದಲ್ಲಿ ವಿರಾಟ್ ಕೊಹ್ಲಿ ಕಿರು ಪರಿಚಯ

ಕಳೆದ ವಾರ ಆಗಸ್ಟ್ 18ರಂದು ವಿರಾಟ್‍ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಕಾಲಿಟ್ಟು 15 ವರ್ಷ ತುಂಬಿತು. ಹೌದು, 15 ವರ್ಷಗಳ ಹಿಂದೆ ಆಗಸ್ಟ್ 18ರಂದು, ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಆಡಿದ ಏಕದಿನ ಪಂದ್ಯವೇ ಅವರ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಈ ಶ್ರೀಲಂಕಾ ಸರಣಿಗೆ ಕೆಲವೇ ತಿಂಗಳುಗಳ ಮೊದಲು, ಐಸಿಸಿ U19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ಗೆಲುವಿನ ನಗೆ ಬೀರುವಂತೆ ಮಾಡಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪ್ರವೇಶಿಸುವುದಕ್ಕೆ ವೇದಿಕೆ ನಿರ್ಮಿಸಿಕೊಂಡಿದ್ದರು.

ಅವರು ಗುಂಪು ಹಂತಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಶತಕ ಸೇರಿ ಆರು ಪಂದ್ಯಗಳಲ್ಲಿ 47.00 ರ ಸರಾಸರಿಯಲ್ಲಿ 235 ರನ್ ಗಳಿಸಿದರು. ಗೌತಮ್ ಗಂಭೀರ್ ಜತೆಗಿನ ಜತೆಯಾಟದಲ್ಲಿ ಶ್ರೀಲಂಕಾ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ 12 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಈ ಆರಂಭಿಕ ಸವಾಲಿನ ಹೊರತಾಗಿಯೂ, ಯುವ ಕ್ರಿಕೆಟಿಗ ತನ್ನ ಚೊಚ್ಚಲ ಸರಣಿಯನ್ನು ಸ್ಮರಣೀಯವಾಗಿಸಿದರು. ಸರಣಿಯ 5 ಪಂದ್ಯಗಳಲ್ಲಿ 31.80 ಸರಾಸರಿಯಲ್ಲಿ 159 ರನ್ ಗಳಿಸಿದರು. ಐದನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು. ಅಂದು, ವಿರಾಟ್ ಅವರ ಪ್ರತಿಭೆ ಮತ್ತು U19 ಸಾಧನೆಗಳ ಆಧಾರದ ಮೇಲೆ ಅನೇಕರು ಅವರ ಅಂತಾರಾಷ್ಟ್ರೀಯ ಯಶಸ್ಸನ್ನು ನಿರೀಕ್ಷಿಸಿದ್ದರು. ಆ ನಿರೀಕ್ಷೆಯನ್ನು ಅವರು ಹುಸಿಗೊಳಿಸಲಿಲ್ಲ. ವರ್ಷದಿಂದ ವರ್ಷಕ್ಕೆ, ಎಲ್ಲ ಸ್ವರೂಪಗಳ ಕ್ರಿಕೆಟ್‍ನಲ್ಲಿ ಸ್ಥಿರತೆಯ ಮಾದರಿಯಾಗಿ ಛಾಪು ಮೂಡಿಸಿದರು. ಆಧುನಿಕ ಕಾಲಘಟ್ಟದ ಫ್ಯಾಬ್ ಫೋರ್‍ ಕ್ರಿಕೆಟಿಗ ಎಂದು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಜೊತೆಗೆ ಗುರುತಿಸಿಕೊಂಡರು.

ಟೆಸ್ಟ್ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ ಸಾಧನೆ

ವಿರಾಟ್ ಕೊಹ್ಲಿ ಅವರು 2011ರಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿದಲ್ಲಿಂದ ಇದುವರೆಗೆ ಒಟ್ಟು 111 ಟೆಸ್ಟ್ ಪಂದ್ಯ ಆಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡಿದ್ದರು. ಅಲ್ಲಿ ಅವರು ಐದು ಇನ್ನಿಂಗ್ಸ್​​​ಗಳಲ್ಲಿ ಕೇವಲ 76 ರನ್ ಗಳಿಸಿದ್ದರು. ಆನಂತರ ಒಟ್ಟು 187 ಇನ್ನಿಂಗ್ಸ್ ಗಳಲ್ಲಿ 49.29 ಸರಾಸರಿಯಲ್ಲಿ 8,676 ರನ್‍ ಗಳಿಸಿದರು. ಇದರಲ್ಲಿ 29 ಶತಕ, 29 ಅರ್ಧ ಶತಕ, ಅಜೇಯ 254 ರನ್‍ಗಳ ವೈಯಕ್ತಿಕ ದಾಖಲೆ ಹೊಂದಿದ್ದಾರೆ. ಟೀಂ ಇಂಡಿಯಾ ಮಟ್ಟಿಗೆ ಅವರು ಟೆಸ್ಟ್ ಕ್ರಿಕೆಟ್‍ನಲ್ಲಿ 5ನೇ ಅತಿ ಹೆಚ್ಚು ಸ್ಕೋರರ್. ವಿಶ್ವಮಟ್ಟದಲ್ಲಿ 23ನೇ ಅತಿ ಹೆಚ್ಚು ರನ್‍ಗಳಿಸಿದ ಕ್ರಿಕೆಟಿಗ.

ಸಚಿನ್ ತೆಂಡೂಲ್ಕರ್ 200 ಪಂದ್ಯಗಳಲ್ಲಿ 51 ಶತಕಗಳೊಂದಿಗೆ 15,921 ರನ್‍ ಸಾರ್ವಕಾಲಿಕ ಗರಿಷ್ಠ ಸ್ಕೋರರ್ ದಾಖಲೆ ಹೊಂದಿದ್ದಾರೆ. ಭಾರತದ ಆಟಗಾರರ ಪೈಕಿ ವಿರಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗಳಿಸಿದ ಶತಕಗಳ ವಿಷಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 7 ದ್ವಿಶತಕಗಳ ಸಾಧನೆ ವಿರಾಟ್ ಅವರದ್ದು. ಟೆಸ್ಟ್ ಕ್ರಿಕೆಟ್‍ನ ದ್ವಿಶತಕದಲ್ಲಿ ವಿರಾಟ್‍ ಟಾಪರ್.

ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ನಾಯಕತ್ವದ ಪರಂಪರೆ ಗಮನಾರ್ಹವಾಗಿದೆ. 68 ಟೆಸ್ಟ್ ಪಂದ್ಯಗಳ ಪೈಕಿ 40ರಲ್ಲಿ ಗೆಲುವು ಸಿಕ್ಕಿದೆ. 17 ಸೋಲು ಕಂಡಿದೆ. 11 ಪಂದ್ಯ ಡ್ರಾ ಆಗಿದೆ. ಈ ಲೆಕ್ಕಾಚಾರ ನೋಡಿದರೆ ಶೇಕಡ 58.82ರ ಗೆಲುವು ಕಂಡು ಬರುತ್ತದೆ. ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಸ್ಮರಣೀಯ ಟೆಸ್ಟ್ ಪಂದ್ಯಗಳು ಮತ್ತು ಸರಣಿ ವಿಜಯ ಸಾಧಿಸಿ ಟೀಂ ಇಂಡಿಯಾವನ್ನು ತವರು ನೆಲದಲ್ಲಿ ಅಸಾಧಾರಣ ಶಕ್ತಿಯಾಗಿಸಿದರು. ವಿರಾಟ್ ಕೊಹ್ಲಿ ಅವರು ನಾಯಕನಾಗಿ, 2017-21ರ ಅವಧಿಯಲ್ಲಿ ನಡೆದ ಮೊದಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​​ನಲ್ಲಿ ಭಾರತವನ್ನು ಫೈನಲ್​​ವರೆಗೂ ಕೊಂಡೊಯ್ದ ಹೆಗ್ಗಳಿಕೆ ಅವರದ್ದು.

ಅಂತಾರಾಷ್ಟ್ರೀಯ ಏಕದಿನ, ಟಿ20 ಪಂದ್ಯಗಳಲ್ಲೂ ಕೊಹ್ಲಿ ಕಿಂಗ್‍

ಕೊಹ್ಲಿ ಅವರು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಸಾಕಷ್ಟು ಸಾಧನೆ ಮತ್ತು ಜನಪ್ರಿಯತೆ ಗಳಿಸಿದವರು. 275 ಪಂದ್ಯಗಳನ್ನು ಆಡಿರುವ ಅವರು, 57.32ರ ಸರಾಸರಿಯಲ್ಲಿ 12,898 ರನ್‍ ಗಳಿಸಿದ್ದಾರೆ. ಈ ಸಾಧನೆಯು 265 ಇನ್ನಿಂಗ್ಸ್ ಮೂಲಕ ದಾಖಲಾಗಿದೆ. ಇದರಲ್ಲಿ 46 ಶತಕ, 65 ಅರ್ಧಶತಕ ಸೇರಿದೆ. ಏಕದಿನ ಮಾದರಿಯಲ್ಲಿ ವಿರಾಟ್ ಅವರ ಗರಿಷ್ಠ ಸ್ಕೋರ್ 183 ರನ್‍. 5,000 ರನ್‍ನಿಂದ 12,000 ರನ್‍ ತನಕ ಬಹುಬೇಗ ರನ್ ದಾಖಲಿಸಿದೆ ಮೂರನೇ ಅತಿವೇಗದ ಕ್ರಿಕೆಟಿಗ ಎಂಬ ಕೀರ್ತಿಗೂ ಅವರು ಭಾಜನರಾಗಿದ್ದಾರೆ. ಟೀಂ ಇಂಡಿಯಾದಲ್ಲಿ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್‍ಗಳಿಸಿದ ಎರಡನೇ ಆಟಗಾರ ವಿರಾಟ್‍. ಸಚಿನ್‍ ತೆಂಡುಲ್ಕರ್ 463 ಪಂದ್ಯಗಳಲ್ಲಿ 49 ಶತಕ ಸೇರಿ 18.426 ರನ್‍ ಗಳಿಸಿ ಮುಂಚೂಣಿಯಲ್ಲಿದ್ದಾರೆ.

ಜಾಗತಿಕ ಮಟ್ಟದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​​​ನಲ್ಲಿ ರನ್‍ ಗಳಿಕೆಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಶತಕ ಮತ್ತು ಅರ್ಧಶತಕ ದಾಖಲೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕನಿಷ್ಠ 150 ಪಂದ್ಯದಲ್ಲಿ ಅವರ ರನ್‍ಗಳಿಗೆ ಸರಾಸರಿ 50 ರನ್‍ ಮೇಲೆಯೇ ಇದೆ ಎಂಬುದು ಅವರ ಕಾರ್ಯಕ್ಷಮತೆಯನ್ನು ಬಿಂಬಿಸುತ್ತದೆ.

ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾದ ನಾಯಕನಾಗಿ ಅವರು 95 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಇದರಲ್ಲಿ 65 ಪಂದ್ಯಗಳಲ್ಲಿ ಗೆಲುವು ಸಿಕ್ಕರೆ, 27ರಲ್ಲಿ ಸೋಲಾಗಿದೆ. ಒಂದು ಪಂದ್ಯ ಟೈ, ಇನ್ನೆರಡು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಇದರಲ್ಲಿ ಗೆಲುವಿನ ಶೇಕಡಾವಾರು 68.42 ಇದೆ.

ಟೆಸ್ಟ್‌ ಮತ್ತು ಏಕದಿನದಂತೆ, ಟಿ20 ಪಂದ್ಯಗಳಲ್ಲಿ ಕೊಹ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ವಿರಾಟ್‍ ಒಟ್ಟು 115 ಟಿ20 ಪಂದ್ಯಗಳಲ್ಲಿ 52.73 ಸರಾಸರಿ ಮತ್ತು 137.96 ಸ್ಟ್ರೈಕ್ ರೇಟ್‌ನಲ್ಲಿ 4,008 ರನ್ (ಒಂದು ಶತಕ ಮತ್ತು 37 ಅರ್ಧ ಶತಕ) ಗಳಿಸಿದ್ದಾರೆ, ಇದರಲ್ಲಿ ಅಜೇಯ 122 ರನ್‍ ಅವರ ಅತ್ಯುತ್ತಮ ಸ್ಕೋರ್. ಅವರು ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್, ಐವತ್ತು-ಪ್ಲಸ್ ಸ್ಕೋರ್ ಮತ್ತು ಸರಾಸರಿಯನ್ನು ಹೊಂದಿದ್ದಾರೆ.

ಕ್ರಿಕೆಟ್ ರಂಗದಲ್ಲಿ ಅವರು ಇನ್ನಷ್ಟು ಸಾಧನೆಗಳನ್ನು ಮಾಡಲಿ. ಅವರ ಅಭಿಮಾನಿಗಳ ಆಶಯದಂತೆ ಭಾರತಕ್ಕೆ ಮತ್ತೊಂದು ವಿಶ್ವಕಪ್‍ ಒಲಿದು ಬರಲಿ.

ಅವರ ಸೋಷಿಯಲ್ ಮೀಡಿಯಾ ಕನೆಕ್ಟ್

ಫೇಸ್‍ಬುಕ್ – https://www.facebook.com/virat.kohli

ಇನ್‍ಸ್ಟಾಗ್ರಾಂ - https://www.instagram.com/virat.kohli/

ಟ್ವಿಟರ್ - https://twitter.com/imVkohli

ಉಮೇಶ್‌ ಕುಮಾರ್‌ ಶಿಮ್ಲಡ್ಕ

( ವ್ಯಕ್ತಿ ಚಿತ್ರಣದ ಲೇಖನದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳನ್ನು umesh.s@htdigital.in ಅಥವಾ ht.kannada@htdigital.in ಗಳಿಗೆ ಕಳುಹಿಸಬಹುದು.)

ಇನ್ನಷ್ಟು ಅಂಕಣ ಬರಹಗಳನ್ನು ಓದುವುದಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ